ADVERTISEMENT

ಕೋಳಿಮಾಂಸ ಪ್ರಿಯೆ ಆಶಿಕಾ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2017, 19:30 IST
Last Updated 1 ಆಗಸ್ಟ್ 2017, 19:30 IST
ಆಶಿಕಾ
ಆಶಿಕಾ   

‘ಕ್ರೇಜಿ ಬಾಯ್‌’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ನಟಿ ಆಶಿಕಾ ‘ಮುಗುಳು ನಗೆ’ ಸಿನಿಮಾದಲ್ಲಿ ಗಣೇಶ್‌ ಅವರಿಗೆ ಜತೆಯಾಗಿ ನಟಿಸಿದ್ದಾರೆ. ಸದ್ಯ ಕನ್ನಡದ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ ಚೆಲುವೆ ಮೊದಲ ನೋಟಕ್ಕೆ ಕಣ್ಸೆಳೆಯುತ್ತಾರೆ. ತಿದ್ದಿ ತೀಡಿದಂತಹ ಮೈಮಾಟ ಹೊಂದಿರುವ ಆಶಿಕಾ ಫಿಟ್‌ನೆಸ್‌ನ ಮೊರೆ ಹೋಗಿರುವುದು ಆರೋಗ್ಯ ಹಾಗೂ ಸದೃಢವಾಗಿರಬೇಕು ಎಂಬ ಉದ್ದೇಶದಿಂದ.

ಸದ್ಯ ’ಗರುಡ’ ಹಾಗೂ ‘ಲೀಡರ್‌’ ಚಿತ್ರದಲ್ಲಿ ಬ್ಯುಸಿಯಾಗಿರುವ ಆಶಿಕಾ ಚಿತ್ರೀಕರಣಕ್ಕೆ ಸರಿಯಾಗಿ ಸಮಯ ಹೊಂದಿಸಿಕೊಂಡು ಜಿಮ್‌ಗೆ ಹೋಗುತ್ತಾರೆ. ‘ಚಿತ್ರೀಕರಣ ಬೆಳಿಗ್ಗೆ ಇದ್ದರೆ ಸಂಜೆ ಜಿಮ್‌ಗೆ ಹೋಗುತ್ತೇನೆ. ಇಲ್ಲದಿದ್ದರೆ ಬೆಳಿಗ್ಗೆ. ಕೆಲವೊಮ್ಮೆ ರಾತ್ರಿ ಶೂಟಿಂಗ್‌ ಇದ್ದರೆ ಎರಡು ದಿನಕ್ಕೊಮ್ಮೆ ಜಿಮ್‌ಗೆ ಹೋಗುವುದೂ ಇದೆ’ ಎಂಬ ವಿವರಣೆ ಆಶಿಕಾ ಅವರದು.  ಜಿಮ್‌ನಲ್ಲಿ ಮೊದಲ 15–20 ನಿಮಿಷ ಟ್ರೆಡ್‌ಮಿಲ್‌ನಲ್ಲಿ ಓಟ. ಆದಾದ ಬಳಿಕ ಕಾರ್ಡಿಯೊ. ಮತ್ತೆ ವ್ಯಾಯಾಮ. ಕಳೆದ ಒಂದು ವರ್ಷದಿಂದ ಇದು ಅವರ ಅಭ್ಯಾಸ.

ಆಶಿಕಾ ನೃತ್ಯ ಪ್ರವೀಣೆ. ಹಾಗಾಗಿ ಸಿನಿಮಾ ಕ್ಷೇತ್ರ ಪ್ರವೇಶಿಸುವ ಮೊದಲು ಅವರಿಗೆ ಜಿಮ್‌ ಅಥವಾ ವ್ಯಾಯಾಮ ಮಾಡುವ ಅವಶ್ಯಕತೆ ಬರಲಿಲ್ಲ. ಡಾನ್ಸ್‌ ಅವರ ಫಿಟ್‌ನೆಸ್‌ ಮಂತ್ರವಾಗಿತ್ತು. ಆದರೆ ಈಗ ಡಾನ್ಸ್‌ ತರಗತಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಅವರಿಗಿದೆ. ‘ಈಗ ಅನಿವಾರ್ಯವಾಗಿ ಜಿಮ್‌ಗೆ ಹೋಗುತ್ತಿದ್ದೇನೆ’ ಎಂದು ಆಶಿಕಾ ಹೇಳುತ್ತಾರೆ.

