ADVERTISEMENT

ನೀರು ಉಳಿಸಲು ಪ್ರಿಯಾಂಕಾ ಹೀಗ್ಮಾಡ್ತಾರೆ...

ಜಲ ಜಾಗೃತಿ

ಸುರೇಖಾ ಹೆಗಡೆ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ನೀರು ಉಳಿಸಲು ಪ್ರಿಯಾಂಕಾ ಹೀಗ್ಮಾಡ್ತಾರೆ...
ನೀರು ಉಳಿಸಲು ಪ್ರಿಯಾಂಕಾ ಹೀಗ್ಮಾಡ್ತಾರೆ...   

ಪರಿಸರದ ಬಗೆಗೆ ಕಾಳಜಿ ತೋರುವ ಗುಣ ಚಿಕ್ಕಂದಿನಿಂದಲೇ ಬೆಳೆದುಬಂದಿದೆ. ಕಸ ವಿಂಗಡಣೆ, ನೀರಿನ ಸದ್ಬಳಕೆ, ಗಿಡಗಳನ್ನು ನೆಡುವುದು ಎಲ್ಲವೂ ನನಗೆ ಪ್ರಿಯ. ನಾನು ಆ ಸಮಸ್ಯೆಗಳನ್ನು ಎದುರಿಸಿದ್ದೇನೆ ಎಂದಲ್ಲ, ಮುಂದೆ ಎದುರಾಗಬಾರದು ಎಂಬ ಮುಂದಾಲೋಚನೆಯಿಂದ ನನ್ನನ್ನು ನಾನು ತೊಡಗಿಸಿಕೊಂಡೆ.

ಮನೆಯಲ್ಲೂ ಅಷ್ಟೇ, ನನ್ನ ಮಕ್ಕಳಿಗೆ ನೀರಿನ ಸದ್ಬಳಕೆ ಹೇಗೆ ಎನ್ನುವ ಬಗ್ಗೆ ಹೇಳಿಕೊಡುತ್ತಲೇ ಇರುತ್ತೇನೆ. ಹಲ್ಲುಜ್ಜುವುದರಿಂದ ಹಿಡಿದು ಬೇರೆಲ್ಲಾ ಸಂದರ್ಭಗಳಲ್ಲಿ ಹೇಗೆ ನೀರನ್ನು ಉಳಿತಾಯ ಮಾಡಬಹುದು, ಮಿತವಾಗಿ ಬಳಸುವುದು ಹೇಗೆ, ಕಾರಲ್ಲಿ ಹೋಗುತ್ತಿರುವಾಗ ಕಸವನ್ನು ರಸ್ತೆಯ ಮೇಲೆ ಚೆಲ್ಲಬಾರದು... ಹೀಗೆ ನಾಗರಿಕ ಪ್ರಜ್ಞೆಗಳನ್ನು ಹೇಳಿಕೊಟ್ಟಿದ್ದೇನೆ.

ಅಂದಹಾಗೆ ನಾನು ಕೈತೋಟ ಮಾಡಿಕೊಂಡಿದ್ದೇನೆ. ಅಲ್ಲಿ ಸಾವಯವ ಕೃಷಿಗೇ ಆದ್ಯತೆ. ಬಳಕೆಯಾದ ಹೆಚ್ಚಿನ ನೀರು ಸದ್ಬಳಕೆ ಮಾಡಿಕೊಳ್ಳುತ್ತೇನೆ. ಪಾತ್ರೆ ತೊಳೆದ ನೀರು ಗಿಡಗಳ ದಾಹ ಇಂಗಿಸುತ್ತದೆ. ಸೊಪ್ಪು, ತರಕಾರಿ ತೊಳೆದ ನೀರನ್ನು ಚೆಲ್ಲದೆ ಅವುಗಳಿಂದ ಗಿಡಗಳಿಗೆ ನೀರುಣಿಸುತ್ತೇನೆ.

ADVERTISEMENT

ಇನ್ನು, ಮಳೆ ನೀರು ಸಂಗ್ರಹ ವ್ಯವಸ್ಥೆಯೂ ಇದೆ. ಆ ನೀರು ಕಾರು, ಪಾತ್ರೆ ತೊಳೆಯಲು ಸೇರಿದಂತೆ ಇನ್ನೂ ಅನೇಕ ಕೆಲಸಗಳಿಗೆ ಬಳಕೆಯಾಗುತ್ತದೆ.

‘ನೀವು ಸೆಲೆಬ್ರಿಟಿ, ನೀರಿನ ತೊಂದರೆಯ ಅನುಭವ ನಿಮಗಾಗಿರಲಿಕ್ಕಿಲ್ಲ. ಆದರೂ ಯಾಕೆ ಇಷ್ಟೆಲ್ಲಾ ಮಾಡುತ್ತೀರಿ’ ಎಂದು ಕೇಳಿದವರೂ ಇದ್ದಾರೆ.
ಇಂದು ಸಮಸ್ಯೆ ಆಗಿಲ್ಲ ಎನ್ನುವ ಕಾರಣಕ್ಕೆ ಮುಂದಿನ ಸಮಸ್ಯೆಗಳನ್ನು ಆಹ್ವಾನಿಸುವುದು ಹುಚ್ಚುತನವಲ್ಲವೇ. ಪರಿಸರದಿಂದ ಸಾಕಷ್ಟು ಲಾಭ ಪಡೆಯುವ ನಾವು, ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿನ ಕೆಲಸವನ್ನಾದರೂ ಮಾಡಬೇಕಲ್ಲವೇ.

