ADVERTISEMENT

ನಾನು ಹುಡುಗನ ರೂಪದಲ್ಲಿದ್ದ ಹುಡುಗಿ...

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ನಾನು ಹುಡುಗನ ರೂಪದಲ್ಲಿದ್ದ ಹುಡುಗಿ...
ನಾನು ಹುಡುಗನ ರೂಪದಲ್ಲಿದ್ದ ಹುಡುಗಿ...   

ಭಾರತದಲ್ಲಿ ಇದೇ ಮೊದಲನೇ ಬಾರಿಗೆ ನಡೆದ ಮಿಸ್‌ ಟ್ರಾನ್ಸ್‌ ಕ್ವೀನ್‌ ಸ್ಪರ್ಧೆ ಗೆದ್ದವರು ನಿತಾಶಾ ಬಿಸ್ವಾಸ್‌. ಕೋಲ್ಕತ್ತ ಮೂಲದವರಾದ ಇವರು ಸದ್ಯ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ಅಭ್ಯಾಸ ಮಾಡುತ್ತಿದ್ದಾರೆ. ಸ್ಪರ್ಧೆ ಗೆದ್ದ ನಂತರ ಲಿಂಗ ಪರಿವರ್ತನೆಗೂ ಮುಂಚಿನ ಅವರ ಬದುಕಿನ ಕ್ಷಣಗಳನ್ನು ಹಂಚಿಕೊಂಡ ಬಗೆ ಇದು...

‘ಚಿಕ್ಕಂದಿನಿಂದಲೂ, ನನಗೆ ಹುಡುಗನ ರೂಪದಲ್ಲಿರುವ ನಾನು ಹುಡುಗಿ ಎಂದೆನಿಸುತ್ತಿತ್ತು. ನನ್ನ ಸ್ನೇಹಿತರೆಲ್ಲರೂ ಫುಟ್‌ಬಾಲ್‌ ಆಡಲು ಹೋದರೆ ನಾನು ಮನೆಯೊಳಗೇ ಕುಳಿತು ಟೀವಿ ನೋಡುತ್ತಿದ್ದೆ. ಬ್ಯಾಡ್ಮಿಂಟನ್‌ ಹೆಚ್ಚು ಆಡುತ್ತಿದ್ದೆ. ಚಿಕ್ಕಂದಿನಲ್ಲೇ ಅಮ್ಮ ತೀರಿಕೊಂಡಿದ್ದರಿಂದ ಅಪ್ಪನ ಆರೈಕೆಯಲ್ಲಿ ಬೆಳೆದೆ. ನನ್ನ ಅಣ್ಣ ನನ್ನ ಭಾವನೆಗಳಿಗೆ ಸ್ಪಂದಿಸಿ ನನ್ನೊಳಗಿನ ಮಾನಸಿಕ ತೊಳಲಾಟಕ್ಕೆ ಆಗಾಗ ಸಮಾಧಾನ ಹೇಳುತ್ತಿದ್ದ. ಆದರೆ ಅದೆಷ್ಟೋ ಸ್ನೇಹಿತರು ನನ್ನಿಂದ ದೂರವಾದರು. ಹೀಗಿದ್ದೂ ನನ್ನೊಳಗಿನ ಮನಸ್ಸು ನಾನು ಹೆಣ್ಣು ಎನ್ನುವುದನ್ನೇ ಒತ್ತಿ ಹೇಳುತ್ತಿತ್ತು.

