ADVERTISEMENT

ಕಪ್ಪು ಕಲೆ: ಇದುವೇ ಪರಿಹಾರ...

ಚೆಲುವಿನ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2015, 19:30 IST
Last Updated 20 ಜನವರಿ 2015, 19:30 IST

ಮಂಡಿ ಹಾಗೂ ಮೊಣಕೈ ಭಾಗದ ಕಪ್ಪು ವರ್ತುಲ ಬಹುತೇಕ ಜನರ ಆತಂಕವಾಗಿರುವುದು ನಿಜ. ಅದರಲ್ಲೂ ಶಾರ್ಟ್ಸ್ ಹಾಗೂ ಸ್ಲೀವ್‌ಲೆಸ್ ಧರಿಸುವ ಆಧುನಿಕ ಮಹಿಳೆಯರಿಗೆ ಇದೊಂದು ದೊಡ್ಡ ತಲೆನೋವು.

ಮೊಣಕೈ ಹಾಗೂ ಮೊಣಕಾಲಿನ ಕಪ್ಪು ಕಲೆಯನ್ನು ಮರೆಮಾಚಲು ಕೆಲವರು ಮುಖಕ್ಕೆ ಹಚ್ಚುವ ಫೌಂಡೇಶನ್ ಹಾಗೂ ಪೌಡರ್‌ಗಳನ್ನು ಬಳಸಿದರೆ, ಇನ್ನು ಕಲೆವರು ಅದಕ್ಕಾಗಿ ವಿಶೇಷ ಕ್ರೀಂಗಳನ್ನು ಇಟ್ಟಿರುತ್ತಾರೆ.

ಆದರೆ ಇದೆಲ್ಲ ತಾತ್ಕಾಲಿಕ ಪರಿಹಾರ. ಶಾಶ್ವತವಾಗಿ ಈ ಕಪ್ಪು ಕಲೆಗೆ ವಿದಾಯ ಹೇಳುವ ಮನಸ್ಸಿದ್ದವರು ಕೆಲವು ನೈಸರ್ಗಿಕ ಮಾರ್ಗಗಳನ್ನು ಅನುಸರಿಸಬಹುದು.

ಹೆಚ್ಚು ಖರ್ಚಿಲ್ಲದ ಅಂತಹ ಕೆಲವು ಉಪಾಯಗಳು ಇಲ್ಲಿವೆ:
*ನಿಂಬೆಹಣ್ಣಿನ ಪರಿಹಾರ:
ಇದಕ್ಕಾಗಿ ನೀವು ಹೆಚ್ಚೇನೂ ಶ್ರಮ ಪಡಬೇಕಾದ ಅಗತ್ಯವಿಲ್ಲ. ಬಳಸಿ ಬಿಟ್ಟ ನಿಂಬೆಹಣ್ಣಿನ ಭಾಗಕ್ಕೆ ಒಂದಷ್ಟು ಉಪ್ಪು ಹಾಗೂ ಸಕ್ಕರೆಯನ್ನು ಸೇರಿಸಿ ಮೃದುವಾಗಿ ಕಪ್ಪು ಭಾಗಕ್ಕೆ ಉಜ್ಜಿಕೊಳ್ಳಿ. ಸ್ವಲ್ಪ ಸಮಯದ ನಂತರ ಉಗುರು ಬಿಸಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.
ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಹಾಗೂ ಸಿಟ್ರಿಕ್ ಆಮ್ಲದ ಅಂಶ ನಿಮ್ಮ ಮೊಳಕಾಲು ಮತ್ತು ಮೊಳಕೈ ಭಾಗದಲ್ಲಿರುವ ಕಪ್ಪನ್ನು ತೊಡೆದು ಹಾಕಿ ತ್ವಚೆಯನ್ನು ಹೊಳೆಯುವಂತೆ ಮತ್ತು ಮೃದುವಾಗಿ ಕಂಗೊಳಿಸುವಂತೆ ಮಾಡುತ್ತದೆ. ಇದರಿಂದ ಡೆಡ್ ಸ್ಕಿನ್ ಸಮಸ್ಯೆ ಸಹ ದೂರವಾಗುತ್ತದೆ.

