ADVERTISEMENT

ಗರಿಗರಿ ಹುಬ್ಬು

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 19:30 IST
Last Updated 25 ಜುಲೈ 2017, 19:30 IST
ಗರಿಗರಿ ಹುಬ್ಬು
ಗರಿಗರಿ ಹುಬ್ಬು   

ತಲೆ ಕೂದಲನ್ನು ಎರಡು ಭಾಗ ಮಾಡಿ ಬೈತಲೆ ವಿನ್ಯಾಸ ಮಾಡುವುದು ಸಹಜ. ಆದರೆ ಈಗ ಹುಬ್ಬುಗಳನ್ನೂ ಈ ರೀತಿ ವಿನ್ಯಾಸ ಮಾಡುವ ಟ್ರೆಂಡ್‌ ಶುರುವಾಗಿದೆ. ಥಟ್ಟನೆ ನೋಡಿದಾಗ ತೆಂಗಿನ ಗರಿಯಂತೆ ಕಾಣುವ ಈ ವಿನ್ಯಾಸಕ್ಕೆ ಈಗ ಬೇಡಿಕೆ ಹೆಚ್ಚುತ್ತಿದೆ. ‘ಫೆದರ್‌ ಐಬ್ರೋ ಶೇಪ್‌’ ಎಂಬುದು ಇದರ ಹೆಸರು.

ಇದೇನಪ್ಪಾ ‌ಹೊಸ ವೇಷ ಎಂದು ಹುಬ್ಬೇರಿಸಬೇಡಿ. ಕೆದರಿದಂತೆ ಕಾಣುವ ಈ ಹುಬ್ಬಿನ ವಿನ್ಯಾಸ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿ ಎನ್ನಿಸಿಕೊಂಡಿದೆ. ಸಾಂಪ್ರದಾಯಿಕ ಸಮಾರಂಭಗಳಿಗೆ ಇದು ಹೊಂದಿಕೆಯಾಗುವುದಿಲ್ಲ ನಿಜ. ಆದರೆ ಆಧುನಿಕ ಉಡುಪು ತೊಟ್ಟಾಗ ಇದು ಬೋಲ್ಡ್‌ ಲುಕ್‌ ನೀಡುತ್ತದೆ ಎನ್ನುತ್ತಾರೆ ಫ್ಯಾಷನ್‌ ತಜ್ಞರು.

ಇತ್ತೀಚೆಗಂತೂ ಫ್ಯಾಷನ್‌ ಜಗತ್ತಿನಲ್ಲಿ ಕಣ್ಣು, ಹುಬ್ಬಿನ ಸೌಂದರ್ಯಕ್ಕೆ ಪ್ರಾಮುಖ್ಯ ಹೆಚ್ಚುತ್ತಿದೆ. ಐ ಲೈನರ್‌, ಶ್ಯಾಡೊ ಬಳಸಿ ಚಿತ್ರ ವಿಚಿತ್ರವೆನ್ನುವಂತಹ ಪ್ರಯೋಗಗಳು ನಡೆಯುತ್ತಲೇ ಇವೆ. ಇದು ಕೂಡ ಈ ಪ್ರಯೋಗದ ಪ್ರತಿಫಲ.

ADVERTISEMENT

ಫಿನ್ಲೆಂಡ್‌ನ ಮೇಕಪ್‌ ಕಲಾವಿದೆ ಈ ರೀತಿಯಾಗಿ ಹುಬ್ಬಿನ ವಿನ್ಯಾಸ ಮಾಡಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದೇ ತಡ ಅದನ್ನೇ ಅನುಕರಿಸಿ ವಿಭಿನ್ನ ಪ್ರಯೋಗಗಳು ಶುರುವಾದವು. ಒಂದಕ್ಕೊಂದು ಭಿನ್ನವಾಗಿರುವ ಶೈಲಿಗಳು ಫ್ಯಾಷನ್‌ ಪ್ರಿಯರ ಮನ ಗೆಲ್ಲಲಾರಂಭಿಸಿದವು.

ಹೀಗೆ ಮಾಡಿದರಾಯಿತು: ಫೆದರ್‌ ಐಬ್ರೋ ಶೇಪ್‌ಗೆ ಹುಬ್ಬಿನ ಕೂದಲನ್ನು ಕೀಳಬೇಕಿಲ್ಲ. ಆಕಾರದಿಂದಾಚೆ ಕೂದಲು ಇರದಿದ್ದರೆ ಸಾಕು. ಅದರಲ್ಲೂ ದಪ್ಪದ ಹುಬ್ಬುಗಳಲ್ಲಿ ವಿಭಿನ್ನ ಶೈಲಿ ಮಾಡುವುದು ಸುಲಭ. ಒಂದು ಹುಬ್ಬಿನ ಮಧ್ಯದಲ್ಲಿ ಬೈತಲೆಯಂತೆ ತೆಗೆದು ಐಬ್ರೊ ಬ್ರಶ್‌ನಿಂದ ನಿಧಾನವಾಗಿ ಬಾಚಿದರೆ ಸಾಕು. ಭಾಗ ಮಾಡಲು ಸಾಧ್ಯವಾಗದಿದ್ದಲ್ಲಿ, ಮೊದಲಿಗೆ ಕೊಂಚ ನೀರನ್ನು ಸ್ಪ್ರೇ ಮಾಡಿ. ನಂತರ ಶೇಪ್‌ ನೀಡಬಹುದು. ಇದು ಹುಬ್ಬುಗಳು ಮತ್ತಷ್ಟು ಅಗಲವಾಗಿ ಕಾಣುವಂತೆ ಮಾಡುತ್ತದೆ.

ವಿಭಿನ್ನ ಫ್ಯಾಷನ್‌ ಶೈಲಿಯ ಮೂಲಕ ಗುರುತಿಸಿಕೊಳ್ಳಲು ಇಷ್ಟಪಡುವ ರೂಪದರ್ಶಿಗಳು ಹೀಗೆ ಹುಬ್ಬನ್ನು ವಿಭಿನ್ನವಾಗಿ ತೀಡಿಕೊಳ್ಳುತ್ತಾರೆ. ಇದಕ್ಕೆ ಕಲರಿಂಗ್‌ ಮಾಡಿಕೊಳ್ಳುವವರೂ ಇದ್ದಾರೆ. ಐ ಶ್ಯಾಡೊಗಳಿಗೆ ಹೊಂದಿಕೆಯಾಗುವಂತೆ ಹುಬ್ಬಿನ ಕೂದಲಿಗೂ ಬಣ್ಣ ಹಚ್ಚಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.