ADVERTISEMENT

‘ಗದರಿದರೆ ಅಳುವೆ’

ವಿದ್ಯಾಶ್ರೀ ಎಸ್.
Published 14 ಏಪ್ರಿಲ್ 2017, 19:30 IST
Last Updated 14 ಏಪ್ರಿಲ್ 2017, 19:30 IST
‘ಗದರಿದರೆ ಅಳುವೆ’
‘ಗದರಿದರೆ ಅಳುವೆ’   

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ರಾಧಾರಮಣ’  ಧಾರಾವಾಹಿಯಲ್ಲಿ ರಮಣನನ್ನು ಪಡೆದೇ ತಿರುತ್ತೇನೆ ಎಂದು ಪಣ ತೊಟ್ಟಿರುವ ದೀಪಿಕಾ ಪಾತ್ರಧಾರಿ ಅನುಷಾ ಹೆಗ್ಡೆ ಪುತ್ತೂರಿನವರು.  ಕ್ರಿಮಿನಲ್‌ ಐಡಿಯಾಗಳನ್ನು ಮಾಡುವುದರ ಜೊತೆಗೆ ಮುಗ್ದೆಯ ರೀತಿಯಲ್ಲಿ ನಟಿಸುತ್ತಲೇ  ಮನಗೆದ್ದಿದ್ದಾರೆ.  ತಮ್ಮ ಕನಸು, ಕನವರಿಕೆಗಳ ಬಗ್ಗೆ ಅವರು ಹೇಳುವುದು ಹೀಗೆ...

* ರಿಯಲ್‌ ಲೈಫ್‌ನಲ್ಲಿಯೂ ನೀವು ವಿಲನ್ನಾ?

ಖಂಡಿತಾ ಇಲ್ಲ. ಎರಡೂ ತದ್ವಿರುದ್ಧ ವ್ಯಕ್ತಿತ್ವ. ಯಾರಾದರೂ ಗದರಿದರೂ ಅತ್ತು ಬಿಡುತ್ತೇನೆ. ಮೃದು ಸ್ವಭಾದವಳು ನಾನು.  ಬೈದರೆ ಕೇಳಿಸಿಕೊಳ್ಳುತ್ತೇನೆ ವಿನಾ ತಿರುಗಿ ಬೈಯಲು ಹೋಗುವುದಿಲ್ಲ.

ADVERTISEMENT

* ಇಷ್ಟೆಲ್ಲಾ ಕ್ರಿಮಿನಲ್‌ ಐಡಿಯಾ ಹೇಗೆ ಬರುತ್ತದೆ?

ನಿರ್ದೇಶಕರ ಅಣತಿಯಂತೆ ನಾನು ನಟಿಸುತ್ತೇನೆ. ಮೊದಲು ನಾನು ಒಳ್ಳೆಯವಳೇ ಆಗಿದ್ದೆ. ಇಷ್ಟಪಟ್ಟ ವ್ಯಕ್ತಿ ಸಿಗದ ಕಾರಣಕ್ಕೆ ಹೀಗೆ ಬದಲಾಗಿದ್ದೇನೆ.

* ಎಂದಾದರೂ ಭಯಾನಕ ಕನಸು ಬಿದಿದ್ದು ಇದೆಯಾ?

ಈ ಧಾರಾವಾಹಿಯಲ್ಲಿ ಏನಾದರೊಂದು ಕಿತಾಪತಿ ಮಾಡುತ್ತಲೇ ಇರುತ್ತೇನೆ. ಒಮ್ಮೆ ಸಿಕ್ಕಿ ಬೀಳುವ ಸನ್ನಿವೇಶ ಎದುರಾಗುತ್ತದೆ. ಮೊದಲೇ ಸ್ಕ್ರಿಪ್ಟ್‌ ಗೊತ್ತಿದ್ದ ಕಾರಣಕ್ಕೆ ಮೂರು ದಿನ ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ. ಕನಸಿನಲೆಲ್ಲ ಇಂದು ಸಿಕ್ಕಿಬೀಳುತ್ತೇನೆ ಎಂದು  ಬೆಚ್ಚಿ ಬೀಳುತ್ತಿದ್ದೆ. ಅಷ್ಟರ ಮಟ್ಟಿಗೆ ಧಾರಾವಾಹಿಯ ಪಾತ್ರ ನನ್ನೊಳಗೆ ಆಹ್ವಾನೆಯಾಗಿದೆ.

* ಶೂಟಿಂಗ್‌ ಸಂದರ್ಭದ ಅನುಭವ?

