ADVERTISEMENT

‘ಬ್ರದರ್’ ಎನ್ನುವವರು ನನಗೆ ತುಂಬಾನೇ ಇಷ್ಟ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 19:30 IST
Last Updated 10 ಜನವರಿ 2017, 19:30 IST
ರಾಕೇಶ್ ಅಡಿಗ
ರಾಕೇಶ್ ಅಡಿಗ   

‘ಜೋಶ್’ ಚಿತ್ರದ ಮೂಲಕ ಚಂದನವನದಲ್ಲಿ ಸಿನಿಯಾನ ಆರಂಭಿಸಿದವರು ರಾಕೇಶ್ ಅಡಿಗ. ಏಳು ವರ್ಷದ ಈ ಪಯಣದಲ್ಲಿ 12 ಚಿತ್ರಗಳಲ್ಲಿ ನಟಿಸಿರುವ ಅವರು, ಯಾವುದೇ ಇಮೇಜ್ ಹಂಗಿಗೆ ಬೀಳದೆ ನಟಿಸುತ್ತಾ ಬಂದಿರುವ ಕಲಾವಿದ. ಇತ್ತೀಚೆಗಷ್ಟೆ ಅವರ ‘ಮಂಡ್ಯ ಟು ಮುಂಬೈ’ ಚಿತ್ರ ಬಿಡುಗಡೆಯಾಗಿದೆ. ಕನ್ನಡದಲ್ಲಿ ಮೊಟ್ಟಮೊದಲಿಗೆ ರ‍್ಯಾಪ್ಆಲ್ಬಂ ‘ಅರ್ಬನ್ ಲ್ಯಾಡ್‌’ ತಂದವರು ಇವರೇ ಎಂಬುದು ವಿಶೇಷ. ರಾಕೇಶ್ ಸಿನಿ ಬದುಕಿನ ಕುರಿತು ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

* ಹೇಗಿದೆ ಸಿನಿಮಾ ಬದುಕು?
ಒಂಥರಾ ಚನ್ನಾಗಿದೆ. ನಾನು ಹೀರೊ ಆಗಲೇಬೇಕು ಎಂದುಕೊಂಡು ಬಂದವನಲ್ಲ. ಸ್ನೇಹಿತರೊಂದಿಗೆ ಸೇರಿ ರ್‍ಯಾಪ್ ಆಲ್ಬಂ ಮಾಡಿ ಮ್ಯೂಸಿಕ್‌ನತ್ತ ಗಮನಹರಿಸಿದ್ದೆ.ಇದೇ ವೇಳೆ ‘ಜೋಶ್’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ನನ್ನ ಪಾತ್ರಕ್ಕೆ ಪ್ರಶಸ್ತಿಯೂ ಬಂತು. ಅಲ್ಲಿಂದ ಬದುಕು ಹೊಸದೊಂದು ತಿರುವು ತೆಗೆದುಕೊಂಡಿತು. ಏಳು ವರ್ಷದ ಸಿನಿಪಯಣದಲ್ಲಿ 12 ಸಿನಿಮಾಗಳಲ್ಲಿ ನಟಿಸಿದ್ದೇನೆ. ಮನಸ್ಸಿಗೆ ಇಷ್ಟವಾಗುವ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದೇನೆ. ಇದೀಗ ಚಿತ್ರವೊಂದರ ನಿರ್ದೇಶನಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ.

* ನೀವು ನಟಿಸಿದ ಸಿನಿಮಾಗಳ ಪೈಕಿ, ನಿಮ್ಮ ಬದುಕಿಗೆ ಹತ್ತಿರವೆನಿಸುವ ಸಿನಿಮಾ ಯಾವುದು?
‘ಜೋಶ್’. ಈ ಸಿನಿಮಾ ನನಗಷ್ಟೆ ಅಲ್ಲ, ಬಹುತೇಕ ಕಾಲೇಜು ವಿದ್ಯಾರ್ಥಿಗಳ ಬದುಕಿಗೆ ಸ್ವಲ್ಪವಾದರೂ ಹತ್ತಿರವಾಗಿರುತ್ತದೆ. ಅಲ್ಲಿರುವ ಪಾತ್ರಗಳ ಸ್ವರೂಪವೇ ಅಂತಹದ್ದು. ಪ್ರತಿ ಪಾತ್ರಗಳಲ್ಲಿ ಮನರಂಜನೆ ಜತೆಗೆ, ಸಂದೇಶವೂ ಅಡಕವಾಗಿತ್ತು. ಹಾಗಾಗಿ, ಆ ಸಿನಿಮಾ ನನ್ನ ಬದುಕಿಗೂ ಸ್ವಲ್ಪ ಹತ್ತಿರವಾಗಿತ್ತು ಎನ್ನಬಹುದು.

