ADVERTISEMENT

ಬಂತು ಹಸಿರು ಫ್ಯಾಷನ್‌

ಸುರೇಖಾ ಹೆಗಡೆ
Published 5 ಮೇ 2017, 19:30 IST
Last Updated 5 ಮೇ 2017, 19:30 IST
ಬಂತು ಹಸಿರು ಫ್ಯಾಷನ್‌
ಬಂತು ಹಸಿರು ಫ್ಯಾಷನ್‌   

‘ಗೋ ಗ್ರೀನ್‌’ ಪರಿಕಲ್ಪನೆಯಲ್ಲಿ ಈ ವರ್ಷದ ಬಣ್ಣವಾಗಿ ಆಯ್ಕೆ ಆಗಿರುವುದು ಹಸಿರು ಬಣ್ಣ.  ಪ್ರಕೃತಿಯ ಹಸಿರ ಮಡಿಲಲ್ಲೇ ಬೆಳೆದವರಿಗೆ ಈ ಬಣ್ಣ ಅಚ್ಚುಮೆಚ್ಚೇ. ಆದರೆ ಫ್ಯಾಷನ್‌, ಮೇಕಪ್‌ ಲೋಕದಲ್ಲಿಯೂ ಈ ಬಣ್ಣ ಸದ್ದು ಮಾಡುತ್ತಿದೆ. ಅಂದ ಹೆಚ್ಚಿಸುವ ಕೇಶರಾಶಿಗೂ ಹಸಿರು ಬಣ್ಣ, ಉಗುರಿಗೂ ಹಸಿರು. ಕಣ್ಣಿಗೆ ಕಾಡಿಗೆ, ಐಲೈನರ್‌ಗಳೂ ಹಸಿರು ಬಣ್ಣದ್ದೇ ಆದರೆ ಹೇಗಿರಬಹುದು?

ಹಸಿರು ಬಣ್ಣದ ದಿರಿಸು ತೊಡುವುದು ಕಷ್ಟವಲ್ಲ. ಆದರೆ ಕೂದಲು, ಕಣ್ಣು, ಉಗುರುಗಳಿಗೂ ಹಸಿರು ಬಣ್ಣ ಎಂದರೆ ಮನಸು ಚಿಂತೆಗೆ ಶುರುವಿಟ್ಟುಕೊಳ್ಳುತ್ತದೆ. ಆದರೆ ನೀವು ಫ್ಯಾಷನ್‌ ಪ್ರಿಯರಾಗಿದ್ದಲ್ಲಿ ಈ ವರ್ಷದ ಬಣ್ಣ ಹಸಿರನ್ನು ಯಾವುದಾದರೂ ರೂಪದಲ್ಲಿ ಬಳಸಿಕೊಳ್ಳಲೇಬೇಕು.

ತುಂಬಾ ಫ್ರೆಶ್‌ ಎನಿಸುವ ಹಸಿರು ಹಾಗೂ ಹಳದಿ ಬಣ್ಣವನ್ನು ಹದವಾಗಿ ಮಿಶ್ರಣ ಮಾಡಿದ ವಿಶಿಷ್ಟ ಬಣ್ಣ ಇದು. ಹೊಸತನವನ್ನು ಸ್ಫುರಿಸುತ್ತಾ ಇಷ್ಟವಾಗುವ ಈ ಬಣ್ಣ ಫ್ಯಾಷನ್‌ ಲೋಕದಲ್ಲಿ ವಿಭಿನ್ನ ಎನಿಸಿಕೊಂಡಿದೆ. ದಿರಿಸುಗಳಲ್ಲಿ, ಆಭರಣಗಳಲ್ಲಿ, ಆಕ್ಸೆಸರೀಸ್‌ಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಾಗಿದೆ. ಬೇರೆಲ್ಲಾ ಬಣ್ಣಗಳು  ಫ್ಯಾಷನ್‌ ಲೋಕದಲ್ಲಿ ಹೊಂದಿಕೊಳ್ಳುವಷ್ಟು ಸುಲಭವಾಗಿ ಹಸಿರು ಬಣ್ಣ ಹೊಂದಿಕೊಂಡಿಲ್ಲ ಎನ್ನುವ ಭಾವನೆ ಅನೇಕರಿಗಿದೆ.

