ADVERTISEMENT

ಚಳಿಗೆ ಫ್ಯಾಷನ್ ಹೊದಿಕೆ...

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 19:30 IST
Last Updated 27 ಡಿಸೆಂಬರ್ 2017, 19:30 IST
ಟ್ಯೂಬ್ ಸಾಕ್ಸ್
ಟ್ಯೂಬ್ ಸಾಕ್ಸ್   

ಮೈ ನಡುಗಿಸುವ ಚಳಿಗಾಲ ಅಡಿಯಿಟ್ಟಿದೆ. ಈಗ ಬದಲಾಗುವುದು ಹವಾಮಾನ ಮಾತ್ರವಲ್ಲ, ಫ್ಯಾಷನ್‌ ಕೂಡ. ಫ್ಯಾಷನ್ ಕ್ಷೇತ್ರದಲ್ಲಿ ಚಳಿಗಾಲ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಸಮಯವೂ ಹೌದು.

ಅಂಥ ಒಂದು ಪ್ರಯೋಗವನ್ನು ಇತ್ತೀಚೆಗೆ ಮಾಡಿದ್ದರು ಬಲ್ಗೇರಿಯಾದ ವಿನ್ಯಾಸಕಿ ಡುಕ್ಯಾನಾ. ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿಚಿತ್ರ ವಿನ್ಯಾಸದಿಂದಲೇ ಭಾರೀ ಸುದ್ದಿ ಮಾಡುತ್ತಿರುವುದೂ ಹೌದು. ನೋಡಲು ವಿಚಿತ್ರ ಎನ್ನಿಸಿದರೂ ಈ ಟ್ರೆಂಡ್‌ಗೆ ಯುವತಿಯರು ಮನಸೋಲುತ್ತಿದ್ದಾರಂತೆ.

ಥಂಡಿ ಗಾಳಿಯಲ್ಲಿ ಬೆಚ್ಚಗೆ ಕೂತು ಕಾಫಿ ಹೀರುವಾಗ, ಬೆಳ್ಳಂಬೆಳಿಗ್ಗೆ ಸಣ್ಣ ವಾಕ್ ಮಾಡಲು ಹೋದಾಗ, ರಾತ್ರಿ ಹೊತ್ತು ಟಿ.ವಿ ನೋಡುವಾಗ... ಸಂಜೆ ಹೊರಗೆ ಕೂತು ಸುಮ್ಮನೆ ಹರಟೆ ಹೊಡೆಯುವಾಗ ಚಳಿ ಕಾಡಬಾರದಲ್ಲವೇ?

ADVERTISEMENT

ಅದಕ್ಕೆಂದೇ ಈ ಟ್ಯೂಬ್ ರೂಪಿಸಿದ್ದಾರೆ ಡುಕ್ಯಾನಾ. ಮೈ ತುಂಬ ತುಂಬಿಕೊಳ್ಳುವ ಈ ಉಣ್ಣೆಯ ಬಟ್ಟೆಗೆ ತೋಳಿಲ್ಲ. ಒಮ್ಮೆ ಮೇಲಿಂದ ಇಳಿಬಿಟ್ಟರೆ ಆಯಿತು. ಅಡಿಯಿಂದ ಭುಜದವರೆಗೂ, ಬೇಕೆಂದರೆ ತಲೆ ತುಂಬುವಂತೆಯೂ ಇದನ್ನು ಆವರಿಸಿಕೊಳ್ಳಬಹುದು.

ಈ ನಿರಾಕಾರಿ ಸ್ವೆಟರ್‌ನಂಥ ಬಟ್ಟೆಯನ್ನು ಕೈಯಿಂದಲೇ ಹೆಣೆಯಲಾಗುತ್ತದೆ. ಆದ್ದರಿಂದ ಎಂಥ ಚಳಿಯಲ್ಲೂ ದೇಹವನ್ನು ಬೆಚ್ಚಗೆ ಇಡಬಲ್ಲ ಶಕ್ತಿ ಇದಕ್ಕಿದೆಯಂತೆ. ಹಲವು ಬಣ್ಣಗಳಲ್ಲಿ ಲಭ್ಯವಿರುವ ಈ ಟ್ಯೂಬ್ ಸ್ಕಾರ್ಫ್‌ ಅಲ್ಲಿ ದಿನ ದಿನಕ್ಕೆ ಭಾರೀ ಬೇಡಿಕೆಯನ್ನಂತೂ ಗಿಟ್ಟಿಸಿಕೊಳ್ಳುತ್ತಿದೆ.

ದೊಡ್ಡ ಸಾಕ್ಸ್‌ಗೆ ಮೈ ತೂರಿಸಿದಂತೆ ಕಾಣುವ ಈ ಟ್ಯೂಬ್ ಈ ಚಳಿಗಾಲದ ಟ್ರೆಂಡಿ ಉಡುಪು ಎಂದೇ ಕರೆಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.