ADVERTISEMENT

ಕಸರತ್ತಿನ ಖುಷಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಕಸರತ್ತಿನ ಖುಷಿ
ಕಸರತ್ತಿನ ಖುಷಿ   

‘ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುತ್ತೇನೆ. ಬೆಳಿಗ್ಗೆ ಅರ್ಧ ಗಂಟೆ ಧ್ಯಾನಕ್ಕೆ ಮೀಸಲು. ಮುಂಜಾನೆಯ ತಂಪು ಹವೆಗೆ ಮುಖ ಒಡ್ಡುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ. ಏಳು ಕಿ.ಮೀ. ಜಾಗಿಂಗ್‌ ಮಾಡುತ್ತೇನೆ. ಒಂದೂವರೆ ಗಂಟೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತೇನೆ. ಏಳೂವರೆಗೆಲ್ಲ ವ್ಯಾಯಾಮ ಮುಗಿಸಿ, ಚಿತ್ರೀಕರಣಕ್ಕೆ ಹೊರಡುತ್ತೇನೆ.

‘ಆಹಾರದ ವಿಷಯದಲ್ಲಿಯೂ ಕಡಿವಾಣ ಹಾಕಿಕೊಂಡಿದ್ದೇನೆ. ರುಚಿ ಎನ್ನುವ ಕಾರಣಕ್ಕೆ ಸಿಕ್ಕಿದ್ದೆಲ್ಲ ತಿನ್ನುವುದಿಲ್ಲ. ಅನ್ನ ತುಂಬಾ ಕಡಿಮೆ. ಭಾನುವಾರ ಮಧ್ಯಾಹ್ನ ಮಾತ್ರವೇ ಅನ್ನ ತಿನ್ನುತ್ತೇನೆ. ಪ್ರತಿದಿನ ಬೆಳಿಗ್ಗೆ ಇಡ್ಲಿ, ಓಟ್ಸ್‌, ಹಾಲು ಕುಡಿಯುತ್ತೇನೆ. ಮಧ್ಯಾಹ್ನ ಮೂರು ಚಪಾತಿ, ಜೊತೆಗೆ ಐದು ಮೊಟ್ಟೆ ಅಥವಾ ಚಿಕನ್‌. ರಾತ್ರಿ ಐದು ಮೊಟ್ಟೆ, ಚಪಾತಿ ತಿನ್ನುತ್ತೇನೆ. ಇದರ ಮಧ್ಯೆ ಹಣ್ಣುಗಳ ರಸ, ಗ್ರೀನ್‌ ಟೀ ಕುಡಿಯುತ್ತೇನೆ.

‘ನನಗೆ ಮೊದಲಿನಿಂದಲೂ ಫಿಟ್‌ನೆಸ್‌ ಕಾಳಜಿ ಇದೆ. ಕಾಲೇಜಿನಲ್ಲಿರುವಾಗ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದ ಕಾರಣ ಫಿಟ್‌ ಆಗಿಯೇ ಇದ್ದೆ. ನನ್ನ ಸ್ನೇಹಿತನದೇ ಜಿಮ್‌ಗೆ ಹೋಗುವುದರಿಂದ ಯಾವ ಹೊತ್ತಿನಲ್ಲಿ ಹೋದರೂ ಜಿಮ್‌ ಬಾಗಿಲು ತೆರೆದು ಅವಕಾಶ ನೀಡುತ್ತಾನೆ.

ADVERTISEMENT

‘ಬಣ್ಣದ ಲೋಕದಲ್ಲಿ ಫಿಟ್‌ ಆಗಿರುವುದು ಅಗತ್ಯ. ಆದರೆ ಇದೊಂದೇ ಕಾರಣಕ್ಕೆ ನಾನು ಇಷ್ಟೊಂದು ಕಸರತ್ತು ನಡೆಸುವುದಿಲ್ಲ. ಫಿಟ್‌ನೆಸ್‌ಗೆ ಆದ್ಯತೆ ನೀಡಿದಷ್ಟು ನಾವು ಆರೋಗ್ಯವಾಗಿರುತ್ತೇವೆ. ವೈದ್ಯರಿಂದಲೂ ದೂರವಿರಬಹುದು. ಧಾರಾವಾಹಿ ಚಿತ್ರೀಕರಣ ಪ್ರಾರಂಭವಾದ ಹೊಸತರಲ್ಲಿ ಜಿಮ್‌ಗೆ ಹೋಗಲು ಉದಾಸೀನವಾಗುತ್ತಿತ್ತು. ಮನೆಯಲ್ಲಿಯೇ ರಾತ್ರಿ ಸ್ಕಿಪಿಂಗ್‌ ಮಾಡುತ್ತಿದ್ದೆ. ಆದರೆ ಇದು ಸರಿಯಲ್ಲ ಎನಿಸಿತು.

‘ಈಗ ರಾತ್ರಿ 9.30ಕ್ಕೆ ಮನೆಗೆ ಬಂದರೂ, 10ರಿಂದ 12 ಗಂಟೆವರೆಗೂ ಜಿಮ್‌ನಲ್ಲಿ ಕಸರತ್ತು ನಡೆಸುತ್ತೇನೆ. ನನಗೆ ಸಿಕ್ಸ್‌ಪ್ಯಾಕ್‌ ಮುಖ್ಯವಲ್ಲ. ಸದೃಢ ಮೈಕಟ್ಟು ಅಗತ್ಯ. ಅದಕ್ಕಾಗಿ ಬೆವರು ಹರಿಸುತ್ತೇನೆ. ಬೆಳಿಗ್ಗೆ ಹೊತ್ತು ಧ್ಯಾನ ಮಾಡುವುದರಿಂದ ದಿನಪೂರ್ತಿ ಏಕಾಗ್ರತೆ ಇರುತ್ತದೆ. ಪ್ರೊಟೀನ್‌ಯುಕ್ತ ಆಹಾರ ಸೇವಿಸುವುದರಿಂದ ದೇಹವೂ ಹಗುರವಾಗಿರುತ್ತದೆ.

‘ದೇಹಭಾಷೆಯ ಜೊತೆಗೆ ಮನಸ್ಸು ಶುದ್ಧಿಗೂ ಪ್ರಾಮುಖ್ಯ ನೀಡಿರುವುದರಿಂದ ಮುಂಜಾನೆಯಿಂದ ಸಂಜೆಯವರೆಗೂ ಉಲ್ಲಸಿತನಾಗಿಯೇ ಇರುತ್ತೇನೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.