ADVERTISEMENT

ಬ್ರೇಕ್‌ ಅಪ್‌ಗೂ ಉಂಟು ಟ್ಯಾಟೂ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಬ್ರೇಕ್‌ ಅಪ್‌ಗೂ ಉಂಟು ಟ್ಯಾಟೂ
ಬ್ರೇಕ್‌ ಅಪ್‌ಗೂ ಉಂಟು ಟ್ಯಾಟೂ   

ಪ್ರೀತಿಯ ಸಂಕೇತವಾಗಷ್ಟೇ ಅಲ್ಲ, ಕಳೆದುಕೊಂಡ ಪ್ರೀತಿಗೂ ಟ್ಯಾಟೂ ನಂಟಿದೆ. ಭಗ್ನಪ್ರೇಮಿಗಳ ಮೈಮೇಲೆ ಈ ‘ಬ್ರೇಕ್ ಅಪ್ ಟ್ಯಾಟೂ’ಗಳ ಕಲೆ ಹೆಚ್ಚಾಗಿದೆ...

ಪ್ರೀತಿ ಶುರುವಾಗುವುದೇ ತಡ, ತನ್ನ ಪ್ರೇಮದ ಆಳವನ್ನು ಸಂಗಾತಿಗೆ ತೋರುವ ಹುರುಪಿನಲ್ಲಿ ಹಚ್ಚೆಗೆ ಕೈಒಡ್ಡುವ ಜಮಾನವೊಂದಿತ್ತು. ತನ್ನಿಷ್ಟದ ಹುಡುಗ/ ಹುಡುಗಿಯ ಹೆಸರನ್ನು ಅಚ್ಚಾಗಿಸಿ ಒಲವಿನ ಹರವು ತೋರುತ್ತಿದ್ದ ಅದೇ ಹಚ್ಚೆ ಇದೀಗ ಟ್ಯಾಟೂಗಳ ರೂಪದಲ್ಲಿ ಪ್ರೇಮದ ಪರಿಭಾಷೆಗಳಾಗಿವೆ.

ಆದರೆ ಅದೇ ಪ್ರೀತಿ ಕೈ ಕೊಟ್ಟರೆ?
ಕೆಲವರು ಹೇರ್‌ಸ್ಟೈಲ್ ಬದಲಿಸುತ್ತಾರೆ, ಇನ್ನೂ ಕೆಲವರು ಬೇಸರವೆನಿಸಿದಾಗಲೆಲ್ಲಾ ಶಾಪಿಂಗ್‌ಗೆ ಹೋಗುತ್ತಾರೆ, ಮತ್ತೂ ಕೆಲವರು ಸುಮ್ಮನೆ ಕುಳಿತು ಹಳೆಯ ನೆನಪುಗಳಲ್ಲಿ ಕಣ್ಣೀರಾಗುತ್ತಾರೆ. ಇವುಗಳಿಗೆಲ್ಲಾ ಈಗ ಮತ್ತೂ ಒಂದು ಸೇರ್ಪಡೆ ‘ಟ್ಯಾಟೂ’.

ADVERTISEMENT

ಅದೇ ‘ಬ್ರೇಕ್ ಅಪ್ ಟ್ಯಾಟೂ’. ಬ್ರೇಕ್ ಅಪ್ ಎಂದಾಕ್ಷಣ ಅದನ್ನು ಋಣಾತ್ಮಕವಾಗೇ ನೋಡಬೇಕಿಲ್ಲ. ಆ ಕ್ಷಣವನ್ನೂ ಸವಾಲಾಗಿ ಸ್ವೀಕರಿಸಲು ಬೇಕಿರುವ ಸ್ಫೂರ್ತಿಯ ಪದಗಳೇ ಈ ಟ್ಯಾಟೂಗಳ ರೂಪದಲ್ಲಿವೆಯಂತೆ. ನಮಗೆ ನಾವೇ ಸಮಾಧಾನಗೊಳ್ಳಲು, ಅತಿಯಾದ ಭಾವುಕತೆಯಿಂದ ಹೊರಬರಲು ಈ ಟ್ಯಾಟೂಗಳು ನೆರವಾಗುತ್ತವಂತೆ.

