ADVERTISEMENT

ಕ್ರಿಸ್ಟಿಯಾನೊ ರೊನಾಲ್ಡೊ ಮುಷ್ಟಿಯಲ್ಲಿ ನಕ್ಷತ್ರ

ಸಾಧಕ

ವಿಶಾಖ ಎನ್.
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST
ಕ್ರಿಸ್ಟಿಯಾನೊ ರೊನಾಲ್ಡೊ ಮುಷ್ಟಿಯಲ್ಲಿ ನಕ್ಷತ್ರ
ಕ್ರಿಸ್ಟಿಯಾನೊ ರೊನಾಲ್ಡೊ ಮುಷ್ಟಿಯಲ್ಲಿ ನಕ್ಷತ್ರ   

ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಒಮ್ಮೆ ಕ್ರಿಸ್ಟಿಯಾನೊ ರೊನಾಲ್ಡೊ ಗಳಿಕೆ  16 ಕೋಟಿ ಡಾಲರ್ (₹1089.8 ಕೋಟಿ ) ಎಂದು ಪ್ರಕಟ ವಾಯಿತು. ಆಗ ಜಗತ್ತಿನ ಅತಿ ಜನಪ್ರಿಯ ಫುಟ್‌ಬಾಲ್ ಆಟಗಾರ ರಲ್ಲಿ ಒಬ್ಬರಾದ ರೊನಾಲ್ಡೊ, ‘ಅದು ತಪ್ಪು. ನನ್ನ ಆದಾಯ  25.5 ಕೋಟಿ ಡಾಲರ್‌’ (₹1734.8 ಕೋಟಿ) ಎಂದು ಹೇಳಿದರು.  ಅವರೆಷ್ಟು ಶ್ರೀಮಂತ ಆಟಗಾರ ಎನ್ನುವುದನ್ನು ಅಂದಾಜು ಮಾಡಬಹುದು.

ಪೋರ್ಚುಗಲ್‌ನ  ಕ್ರಿಸ್ಟಿಯಾನೊ ರೊನಾಲ್ಡೊ ಡಾಸ್ ಸ್ಯಾಂಟೊಸ್ ಅವೀರೊ ಹುಟ್ಟಿದ್ದು ಬಡ ಕುಟುಂಬದಲ್ಲಿ. ಅಮ್ಮ ಮರಿಯಾ ಡೊಲೋರ್ಸ್ ಅಡುಗೆ ಕೆಲಸ ಮಾಡುತ್ತಿ ದ್ದರು. ಅಪ್ಪ ಜೋಸ್ ಡಿನಿಸ್ ಅವೀರೊ, ಉದ್ಯಾನದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕ. ಧರ್ಮಪ್ರಜ್ಞೆ, ಮುಚ್ಚಟೆ, ಪ್ರೀತಿ ಎಲ್ಲವನ್ನೂ ಕೊಟ್ಟು ಬೆಳೆಸಿದವರು ಅಮ್ಮ. ಇಬ್ಬರು ಅಕ್ಕಂದಿರು ಹಾಗೂ ಒಬ್ಬ ಅಣ್ಣನ ಜತೆ ರೊನಾಲ್ಡೊ ಮಲಗುತ್ತಿದ್ದುದು. ಅಪ್ಪ-ಅಮ್ಮ ಮಲಗುತ್ತಿದ್ದುದು ಇನ್ನೊಂದು ಚಿಕ್ಕ ಜಾಗದಲ್ಲಿ. ಪುಟ್ಟ ಮನೆಯಲ್ಲಿಯೇ ದೊಡ್ಡ ಕನಸುಗಳನ್ನು ಕಂಡ ಹುಡುಗ.

ತನಗೆ ಮೇಷ್ಟ್ರು ಅಗೌರವ ಸೂಚಿಸಿದರು ಎಂದು ಅವರತ್ತ ಕುರ್ಚಿ ತೂರಿ ಶಾಲೆಯಿಂದ ಹೊರದಬ್ಬಿಸಿಕೊಂಡ ಹುಡುಗ ರೊನಾಲ್ಡೊ. ಮಗನ ಫುಟ್‌ಬಾಲ್ ಪ್ರೀತಿಗೆ ನೀರೆರೆದದ್ದು ಅಮ್ಮ. ಓದನ್ನು ಬದಿಗೊತ್ತಿ ಸ್ಪೋರ್ಟಿಂಗ್ ಸಿಪಿ ಕ್ಲಬ್‌ನಲ್ಲಿ ಮೂರು ತಿಂಗಳ ತರಬೇತಿಗೆ ಸೇರಿಕೊಂಡಾಗ 12 ವರ್ಷ.

ವಯಸ್ಸು 14 ಆಗುವ ಹೊತ್ತಿಗೆ ರೊನಾಲ್ಡೊಗೆ ತಾನು ಅರೆ ವೃತ್ತಿಪರ ಫುಟ್‌ಬಾಲ್ ಆಟಗಾರ ಆಗುವ ಅರ್ಹತೆ ಇದೆ ಎಂಬ ಆತ್ಮವಿಶ್ವಾಸ ಮೂಡಿತ್ತು. ಈ ಫುಟ್‌ಬಾಲ್ಆಟಗಾರನ ಬದುಕು ಫಾಸ್ಟ್ ಫಾರ್ವರ್ಡ್ ಸಿನಿಮಾ ತರಹ ಇದೆ.

