ADVERTISEMENT

ಕುಡಿತ ಬಿಡು ಮತ್ತೆ ಬರುವೆ...

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಕುಡಿತ ಬಿಡು ಮತ್ತೆ ಬರುವೆ...
ಕುಡಿತ ಬಿಡು ಮತ್ತೆ ಬರುವೆ...   

ಕನಸು

ಜೀವದ ಜೀವ,

ನಿನ್ನ ಗೆಳೆಯ ಮೊನ್ನೆ ಹೇಳಿದ ನೀನು ತುಂಬಾ ಕುಡಿತೀಯಂತೆ. ಇತ್ತೀಚೆಗೆ ದಿನಾ ಕೆಲಸಕ್ಕೂ ಹೋಗುತ್ತಿಲ್ಲವಂತೆ? ನಾವಿಬ್ಬರೂ ಭೇಟಿಯಾಗಿ ಒಂದೂ ಕಾಲು ವರ್ಷವಾಗುತ್ತಿದೆ ಅಷ್ಟೇ. ಇಷ್ಟರೊಳಗೆ ನೀನು ಎಷ್ಟು ಮುಖಗಳನ್ನು ತೋರಿಸಿಬಿಟ್ಟೆ ಮಾರಾಯ? ಅದನ್ನೆಲ್ಲ ಅರಗಿಸಿಕೊಳ್ಳಲಾಗದೆ ನಿನ್ನಿಂದ ದೂರವುಳಿದಿದ್ದೇನೆ.

ADVERTISEMENT

ನನಗಿನ್ನೂ ನೆನಪಿದೆ. ನಾವಿಬ್ಬರೂ ಮೊದಲ ಸಲ ಭೇಟಿಯಾದಾಗ ನೀನು ವೀಳ್ಯದೆಲೆ, ಅಡಿಕೆ ರಸವನ್ನು ಚಪ್ಪರಿಸುತ್ತಾ ಕಣ್ಣಲ್ಲೇ ನಕ್ಕಿದ್ದೆ. ‘ತಂಬಾಕು ಆರೋಗ್ಯಕ್ಕೆ ಒಳ್ಳೆಯದಲ್ಲ. ಈಗಿನ ಸುಣ್ಣವೂ ಅಷ್ಟಕ್ಕಷ್ಟೇ’ ಎಂದು ನಾನು ಸೂಕ್ಷ್ಮವಾಗಿ ಹೇಳಿದ್ದೆ.

‘ನಿಜ, ಇವತ್ತು ಸುಣ್ಣ ಸ್ವಲ್ಪ ಜಾಸ್ತಿಯೇ ಹಾಕ್ಕೊಂಡೆ. ಅದಕ್ಕೇ ಇಷ್ಟು ಕೆಂಪು. ತಂಬಾಕು ತಿನ್ನೋದೇ ಇಲ್ಲ’ ಅಂತ ನೀನು ಹೇಳಿದೆ. ನಾನು ನಂಬಿದೆ. ಸುಳಿವೂ ಸಿಗದಂತೆ ನೀನು ಲೀಲಾಜಾಲವಾಗಿ ಸುಳ್ಳು ಹೇಳುತ್ತಲೇ ಬಂದೆ.

ಅಂದು ನೀನು ತಾಂಬೂಲ ಹಾಕಿದ್ದುದು ಮದ್ಯದ ವಾಸನೆ ಹೊಡೆಯದೇ ಇರಲಿ ಎಂದು ತಾನೆ? ಹಾಗಿದ್ದರೆ ಪ್ರತಿ ಬಾರಿ ನೀನು ತಾಂಬೂಲ ಹಾಕಿಯೇ ಇರುತ್ತಿದ್ದೆ! ಪ್ರತಿ ಬಾರಿ ಕುಡಿದಿರುತ್ತಿದ್ದೆಯಾ? ಕುಡಿದು ಕುಡಿದು ಜಠರ ಮತ್ತು ಕರುಳಿನ ಸೋಂಕು ಶುರುವಾಗಿದೆ ಎಂದೂ ನಿನ್ನ ಸ್ನೇಹಿತ ಹೇಳಿದ. ಹೋಟೆಲ್‌ನಲ್ಲಿ ಊಟ ಮಾಡಿದಾಗಲೆಲ್ಲ ನಿನಗೆ ವಾಕರಿಕೆ ಬರುತ್ತಿತ್ತು. ಅದಕ್ಕೆ ನಾನು ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬರಲು ಶುರುಮಾಡಿದೆ. ಅದನ್ನೂ ನೀನು ಸರಿಯಾಗಿ ತಿನ್ನುತ್ತಿರಲಿಲ್ಲ. ಹೊಟ್ಟೆ ತುಂಬಿದೆ ಅಂತಲೇ ಹೇಳುತ್ತಿದ್ದೆ. ನಾನು ಅದನ್ನೂ ನಂಬಿದೆ.