‘ನಮ್ಮ ಮನದಾಳಕ್ಕೆ ನಮ್ಮನ್ನು ಇಳಿಸಿದ, ನಮ್ಮನ್ನು ಬದಲಿಸಿದ ಜೀವನದ ಅಮೂಲ್ಯ ಕ್ಷಣ ಬ್ರೇಕ್‌ ಅಪ್‌’ ಎಂದು ಸಂಭ್ರಮಿಸುತ್ತಲೇ ಯುವಜನ ಈ ಟ್ಯಾಟೂಗಳ ಹಿಂದೆ ಬಿದ್ದಿದೆ. ಇದಕ್ಕೆಂದೇ ವಿಶೇಷ ಪದಗಳು, ವಾಕ್ಯಗಳು, ಸಂದೇಶಗಳು, ಚಿತ್ರಗಳ ಟ್ಯಾಟೂ ವಿನ್ಯಾಸಗಳೂ ಹುಟ್ಟಿಕೊಂಡಿವೆ.

ಬಿಲೀವ್, ಫ್ರೀ, ಫೇಥ್, ಹೋಪ್, ಲೆಟ್‌ ಗೋ ... ಹೀಗೆ ಸಾಕಷ್ಟು ಪದಗಳು ಟ್ಯಾಟೂ ಪಟ್ಟಿಗೆ ಸೇರಿವೆ. ಹಳೆಯ ಸಂಕೇತವೆನಿಸಿದರೂ ಹೃದಯ ಇರಿದ ಟ್ಯಾಟೂ ಇಷ್ಟಪಡುವವರು ಇನ್ನೂ ಇದ್ದಾರೆ. ಕೈಗಳು, ಸೊಂಟ, ಕುತ್ತಿಗೆ, ಕತ್ತಿನ ಹಿಂಭಾಗ, ಭುಜ, ಅಷ್ಟೇ ಏಕೆ ಕಾಲಿನ ಮೇಲೂ ಇವು ನಲಿದಾಡುತ್ತಿವೆ.

ಹಳೆ ಪ್ರೇಮಿಗೆ, ‘ನಿನ್ನ ಅನುಪಸ್ಥಿತಿ ನನ್ನಲ್ಲಿ ಏನೂ ಬದಲಾವಣೆ ಮಾಡಿಲ್ಲ’ ಎಂದು ಹೇಳುವ ಮೂಲಕ ಸಡ್ಡು ಹೊಡೆಯುವ ಪೈಕಿ ಹಲವರಿದ್ದರೆ, ‘ನಿನ್ನ ನೆನಪೇ ನನಗೆ ಸಂಜೀವಿನಿ’ ಎನ್ನುವ ಭಗ್ನ ಪ್ರೇಮಿಗಳ ದಂಡೂ ಇದೆ. ಟ್ಯಾಟೂಗಳು ತಾತ್ಕಾಲಿಕ ನೋವು ನಿವಾರಕದಂತೆ ಕೆಲಸ ಮಾಡುತ್ತವೆ. ಅವನ್ನು ಯಾವಾಗಲೂ ನೋಡುತ್ತಿರುವುದರಿಂದ ಆತ್ಮವಿಶ್ವಾಸ ಹೆಚ್ಚಿ ಹೊಸ ಜೀವನಕ್ಕೆ ತೆರೆದುಕೊಳ್ಳಬಹುದು ಎನ್ನುವುದು ಟ್ಯಾಟೂ ವಿನ್ಯಾಸಕರ ಅಭಿಪ್ರಾಯ.

ಒಂದು ವೇಳೆ ಬ್ರೇಕ್ ಅಪ್ ಆದವರು ಒಂದಾಗಿ, ಮತ್ತೆ ಹಳೆ ಪ್ರೀತಿ ಸಿಕ್ಕರೆ?

ಅದಕ್ಕೂ ಯೋಚಿಸಬೇಕಿಲ್ಲ. ಹಾಗೆ ತಮ್ಮ ಬ್ರೇಕ್ ಅಪ್ ಬಗ್ಗೆ ಗೊಂದಲವಿದ್ದವರಿಗೆಂದೇ ತಾತ್ಕಾಲಿಕ ಟ್ಯಾಟೂಗಳೂ ಇವೆ.

ಹಳೆಯ ಪ್ರೀತಿ ಕಲಿಸಿದ ಪಾಠವನ್ನು ಪದೇ ಪದೇ ನೆನಪಿಸುವ ಜೊತೆಗೆ ಮತ್ತೊಂದು ಪ್ರೀತಿಗೆ ಬೀಳುವ ