ADVERTISEMENT

ದೇಹಕ್ಕಷ್ಟೇ ಅಲ್ಲ ವ್ಯಾಯಾಮ...

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 19:30 IST
Last Updated 12 ನವೆಂಬರ್ 2017, 19:30 IST
ಚಿತ್ರ: ಡಿ.ಸಿ. ನಾಗೇಶ್‌
ಚಿತ್ರ: ಡಿ.ಸಿ. ನಾಗೇಶ್‌   

ನನ್ನ ದಿನದ ಆರಂಭ ಧ್ಯಾನದ ಮೂಲಕ ಆಗುತ್ತದೆ. ನಂತರ ಹದಿನೈದು ನಿಮಿಷ ಯೋಗ ಮಾಡುತ್ತೇನೆ. ಆಮೇಲೆ ಜಿಮ್‌, ಡಾನ್ಸ್, ಕ್ರೀಡೆ... ಹೀಗೆ ವ್ಯಾಯಾಮದ ಹಲವು ಬಗೆಗಳನ್ನು ರೂಢಿಸಿಕೊಂಡಿದ್ದೇನೆ. ಫಿಟ್‌ನೆಸ್‌ ಬಗ್ಗೆ ಗಂಭೀರ ಕಾಳಜಿ ತೆಗೆದುಕೊಂಡಿದ್ದೇನೆ. ಹಾಗಂತ ಕಸರತ್ತು ಮಾಡಿಯೇ ದೇಹವನ್ನು ಕರಗಿಸಿಕೊಳ್ಳಬೇಕು ಎನ್ನುವ ಅನಿವಾರ್ಯತೆ ನನಗೆ ಇಲ್ಲ. ಹೀಗೆಲ್ಲಾ ಮಾಡುವುದರಿಂದ ಆರೋಗ್ಯವಾಗಿರಬಹುದು ಎಂಬುದು ನನ್ನ ಅನಿಸಿಕೆ.

ಡಾನ್ಸ್ ಮಾಡುವುದು ನನಗೆ ತುಂಬಾ ಇಷ್ಟ. ಸಮಯ ಸಿಕ್ಕಾಗಲೆಲ್ಲ ಡಾನ್ಸ್ ಮೊರೆ ಹೋಗುತ್ತೇನೆ. ಇದು ಕೊಬ್ಬು ಕರಗಿಸಲು ಸಹಾಯ ಮಾಡುವುದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನೆಯಲ್ಲಿಯೇ ಮ್ಯೂಸಿಕ್‌ ಹಾಕಿಕೊಂಡು ನೃತ್ಯ ಮಾಡುವುದರಿಂದ ದೇಹ ಹಗುರಾಗುತ್ತದೆ. ಪ್ರತಿದಿನ ಒಂದು ಗಂಟೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತೇನೆ. ಜಿಮ್‌ಗೆ ಹೋಗುವುದಕ್ಕಿಂತ ಆಟವಾಡುವುದು ನನಗೆ ಇಷ್ಟ. ಜಿಮ್‌ಗೆ ಹೋಗಲು ಆಗದಿದ್ದಾಗ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಎಷ್ಟೇ ಕೆಲಸವಿದ್ದರೂ, ವ್ಯಾಯಾಮ ಮಾಡುವುದನ್ನು ತಪ್ಪಿಸುವುದಿಲ್ಲ.

ನಾನು ಎಷ್ಟೇ ತಿಂದರೂ ತುಂಬಾ ದಪ್ಪ ಆಗುವುದಿಲ್ಲ. ಹಾಗಾಗಿ ತಿನ್ನುವ ವಿಷಯದಲ್ಲಿ ರಾಜಿ ಮಾಡಿಕೊಂಡಿಲ್ಲ. ಸಮಯಕ್ಕೆ ಸರಿಯಾಗಿ ಇಷ್ಟವಾಗಿದ್ದನ್ನು ತಿನ್ನುತ್ತೇನೆ. ಪ್ರತಿದಿನ ವರ್ಕೌಟ್ ಮಾಡುತ್ತೇನೆ. ಹೀಗಾಗಿ ಹೊಟ್ಟೆ ತುಂಬಾ ತಿಂದರೂ ಸಮಸ್ಯೆಯಿಲ್ಲ. ಚಾಟ್ಸ್‌ ಎಂದರೆ ನನಗೆ ತುಂಬಾ ಇಷ್ಟ. ಮೊದಲು ಸಿಕ್ಕಾಪಟ್ಟೆ ಕೂಲ್ ಡ್ರಿಂಕ್ಸ್‌ ಕುಡಿಯುತ್ತಿದ್ದೆ. ಆದರೆ ಅದು ದೇಹಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಮೂರು ವರ್ಷಗಳ ಹಿಂದೆ ಬಿಟ್ಟೆ.

ADVERTISEMENT

ನಾನು ಇಷ್ಟೆಲ್ಲಾ ಕಸರತ್ತು ಮಾಡುವುದು ಸಪೂರವಾಗಬೇಕು ಎಂದಲ್ಲ, ಬದಲಾಗಿ ಆರೋಗ್ಯವಾಗಿರಬೇಕು ಎಂದು. ಹೀಗೆ ದೇಹವನ್ನು ದಂಡಿಸುವುದರಿಂದ ದಿನಪೂರ್ತಿ ಉತ್ಸಾಹದಿಂದಿರುತ್ತೇನೆ. ಇದು ನನ್ನೊಳಗೆ ಸಕಾರಾತ್ಮಕ ಆಲೋಚನೆಗಳು ಮೂಡಲು ನೆರವಾಗುತ್ತದೆ. ಶಿಸ್ತಿನ ಆಹಾರ ಮತ್ತು ಚಟುವಟಿಕೆಯಿಂದ ಕೂಡಿದ ಜೀವನ ಬದುಕಿನ ಪ್ರೀತಿ ಹೆಚ್ಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.