ADVERTISEMENT

ನಾರ್ಥ್‌ 24 ಕಥಮ್

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ನಾರ್ಥ್‌ 24 ಕಥಮ್ ಚಿತ್ರದ ದೃಶ್ಯ.
ನಾರ್ಥ್‌ 24 ಕಥಮ್ ಚಿತ್ರದ ದೃಶ್ಯ.   

ಬದುಕಿನ ನಿಜವಾದ ಶ್ರೀಮಂತಿಕೆ ಇರುವುದು ಎಲ್ಲಿ? ಸ್ವರತಿಯಲ್ಲಿಯಾ? ಮನುಷ್ಯ ಸಂಬಂಧಗಳನ್ನು ಅರಿತು ನಡೆಯುವುದರಲ್ಲಿಯಾ? ಪ್ರಕೃತಿಯ ಒಡನಾಟದಲ್ಲಿ ತೆರೆದುಕೊಳ್ಳುವ ಅಚ್ಚರಿಗಳ ಒರತೆಯಲ್ಲಿಯಾ? ಇಂಥ ಹಲವು ಪ್ರಶ್ನೆಗಳನ್ನು ನಮ್ಮಲ್ಲಿ ಎಬ್ಬಿಸುವ ಚಿತ್ರ ‘ನಾರ್ಥ್‌ 24 ಕಥಮ್.’ ಅನಿಲ್‌ ರಾಧಾಕೃಷ್ಣನ್ ಮೆನನ್ ನಿರ್ದೇಶನದ ಈ ಚಿತ್ರ ಬಿಡುಗಡೆಯಾಗಿದ್ದು 2013ರಲ್ಲಿ.

ನಾಯಕ ಹರಿಕೃಷ್ಣನಿಗೆ ಆಬ್ಸೆಸ್ಸಿವ್ ಕಂಪಲ್ಸೀವ್‌ ಪರ್ಸನಾಲಿಟಿ ಡಿಸಾರ್ಡರ್ ಎಂಬ ಕಾಯಿಲೆ. ಅಸಹಜ ಎನಿಸುವಷ್ಟು ಸ್ವಚ್ಛತೆಯ ಕಡೆಗೆ ಗಮನ ಕೊಡುವುದು. ಸಹೋದ್ಯೋಗಿಗಳ ಜತೆಗೆ ಒರಟಾಗಿ ನಡೆದುಕೊಳ್ಳುವುದು. ಹೆಣ್ಣುಮಕ್ಕಳನ್ನು ಕಂಡರೆ ಮಾರು ದೂರ ಸರಿಯುವುದು. ಇವೆಲ್ಲ ಆ ಕಾಯಿಲೆಯ ಲಕ್ಷಣಗಳು. ಪ್ರಯಾಣ ಎಂದರೂ ಅವನಿಗೆ ಅಂಜಿಕೆ. ಅವನ ನಡವಳಿಕೆಗೆ ಸಹೋದ್ಯೋಗಿಗಳೆಲ್ಲ ರೋಸಿ ಹೋಗಿರುತ್ತಾರೆ. ಎಲ್ಲರೂ ಪ್ಲ್ಯಾನ್‌ ಮಾಡಿ ಹರಿಯನ್ನು ತ್ರಿವೇಂದ್ರಂನ ಕಂಪನಿ ಮೀಟಿಂಗ್‌ಗೆ ಕಳಿಸುತ್ತಾರೆ.

