ADVERTISEMENT

ಚಳಿಗಾಲಕ್ಕೆ ಸ್ಟೈಲ್‌ ಮಾಡಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 19:30 IST
Last Updated 26 ಡಿಸೆಂಬರ್ 2017, 19:30 IST
ಚಳಿಗಾಲಕ್ಕೆ ಸ್ಟೈಲ್‌ ಮಾಡಿ
ಚಳಿಗಾಲಕ್ಕೆ ಸ್ಟೈಲ್‌ ಮಾಡಿ   

ಕಾಲೇಜು ಯುವತಿಯರು, ಆಫೀಸ್‌ಗೆ ತೆರಳುವ ಮಹಿಳೆಯರು ದಿನಾ ಹೊಸ ಬಗೆಯ ಉಡುಪುಗಳನ್ನು ತೊಡಲು ಇಷ್ಟಪಡುತ್ತಾರೆ. ಆದರೆ ಚಳಿಗಾಲದಲ್ಲಿ ಈ ಆಯ್ಕೆ ಕಡಿಮೆ. ವಾರ್ಡ್‌ರೋಬ್‌ನಲ್ಲಿ ಮೈ ಬೆಚ್ಚಗಿಡುವ, ಮೈ ಪೂರ್ತಿ ಮುಚ್ಚುವ ಬಟ್ಟೆಗಳನ್ನೇ ಕಣ್ಣು ಹುಡುಕುತ್ತಿರುತ್ತದೆ. ಹೆಚ್ಚಿನವರು ಜೀನ್ಸ್‌ ಹಾಗೂ ಟೀಶರ್ಟ್‌ ತೊಟ್ಟು ಅದರ ಮೇಲೊಂದು ಶ್ರಗ್‌ ಅಥವಾ ಜಾಕೆಟ್‌ ಧರಿಸಿ ಹೊರಗೆ ಹೊರಡುತ್ತಾರೆ. ಆದರೆ ಒಂದಿಷ್ಟು ವಿಭಿನ್ನವಾಗಿ ಚಿಂತಿಸಿದರೆ ಚಳಿಗಾಲದಲ್ಲೂ ಸ್ಟೈಲಿಷ್‌ ಆಗಿ ಕಾಣಬಹುದು.

ಜೀನ್ಸ್‌ ಮೇಲೆ ಸಾದ ಶರ್ಟ್‌ ಹಾಕುವ ಬದಲು ವಿಭಿನ್ನ ಬಗೆಯ ಕೋಟ್‌ಗಳ ಪ್ರಯೋಗ ಮಾಡಿ. ಈ ಕೋಟ್‌ನಲ್ಲೂ ವಿಭಿನ್ನ ವಿನ್ಯಾಸಗಳು ಲಭ್ಯ. ಸ್ಕಿನ್‌ ಟೈಟ್‌ ಪ್ಯಾಂಟ್‌ ಹಾಗೂ ಕೋಟ್‌ನ ಕೈ ತುದಿಯಲ್ಲಿ ರೆಕ್ಕೆಗಳಂತೆ ಬಟ್ಟೆಯನ್ನು ಅಗಲ ಬಿಟ್ಟು, ಒಂದೇ ಕಡೆ ನೆರಿಗೆ ಬರುವಂತೆ ಪ್ಯಾಂಟ್‌ ಸ್ಟಿಚ್‌ ಮಾಡಬೇಕು. ಈ ಡ್ರೆಸ್‌ ಟ್ರೆಂಡಿಯಾಗಿರುವುದಲ್ಲದೇ ನೋಡಲು ಅದ್ಭುತವಾಗಿರುತ್ತದೆ. ಈ ಉಡುಪು ದಪ್ಪ ಇರುವುದರಿಂದ ಮೈಯನ್ನು ಬೆಚ್ಚಗಿಡುತ್ತದೆ.

ದೊಡ್ಡ ದೊಡ್ಡ ಹೂವಿನ ವಿನ್ಯಾಸಗಳಿರುವ, ಗಾಢ ವರ್ಣದ ಕುತ್ತಿಗೆ ತನಕ ಇರುವ ಶರ್ಟ್‌ ಚಳಿಗಾಲಕ್ಕೆ ಸೂಕ್ತ. ಪ್ಯಾಂಟ್‌ಗಳು ಕೊಂಚ ಟ್ರಾಕ್‌ ಅಥವಾ ಸ್ಪೋರ್ಟ್ಸ್‌ ಪ್ಯಾಂಟ್‌ಗಳಂತೆ ಕಂಡರೂ ಖರೀದಿಸುವಾಗ ವಿಭಿನ್ನ ವಿನ್ಯಾಸ ಹಾಗೂ ಶರೀರಕ್ಕೆ ಹೊಂದಿಕೊಳ್ಳುತ್ತದೆಯೇ ಎಂದು ಸರಿಯಾಗಿ ನೋಡಿಕೊಂಡರೆ ಚಳಿಗಾಲದ ಉಡುಗೆ ವಿಶೇಷವಾಗಿ ಕಾಣುತ್ತದೆ.