* ಸಿನಿಮಾ ನಟನೆ ನಂತರ ತುಂಬಾ ಹುಡುಗಿಯರು ಹಿಂದೆ ಬಿದ್ದಿದ್ದರಂತೆ?
ಹುಡುಗಿಯರು ಹಿಂದೆ ಬೀಳುವುದರಲ್ಲಿ ಅಭಿಮಾನವೂ ಇರುತ್ತದೆ. ನಾನು ಚಿತ್ರರಂಗದಲ್ಲಿ ಗುರುತಿಸಿಕೊಂಡಾಗ, ನನ್ನ ಕಾಲೇಜು ವಿದ್ಯಾಭ್ಯಾಸವೂ ನಡೆಯುತ್ತಿತ್ತು. ಹಾಗಾಗಿ ಕಾಲೇಜಿನಲ್ಲಿ ಹುಡುಗಿಯರು ನನ್ನನ್ನು ಐಕಾನಿಕ್ ಆಗಿ ನೋಡಿ ಮಾತನಾಡಿಸುತ್ತಿದ್ದರು. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಪೋಸ್ ಮೆಸೆಜ್‌ಗಳು ಬರುತ್ತಿದ್ದವು.ಆದರೆ, ನಾನ್ಯಾವುದಕ್ಕೂ ತಲೆ ಕೆಡಿಸಿಕೊಂಡವನಲ್ಲ. ನಾನಾಯ್ತು, ನನ್ನ ಕೆಲಸವಾಯ್ತು. ಹುಡುಗಿಯರ ವಿಷಯದಲ್ಲಿ ನಾನು ತುಂಬಾನೇ ರಿಸರ್ವ್ಡ್.

* ಹಾಗಾದರೆ, ಯಾರೂ ಹಿಂದೆ ಬಿದ್ದು ಕಾಡಿಲ್ವ?
ಒಬ್ಬರು ನಿತ್ಯ ಫೇಸ್‌ಬುಕ್‌ನಲ್ಲಿ ‘ನಿಮ್ಮನ್ನು ಭೇಟಿ ಮಾಡಬೇಕು’ ಎಂದು ಸಂದೇಶ ಕಳುಹಿಸುತ್ತಿದ್ದರು. ಆದರೆ, ನಾನು ಪ್ರತಿಕ್ರಿಯಿಸಿರಲಿಲ್ಲ. ಒಮ್ಮೆ ಸ್ನೇಹಿತನ ಜತೆ ಇದ್ದಾಗ ಸಂದೇಶ ಬಂತು.

ಕುತೂಹಲಕ್ಕಾಗಿ ಅವನು, ‘ಈ ಅಭಿಮಾನಿಯನ್ನು ನಿನ್ನ ಬದಲಿಗೆ ನಾನು ಭೇಟಿ ಮಾಡುತ್ತೇನೆ’ ಎಂದ. ಅಂತೆಯೇ ಒಂದು ದಿನ ಚನ್ನಾಗಿ ಡ್ರೆಸ್ ಮಾಡಿಕೊಂಡು ಹೋಗಿದ್ದ. ಆದರೆ, ಫೇಸ್‌ಬುಕ್‌ನಲ್ಲಿ ಸಂದೇಶ್‌ ಕಳುಹಿಸಿದ್ದು ಹುಡುಗಿಯಲ್ಲ. ಬದಲಿಗೆ ಒಬ್ಬ ಸಲಿಂಗಕಾಮಿ ಎಂಬುದು ಗೊತ್ತಾಯಿತು. ಆ ಘಟನೆಯನ್ನು ಸ್ನೇಹಿತರೊಂದಿಗೆ ನೆನಪಿಸಿಕೊಂಡು ಈಗಲೂ ನಗುತ್ತಿರುತ್ತೇನೆ.

