ADVERTISEMENT

ಕೋತಿಗೆ ಡೈ ಮಾಡಿ, ವಿದೇಶಿ ಎಂದ!

ಅನಿತಾ ಈ.
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಕಪ್ಪು ಬಣ್ಣದ ಡೈ ಹಾಕಿದ ಕೋತಿ
ಕಪ್ಪು ಬಣ್ಣದ ಡೈ ಹಾಕಿದ ಕೋತಿ   

ಪ್ರತಿ ಜೀವಿಗೂ ಸ್ವತಂತ್ರವಾಗಿ ಜೀವಸುವ ಹಕ್ಕಿದೆ. ಆದರೆ ಮನುಷ್ಯ ತನ್ನ ಸ್ವಾರ್ಥ ಹಾಗೂ ಮನರಂಜನೆಗಾಗಿ ಯಾವ ಜೀವಿಗಳನ್ನೂ ಬಿಟ್ಟಿಲ್ಲ. ಹೀಗಾಗಿಯೇ ನಿತ್ಯವೂ ಪ್ರಾಣಿಗಳಿಗೆ ಹಿಂಸೆ ನೀಡುವವರ ಬಗ್ಗೆ ಸುದ್ದಿ ಓದುತ್ತಲೇ ಇರುತ್ತೇವೆ.

ಪರಿಸರದಲ್ಲಿನ ಸಮತೋಲನ ಕಾಪಾಡಲು ಹಾಗೂ ಇತರೆ ಜೀವಿಗಳ ಮೇಲೆ ನಡೆಯುವ ಹಿಂಸೆಯನ್ನು ತಪ್ಪಿಸಲು ಸಾಕಷ್ಟು ಕಾನೂನು ರೂಪಿಸಲಾಗಿದೆ. ಆದರೆ ಈ ಕಾನೂನುಗಳು ಕೆಲವೊಮ್ಮೆ ಪ್ರಾಣಿಗಳ ಹಿತ ಕಾಪಾಡಲು ಸಹಾಯಕ್ಕೆ ಬಂದರೂ, ಹಿಂಸೆ ನೀಡಿದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಅವಕಾಶ ಇಲ್ಲದಂತಾಗಿದೆ. ಇದರಿಂದಾಗಿಯೇ ಪ್ರಾಣಿಗಳಿಗೆ ಹಿಂಸೆ ನೀಡಿದವರು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಇದಕ್ಕೆ ಕೆಲವೇ ದಿನಗಳ ಹಿಂದೆಯಷ್ಟೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ವೃತ್ತಿಯಲ್ಲಿ ಆಟೊ ಚಾಲಕನಾಗಿರುವ ಸರ್ಜಾಪುರದ ಕೃಷ್ಣ ವನ್ಯ ಜೀವಿಗಳ ಗುಂಪಿಗೆ ಸೇರಿದ ಉದ್ದ ಬಾಲದ ಕೋತಿಯನ್ನು (ಬಾನಿಟ್‌ ಮಕ್ಯಾಕ್‌) ತನ್ನ ಖುಷಿಗಾಗಿ ಸಾಕಿಕೊಂಡಿದ್ದರು. ಸಾಲದ್ದಕ್ಕೆ ಸದಾ ಅದರ ಕುತ್ತಿಗೆಗೆ ಕಬ್ಬಿಣದ ಸರಪಳಿ ಹಾಕಿ ತನ್ನೊಂದಿಗೆ ಆಟೊದಲ್ಲೇ ಕರೆದುಕೊಂಡು ಹೋಗುತ್ತಿದ್ದರು. ಆಟೊದ ಸೀಟ್‌ನ ಕೆಳಭಾಗದಲ್ಲೇ ಇದರ ಜಾಗ. ಇಲ್ಲವಾದಲ್ಲಿ ಮನೆಯಲ್ಲೂ ಅದನ್ನು ಸರಪಳಿಯಿಂದ ಕಟ್ಟಿಹಾಕುತ್ತಿದ್ದರಂತೆ. ಇದರಿಂದಾಗಿ ಸರಪಳಿ ಹಾಕಿರುವ ಜಾಗದಲ್ಲಿ ಕೋತಿಗೆ ಇದ್ದ ಕೂದಲು ಸಂಪೂರ್ಣವಾಗಿ ಉದುರಿಹೋಯಿತು.

ಮನುಷ್ಯರು ಬಳಸುವ ‘ಹೇರ್‌ ಡೈ’ ಕೋತಿಗೆ ಹಚ್ಚಿ ಅದನ್ನೂ ಕಪ್ಪು ಮಾಡಿದರು.  ಯಾರೇ ಈ ಕೋತಿಯನ್ನು ನೋಡಿದರೂ ಇದು ಚಿಂಪಾಂಜಿ ಜಾತಿಗೆ ಸೇರಿದ ವಿದೇಶಿ ಕೋತಿ ಎಂದು ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದರು.