ADVERTISEMENT

ನೇಲ್‌ ಪಾಲಿಶ್‌
ಹೆಚ್ಚೂ ಕಡಿಮೆ ಎಲ್ಲಾ ಶೇಡ್‌ನ ನೇಲ್‌ಪಾಲಿಶ್‌ ಬಳಸಿದರೂ ಹಸಿರು ಬಣ್ಣ ಉಗುರಿಗೆ ಲೇಪಿಸುವುದರಲ್ಲಿ ಅನೇಕರು ಹಿಂದೆ ಬಿದ್ದಿದ್ದಾರೆ. ಆದರೆ ಈ ವರ್ಷದ ಗೋಗ್ರೀನ್‌ ಪರಿಕಲ್ಪನೆಯಲ್ಲಿ ಆಕರ್ಷಕವಾದ ಹಸಿರು ಬಣ್ಣದ ನೇಲ್‌ ಪಾಲಿಶ್‌ಗಳು ಮಾರುಕಟ್ಟೆಯಲ್ಲಿವೆ. ಇವು ಉಗುರಿಗೆ ಸಹಜವಾಗಿಯೇ ವಿಶಿಷ್ಟ ಸೌಂದರ್ಯ ನೀಡಲಿವೆ. ಹಸಿರು ಬಣ್ಣದ ನೇಲ್‌ ಪಾಲಿಶ್‌ ಬೋಲ್ಡ್‌ ಲುಕ್‌ ನೀಡುವುದರಿಂದ ಪಾರ್ಟಿ ಹಾಗೂ ಸಮಾರಂಭಗಳಿಗೆ ಹೆಚ್ಚು ಸೂಕ್ತ. ಇದರಲ್ಲಿಯೂ ನಾನಾ ಶೇಡ್‌ಗಳಿದ್ದು ಹಳದಿ ಬಣ್ಣದ ಶೇಡ್‌ ಇರುವ ಹಸಿರು ಬಣ್ಣ ಹೆಚ್ಚು ಜನಪ್ರಿಯ. ಅಲ್ಲದೆ ಈ ಬಣ್ಣಕ್ಕೆ ಇನ್ನಷ್ಟು ಆಕರ್ಷಣೆ ದೊರಕಿಸಿಕೊಡಬೇಕು ಎಂದರೆ ಬೇರೆ ಯಾವುದಾದರೂ ಬಣ್ಣದ ಜೊತೆ ಮಿಕ್ಸ್‌ ಆ್ಯಂಡ್ ಮ್ಯಾಚ್‌ ಮಾಡಿ ಬಳಸಿದರೆ ಚೆನ್ನಾಗಿರುತ್ತದೆ.

ಫ್ಯಾಷನ್‌ ಲೋಕದ ತಜ್ಞರ ಪ್ರಕಾರ ನಿಯಾನ್‌ ಗ್ರೀನ್‌ ಬಣ್ಣ ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಬಣ್ಣವಂತೆ. ಪ್ರಯಾಣ, ಸಮುದ್ರ ತಟದ ವೀಕ್ಷಣೆಗೆ ತೆರಳಿದರೆ  ನಿಯಾನ್‌ ಹಸಿರು ಬಣ್ಣದ ದಿರಿಸು ಸೂಕ್ತ. ಇದು ನಿಮ್ಮ ನಿಲುವಿಗೆ ಚೆಲುವು ನೀಡುವುದಷ್ಟೇ ಅಲ್ಲ, ಆರಾಮದಾಯಕ ಅನುಭವವನ್ನೂ ನೀಡಲಿದೆ.

