ADVERTISEMENT

ಚಳಿಗೆ ಉದ್ದುದ್ದ ಸಾಕ್ಸ್‌, ಸ್ಟಾಕಿಂಗ್‌...

ರೋಹಿಣಿ ಮುಂಡಾಜೆ
Published 10 ನವೆಂಬರ್ 2017, 19:30 IST
Last Updated 10 ನವೆಂಬರ್ 2017, 19:30 IST
ಚಳಿಗೆ ಉದ್ದುದ್ದ ಸಾಕ್ಸ್‌, ಸ್ಟಾಕಿಂಗ್‌...
ಚಳಿಗೆ ಉದ್ದುದ್ದ ಸಾಕ್ಸ್‌, ಸ್ಟಾಕಿಂಗ್‌...   

ಬೇಸಿಗೆಯ ಬೇಗೆಯಲ್ಲಿ ಹವಾನುಕೂಲಿಯಾಗಿ ನೆರವಾದ ಟ್ರೆಂಡಿ ಉಡುಪುಗಳು ಚಳಿಗಾಲಕ್ಕೆ ಒಗ್ಗುವುದಿಲ್ಲ. ದೇಹ ಥಂಡಿಯಾದಷ್ಟೂ ಚಳಿಗಾಲದ ಹವಾಮಾನದಿಂದ ಬರುವ ಆರೋಗ್ಯ ಸಮಸ್ಯೆಗಳು ದಾಳಿ ಇಡುತ್ತವೆ. ಅದಲ್ಲದಿದ್ದರೆ ಚಳಿಯಂತೂ ಕಾಡದೇ ಬಿಡದು. ಹಾಗಾಗಿ ಚಳಿಗಾಲಕ್ಕೆ ಮೈ ಮುಚ್ಚುವ ಬಟ್ಟೆಗಳನ್ನು ಆಯ್ದುಕೊಳ್ಳುವುದು ಸಹಜ.

ನಾವೇನೂ ಚಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಚಳಿಗೆ ಸಡ್ಡು ಹೊಡೆಯಬಯಸುವವರಿಗೆ ಪರ್ಯಾಯ ಆಯ್ಕೆಗಳಿವೆ. ಮಂಡಿವರೆಗಿನ, ತೊಡೆವರೆಗಿನ ಉದ್ದ ಸಾಕ್ಸ್‌ ಅಥವಾ ಸ್ಟಾಕಿಂಗ್ಸ್‌ ಧರಿಸಿದರೆ ತುಂಡು ಉಡುಪುಗಳನ್ನು ಚಳಿಗಾಲದಲ್ಲಿಯೂ ಧರಿಸಬಹುದು!

ತುಂಡುಡುಗೆ ಧರಿಸಿದರೂ ಕಾಲು ಬೋಳಾಗಿ ಕಾಣಿಸಬಾರದು ಎಂದು ಬಯಸುವವರಿಗೆ ಉದ್ದದ ಸಾಕ್ಸ್‌ಗಳು ವರದಾನ. ಬೇಸಿಗೆಯಲ್ಲಿ ಬಿಸಿಲಿನ ಝಳದಿಂದ ಕಾಲುಗಳ ಅಂದ ಕೆಡದಂತೆ ಕಾಪಾಡುವಲ್ಲಿಯೂ ಉದ್ದದ ಸಾಕ್ಸ್‌ಗಳು ಮತ್ತು ಸ್ಟಾಕಿಂಗ್‌ಗಳು ಬಳಕೆಯಾಗುತ್ತಿವೆ. ಆದರೆ ಚಳಿಗಾಲದ ಒಣಹವೆಗೆ ಮೈಯನ್ನು ತೆರೆದುಕೊಂಡಷ್ಟೂ ಚರ್ಮದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅಂದ ಕೆಟ್ಟ ಮೇಲೆ ಚರ್ಮದ ನಿರ್ವಹಣೆ ಸವಾಲಾಗಿ ಪರಿಣಮಿಸುತ್ತದೆ. ಅದಕ್ಕಿಂತ ಫ್ಯಾಷನ್‌ ಜಗತ್ತಿನಲ್ಲಿ ಅಪ್‌ಡೇಟ್‌ ಆಗಿದ್ದುಕೊಂಡೇ ಟ್ರೆಂಡಿ ಉಡುಪುಗಳನ್ನು ಧರಿಸುವುದು ಒಳ್ಳೆಯದೇ ಅಲ್ಲವೇ?

ADVERTISEMENT

ಚಳಿಗಾಲದಲ್ಲಿ ಶುದ್ಧ ಹತ್ತಿ, ರೇಷ್ಮೆ, ಉಣ್ಣೆ ಮತ್ತು ಲಿನನ್ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ. ಮಂಡಿವರೆಗಿನ ಅಥವಾ ತೊಡೆವರೆಗಿನ ಸಾಕ್ಸ್‌ಗಳು ಹತ್ತಿಯವು ಸಿಗುವುದು ವಿರಳ. ಆದರೆ ತೊಡೆವರೆಗೂ ಆವರಿಸಿಕೊಳ್ಳುವ ಸ್ಟಾಕಿಂಗ್‌ಗಳು ಹತ್ತಿಯವು ಮಾರುಕಟ್ಟೆಯಲ್ಲಿ ಲಭ್ಯ. ಆನ್‌ಲೈನ್‌ ತಾಣಗಳಲ್ಲಿ ಥೈ ಹೈ ಸಾಕ್ಸ್‌, ಮಂಡಿವರೆಗಿನ ಲಾಂಗ್‌ ಸಾಕ್ಸ್‌ ಮತ್ತು ಸ್ಟಾಕಿಂಗ್‌ಗಳು ಅತಿ ಹೆಚ್ಚು ಬಿಕರಿಯಾಗುತ್ತವೆ. ಮಕ್ಕಳು ಮತ್ತು ದೊಡ್ಡವರ ಅಳತೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಲಾಂಗ್‌ ಸಾಕ್ಸ್‌ಗಳು ಮತ್ತು ಸ್ಟಾಕಿಂಗ್‌ಗಳ ಆರಂಭಿಕ ಬೆಲೆ 900ಕ್ಕೂ ಹೆಚ್ಚು ಇರುತ್ತದೆ.

ಸಾಮಾನ್ಯವಾಗಿ ಯುವತಿಯರ ಸ್ಟಾಕಿಂಗ್‌ಗಳು ಕಪ್ಪು, ಬಿಳಿ, ಕೆನೆ ಬಣ್ಣ, ಮರೂನ್‌, ಕೆಂಪು, ಕಾಫಿ ಬಣ್ಣ ಮತ್ತು ಚರ್ಮದ ಬಣ್ಣಗಳಲ್ಲಿ ಹೆಚ್ಚಾಗಿ ಸಿಗುತ್ತವೆ. ಹೆಚ್ಚು ಬೇಡಿಕೆ ಇರುವುದೂ ಈ ಬಣ್ಣಗಳಿಗೇ. ಮೋಜಿನ ಕೂಟಗಳಿಗೆ ಹೋಗುವ ಮಹಿಳೆಯರು ಚರ್ಮದ ಬಣ್ಣ ಇಲ್ಲವೇ ಕಪ್ಪು ಬಣ್ಣದ ಲಾಂಗ್‌ ಸಾಕ್ಸ್‌, ಸ್ಟಾಕಿಂಗ್‌ ಆರಿಸುತ್ತಾರೆ. ಆದರೆ ಮಕ್ಕಳು ಮತ್ತು ಹುಡುಗಿಯರಿಗೆ ಉಡುಪಿಗೆ ಹೊಂದುವ ಅಥವಾ ವಿರುದ್ಧ ಬಣ್ಣದ, ಕಣ್ಸೆಳೆಯುವ ವಿನ್ಯಾಸದವುಗಳನ್ನು ಆರಿಸಿದರೆ ಮುದ್ದಾಗಿ ಕಾಣುತ್ತಾರೆ. ಅವರಿಗೂ ಬೇಸಿಗೆ ಮತ್ತು ಮಳೆಗಾಲದಲ್ಲಿ ಬಳಸಿದ ಪಾರದರ್ಶಕ ಅಥವಾ ನೆಟ್ಟೆಡ್‌ ಸಾಕ್ಸ್‌ಗಳು, ಸ್ಟಾಕಿಂಗ್‌ಗಳು ಚಳಿಗಾಲಕ್ಕೆ ಬಿಲ್‌ಕುಲ್‌ ಬೇಡ. ಅವರಿಗೆ ಉಲ್ಲನ್‌ ಅಥವಾ ಶುದ್ಧ ಹತ್ತಿಯವುಗಳನ್ನೇ ಆರಿಸುವುದು ಜಾಣತನ.