‘ರೇಸಿಂಗ್ ಹಾರ್ಟ್’ ಎಂಬ ಸಮಸ್ಯೆ ರೊನಾಲ್ಡೊಗೆ ಇತ್ತು. ಹೃದಯದ ಬಡಿತ ಹೆಚ್ಚಾಗಿರುವಂತೆ ಅನ್ನಿಸುವ ತೊಂದರೆ ಇದು. ಹೀಗೆ ಆಗುವ ಮಕ್ಕಳು ಫುಟ್‌ಬಾಲ್ ಆಡುವುದು ತರವಲ್ಲ ಎನ್ನುವುದು ವೈದ್ಯರ ಸಲಹೆ. ರೊನಾಲ್ಡೊಗೆ ಒಂದು ಸಣ್ಣ ಲೇಸರ್ ಶಸ್ತ್ರಚಿಕಿತ್ಸೆ ಮಾಡಿಸಿ, ಈ ಸಮಸ್ಯೆ ನೀಗಿಸಲಾಯಿತು. ಆಮೇಲಷ್ಟೇ ಅವರು ಫುಟ್‌ಬಾಲ್ ಆಡುವುದನ್ನು ಮುಂದುವರಿಸಿದ್ದು.

ರೊನಾಲ್ಡೊಗೆ ಒಬ್ಬ ಮಗ ಇದ್ದಾನೆ. ಅವನ ಹೆಸರು ಕ್ರಿಸ್ಟಿಯಾನೊ ರೊನಾಲ್ಡೊ ಜೂನಿಯರ್. ಅಪ್ಪ ಆಡುವ ಯಾವುದೇ ಪ್ರಮುಖ ಪಂದ್ಯಕ್ಕೆ ಈ ಮಗನ ಹಾಜರಿ ಇರುತ್ತದೆ. ಭದ್ರತಾ ಪಡೆಯ ಕಾವಲಿನಲ್ಲಿ ಪಂದ್ಯ ನೋಡುವ ಮಗನಿಗೆ ಅಪ್ಪ ಪ್ರತಿ ಗೋಲು ಗಳಿಸಿದಾಗಲೂ ಇಶಾರೆ ಮಾಡುವುದು ರೂಢಿ. ಅಪ್ಪನ ಜೆರ್ಸಿ ಯಂಥದ್ದೇ ವಿನ್ಯಾಸಗೊಳಿಸಿದ ಜೆರ್ಸಿ ತೊಡುವ ಮಗ ಮುಂದೆ ಫುಟ್‌ಬಾಲ್ ಆಟಗಾರನೇ ಆಗುತ್ತಾನೆಂದು ಅನೇಕರು ನಂಬಿದ್ದಾರೆ.

ಸೋಜಿಗದ ಸಂಗತಿ ಎಂದರೆ, ಈ ಮಗುವಿನ ತಾಯಿ ಯಾರೆನ್ನುವ ಗುಟ್ಟನ್ನು ರೊನಾಲ್ಡೊ ಬಿಟ್ಟು ಕೊಟ್ಟಿಲ್ಲ. ಮಗುವಿನ ಕುರಿತ ಕಾನೂನು ಹಕ್ಕುಗಳನ್ನು ಬಿಟ್ಟು ಕೊಡಲೆಂದೇ ಆ ಹೆತ್ತ ತಾಯಿಗೆ ₹160 ಕೋಟಿ  ಹೆಚ್ಚು ಹಣವನ್ನು ಪರಿಹಾರದ ರೂಪದಲ್ಲಿ ಕೊಟ್ಟಿದ್ದಾರೆ. ವಾರಕ್ಕೆ ಮೂರೂಕಾಲು ಕೋಟಿ ರೂಪಾಯಿಯಷ್ಟು ಮೊತ್ತವನ್ನು ಡಾಲರ್‌ ರೂಪದಲ್ಲಿ  ಸಂಪಾದಿಸುವ ರಿಯಲ್ ಮ್ಯಾಡ್ರಿಡ್ ಆಟಗಾರ ರೊನಾಲ್ಡೊ, ತಿಂಗಳಿಗೆ ಬಟ್ಟೆ, ಬೂಟು ಇತ್ಯಾದಿಗೆಂದು ಸರಾಸರಿ ಆರೂ ಮುಕ್ಕಾಲು ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ.

‘ನಾನು ಹಣದ ರಾಶಿಯ ಮೇಲೆ ಕೂತಿದ್ದೇನೆ’ ಎನ್ನುವ ಅವರ ಧ್ಯಾನ ಮಾತ್ರ ಫುಟ್‌ಬಾಲ್‌ನಲ್ಲೇ. ಅದಕ್ಕೇ 31ರ ಹರೆಯದಲ್ಲಿಯೂ ಅವರು ಈ ವರ್ಷ ಪೋರ್ಚುಗಲ್ ತಂಡದ ಪರ ಯುರೋಪಿಯನ್ ಚಾಂಪಿಯನ್‌ಷಿಪ್‌ ನಲ್ಲಿ 12 ಪಂದ್ಯಗಳಲ್ಲಿ 16 ಗೋಲು ದಾಖಲಿಸಿದ್ದು.

2016 ಯುರೊ ಕಪ್‌ನಲ್ಲಿ ಪೋರ್ಚುಗಲ್ ತಂಡ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದದ್ದೂ ಅವರ ನಾಯಕತ್ವ ದಲ್ಲಿಯೇ. ಫಿಫಾ ನೀಡುವ ವರ್ಷದ ಆಟಗಾರ ಪ್ರಶಸ್ತಿಗೆ ಮುತ್ತಿಕ್ಕಿದ ಈ ಸುಂದರಾಂಗ ಫುಟ್‌ಬಾಲ್ ಆಟಗಾರನಿಗೆ ರೂಪದರ್ಶಿಯರ ಮಾದಕತೆ ಸ್ವಲ್ಪವೂ ಇಷ್ಟವಿಲ್ಲವಂತೆ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.