ಅಂದಹಾಗೆ ಮೋಹಿತೊ ಹಸಿರು (mohito green) ಬಣ್ಣ  ಕಚೇರಿಗೆ ತೆರಳುವಾಗ ಬಳಸುವುದು ಸೂಕ್ತ. ಹಸಿರು ಬಣ್ಣದ ನೇಲ್‌ ಪಾಲಿಶ್‌ ಬಳಸುವಾಗ ಫ್ರೆಂಚ್‌ ಮೆನಿಕ್ಯೂರ್‌ ಶೈಲಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು.

ಪ್ರಾರಂಭದಲ್ಲಿ ಹಸಿರು ಬಣ್ಣ ಬಳಸಿ ಉಗುರಿನ ಅಂಚಿನಲ್ಲಿ ಬಿಳಿ ಬಣ್ಣದ ಟಚ್‌ ಕೊಡಬಹುದು. ಇದು ಸ್ಟೈಲಿಶ್‌ ಲುಕ್‌  ನೀಡಲಿದೆ. ಇದನ್ನೇ ಅಡ್ಡಗೆರೆ ವಿನ್ಯಾಸದಲ್ಲಿಯೂ ಮಾಡಿಕೊಳ್ಳಬಹುದು.  ಅಂದರೆ ಉಗುರಿನ ಅರ್ಧಭಾಗವನ್ನು ಮಾತ್ರ ಹಸಿರು ಬಣ್ಣದ ನೇಲ್‌ಪಾಲಿಶ್‌ ಹಚ್ಚಿ ಇನ್ನರ್ಧ ಭಾಗದಲ್ಲಿ ಪಾರದರ್ಶಕ ನೇಲ್‌ಪಾಲಿಶ್‌ ಹಚ್ಚಿ ಅಂದಗಾಣಿಸಬಹುದು.

ಕೇಶಕ್ಕೂ ಸೈ
ಇತ್ತೀಚೆಗೆ ಕೂದಲಿಗೂ ಹಸಿರು ಬಣ್ಣ ಬಳಸುವುದು ಹೆಚ್ಚುತ್ತಿದೆ. ಅನೇಕರು ಕಾಡಿನ ಚಿತ್ರಣವುಳ್ಳ ವಿನ್ಯಾಸವನ್ನು ಕೂದಲ ಮೇಲೆ ಮೂಡಿಸಿಕೊಳ್ಳುತ್ತಿದ್ದಾರೆ. ನದಿಯಂತೆ ಭಾಸವಾಗಲು ನೀಲಿ ಬಣ್ಣ, ಮರಗಳನ್ನು ನೆನಪಿಸುವ ಹಸಿರು ಬಣ್ಣಗಳ ಲೇಪನ ಕೂದಲಿಗೆ ಆಗುತ್ತಿದೆ. ಹೀಗೆ ವಿನ್ಯಾಸ ಮಾಡಿಕೊಳ್ಳುವಾಗ ಹಸಿರು ಬಣ್ಣ ಆದಷ್ಟೂ ಕೂದಲಿನ ಅಂಚಿನಲ್ಲಿರಲಿ. ನೆತ್ತಿಯ ಪ್ರಾರಂಭದಲ್ಲಿಯೇ ಹಸಿರು ಬಣ್ಣ ಅಷ್ಟೊಂದು ಚೆನ್ನ ಎನಿಸದು. ಅಂದಹಾಗೆ ಹುಡುಗರೂ ಕೂದಲಿಗೆ ಹಸಿರು ಬಣ್ಣ ಹಚ್ಚಿಕೊಳ್ಳುತ್ತಾರೆ.

