ADVERTISEMENT

ದಿಲೀಪ್‌ ಕುಮಾರ್‌ ಉಪ್ಪಿನಕಾಯಿ ಸುರೈಯ್ಯಾ ಸೋಪು!

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ದಿಲೀಪ್‌ ಕುಮಾರ್‌ ಉಪ್ಪಿನಕಾಯಿ ಸುರೈಯ್ಯಾ ಸೋಪು!
ದಿಲೀಪ್‌ ಕುಮಾರ್‌ ಉಪ್ಪಿನಕಾಯಿ ಸುರೈಯ್ಯಾ ಸೋಪು!   

ಅದೊಂದು ಕಾಲವಿತ್ತು. ಮದುವೆ ಮನೆಯಲ್ಲಿ ಮಹಿಳೆಯರು ಹಚ್ಚಿದ ಕ್ರೀಂ ಮತ್ತು ಪೌಡರ್‌ಗಳೂ ಪ್ರತಿಷ್ಠೆಯ ಸಂಗತಿಗಳಾಗಿ ಪರಿಗಣಿತವಾಗುತ್ತಿದ್ದವು. ಅಂಥವರು, ‘ನಾನು ಫಾರಿನ್‌ ಸ್ನೋ ಮಾತ್ರ ಹಾಕೋದು’ ಎಂದು ಇನ್ನಷ್ಟು ಬೀಗುತ್ತಿದ್ದ ಬಗ್ಗೆ ಅಮ್ಮಂದಿರು, ಅಜ್ಜಿಯಂದಿರು ಹೇಳುತ್ತಿದ್ದುದು ನೆನಪಾಗಿರಬೇಕಲ್ಲ?

‌ಅದು ‘ಆಫ್ಘನ್‌ ಸ್ನೋ’. ಏಷ್ಯಾದಲ್ಲೇ ನಂಬರ್‌ ಒನ್‌ ಸ್ಥಾನದಲ್ಲಿರುವ ಮುಖಕ್ಕೆ ಬಳಸುವ ಕ್ರೀಂ ಎಂಬ ಟ್ಯಾಗ್‌ಲೈನ್‌ನೊಂದಿಗೆ ಅದು ಸೌಂದರ್ಯಪ್ರಿಯರ ಮನಗೆದ್ದಿತ್ತು. ಮುಂಬೈಯ ಪಠಾಣ್‌ವಾಲಾ ಲಿಮಿಟೆಡ್‌ ಎಂಬ ಸಂಸ್ಥೆ ಭಾರತಕ್ಕೆ ಏಕೈಕ ವಿತರಕ ಸಂಸ್ಥೆಯಾಗಿತ್ತು.

ಅಡುಗೆ ಮನೆಯಲ್ಲಿ ಹೊಗೆ ತಿನ್ನುತ್ತಾ ಹೈರಾಣಾಗುತ್ತಿದ್ದ ಮಹಿಳೆಯರಿಗೆ ವರದಾನದಂತೆ ಬಂದಿತ್ತು ‘ಪ್ರೆಸ್ಟೀಜ್‌’ ಪ್ರೆಷರ್‌ ಕುಕ್ಕರ್‌. ಇಬ್ಬರು ಮಹಿಳೆಯರ ಚಿತ್ರ, ಒಬ್ಬಾಕೆ ಸುಡುವ ಒಲೆಯ ಮುಂದೆ ಸೌದೆ ನೂಕುತ್ತಾ ತಲೆ ಮೇಲೆ ಕೈಹೊತ್ತವಳು, ಇನ್ನೊಬ್ಬಳು ಕುಕ್ಕರ್‌ ಮಹಿಳೆ. ನೀಟಾಗಿ ಬಾಚಿದ ತಲೆಕೂದಲಾಗಲಿ, ಹಚ್ಚಿದ ಪೌಡರ್‌ ಆಗಲಿ ಸ್ವಲ್ಪವೂ ಮಾಸದ ತಾಜಾತನದೊಂದಿಗೆ ನಗುತ್ತಿರುವಾಕೆ. ದೂರದರ್ಶನದಲ್ಲಿ ಆ ಜಾಹೀರಾತು ಬಂದರೆ, ಕುಕ್ಕರ್‌ ಇರುವ ಮನೆಯ ಹೆಣ್ಣುಮಕ್ಕಳು ಜಾಹೀರಾತಿನ ಕುಕ್ಕರ್‌ ಮಹಿಳೆ ತಾವೇ ಆಗುತ್ತಿದ್ದರು.

ADVERTISEMENT

ಕೋಲ್ಕತ್ತದ ಹಿಂದೂಸ್ತಾನ್‌ ಮೋಟಾರ್ಸ್‌ ನೀಡುತ್ತಿದ್ದ ‘ಅಂಬಾಸಿಡರ್‌ ಮಾರ್ಕ್ 2’ ಕಾರಿನ ಜಾಹೀರಾತು, ‘ಕುಟುಂಬಕ್ಕೊಂದೇ ಕಾರು’ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತಿತ್ತು. ‘ದಿ ಬಿಗ್‌ ಸೈಜ್‌ ಫ್ಯಾಮಿಲಿ ಕಾರ್‌’ ಎಂಬ ಶೀರ್ಷಿಕೆಯಡಿ ಸುಮಾರು 150 ಪದಗಳ ವಿವರಣೆಯೂ ಇತ್ತು!