ಹೀಗಾಗಿ ಕೆಲವು ನಿಯಮಗಳನ್ನು ಕೆಲಸದವರೂ ಸೇರಿದಂತೆ ನಾವು ಮನೆಯವರೆಲ್ಲರೂ ಪಾಲಿಸುತ್ತೇವೆ. ಶವರ್‌ನಲ್ಲಿ ಸ್ನಾನ ಮಾಡಿದರೆ ತುಂಬಾ ನೀರು ಪೋಲಾಗುತ್ತದೆ. ಹೀಗಾಗಿ ಬಕೆಟ್‌ ಸ್ನಾನ ಒಳ್ಳೆಯದು. ಅಂದಹಾಗೆ ಈಗ ಬೇಸಿಗೆ ಕಾಲ. ಅನಗತ್ಯವಾಗಿ ಹೆಚ್ಚು ಸಮಯ ಗೀಸರ್‌ನಲ್ಲಿ ನೀರು ಬಿಸಿ ಮಾಡುವ ಬದಲು ಉಗುರು ಬೆಚ್ಚಗಿನ ಸ್ನಾನ ಒಳ್ಳೆಯದು. ವಿದ್ಯುತ್‌ ಉಳಿತಾಯವೂ ಆಯಿತು, ನೀರೂ ಉಳಿಯುತ್ತದೆ.

ಅನೇಕರಿಗೆ ಹಲ್ಲುಜ್ಜುವಾಗ, ಮುಖ ತೊಳೆಯುವಾಗ ನೀರನ್ನು ಅನಗತ್ಯವಾಗಿ ಹರಿಸುವ ಕೆಟ್ಟ ಅಭ್ಯಾಸವಿರುತ್ತದೆ. ಅದರ ಬದಲು ಅವಶ್ಯಕತೆ ಇದ್ದಾಗ ಮಾತ್ರ ನೀರು ಬಿಡಿ. ಟ್ಯಾಪ್‌ ಹಾಳಾಗಿದ್ದರೂ ಅನೇಕರು ಸರಿ ಮಾಡಿಸುವುದೇ ಇಲ್ಲ. ಹನಿ ನೀರಲ್ಲವೇ ಎಂದು ಸುಮ್ಮನಾಗುತ್ತಾರೆ. ಆದರೆ ಹನಿ ಹನಿ ಕೂಡಿಯೇ ಹಳ್ಳ. ನಾವು ಪ್ರಜ್ಞಾಪೂರ್ವಕವಾಗಿ ಉಳಿಸುವ ನೀರು ಮುಂದಿನ ಪೀಳಿಗೆಯನ್ನು ಸುರಕ್ಷಿತವಾಗಿಡಬಲ್ಲುದು.

‘ನಮ್ಮ ಕಡೆ ನೀರೇ ಇಲ್ಲ, ಬತ್ತಿ ಹೋಗಿದೆ. ನೀರು ಬಿಟ್ಟೂ ಇಲ್ಲ. ಏನು ಮಾಡಬೇಕು ತಿಳಿಯುತ್ತಿಲ್ಲ’ ಎಂದು ನಮ್ಮ ಮನೆಗೆ ಕೆಲಸಕ್ಕೆ ಬರುವವರು ಆಗಾಗ ಹೇಳುತ್ತಿರುತ್ತಾರೆ. ಆ ಸಮಸ್ಯೆಗಳೆಲ್ಲಾ ನಮ್ಮದೂ ಹೌದು ಎಂದುಕೊಂಡಾಗ ಕಾಳಜಿಯ ಮನೋಭಾವ ತನ್ನಿಂದ ತಾನೇ ಬರುತ್ತದೆ.

ಅಂದಹಾಗೆ ನಾವು ಬಳಸುವ ಫ್ಲಶ್‌ನಿಂದಾಗಿ ಸಾಕಷ್ಟು ನೀರು ಹಾಳಾಗುತ್ತದೆ. ಎರಡು ಬಾರಿ ಫ್ಲಶ್‌ ಬಳಸುವ ಬದಲು ತೀರಾ ಅಗತ್ಯವಿದ್ದಾಗ ಮಾತ್ರ ಒಂದೇ ಬಾರಿ ಬಳಸುತ್ತೇವೆ.

ನೀರು ಉಳಿತಾಯದ ಮಾರ್ಗಕ್ಕೆ ನಾವು ಅನುಸರಿಸುವ ಇನ್ನೊಂದು ಮಾರ್ಗ ಎಂದರೆ, ವಾಹನಗಳನ್ನು ತೊಳೆಯುವಾಗ ಆದಷ್ಟೂ ಬಕೆಟ್‌ ನೀರನ್ನೇ ಬಳಸುತ್ತೇವೆ. ಪೈಪ್‌ ನೀರು ಹಿಡಿದು ವಾಹನ ತೊಳೆದರೆ ಹೆಚ್ಚು ನೀರು ವ್ಯರ್ಥವಾಗುತ್ತದೆ. ಅದರ ಅರಿವೂ ನಮಗಾಗುವುದಿಲ್ಲ.

ಸಾಧ್ಯವಾದಷ್ಟು ಗಿಡ ಬೆಳೆಸಬೇಕು. ಇದೂ ನೀರಿಗೆ ಆಧಾರ. ಹೀಗಾಗಿ ನೀರು ಸೇರಿದಂತೆ ಪರಿಸರ ಸಂರಕ್ಷಣೆ ಬಗೆಗೆ ನಾವು ಸಾಕಷ್ಟು ಚಿಂತನೆ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.