*ಪಪಾಯ ವರ್ಧಕ: ಪಪಾಯದಲ್ಲಿರುವ ಪಪಾಯನ್, ವಿಟಮಿನ್ ಎ ಮತ್ತು ಸಿ ಎಂಬ ಚರ್ಮದ ಶುದ್ಧೀಕರಣ ಕಿಣ್ವಗಳು ವಿಶೇಷವಾಗಿ ಮೊಣಕೈ ಮತ್ತು ಮಂಡಿಯ ಕಪ್ಪು ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ನೆರವಾಗುತ್ತವೆ. ಪಪಾಯ ಹಣ್ಣಿನ ಒಂದು ತುಣುಕನ್ನು ತೆಗೆದುಕೊಂಡು ಅದನ್ನು ಮೊಸರಿನೊಂದಿಗೆ ಚೆನ್ನಾಗಿ ಕಿವುಚಿ ಮೊಳಕೈ–ಮೊಳಕಾಲಿನ ಕಪ್ಪು ಜಾಗದ ಮೇಲೆ ಮೈದುವಾಗಿ ಉಜ್ಜಿಕೊಳ್ಳಿ.
ದಿನನಿತ್ಯ ಹೀಗೆ ಮಾಡುವುದರಿಂದ ಪಪ್ಪಾಯದಲ್ಲಿರುವ ಪೌಷ್ಟಿಕಾಂಶಗಳು ಈ ಸಮಸ್ಯಾತ್ಮಕ ಚರ್ಮಕ್ಕೆ ಸೂಕ್ತ ಪರಿಹಾರ ಒದಗಿಸುತ್ತವೆ.

*ತೈಲ ಪೋಷಣೆ: ಆಲಿವ್ ಆಯಿಲ್, ತೆಂಗಿನ ಎಣ್ಣೆ ಮತ್ತು ಬಾದಾಮಿ ಎಣ್ಣೆಯಂತಹ ನೈಸರ್ಗಿಕ ತೈಲಗಳಲ್ಲಿ ಸಾಕಷ್ಟು ವಿಟಮಿನ್ ಇ ಅಂಶವಿರುತ್ತದೆ. ಇದು ಶುಷ್ಕ ಮತ್ತು ಒರಟು ಚರ್ಮಕ್ಕೆ ತೇವಾಂಶ ನೀಡಿ ಮೃದುಗೊಳಿಸುತ್ತದೆ.
ಆಲಿವ್ ಎಣ್ಣೆಯಲ್ಲಿ ಕಪ್ಪು ಮತ್ತು ಹಾನಿಗೊಳಗಾದ ಚರ್ಮವನ್ನು ದುರಸ್ತಿ ಮಾಡಲು ಹೆಸರಾದ ಆಂಟಿ ಆಕ್ಸಿಡೆಂಟ್ ಗುಣವಿದೆ. ಈ ಯಾವುದಾದರೂ ಒಂದು ತೈಲವನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಲೇಪಿಸಿಕೊಂಡು, ಬೆಳಿಗ್ಗೆ ಉಗುರು ಬಿಸಿ ನೀರಿನಿಂದ ಸ್ನಾನ ಮಾಡಿ.

*ಯೋಗರ್ಟ್ ಮತ್ತು ವಿನೆಗರ್: ಲ್ಯಾಕ್ಟಿಕ್ ಮತ್ತು ಅಸಿಟಿಕ್ ಆಮ್ಲವನ್ನು ಹೊಂದಿರುವ ಯೋಗರ್ಟ್ ಮತ್ತು ವಿನೆಗರ್ ಅನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಕಪ್ಪು ಭಾಗಕ್ಕೆ ಲೇಪಿಸಿಕೊಂಡು 20 ನಿಮಿಷದ ನಂತರ ತೊಳೆಯಬೇಕು. ನಂತರ ಅದಕ್ಕೆ ಮಾಯಿಶ್ಚರೈಸ್ ಹಚ್ಚಿಕೊಳ್ಳುತ್ತ ಬಂದರೆ ಆ ಭಾಗದ ಬಣ್ಣ ತಿಳಿಯಾಗುತ್ತ ಹೋಗುತ್ತದೆ.