‘ನಿಮ್ಮ ನಾಲಿಗೆಯ ರುಚಿ ಈ ಬಾಟಲಿಯಲ್ಲಿ ಅಡಗಿದೆ’ ಎಂದು ದಿಲೀಪ್‌ ಕುಮಾರ್‌ ಮೂಲಕ ಹೇಳಿಸಿತ್ತು ‘ಮದರ್‌ ಇಂಡಿಯಾ ಪ್ರಾಡಕ್ಟ್ಸ್‌’ನ ಚಿಲ್ಲಿ ಪಿಕಲ್‌. ಬಾಲಿವುಡ್‌ನ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿದ್ದ ನಟ ದಿಲೀಪ್‌ ಕುಮಾರ್‌ ಅವರ ಊಟದ ಮೇಜಿನಲ್ಲಿ ಇರುವ ಉಪ್ಪಿನಕಾಯಿ ಎಂಬ ಒಕ್ಕಣೆ ಓದಿ ಸುಮ್ಮನಿರಲಾದೀತೇ? ದಿಲೀಪ್‌ ಕುಮಾರ್‌ ಬ್ರ್ಯಾಂಡ್ ಎಂದುಕೊಂಡೇ ಜನ ಅದನ್ನು ಖರೀದಿಸುತ್ತಿದ್ದರು.

‘ಲಕ್ಸ್‌’ ಸಾಬೂನು ಆಗಷ್ಟೇ ಶ್ರೀಮಂತರ ಮನೆಗಳ ಶೌಚಗೃಹಗಳಲ್ಲಿ ಸುವಾಸನೆ ಬೀರತೊಡಗಿತ್ತು. ಆಗ ಅದಿನ್ನೂ ‘ಲಕ್ಸ್‌ ಟಾಯ್ಲೆಟ್‌ ಸೋಪ್‌’ ಆಗಿತ್ತು. ‘ಪ್ಯೂರ್‌ ಅಂಡ್‌ ವೈಟ್‌’ ಎಂಬ ಒಕ್ಕಣೆ ಬೇರೆ. ಅದಕ್ಕಿಂತಲೂ ಹೆಚ್ಚಾಗಿ ‘ಲಕ್ಸ್‌’ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದುದು ಬಾಲಿವುಡ್‌ನ ಮಾದಕ ಸುಂದರಿ ಸುರೈಯ್ಯಾ. ಅವಳ ಮಾದಕತೆಗೆ ಮನಸೋತವರು ಆ ಸಾಬೂನನ್ನು ‘ಸುರೈಯ್ಯಾ ಸೋಪು’ ಅಂತಲೇ ಕರೆಯುತ್ತಿದ್ದರು.

ಮದುವೆ ವಯಸ್ಸಿಗೆ ಬಂದ ಮಗಳಿಗೆ ಹೊಲಿಗೆ ಯಂತ್ರದಲ್ಲಿ ಹೊಲಿಯುವ ಬಗೆಯನ್ನು ಹೇಳಿಕೊಡುವ ಅಮ್ಮ ‘ಉಷಾ’ ಹೊಲಿಗೆ ಯಂತ್ರದ ಜಾಹೀರಾತಿನಲ್ಲಿ ಮನೆ ಮಂದಿಯನ್ನೆಲ್ಲಾ ಕನಸಿನ ಲೋಕಕ್ಕೆ ಕೊಂಡೊಯ್ಯುತ್ತಿದ್ದಳು. ‘ನೀವಷ್ಟೇ ಅವಳನ್ನು ಒಬ್ಬ ಸಮರ್ಥ ಗೃಹಿಣಿಯನ್ನಾಗಿ ರೂಪಿಸಬಲ್ಲಿರಿ’ ಎಂಬ ಒಕ್ಕಣೆ, ಎಲ್ಲಾ ತಂದೆ ತಾಯಿಗೂ ‘ಹೌದಲ್ಲ’ ಎಂಬ ಭಾವ ಮೂಡಿಸುತ್ತಿತ್ತು. ಮತ್ತೊಂದು ಅಡಿಟಿಪ್ಪಣಿ ಹೀಗಿತ್ತು– ಉಷಾ ಖರೀದಿಸಿ ಇದಕ್ಕೆ ಉತ್ತಮವಾದುದನ್ನು ಬೇರೇನೂ ಖರೀದಿಸಲಾರಿರಿ’.

ಹೀಗೆ, ಹಳೆಯ ಕಾಲದ ಜಾಹೀರಾತುಗಳು ಜನಮಾನಸದಲ್ಲಿ ನೆಲೆನಿಲ್ಲುತ್ತಿದ್ದ, ಸಮ್ಮೋಹಿನಿಯಂತೆ ಸೆಳೆಯುತ್ತಿದ್ದ ಬಗೆಯೇ ವಿಚಿತ್ರ. ಆಧುನಿಕ ಸವಲತ್ತುಗಳನ್ನು ತಮ್ಮ ಮನೆಗೆ, ತಮ್ಮ ಜೀವನಶೈಲಿಗೆ ಬರಮಾಡಿಕೊಳ್ಳಬೇಕು ಎಂಬ ದೃಢನಿರ್ಧಾರವನ್ನು ಮಾಡುವಂತಹ ಪರಿಣಾಮಕಾರಿ ಮಾಧ್ಯಮವಾಗಿದ್ದವು ಜಾಹೀರಾತುಗಳು. ಅಂತಲೇ ಅವು ಈಗಲೂ ನೆನಪಾಗುತ್ತವೆ. ನೆನಪಾಗುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.