ಮದುವೆಯ ಬಗ್ಗೆ ಮಾತನಾಡಬೇಕು ಬಾ ಎಂದು ನನ್ನನ್ನು ಕರೆದಿದ್ದೆ. ಧನುರ್ಮಾಸದಲ್ಲಿ ಯಾರೂ ಮದುವೆ ವಿಚಾರ ಮಾತನಾಡಲ್ಲ ಎಂದು ನಾನು ರೇಗಿದ್ದನ್ನೇ ನೆಪವಾಗಿಟ್ಟುಕೊಂಡು ನೀನು ಅವತ್ತಿನ ಭೇಟಿಯನ್ನೇ ರದ್ದು ಮಾಡಿದೆ. ‘ನನಗೆ ಕರುಳಿನ ಸೋಂಕು ಇರೋದು ಗೊತ್ತಾದ್ರೆ ಅವಳು ಮದುವೆಯಾಗಲ್ಲ. ಕುಡಿತೀನಿ, ಜರ್ದಾ ಹಾಕ್ತೀನಿ, ಬೀಡಿ ಸೇದ್ತೀನಿ ಅಂತ ಎಲ್ರೂ ನನ್ನಿಂದ ದೂರವಾಗ್ತಾರೆ. ಅದಕ್ಕೆ ಅವಳಿಗೆ ಇದ್ಯಾವುದನ್ನೂ ಅವಳಿಗೆ ಹೇಳಬೇಡ’ ಎಂದು ನಿನ್ನ ಸ್ನೇಹಿತನಿಂದ ಪ್ರಮಾಣ ಮಾಡಿಸಿಕೊಂಡಿದ್ದೆಯಂತೆ?

ಸ್ವಾಭಿಮಾನದಿಂದ ದುಡಿದು ತಿನ್ನುವುದು ಗಂಡಸ್ತನ. ಇದು ನನ್ನಪ್ಪನನ್ನು ನೋಡಿ ಕಲಿತ ಪಾಠ. ಹಾಗಾಗಿ ನೀನು ಗಾರೆ ಕೆಲಸ ಮಾಡುವ ಬಗ್ಗೆ ನನಗೆ ಯಾವ ತಕರಾರೂ ಇಲ್ಲ. ನಿನ್ನನ್ನೇ ಮದುವೆಯಾಗಲೆಂದು ನಾನು ಕಾಯುತ್ತಿದ್ದೇನೆ ಎಂಬ ಸಂಗತಿ ಗೊತ್ತಿದ್ದರೂ ನೀನು ಈ ಚಟಗಳಿಂದ ದೂರವಾಗುತ್ತಿಲ್ಲ ಎಂಬುದೊಂದೇ ನನಗಿರುವ ಆಕ್ಷೇಪ.

ನಿನ್ನನ್ನು ಭೇಟಿಯಾಗದೆ ಹದಿನಾರು ದಿನಗಳಾಗಿವೆ. ಒಂದು ಸಣ್ಣ ಅಂತರವನ್ನು ಕಾಯ್ದುಕೊಂಡು ನಿನ್ನ ಸತ್ವಪರೀಕ್ಷೆ ಮಾಡೋಣ ಎಂದುಕೊಂಡು ನಿನ್ನ ಕರೆಗಳನ್ನೂ ಸ್ವೀಕರಿಸುತ್ತಿಲ್ಲ. ನನ್ನಾಣೆಗೂ ಹೇಳ್ತೀನಿ, ನಾನು ಬೇರೆ ಯಾವ ಯೋಚನೆಯನ್ನೂ ಮಾಡುತ್ತಿಲ್ಲ. ಮಾಡುವುದೂ ಇಲ್ಲ.

ನನ್ನ ಉದ್ದೇಶ ಇಷ್ಟೇ– ನೀನು ಕುಡಿತ, ಬೀಡಿ, ಜರ್ದಾ ಬಿಟ್ಟುಬಿಡು, ಸಂಪೂರ್ಣವಾಗಿ. ಖಚಿತವಾದ ನಿರ್ಧಾರ ಮಾಡಿ ಹೇಳು. ಕಾಯುತ್ತೇನೆ. ಕಾಯಿಲೆಗೆ ಚಿಕಿತ್ಸೆ ಮಾಡಬಹುದು. ಚಟ ಬಿಡಲು ದೃಢನಿರ್ಧಾರ ಬೇಕು. ಅದು ನಿನ್ನ ಕೈಲಿದೆ. ನಿನ್ನ ಭವಿಷ್ಯವಷ್ಟೇ ಅಲ್ಲ, ನನ್ನ ಭವಿಷ್ಯವೂ ನಿನ್ನ ಕೈಲಿದೆ.

ಯೋಚಿಸು.
ಇಂತಿ ನಿನ್ನ ಗೆಳತಿ
ಗೌರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.