ಹರಿ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಅವನ ಪಕ್ಕವೇ ಹಿರಿಯ ರಾಜಕಾರಣಿ ಗೋಪಾಲನ್ ಕೂಡ ಪ್ರಯಾಣಿಸುತ್ತಿರುತ್ತಾರೆ. ಮಧ್ಯರಾತ್ರಿಯಲ್ಲಿ ‘ನಿಮ್ಮ ಪತ್ನಿಗೆ ತೀವ್ರ ಅನಾರೋಗ್ಯ. ತಕ್ಷಣವೇ ತಿರುಗಿ ಊರಿಗೆ ಬನ್ನಿ’ ಎಂದು ದೂರವಾಣಿ ಕರೆ ಬರುತ್ತದೆ. ಶಾಕ್‌ ಆಗಿ ಕುಸಿಯುವ ಅವರನ್ನು ಹಿಡಿಯಲೂ ಹರಿ ಹಿಂಜರಿಯುತ್ತಾನೆ. ಆಗ ಮೇಲಿನ ಸೀಟಿನಲ್ಲಿ ಕೂತಿದ್ದ ಹುಡುಗಿ ಅವರ ಸಹಾಯಕ್ಕೆ ಬರುತ್ತಾಳೆ. ಅವರನ್ನು ಕರೆದುಕೊಂಡು ರೈಲಿನಿಂದ ಇಳಿದು ಹೊರಟುಹೋಗುತ್ತಾಳೆ. ಹಾಗೆ ಹೋಗುವಾಗ ಗೋಪಾಲನ್ ಅವರ ಮೊಬೈಲ್‌ ಅಲ್ಲಿಯೇ ಬಿದ್ದು ಹೋಗುತ್ತದೆ. ಅವರು ಅತ್ತ ಹೋದ ಹಾಗೇ ಮೊಬೈಲ್‌ಗೆ ಕಾಲ್ ಬರುತ್ತದೆ. ಹರಿ ಎತ್ತಿ ಕಿವಿಗಿಡುತ್ತಾನೆ. ಗೋಪಾಲನ್ ಪತ್ನಿ ತೀರಿಕೊಂಡಿರುವ ವಿಷಯ ಗೊತ್ತಾಗುತ್ತದೆ. ಈ ವಿಷಯವನ್ನು ಹೇಗೆ ತಿಳಿಸುವುದು ಎಂದು ತಿಳಿಯದೇ ಹರಿ ಒದ್ದಾಡುತ್ತಾನೆ. ಸುಮ್ಮನೇ ರೈಲು ಇಳಿದು ಆ ಹುಡುಗಿ ಮತ್ತು ಗೋಪಾಲನ್‌ ಅವರನ್ನು ಹಿಂಬಾಲಿಸಿಕೊಂಡು ಹೊರಟು ಬಿಡುತ್ತಾನೆ.

ADVERTISEMENT

ಹೀಗೆ ಆ ರೈಲ್ವೆ ಸ್ಟೇಷನ್‌ನಿಂದ ಗೋಪಾಲನ್ ಅವರ ಮನೆಯವರೆಗಿನ ಪಯಣವೇ ಈ ಚಿತ್ರದ ಕೇಂದ್ರ. ಮನೆಯಲ್ಲಿ, ತಾನು ಅಳವಡಿಸಿಕೊಂಡ ಅತಿಯಾದ ಶಿಸ್ತಿನಲ್ಲಿ, ಕಚೇರಿಯಲ್ಲಿ ಕಾಣದ ಹೊಸ ಜಗತ್ತಿಗೆ ಹರಿ ತೆರೆದುಕೊಳ್ಳುತ್ತಾ ಹೋಗುತ್ತಾನೆ. ರಿವಾಜುಗಳನ್ನೇ ಬದುಕು ಎಂದು ತಿಳಿದುಕೊಂಡವನ ಎದುರು ಜೀವನದ ಹೊಸ ಹೊಸ ಮುಖಗಳು, ಭಾವವಲಯಗಳು, ನೋವು ನಲಿವುಗಳು, ವೈರುಧ್ಯಗಳು ಎಲ್ಲವೂ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಈ ಭೌತಿಕ ಪಯಣದ ಜತೆಗೆ ನಾಯಕನ ಮನಸ್ಸಿನೊಳಗೆ ನಡೆಯುವ ಪರಿವರ್ತನೆಯ ಆಂತರಿಕ ಪಯಣವನ್ನೂ ಅತಿಯೆನಿಸದ ಹಾಗೆ ಸಹಜವಾಗಿ ಸೂಕ್ಷ್ಮವಾಗಿ ಚಿತ್ರಿಸಿರುವುದು ಈ ಚಿತ್ರದ ಹೆಗ್ಗಳಿಕೆ. ತನ್ನದೇ ನಿಯಮಗಳಲ್ಲಿ ಗೊತ್ತಿಲ್ಲದೆ ಬಂಧಿಯಾಗಿರುವ ಟೆಕಿ ಹುಡುಗನಾಗಿ ಪಹಾದ್ ಫಾಸಿಲ್‌ ನಟನೆ ನಗುವುಕ್ಕಿಸುತ್ತಲೇ ಗಾಢವಾಗಿ ಆವರಿಸಿಕೊಳ್ಳುತ್ತದೆ. ಪತ್ನಿಗಾಗಿ ಹಂಬಲಿಸುತ್ತ ಪಯಣಿಸುವ ವೃದ್ಧನಾಗಿ ನೇಡುಮುಡಿ ಮೇಣು ಅವರ ಪಕ್ವ ಅಭಿನಯ ಮತ್ತು ಚುರುಕು ಹುಡುಗಿ ಸ್ವಾತಿ ರೆಡ್ಡಿ ಇಬ್ಬರೂ ಇಷ್ಟವಾಗುತ್ತಾರೆ.

ಅಂತರ್ಜಾಲದಲ್ಲಿ https://bit.ly/2H5Kc8B ಕೊಂಡಿ ಮೂಲಕ ಈ ಚಿತ್ರವನ್ನು ವೀಕ್ಷಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.