ADVERTISEMENT

ಕುರೂಪಿ ನಾಯಿ ಗೌರವ

​ಪ್ರಜಾವಾಣಿ ವಾರ್ತೆ
Published 1 ಜುಲೈ 2015, 19:30 IST
Last Updated 1 ಜುಲೈ 2015, 19:30 IST

ಸೌಂದರ್ಯ ಸ್ಪರ್ಧೆಗಳಂತೆಯೇ ಶ್ವಾನ ಸೌಂದರ್ಯ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಎಷ್ಟಾದರೂ ಶ್ವಾನಗಳು ನಮ್ಮ ಮುದ್ದಿನ ಸಾಕು ಪ್ರಾಣಿಗಳಲ್ಲವೇ? ಕೆಲವರಂತೂ ತಮ್ಮ ಮಕ್ಕಳಿಗಿಂತ ನಾಯಿಯ ಆರೈಕೆಗೇ ಹೆಚ್ಚು ಆದ್ಯತೆ ನೀಡುತ್ತಾರೆ.

ಊಟೋಪಚಾರ, ಉಡುಗೆ ತೊಡುಗೆಗಳು, ಅನಾರೋಗ್ಯ ಉಂಟಾದರೆ ಮಾಡುವ ಆರೈಕೆ ಒಂದೇ ಎರಡೇ? ಆದರೆ ನಾಯಿಗಳು ಮುದ್ದಾಗಿರಬೇಕು ಎಂದು ಮಾತ್ರವಲ್ಲ, ಕುರೂಪಿಯಾಗಿಯೂ ಇರಬೇಕೆಂದೂ ಬಯಸುವವರಿದ್ದಾರೆ! ಅತಿ ಕುರೂಪಿಯಾದ ನಾಯಿ‌ ಬರೋಬ್ಬರಿ 9.51 ಕೋಟಿ ಗೆಲ್ಲಬಹುದು ಎಂದಾಗ ಜನ ಬಿಡುತ್ತಾರೆಯೇ? ಚೆನ್ನಾಗಿರುವ ನಾಯಿಯನ್ನೂ ಕುರೂಪಿಯನ್ನಾಗಿಸಲು ಹಿಂಜರಿಯಲಾರರು.

ಅಂದಹಾಗೆ, ವಿಶ್ವದ ಅತಿ ಕುರೂಪಿ ನಾಯಿ ಎಂಬ ‘ಹೆಗ್ಗಳಿಕೆ’ಗೆ ಪಾತ್ರವಾಗಿರುವುದು ಅಮೆರಿಕದ ನೆವಾಡದ ಕ್ವಾಸಿ ಮೊಡೊ ಎಂಬ ಹೆಸರಿನ ನಾಯಿ. ಕ್ಯಾಲಿಫೋರ್ನಿಯಾದಲ್ಲಿ ಸೊನೊಮಾ ಮೆರಿನ್‌ ಉತ್ಸವದಲ್ಲಿ ಈ ಬಾರಿಯ ‘ವಿಶ್ವದ ಅತಿ ಕುರೂಪಿ ನಾಯಿ ಸ್ಪರ್ಧೆ’ಯಲ್ಲಿನ ಅಂತಿಮ ಸುತ್ತಿನಲ್ಲಿ 26 ಪ್ರತಿಸ್ಪರ್ಧಿ ಶ್ವಾನಗಳನ್ನು ಮಣಿಸಿ ಕ್ವಾಸಿ ಮೊಡೊ ಗೆಲುಗಿನ ಗರಿ ಮುಡಿಗೇರಿಸಿಕೊಂಡು ಬೀಗಿದೆ! ಅದರ ಮಾಲೀಕನೂ ತನ್ನ ನಾಯಿಯ ಸೌಂದರ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾನೆ.

ತಮಾಷೆಯಾಗಿ ಕಂಡರೂ ಈ ಕುರೂಪ ಶ್ವಾನ ಸ್ಪರ್ಧೆಯ ಹಿಂದೆ ಮಾನವೀಯ ಸಂಗತಿಯೂ ಇದೆ. ಈ ಸ್ಪರ್ಧೆ ನಡೆಯುತ್ತಿರುವುದು ಅನಾಥ ನಾಯಿಗಳ ದತ್ತು ಪಡೆಯುವುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ. ನೆಲೆ ಇಲ್ಲದ, ವಿವಿಧ ಸಂಘಟನೆಗಳು, ಜನರು ರಕ್ಷಿಸಿದ ನಾಯಿಗಳನ್ನು ದತ್ತು ಪಡೆಯುವಂತೆ ಪ್ರೇರೇಪಿಸುವುದು ಇದರ ಉದ್ದೇಶ. ನಾಯಿಗಳು ಮುದ್ದಾಗಿದ್ದರೆ ಮಾತ್ರ ಸಾಕಬೇಕೆ, ಕುರೂಪಿ ನಾಯಿಗಳನ್ನೂ ಸಲುಹಿ ಎನ್ನುತ್ತದೆ ಈ ಸ್ಪರ್ಧೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.