ಆನ್‌ಲೈನ್‌ ಮಾರಾಟ ತಾಣಗಳಲ್ಲಿ ‘ಲಾಂಗ್‌ ಸಾಕ್ಸ್‌’, ‘ಥೈ ಹೈ ಸಾಕ್ಸ್‌’ ಹಾಗೂ ‘ಸ್ಟಾಕಿಂಗ್‌ ಫಾರ್‌ ವಿಂಟರ್‌’ ಎಂದು ನಮೂದಿಸಿದರೆ ನೂರಾರು ಬಗೆಯವು ಸಿಗುತ್ತವೆ. ಆದರೆ ಇವು ಅತಿ ಬಿಗಿಯಾಗಿರದಂತೆ ಎಚ್ಚರ ವಹಿಸಬೇಕು. ವಿಶೇಷವಾಗಿ ಪುಟ್ಟ ಮಕ್ಕಳಿಗೆ ಮತ್ತು ಹುಡುಗಿಯರಿಗೆ ಆಯ್ಕೆ ಮಾಡುವಾಗಲೇ ಸರಿಯಾದ ಅಳತೆಯ ಸಾಕ್ಸ್‌/ಸ್ಟಾಕಿಂಗ್‌ಗಳನ್ನು ವಯಸ್ಸಿನ ಮಾನದಂಡದಲ್ಲಿ ಆರಿಸುವುದು ಸೂಕ್ತ. ಅತಿ ಬಿಗಿಯಾಗಿದ್ದರೆ ಮಂಡಿ ಮತ್ತು ತೊಡೆಯ ಮಾಂಸಖಂಡಗಳು ಹಾಗೂ ನರಗಳಿಗೆ ಹಾನಿಯಾಗುವ ಅಪಾಯವಿದೆ.

**

ನಾನು ಆನ್‌ಲೈನ್‌ನಲ್ಲಿಯೇ ಸ್ಟಾಕಿಂಗ್‌ ಮತ್ತು ಉದ್ದನೆಯ ಸಾಕ್ಸ್‌ ಖರೀದಿಸುತ್ತೇನೆ.ಅಲ್ಲಿ ಗುಣಮಟ್ಟ ಚೆನ್ನಾಗಿರುತ್ತದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಲಾಂಗ್‌ ಸಾಕ್ಸ್‌ಗಳ ಬೆಲೆ ₹200ರಿಂದ ಆರಂಭವಾಗುತ್ತದೆ. ಸ್ಟಾಕಿಂಗ್‌ ಮತ್ತು ಲಾಂಗ್‌ ಸಾಕ್ಸ್‌ಗೆ ಚಪ್ಪಟೆ ಶೂ ಅಥವಾ ಎತ್ತರ ಹಿಮ್ಮಡಿಯ ಶೂ, ಬೂಟುಗಳು ಚೆನ್ನಾಗಿ ಹೊಂದುತ್ತವೆ.

–ಪ್ರಿಯಾಂಕಾ ಪಾಂಡೆ, ಬೆಂಗಳೂರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.