'ಹೀಗೆ ದಿನ ದೂಡುತ್ತಾ ಪದವಿ ಮುಗಿಸಿದೆ. ಒಂದು ದಿನ ದೆಹಲಿಗೆ ಹೊರಟು ನಿಂತ ನಾನು ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ನನ್ನ ನಿರ್ಧಾರವನ್ನು ಗಟ್ಟಿಗೊಳಿಸಿಕೊಂಡಿದ್ದೆ. ಈ ವಿಷಯ ತಿಳಿದು ಅಪ್ಪ ಅದೆಷ್ಟೋ ಬಾರಿ ನನ್ನ ನಿರ್ಧಾರದಿಂದ ಹೊರಬರಲು ಒತ್ತಾಯಿಸುತ್ತಿದ್ದರು. ಚೆಂದದ ಬಂಗಾಳಿ ಹುಡುಗಿಯೊಂದಿಗೆ ಮದುವೆ ಮಾಡಿಸುತ್ತೇನೆ. ಎಲ್ಲ ಸರಿ ಹೋಗುತ್ತದೆ ಎನ್ನುತ್ತಿದ್ದರು. ಆದರೆ ನನಗೆ ಬೇಕಿದ್ದುದು ಬಂಗಾಳಿ ಹುಡುಗಿಯಲ್ಲ, ಹುಡುಗ. ಕೊನೆಗೂ ನಾಲ್ಕು ವರ್ಷದ ಚಿಕಿತ್ಸೆಯಿಂದಾಗಿ ಹೆಣ್ಣಾಗಿ ಪರಿವರ್ತನೆಗೊಂಡೆ.

ADVERTISEMENT

'ಮಾನಸಿಕ ತೊಳಲಾಟದಲ್ಲಿ ಬೀಳುವ ಅದೆಷ್ಟೋ ಜನರಿಗೆ ಮನೆಯಿಂದಾಗಲಿ, ಸಮಾಜದಿಂದಾಗಲಿ ಬೆಂಬಲ ಸಿಗುವುದೇ ಇಲ್ಲ. ಅಲ್ಲದೆ ಲಿಂಗ ಪರಿವರ್ತನೆ ಮಾಡಿಕೊಂಡು ಹೆಣ್ಣಾದವರನ್ನೂ ಸಮಾಜ ನೋಡುವ ದೃಷ್ಟಿ ತೀರಾ ಕೆಟ್ಟದಾಗಿದೆ. ಅನೇಕರು ನಿರಂತರ ಅತ್ಯಾಚಾರಕ್ಕೊಳಗಾದರೆ ಇನ್ನೂ ಅನೇಕರಿಗೆ ನೆಲೆಯೇ ಇಲ್ಲದಂತಾಗುತ್ತದೆ. ಜನರ ಮಧ್ಯೆ ನಾವು ಬಂದರೆ ನಮ್ಮನ್ನು ನೋಡುವ ರೀತಿಯೂ ಬೇರೆ. ಹೀಗಾಗಿ ಶೇ 70ರಷ್ಟು ಲಿಂಗ ಪರಿವರ್ತಿತರು ಒತ್ತಡಕ್ಕೊಳಗಾಗುತ್ತಾರೆ. ಅವರಿಗೆ ಕೆಲಸ ಸಿಗುವುದೂ ಕಡಿಮೆ.

'ಬೇರೆ ದೇಶಗಳಲ್ಲಿ ಲಿಂಗ ಪರಿವರ್ತಿತರಿಗೆ ಉದ್ಯೋಗಗಳನ್ನು ನೀಡಿರುವಂತೆ ಭಾರತದಲ್ಲಿಯೂ ಅವಕಾಶ ಸಿಗಬೇಕು. ಅವರ ಶಿಕ್ಷಣಕ್ಕೆ ಸರ್ಕಾರಗಳು ಹಣ ನೀಡಬೇಕು. ಗ್ರಾಮ ಪ್ರದೇಶಗಳಲ್ಲಿಯೂ ಲಿಂಗ ಪರಿವರ್ತಿತರ ಬಗ್ಗೆ ಅರಿವು ಮೂಡಿಸಬೇಕು. ಆಗ ಸ್ವಾಭಿಮಾನದಿಂದ ಬದುಕು ನಡೆಸಲು ಸಾಧ್ಯ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.