ADVERTISEMENT

ಲೆದರ್‌ಪ್ಯಾಂಟ್‌ಗಳು ಚಳಿಗಾಲಕ್ಕೆ ಸರಿಯಾದ ಆಯ್ಕೆ. ಲೆದರ್‌ಪ್ಯಾಂಟ್‌ಗೆ ಸ್ವೆಟರ್‌ ಟೀಶರ್ಟ್‌ಗಳು ತೊಟ್ಟರೆ ಆಕರ್ಷಕವಾಗಿರುತ್ತದೆ. ಹೊಳೆಯುವ ಲೆದರ್‌ಪ್ಯಾಂಟ್‌ ಜತೆ ಮೊಣಕಾಲಿನ ತನಕದ ಬೂಟ್‌ಗಳನ್ನು ತೊಟ್ಟಾಗ ಸ್ನೇಹಿತರ ಗುಂಪಿನಲ್ಲಿ ನೀವೇ ಆಕರ್ಷಣೆಯ ಕೇಂದ್ರಬಿಂದು ಆಗುವಿರಿ. ಇದನ್ನು ಪಾರ್ಟಿಗಳಿಗೆ ಹಾಗೂ ಸಣ್ಣ ಪಿಕ್‌ನಿಕ್‌ಗಳಿಗೆ ಹಾಕಿಕೊಂಡು ಹೋದರೆ ಆರಾಮದಾಯಕವಾಗಿರುತ್ತದೆ.

ಈಗ ಅಗಲ ಪ್ಯಾಂಟ್‌ ಅಥವಾ ಪಲಾಜೋಗಳ ಜಮಾನ. ಕುರ್ತಾ ಅಥವಾ ಟೀಶರ್ಟ್‌ಗಳಿಗೂ ಇದು ಸರಿಯಾಗಿ ಹೊಂದುತ್ತದೆ. ದಪ್ಪ, ಸಣ್ಣ ಶರೀರ ಇರುವವರಿಗೂ ಈ ಪ್ಯಾಂಟ್‌ಗಳು ಚೆನ್ನಾಗಿ ಒಪ್ಪುತ್ತವೆ. ಮೊಣಕಾಲು ತನಕದ ಪ್ಯಾಂಟ್‌ ಮೇಲೆ ಟೀಶರ್ಟ್‌ ತೊಟ್ಟು ಅದರ ಮೇಲೊಂದು ಮೇಲುವಂಗಿ ತೊಟ್ಟರೆ ಚಳಿಗಾಲದ ಪಾರ್ಟಿ ಕಳೆಗಟ್ಟುತ್ತದೆ. ಅಗತ್ಯವಿದ್ದರೆ ಪಲಾಜೋದ ಒಳಗಡೆ ಲೆಗ್ಗಿಂಗ್ಸ್‌ ಧರಿಸಬಹುದು, ಇದು ಕಾಲುಗಳನ್ನು ಬೆಚ್ಚಗಿಡುತ್ತದೆ.

ಚೆಕ್ಸ್‌ ಟ್ರೌಷರ್ ಹಾಗೂ ಅಂಥದ್ದೇ ಕೋಟ್‌ ಚಳಿಗಾಲದಲ್ಲಿ ಯುವತಿಯರಿಗೆ ಮತ್ತೊಂದು ಉತ್ತಮ ಆಯ್ಕೆ. ಕೋಟ್‌ನ ಒಳಗೆ ಹೂವಿನ ವಿನ್ಯಾಸಗಳ ಟೀಶರ್ಟ್‌ ತೊಟ್ಟರೆ ಚಂದ ಕಾಣುತ್ತದೆ. ಈ ಬಟ್ಟೆಗಳಿಗೆ ಹೈಹೀಲ್ಡ್‌ ಶೂ ತೊಟ್ಟರೆ ಒಪ್ಪುತ್ತದೆ. ಸ್ಕರ್ಟ್‌ನಲ್ಲೂ ವಿವಿಧ ವಿನ್ಯಾಸಗಳು ಈಗ ಲಭ್ಯ. ಹೂವುಗಳಿರುವ ಅಗಲ ವಿನ್ಯಾಸದ ಸ್ಕರ್ಟ್‌ಗಳು ಹಾಗೂ ಸಾದಾ ವಿನ್ಯಾಸದ ಸ್ಕರ್ಟ್‌ಗಳಿಗೆ ಮೊಣಕಾಲಿನ ತನಕದ ಶರ್ಟ್‌ ತೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.