* ಹುಡುಗಿಯರ ವಿಷಯದಲ್ಲಿ ರಾಕೇಶ್ ಹೇಗೆ?
ಹುಡುಗಿಯರಿಂದ ನಾನು ತುಂಬಾ ದೂರ. ಇದುವರೆಗೆ ಯಾರೊಂದಿಗೂ ಫ್ಲರ್ಟ್ ಮಾಡಿಲ್ಲ. ನನ್ನ ಈ ಸ್ವಭಾವಕ್ಕೆ ಕಾರಣವೂ ಇದೆ. ಶಾಲೆಯಲ್ಲಿದ್ದಾಗ ಹುಡುಗಿಯೊಬ್ಬಳ ಬಗ್ಗೆ ಕೆಟ್ಟದಾಗಿ ಬರೆದು ನೋಟಿಸ್ ಬೋರ್ಡ್‌ನಲ್ಲಿ ಅಂಟಿಸಿದ್ದೆ. ಅದು ದೊಡ್ಯ ಇಶ್ಯೂ ಆಗಿತ್ತು. ಆಗ ಅಮ್ಮ ನನ್ನೆದುರಿಗೆ ಕಣ್ಣೀರಿಟ್ಟು ಬೈದಿದ್ದರು. ಅದೇ ಕೊನೆ, ಮತ್ತೆಂದೂ ಹುಡುಗಿಯರ ವಿಷಯದಲ್ಲಿ ತುಂಟತನ ಮಾಡಲಿಲ್ಲ.

ಅಂದಿನಿಂದ ನಾನಾಯ್ತು, ಕೆಲಸವಾಯ್ತು. ನಿಜ ಹೇಳಬೇಕೆಂದರೆ ‘ಸ್ವೀಟಿ’, ‘ಬ್ಯೂಟಿ’ ಎಂದು ಕರೆಯುವ ಅಥವಾ ಸಂದೇಶ ಕಳುಹಿಸುವ ಹುಡುಗಿಯರಿಗಿಂತ ‘ಬ್ರದರ್’ ಎನ್ನುವವರು ನನಗೆ ತುಂಬಾನೇ ಇಷ್ಟವಾಗುತ್ತಾರೆ. ಅಂತಹ ಸಂದೇಶವನ್ನು ಯಾರೇ ಕಳುಹಿಸಿದರೂ ಅದಕ್ಕೆ ರಿಪ್ಲೆ ಮಾಡುತ್ತೇನೆ. ಈ ರೀತಿ ನನಗೆ ಸಿಕ್ಕಿರುವ ಸಹೋದರಿಯರ ಸಂಖ್ಯೆಯೂ ದೊಡ್ಡದಿದೆ.

* ಸೆಟ್‌ನಲ್ಲಿ ಮರೆಯಲಾಗದ ಘಟನೆ?
‘ಕೋಟಿಗೊಂದ್ ಲವ್ ಸ್ಟೋರಿ’ ಚಿತ್ರದಲ್ಲಿ ನಡೆದ ಘಟನೆಯನ್ನು ನೆನೆಸಿಕೊಂಡರೆ ಈಗಲೂ ಎದೆ ನಡುಗುತ್ತದೆ. ಕಾಡಿನೊಳಗೆ ಫೈಟ್‌ ದೃಶ್ಯದ ಚಿತ್ರೀಕರಣ ನಡೆಯುವಾಗ, ಮರಕ್ಕೆ ಕಟ್ಟಿದ್ದ ಸುಮಾರು 25 ಕೆ.ಜಿ. ತೂಕದ ಕಬ್ಬಿಣದ ಪಟ್ಟಿಯೊಂದು 50 ಅಡಿ ಎತ್ತರದಿಂದ ಕೆಳಕ್ಕೆ, ಅದರಲ್ಲೂ ನನ್ನ ಪಕ್ಕವೇ ಬಿದ್ದಿತ್ತು. ಸ್ವಲ್ಪ ಈಚೆಗೆ ಬಿದ್ದಿದ್ದರೆ, ನಾನು ಅವತ್ತು ಉಳಿಯುತ್ತಿರಲಿಲ್ಲ. ಆ ಘಟನೆಯನ್ನು ಮರೆಯಲು ಸಾಧ್ಯವೇ ಇಲ್ಲ.

* ಮುಂದಿನ ಪ್ರಾಜೆಕ್ಟ್‌ಗಳು?
ಸದ್ಯ ಯಾವ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿಲ್ಲ. ಬದಲಿಗೆ, ಸ್ವತಃ ನಾನೇ ಬರೆದಿರುವ ಕಥೆಯೊಂದನ್ನು ನಿರ್ದೇಶಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಪ್ರಯೋಗಾರ್ಥವಾಗಿ ಒಂದು ಕಿರುಚಿತ್ರವನ್ನು ನಿರ್ದೇಶಿಸಿದ್ದೇನೆ. ನಿರ್ಮಾಪಕರೊಬ್ಬರಿಗೆ ಕಥೆ ಹೇಳಿದ್ದೇನೆ. ಅವರೂ ಇಷ್ಟಪಟ್ಟಿದ್ದು, ಸದ್ಯದಲ್ಲೇ ಅಂತಿಮ ಹಂತದ ಮಾತುಕತೆ ಮುಗಿದು ಸಿನಿಮಾ ಆರಂಭವಾಗಲಿದೆ.                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.