‘ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರೊಬ್ಬರನ್ನು ನೋಡಲು ಮಂಗಳವಾರ (ಫೆ.09) ಆಟೊ ಚಾಲಕ ಕೃಷ್ಣ ಸರ್ಜಾಪುರದಿಂದ ಕೋತಿಯೊಂದಿಗೆ ಬಂದಿದ್ದರು. ಅಲ್ಲಿದ್ದ ಜನರು ಅವರ ಆಟೊದಲ್ಲಿ ಕಟ್ಟಿ ಹಾಕಿದ್ದ ಕಪ್ಪು ಕೋತಿಯನ್ನು ಕಂಡು ಗುಂಪುಕಟ್ಟಿದ್ದರು. ಅದನ್ನು ಕಂಡ ನನ್ನ ಸ್ನೇಹಿತ ಏನು ಎಂದು ವಿಚಾರಿಸಿದಾಗ ಕೋತಿಯನ್ನು ಕಟ್ಟಿಹಾಕಿರುವ ವಿಷಯ ತಿಳಿದಿದೆ.

ತಕ್ಷಣ ಅವರು ನನಗೆ ಕರೆ ಮಾಡಿದರು. ಜೊತೆಗೆ ಅದರ ಫೋಟೊ ತೆಗೆದು ವಾಟ್ಸ್‌ಆ್ಯಪ್‌ ಮಾಡಿದ್ದರು.  ಮೊದಲು ಅದು ಯಾವ ಜಾತಿ ಕೋತಿ ಎಂದು ತಿಳಿಯಲಿಲ್ಲವಾದರೂ ಕೋತಿಗಳನ್ನು ಬಂಧಿಸಿಡುವುದು ಕಾನೂನು ಬಾಹಿರ ಎಂದು ಅದನ್ನು ರಕ್ಷಿಸಲು ಸ್ಥಳಕ್ಕೆ ಹೋದೆ.  ಪೊಲೀಸರಿಗೆ ಮಾಹಿತಿ ತಿಳಿಸಿದ್ದೆ. ಪೊಲೀಸರು ಬಂದ ನಂತರ ಅದನ್ನು ಆ ವ್ಯಕ್ತಿಯಿಂದ ಬಿಡಿಸಿಕೊಂಡು ಬಂದೆ’ ಎಂದು ವಿವರಿಸುತ್ತಾರೆ ಪಿಎಫ್‌ಎ ಕಾರ್ಯಕರ್ತ ಚೇತನ್‌ ಶರ್ಮಾ.

‘ಎಲ್ಲ ಪ್ರಕರಣಗಳಲ್ಲೂ ಬಂಧನದಲ್ಲಿರುವ ಪ್ರಾಣಿಗಳನ್ನು ಬಿಡಿಸುವಾಗ ಪೊಲೀಸರ ಸಹಾಯ ಪಡೆಯುವುದಿಲ್ಲ. ಆದರೆ ಈ ಪ್ರಕರಣದಲ್ಲಿ ತುಂಬಾ ಜನರು ಗುಂಪು ಕಟ್ಟಿದ್ದರು. ಅಲ್ಲದೇ ಐದು ತಿಂಗಳ ಹಿಂದೆ ₹50 ಸಾವಿರ ಕೊಟ್ಟು ಕೋತಿಯನ್ನು ಖರೀದಿಸಿದ್ದೇನೆ ಎಂದು ಕೃಷ್ಣ ವಾದ ಮಾಡುತ್ತಿದ್ದರು. ಅದರಿಂದ ಪೊಲೀಸರ ಸಹಾಯ ಕೋರಬೇಕಾಯಿತು.

ಪೊಲೀಸರು ಬರುತ್ತಿದ್ದಂತೆಯೇ ಕೃಷ್ಣ ತಕರಾರು ಮಾಡದೆ ಕೋತಿಯನ್ನು  ಒಪ್ಪಿಸಿದ್ದರು. ಸದ್ಯಕ್ಕೆ ನಮ್ಮ ಸಂಸ್ಥೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅದರ ಕೂದಲಿಗೆ ಹಚ್ಚಿರುವ ಡೈ ಅಪಾಯಕಾರಿ. ಸ್ನಾನ ಮಾಡಿಸುವುದರಿಂದ ಅಥವಾ ಕೋತಿಯ ಕೂದಲು ಬೆಳೆದಂತೆ ಅದು ಇಲ್ಲವಾಗಬೇಕು. ಜೊತೆಗೆ ಕೊಂಚ ಚರ್ಮದ ಸೋಂಕು ಇದ್ದು, ಅದು ಚಿಕಿತ್ಸೆಯಿಂದ ಗುಣವಾಗುತ್ತದೆ. ನಂತರ ಅದನ್ನು ಕೋತಿಗಳ ಗುಂಪಿಗೆ ಸೇರಿಸಿ ಕಾಡಿಗೆ ಬಿಡುತ್ತೇವೆ’ ಎಂದು ವಿವರಿಸಿದರು. 

