ADVERTISEMENT

ತಲೆ ಬೆಸೆದುಕೊಂಡವರು!

ಅಚ್ಚರಿ

ಸುಭಾಸ ಯಾದವಾಡ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ತಲೆ ಬೆಸೆದುಕೊಂಡವರು!
ತಲೆ ಬೆಸೆದುಕೊಂಡವರು!   
ಅವರ ಹೆಸರು ವೀಣಾ ಮತ್ತು ವಾಣಿ. ಇಬ್ಬರೂ ಅವಳಿಜವಳಿ ಮಕ್ಕಳು. ಹುಟ್ಟಿದಮೇಲೂ ಬೇರ್ಪಡದವರು. ಜನಿಸಿದಾಗಿಲಿಂದಲೂ ಅವರ ತಲೆಗಳು ಬೆಸೆದುಕೊಂಡೇ ಇವೆ. ಇತ್ತೀಚೆಗೆ ಅವರು14ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. 
 
ವೀಣಾ ಮತ್ತು ವಾಣಿ ಅವರು ತಮ್ಮ ಈ ಪರಿಸ್ಥಿತಿಯಿಂದಾಗಿ ಅವರ ಪೋಷಕರು ಅವರನ್ನು ದೂರ ಮಾಡಿದ್ದಾರೆ. ‘ಅವರನ್ನು ಈ ಸ್ಥಿತಿಯಲ್ಲಿ ನೋಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ’ ಎಂದು ಆ ಅವಳಿ ಮಕ್ಕಳ ತಂದೆ ಮುರಳಿ ಹೇಳುತ್ತಾರೆ.  
 
‘ಇಬ್ಬರ ತಲೆ ಬೇರ್ಪಟ್ಟರೆ ನಾವು ನಮ್ಮ ಮಕ್ಕಳನ್ನು ಸಾಕುತ್ತೇವೆ. ಅವರ ವೈದ್ಯಕೀಯ ವೆಚ್ಚವನ್ನು ಭರಿಸಲು ನಮ್ಮಿಂದ ಸಾಧ್ಯವಿಲ್ಲ. ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು. ನಾವು ಆ ದಿನಕ್ಕಾಗಿ ಕಾತರರಾಗಿದ್ದೇವೆ’ ಎನ್ನುತ್ತಾರೆ ಮುರಳಿ. 2014ರಂದು ಅವರು ಹೈದರಾಬಾದ್‌ನ ಒಂದು ಆಸ್ಪತ್ರೆಗೆ ದಾಖಲಾದರು. 
 
ಆ ಆಸ್ಪತ್ರೆಯ ಸಿಬ್ಬಂದಿಯೇ ಅವರನ್ನು ನೋಡಿಕೊಳ್ಳುತ್ತಿದ್ದಾರೆ.  ಅಂದಿನಿಂದ ಇಂದಿನವರೆಗೆ ಅವರು ಒಂದೇ ಕೋಣೆಯಲ್ಲಿದ್ದಾರೆ. ಅದಕ್ಕಿರುವ ಒಂದು ಕಿಟಕಿ ಮಾತ್ರ ಅವರಿಗೆ ಹೊರ ಜಗತ್ತನ್ನು ತೋರಿಸುತ್ತಿದೆ. ಇಷ್ಟರಲ್ಲಿಯೇ ಅವರು ಬೇರೊಂದು ವಿಶೇಷ ಕೊಣೆಗೆ ಸ್ಥಳಾಂತರಗೊಳ್ಳಲಿದ್ದಾರೆ. ‘ಅವರ ಮಾನಸಿಕ ಬೆಳವಣಿಗೆಗೆ ಸ್ಥಳಾಂತರ ಅತ್ಯವಶ್ಯಕ’ ಎನ್ನುತ್ತಾರೆ ವೈದ್ಯರು.
 
ಮಕ್ಕಳನ್ನು ನೋಡಿಕೊಳ್ಳುತ್ತಿರುವ  ಡಾ.ನರೇಂದ್ರಕುಮಾರ, ಅವರ ತಲೆಗಳನ್ನು ಬೇರ್ಪಡಿಸುವ ಶಸ್ತ್ರಕ್ರಿಯೆ ಬಗ್ಗೆ ಹೀಗೆ ವಿವರಿಸುತ್ತಾರೆ: ‘ನಾವು ನರರೋಗ ತಜ್ಞರ ಸೇವೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ವೀಣಾ ಮತ್ತು ವಾಣಿಯ ಮೆದುಳುಗಳು ಬೇರೆಬೇರೆಯಾಗಿವೆ.  ಇದು ಶಸ್ತ್ರಕ್ರಿಯೆಗೆ ತುಂಬ ಅನುಕೂಲಕರವಾಗುವ ಭರವಸೆಯಿದೆ’ ಎನ್ನುತ್ತಾರೆ. 
 
‘ಶಸ್ತ್ರಚಿಕಿತ್ಸೆ ನಂತರ ಅವರು ಬದುಕುಳಿಯುವ ಸಾಧ್ಯತೆ ಶೇ 80ರಷ್ಟು ಇದೆ  ಎಂದು ಲಂಡನ್‌ನಲ್ಲಿರುವ ಇಬ್ಬರು ಹೆಸರಾಂತ ವೈದ್ಯರು ಹೇಳಿದ್ದಾರೆ.  ಶಸ್ತ್ರಕ್ರಿಯೆ 5 ಹಂತಗಳಲ್ಲಿ ನಡೆಯುತ್ತದೆ. ಎಲ್ಲ ಹಂತಗಳನ್ನು ಪೂರೈಸಬೇಕಾದರೆ ಒಂದು ವರ್ಷ ಬೇಕಾಗುತ್ತದೆ. ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆಗೆ ಬೇಕಾಗುವ ಎಲ್ಲ ಸೌಕರ್ಯಗಳೂ ಇವೆ.  ಒಂದು ಸಣ್ಣ ರಿಸ್ಕ್‌ ತೆಗೆದುಕೊಂಡು ಮುಂದುರಿಯಬೇಕು’ ಎನ್ನುತ್ತಾರೆ ವೈದ್ಯರು.         
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.