ADVERTISEMENT

ಬೀದಿ ನಾಯಿಗಳ ಬೆಸ್ಟ್ ಫ್ರೆಂಡ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಬೀದಿ ನಾಯಿಗಳ ಬೆಸ್ಟ್ ಫ್ರೆಂಡ್
ಬೀದಿ ನಾಯಿಗಳ ಬೆಸ್ಟ್ ಫ್ರೆಂಡ್   

ಕೆಲವರಿಗೆ ನಾಯಿಗಳೆಂದರೆ ತುಂಬಾ ಪ್ರೀತಿಯೇನಲ್ಲ. ಅವುಗಳನ್ನು ಸಾಕುವ ಯೋಚನೆಯೂ ಇರಲಿಲ್ಲ. ಆದರೂ ಅವರೀಗ ನೂರಾರು ನಾಯಿಗಳ ರಕ್ಷಕ. ಝೌಯೂಸಂಗ್, ನಾಯಿಗಳ ಬೆಸ್ಟ್ ಫ್ರೆಂಡ್.

ಇವರಲ್ಲಿ ನಾಯಿಗಳ ಬಗ್ಗೆ ಪ್ರೀತಿ ಮೂಡಲು ಒಂದು ಕಾರಣವೂ ಇದೆ. 2008ರಲ್ಲಿ ಚೀನಾದ ಹೆನನ್‌ನ ಬೀದಿಯೊಂದರಲ್ಲಿ ಹೀಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದರು ಯೂಸಂಗ್. ಆಗ ಇದ್ದಕ್ಕಿದ್ದಂತೆ ಕಾರೊಂದು ರೊಯ್ಯನೆ ನುಗ್ಗಿತ್ತು. ಬಂದಷ್ಟೇ ವೇಗದಲ್ಲೇ ಹೊರಟೂಹೋಯಿತು. ಆದರೆ ಕಾರಿನ ರಭಸ ನಿಂತಿದ್ದೇ, ಕೇಳುತ್ತಿತ್ತು ಮುದ್ದಾದ ಒಂದು ನಾಯಿ ಮರಿಯ ಅಳು. ತನ್ನ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಅದನ್ನು ನೋಡಿ ಯೂಸಂಗ್ ಮನ ಅರೆಕ್ಷಣ ಕಲಕಿಬಿಟ್ಟಿತ್ತು. ಒಂಟಿ ಮರಿಯನ್ನು ಬಿಟ್ಟು ಹೋಗಲು ಮನಸ್ಸಾಗಲಿಲ್ಲ. ಬೀದಿಯಲ್ಲಿ ಮರುಗುತ್ತಿದ್ದ ನಾಯಿ ಕಂಡು ಹಾಗೇ ಮುಖ ತಿರುಗಿಸಿ ಹೋಗುತ್ತಿದ್ದವರೇ ಎಲ್ಲ. ಆದರೆ ಅದನ್ನು ಎತ್ತುಕೊಂಡು ಹೋಗಿ ಸಮೀಪದ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಬಿಟ್ಟುಬಂದರು.

ಆ ಕೆಲಸ ಅಲ್ಲಿಗೇ ನಿಲ್ಲಿಸಲು ಯೂಸಂಗ್‌ನನ್ನು ಬಿಡಲೇ ಇಲ್ಲ ಮನಸ್ಸು. ಬೀದಿಯಲ್ಲಿ ಯಾವುದೇ ನಾಯಿಗೆ ಏನೇ ಆದರೂ ತಕ್ಷಣ ಸಹಾಯ ಮಾಡಲು ಹೊರಟುಬಿಡುವುದು ಒಂದು ಅಭ್ಯಾಸವೂ ಆಗಿಹೋಯಿತು.

ADVERTISEMENT

ದಿನ ಕಳೆದಂತೆ ಆ ರಕ್ಷಣಾ ಕೇಂದ್ರದಲ್ಲಿ ನಾಯಿಗಳ ಸಂಖ್ಯೆ ಏರುತ್ತಲೇ ಹೋಯಿತು. ಹಾಗೇ ನಾಯಿ ಬಗ್ಗೆ ಪ್ರೀತಿಯೂ ಇವರಲ್ಲಿ ಅತಿಯಾಗುತ್ತಲೇ ಹೋಯಿತು. ಕೇಂದ್ರಕ್ಕೆ ಅಷ್ಟು ನಾಯಿಗಳನ್ನು ಸಾಕಲು ಕಷ್ಟವಾಗುತ್ತದೆ ಎಂದು ತಮ್ಮ ಸಂಬಳದಲ್ಲಿ ಅರ್ಧವನ್ನು ಅಲ್ಲಿಗೇ ಕೊಡುತ್ತಿದ್ದರು ಯೂಸಂಗ್. ಸ್ನೇಹಿತರಿಂದಲೂ ಹಣವನ್ನು ದಾನ ನೀಡಿಸುತ್ತಿದ್ದರು. ಆದರೆ ಇದಿಷ್ಟೇ ಸಾಕಾಗುತ್ತಿರಲಿಲ್ಲ. ಅಪಾರ್ಟ್‌ಮೆಂಟ್ ಆದ್ದರಿಂದ ನಾಯಿಗಳನ್ನು ಮನೆಯಲ್ಲೂ ಇಟ್ಟುಕೊಳ್ಳುವಂತಿಲ್ಲ. ಆದ್ದರಿಂದ ತಾವೇ ಒಂದು ಹೊಸ ಕೇಂದ್ರವನ್ನು ತೆರೆಯುವ ಆಲೋಚನೆ ಮಾಡಿದರು. ಕೆಲಸಕ್ಕೆ ರಾಜೀನಾಮೆ ಕೊಟ್ಟು ಚೀನಾದ ಎಲ್ಲೋ ರಿವರ್‌ನ ಆಚೀಚೆ ತಮ್ಮದೇ ಕೇಂದ್ರ ತೆರೆದರು. ಬೀದಿ ನಾಯಿಗಳ ರಕ್ಷಣೆಯನ್ನೇ ಕಾಯಕವಾಗಿಯೂ ಮಾಡಿಕೊಂಡರು.

ಕಳೆದ 8 ವರ್ಷಗಳಿಂದ ಸುಮಾರು 700 ಬೀದಿ ನಾಯಿಗಳನ್ನು ರಕ್ಷಿಸಿದ್ದಾರೆ. ಇನ್ನಿತರ ಪುಟ್ಟ ಪ್ರಾಣಿಗಳು ತೊಂದರೆಯಲ್ಲಿ ಇರುವುದನ್ನು ಕಂಡರೆ ಇವರಿಂದ ಆರೈಕೆ ಖಚಿತ. ಇದುವರೆಗೂ ಒಂದು ದಿನವೂ ರಜೆ ತೆಗೆದುಕೊಳ್ಳದೇ ನಾಯಿಗಳ ಸೇವೆಯಲ್ಲೇ ಖುಷಿ ಕಂಡುಕೊಳ್ಳುತ್ತಿದ್ದಾರೆ.

‘ನನ್ನನ್ನು ನೋಡಿದಾಕ್ಷಣ ಬಾಲ ಆಡಿಸುತ್ತಾ ಸುತ್ತುವರಿದು ಖುಷಿ ಪಡುವ ಈ ನಾಯಿಗಳ ಪ್ರೀತಿಗೆ ಎಣೆ ಎಲ್ಲಿ’ ಎಂದು ನಗುತ್ತಲೇ ಬೀಗುತ್ತಾರೆ ಯೂಸಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.