ಬಂಧನದಿಂದ ಮುಕ್ತವಾಗಿರುವ ಮೂರು ವರ್ಷದ ಹೆಣ್ಣು ಕೋತಿ ‘ಬಾನಿಟ್‌ ಮಕ್ಯಾಕ್‌’ ಜಾತಿಗೆ ಸೇರಿದ್ದು. ಬಾನಿಟ್‌ ಮಕ್ಯಾಕ್‌ ಎಂದರೆ ಟೋಪಿಯಂತೆ ಜುಟ್ಟುಳ್ಳ ಮಂಗ, ಟೋಪಿ ಕೋತಿ, ಭಾರತೀಯ ಕೋತಿ ಎಂದು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.  30ಕ್ಕೂ ಹೆಚ್ಚು ಕೋತಿಗಳು ಸದ್ಯಕ್ಕೆ ಬೆಂಗಳೂರಿನ ಕೆಂಗೇರಿಯಲ್ಲಿರುವ ಪೀಪಲ್‌ ಫಾರ್ ಅನಿಮಲ್ಸ್‌ನಲ್ಲಿ ಆಶ್ರಯ ಪಡೆದಿವೆ.

ಸಾಮಾನ್ಯವಾಗಿ ರಸ್ತೆ ಅಪಘಾತ, ವಿದ್ಯುತ್‌ ತಂತಿಗೆ ಸಿಲುಕಿ ಅಥವಾ ಬೇರೆ ಪ್ರಾಣಿಗಳಿಂದ ಗಾಯಗೊಂಡ ಕೋತಿಗಳಿಗೂ ವನ್ಯ ಜೀವಿಗಳ ರಕ್ಷಣೆ ಹಾಗೂ ಚಿಕಿತ್ಸೆ ನೀಡುವಲ್ಲಿ ನಿರತವಾಗಿರುವ ಪಿಎಫ್‌ಎ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.  ನಂತರ ಕೋತಿಗಳ ವರ್ತನೆ ಗಮನಿಸಿ ಅದೇ ಜಾತಿಗೆ ಸೇರಿದ ಬೇರೆ ಕೋತಿಗಳೊಂದಿಗೆ ಬೆರೆಯಲು ಬಿಡುತ್ತಾರೆ. ಅವುಗಳ ನಡುವೆ ಸ್ನೇಹ ಬೆಳೆದು 10ರಿಂದ 15 ಕೋತಿಗಳ ಗುಂಪು ರೂಪುಗೊಂಡ ನಂತರ ಅವುಗಳನ್ನು ಒಟ್ಟಿಗೆ ಕಾಡಿಗೆ ಬಿಡುತ್ತಾರೆ. ಇನ್ನು ಕಾಲು, ಕಣ್ಣು ಸೇರಿದಂತೆ ದೇಹದ ಯಾವುದೇ ಅಂಗವನ್ನು ಕಳೆದುಕೊಂಡು ಶಾಶ್ವತವಾಗಿ ಅಂಗವಿಕಲವಾದ ಕೋತಿಗಳನ್ನು ಮಾತ್ರ ಅಲ್ಲೇ ಇಟ್ಟುಕೊಂಡು ಸಲಹುತ್ತಾರೆ. ಸದ್ಯಕ್ಕೆ ಇಲ್ಲಿ ಕಣ್ಣು ಕಳೆದುಕೊಂಡ ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕೋತಿಗಳು ಆಶ್ರಯ ಪಡೆದಿವೆ.  

ರಾಜ್ಯದ ಯಾವುದೇ ಭಾಗದಲ್ಲಿ ವನ್ಯ ಜೀವಿಗಳನ್ನು ಆಪತ್ತಿನಲ್ಲಿ  ಅಥವಾ ಅಕ್ರಮ ಬಂಧನದಲ್ಲಿ ಕಂಡರೆ ಅವನ್ನು ಪೊಲೀಸರ ಸಹಾಯದಿಂದ ಬಿಡುಗಡೆ ಮಾಡಿಸಿ, ನಗರದ ಕೆಂಗೇರಿಯಲ್ಲಿರುವ ಪಿಎಫ್‌ಎಗೆ ಕರೆತರಬಹುದು. ಅಲ್ಲಿ ಉಚಿತ ಚಿಕಿತ್ಸೆ ಹಾಗೂ ಆಶ್ರಯ ನೀಡುತ್ತಾರೆ. ನಗರದ ಹಾಗೂ ಸುತ್ತಲ ಪ್ರದೇಶಗಳಲ್ಲಿ ಇಂತಹ ಘಟನೆಗಳು ಕಂಡುಬಂದಲ್ಲಿ ಪಿಎಫ್‌ಎ ಕಾರ್ಯಕರ್ಯರೇ ಸಹಾಯಕ್ಕೆ ಬರುತ್ತಾರೆ.
ಮಾಹಿತಿಗೆ: 9900025370.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.