ಧಾರಾವಾಹಿ ಪ್ರಾರಂಭವಾಗಿ ಎರಡು ತಿಂಗಳು ಆಗಿದೆ. ನಾವೆಲ್ಲ ಒಂದೇ ಕುಟುಂಬದ ರೀತಿಯಲ್ಲಿ ಇದ್ದೇವೆ. ಒಬ್ಬರಿಗೊಬ್ಬರು ತುಂಬಾ ಕಾಳಜಿ ಮಾಡುತ್ತಾರೆ. ಸೆಟ್‌ನಲ್ಲಿ  ತಮಾಷೆ, ನಗು ಇದಿದ್ದೆ.   

* ರಮಣ ಮತ್ತೆ ಸಿಗುವ ನಂಬಿಕೆ ಇದೆಯಾ?

ಸದ್ಯಕ್ಕೆ ಗೊತ್ತಿಲ್ಲ. ಆದರೆ ರಮಣ ಸಿಗುವವರೆಗೂ ನನ್ನ ಪ್ರಯತ್ನ ಮಾತ್ರ ಬಿಡುವುದಿಲ್ಲ. 

* ನಿಮ್‌ ಹುಡುಗ ಹೇಗಿರಬೇಕು?

ಲಕ್ಷಣವಾಗಿರಬೇಕು. ನನ್ನನ್ನು ತುಂಬಾ ಇಷ್ಟಪಡಬೇಕು.

* ರಮಣನ ಹಾಗೆ ಇರಬೇಕಾ?

ಮದುವೆಯಾಗಿರುವ ಹುಡುಗ ಬೇಡಪ್ಪ. ಶೂಟಿಂಗ್‌ ಇಲ್ಲದಾಗ ‘ಅಯ್ಯೋ, ನೀನು ನನಗೆ ಬೇಡ. ನನ್ನ ಪಾತ್ರ ಯಾವಾಗ ಬದಲಾಗುತ್ತದೋ’ ಎಂದು ಅವರನ್ನು ರೇಗಿಸುತ್ತಲೇ ಇರುತ್ತೇನೆ. 

* ನಿಮ್ಮ ಇಷ್ಟದ ಉಡುಗೆ, ಬಣ್ಣ, ಆಹಾರ ?

ಸಾಂಪ್ರದಾಯಿಕ ಉಡುಪು ಇಷ್ಟ. ಬಣ್ಣ– ಕಪ್ಪು, ಬಿಳಿ, ಆಹಾರ– ಚಿಕನ್‌.

* ಕನಸು ನನಸಾಗಿದ್ದು ಇದೆಯಾ?

ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬ ಕನಸಿತ್ತು. ಮೂರು ಕುರುಡು ಮಕ್ಕಳ ಒಂದು ವರ್ಷದ ಶಿಕ್ಷಣ  ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಮುಂದೆ ಇನ್ನೂ ಹೆಚ್ಚು ಮಕ್ಕಳಿಗೆ ಶಿಕ್ಷಣದ ನೆರವು ನೀಡುವ ಆಸೆ ಇದೆ.

* ನೃತ್ಯ ಪಯಣದ ಬಗ್ಗೆ ಹೇಳಿ?

ಜೀವನದ ಅರ್ಧ ಪಯಣವನ್ನು ನೃತ್ಯಾಭ್ಯಾಸದಲ್ಲಿಯೇ ಕಳೆದಿದ್ದೇನೆ. ಒಂದನೇ ತರಗತಿಯಲ್ಲಿರುವಾಗಲೇ ಭರತನಾಟ್ಯ ಅಭ್ಯಾಸ ಪ್ರಾರಂಭ ಮಾಡಿದೆ. ಯೋಗ, ನಾಟಕ, ಹಾಡು, ಕ್ರೀಡೆ ಹೀಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದ್ದ ಕಾರಣಕ್ಕೆ ಮನೆಯವರೊಂದಿಗೆ ಸಮಯ ಕಳೆದಿದ್ದೆ ಕಡಿಮೆ.

* ಬೆಂಗಳೂರಿಗೆ ಬಂದು ಸಪೂರ ಆಗಿದ್ದೀರಂತೆ?

ಮೊದಲೇ ನಾನು ತೆಳುವಾಗಿದ್ದೆ. ಬೆಂಗಳೂರಿಗೆ ಬಂದ ಮೇಲೆ ಇನ್ನೂ ಸಪೂರ ಆಗಿದ್ದೇನೆ.  ಹುಟ್ಟಿ, ಬೆಳೆದಿದ್ದು ಪುತ್ತೂರಿನಲ್ಲಿ. ಹೀಗಾಗಿ  ಇಲ್ಲಿಯ ವಾತಾವರಣಕ್ಕೆ ಹೊಂದುಕೊಳ್ಳುವುದೇ ಕಷ್ಟ ಆಗುತ್ತಿದೆ. ಊಟ, ವಾತಾವರಣ ಎಲ್ಲದಕ್ಕೂ ಹೊಂದಿಕೊಳ್ಳಲು ಇನ್ನಷ್ಟು ಸಮಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.