*ಅರಿಶಿನ, ಜೇನು ಮತ್ತು ಹಾಲಿನ ಲೇಪನ: ಔಷಧೀಯ ಗುಣಗಳನ್ನು ಹೊಂದಿರುವ ಅರಿಶಿನ, ಬ್ಲೀಚ್‌ನ ಕೆಲಸ ಮಾಡುವ ಹಾಲು ಹಾಗೂ ತ್ವಚೆಗೆ ತೇವಾಂಶ ಒದಗಿಸುವ ಜೇನು ಈ ಮೂರೂ ನೈಸರ್ಗಿಕ ಗುಣಗಳು ಕಪ್ಪು ಕಲೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ. ಹಾಲು ಹಾಗೂ ಜೇನಿನ ಜೊತೆಗೆ ಅಗತ್ಯವಿರುವ ಪ್ರಮಾಣದ ಅರಿಶಿಣವನ್ನು ಕಲೆಸಿ ಪೇಸ್ಟ್ ಮಾಡಿಕೊಂಡು ಕಪ್ಪಾದ ಭಾಗಕ್ಕೆ ಲೇಪಿಸಿಕೊಳ್ಳಿ. 20 ನಿಮಿಷದ ನಂತರ ತೊಳೆದು ಮಾಯಿಶ್ಚರೈಸ್ ಮಾಡಿಕೊಳ್ಳಿ.

ADVERTISEMENT

*ಸ್ನಾನ ಮಾಡುವಾಗ ಈ ಭಾಗವನ್ನು ಕಡೆಗಣಿಸಬೇಡಿ. ಸ್ನಾನಕ್ಕೆ ಬಳಸುವ ಸೋಪ್ ಅಥವಾ ಜೆಲ್‌ನಿಂದ ಬಾತ್ ಬ್ರಷ್ ಬಳಸಿ ಚೆನ್ನಾಗಿ ಉಜ್ಜಿಕೊಳ್ಳಿ. ನಂತರ ಬಾಡಿ ಲೋಶನ್‌ನಿಂದ ನಿಧಾನಕ್ಕೆ ಮಾಲಿಶ್ ಮಾಡಿ. ಇದರಿಂದ ಮೊಣಕಾಲು ಮತ್ತು ಮೊಣಕೈ ಮೇಲಿನ ಆಳವಾದ ಚರ್ಮದ ಕಲ್ಮಶಗಳನ್ನು ಮತ್ತು ಸತ್ತ ಜೀವಕೋಶಗಳು ಹೊರಟು ಹೋಗಿ ಚರ್ಮ ಹೊಳೆಯುವಂತೆಯೂ, ಮೃದುವಾಗಿಯೂ ಕಾಣುತ್ತದೆ.

ನಿಂಬೆಹಣ್ಣಿನಿಂದ ಉಜ್ಜಿಕೊಂಡ ಭಾಗ ತೀರಾ ಉರಿಯಿಂದ ನೋವು ಕೊಟ್ಟರೆ ಅದು ಹೆಚ್ಚು ಶುಷ್ಕವಾಗಿ ಬಿರುಕು ಬಿಟ್ಟಿದೆ ಎಂದು ಅರ್ಥ. ಅಂತಹ ಸಂದರ್ಭದಲ್ಲಿ ಹಿಂದಿನ ರಾತ್ರಿಯೇ ಆ ಭಾಗಕ್ಕೆ ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸಲೀನ್ ಹಚ್ಚಿಕೊಳ್ಳಿ. ಮಾರನೇ ದಿನ ಬೆಳಿಗ್ಗೆ ಬಳಸಿದ ನಿಂಬೆ ಹಣ್ಣಿಗೆ ಉಪ್ಪು–ಸಕ್ಕರೆ ಹಾಕಿ ಉಜ್ಜಬೇಕು. ಆಗ ಉರಿಯ ಅನುಭವ ಕಡಿಮೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.