ADVERTISEMENT

ಜಿಮ್‌ಗೆ ಹೋಗುವವರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಮುಖ್ಯ. ವ್ಯಾಯಾಮ ಹೆಚ್ಚು ಮಾಡುವುದರಿಂದ ಜಾಸ್ತಿ ಹಸಿವಾಗುತ್ತದೆ. ಆಶಿಕಾ ಪ್ರತಿ ಎರಡು ಗಂಟೆಗೊಮ್ಮೆ ಹಣ್ಣು, ತರಕಾರಿ, ಸಕ್ಕರೆ ರಹಿತ ಜ್ಯೂಸ್‌ ಕುಡಿಯುತ್ತಾರೆ. ಚಿತ್ರೀಕರಣದ ಸಮಯದಲ್ಲಿ ಎಳನೀರು, ನಿಂಬೆ ಪಾನಕ, ಮಜ್ಜಿಗೆ ಹೆಚ್ಚು ಕುಡಿಯುತ್ತಾರೆ. ಬೆಳಿಗ್ಗೆ ಇಡ್ಲಿ, ದೋಸೆ, ತೀರಾ ಹಸಿವಾದರೆ ಹಣ್ಣು, ತರಕಾರಿ. ಮಧ್ಯಾಹ್ನ ಶೂಟಿಂಗ್‌ ಸ್ಥಳದಲ್ಲಿ ಊಟ. ಸಂಜೆ ಗ್ರೀನ್‌ ಟೀ. ರಾತ್ರಿ ಅನ್ನ, ಚಪಾತಿ.

‘ಹೊಸ ಪಾತ್ರಗಳು ಸಿಕ್ಕಾಗ ನಿರ್ದೇಶಕರು ಪಾತ್ರಕ್ಕೆ ಸಣ್ಣ ಅಥವಾ ದಪ್ಪ ಆಗಬೇಕೆಂದು ತಿಳಿಸುತ್ತಾರೆ. ಪಾತ್ರಕ್ಕೆ ತಕ್ಕಂತೆ ಡಯಟ್‌ ಪಾಲಿಸ್ತೀನಿ’ ಎಂಬ ಶಿಸ್ತು ಆಶಿಕಾರದು. ‘ರಾಜು ಕನ್ನಡ ಮೀಡಿಯಂ’ ಚಿತ್ರಕ್ಕೆ ಶಾಲಾ ಹುಡುಗಿಯಂತೆ ಕಾಣಬೇಕಿತ್ತು. ಅದಕ್ಕೆ ಸ್ವಲ್ಪ ಸಣ್ಣಗಾಗಿದ್ದರು. ‘ಲೀಡರ್‌’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ತಂಗಿ ಪಾತ್ರದಲ್ಲಿ ಆಶಿಕಾ ನಟಿಸುತ್ತಿದ್ದಾರೆ. ಇದರಲ್ಲಿ ಸ್ವಲ್ಪ ಗುಂಡು ಗುಂಡಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಆಶಿಕಾಗೆ ಅಮ್ಮ ಮಾಡುವ ಚಿಕನ್‌ ಬಿರಿಯಾನಿ ತುಂಬ ಇಷ್ಟ. ಮುಂಚೆ ವಾರಕ್ಕೆ ಎರಡು– ಮೂರು ಬಾರಿ ತಿನ್ನುತ್ತಿದ್ದರಂತೆ. ಈಗ 10 ದಿನಕ್ಕೊಮ್ಮೆ ಒಂದು ಬಾರಿ ಬಿರಿಯಾನಿ ತಿನ್ನುತ್ತಾರಂತೆ. ‘ಒಂದು ಸಿನಿಮಾದ ಚಿತ್ರೀಕರಣಕ್ಕೆ ಕೆಲ ತಿಂಗಳು ತಗಲುತ್ತದೆ. ಹೀಗಾಗಿ ಡಯಟ್‌ ಬಗ್ಗೆ ನಾವು ಗಮನ ನೀಡಲೇಬೇಕು’ ಎನ್ನುತ್ತಾರೆ ಆಶಿಕಾ. 

ಎತ್ತರ: 5 ಅಡಿ 4 ಇಂಚು

ತೂಕ: 51 ಕೆ.ಜಿ

ಇಷ್ಟಪಡುವ ಖಾದ್ಯ: ಬಿರಿಯಾನಿ,
ಕೋಳಿ ಮಾಂಸದ ಖಾದ್ಯಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.