ಮೊಗದಲ್ಲಿ ಹಸಿರು ಮೇಕಪ್‌
ಐಲೈನರ್‌ಗಳಲ್ಲಿಯೂ ಬಗೆಗಬಗೆ ಬಣ್ಣಗಳು ಬಂದಿವೆ. ನೀಲಿ, ಚಿನ್ನದ ಬಣ್ಣ, ಹಸಿರು, ಕೆಂಪು, ಗುಲಾಬಿ... ಹೀಗೆ ತರಹೇವಾರಿ ಐಲೈನರ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ ಸದ್ಯ ಕಾಲೇಜು ಹುಡುಗಿಯರು ಸೇರಿದಂತೆ ಫ್ಯಾಷನ್‌ ಲೋಕವನ್ನು ಹಿಂಬಾಲಿಸುವವರು ಹಸಿರು ಬಣ್ಣದ ಐಲೈನರ್‌ಗೆ ಮಾರುಹೋಗಿದ್ದಾರೆ.

ಭಾರತೀಯರ ತ್ವಚೆಗೆ ಹಸಿರು ಬಣ್ಣ ಹೆಚ್ಚು ಹೋಲುತ್ತದೆ ಎಂಬ ಮಾತೂ ಕೇಳಿಬರುತ್ತಿದೆ. ಐಲ್ಯಾಶಸ್‌ ಬಳಸಿದಾಗ ಹಸಿರು ಬಣ್ಣದ ಐಲೈನರ್‌ ತುಂಬಾ ಚೆನ್ನಾಗಿ ಒಪ್ಪುತ್ತದೆ. ಫ್ಯಾಷನ್‌ ಷೋಗಳಲ್ಲಿಯೂ ಈ ಪ್ರಯೋಗ ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ. ಐಲ್ಯಾಶ್‌ ಬಳಸಿ ಸ್ಮೋಕಿ ಇಫೆಕ್ಟ್‌ ನೀಡಿದ ಮೇಲಂತೂ ಹಸಿರು ಬಣ್ಣದ ಐಲೈನರ್‌ ನೀಡುವ ಖದರ್ರೇ ಬೇರೆ. 

*

ಚೆಲುವು ನೀಡುವ ಬಣ್ಣ
ಎಲ್ಲಾ ವಿನ್ಯಾಸಕ್ಕೆ ಒಗ್ಗಿಕೊಳ್ಳುವ ಗುಣ ಹಸಿರಿನದ್ದು. ಹೀಗಾಗಿಯೇ ನೇಲ್‌ ಪೇಂಟಿಂಗ್‌ನಲ್ಲಿ ಹಸಿರು ಬಣ್ಣವನ್ನು ಬೇಗನೆ ಒಪ್ಪಿಕೊಳ್ಳಲಾಯಿತು. ಕೇಶವಿನ್ಯಾಸದಲ್ಲಿಯೂ ಈ ಬಣ್ಣ ಹೆಚ್ಚು ಜನಪ್ರಿಯವಾಗುತ್ತಿದೆ.,ಇನ್ನು ಬೇಸಿಗೆ ಕಾಲಕ್ಕೆ ಹೆಚ್ಚು ಸೂಕ್ತ ಎನಿಸುತ್ತದೆ.

ಮದುಮಗಳಿಗೆ ಹೆಚ್ಚಾಗಿ ಮರೂನ್‌ ಹಾಗೂ ಗಾಢ ಕೆಂಪು ಬಣ್ಣ ಸೂಕ್ತ. ಆದರೆ ಗಾಢ ಹಸಿರು ಬಣ್ಣ ಕೂಡ ಮದುಮಗಳಿಗೆ ಚೆನ್ನಾಗಿ ಒಪ್ಪುತ್ತದೆ. ಗಾಢ ಹಸಿರು, ಪಾಚಿ ಬಣ್ಣದ ಸಾಂಪ್ರದಾಯಿಕ ದಿರಿಸು ತೊಟ್ಟರೆ ಮದುಮಗಳು ಹೆಚ್ಚು ಆಕರ್ಷಕವಾಗಿ ಕಾಣುವುದರಲ್ಲಿ ಸಂಶಯವಿಲ್ಲ.
-ಕಾಮಾಕ್ಷಿ, ವಸ್ತ್ರವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.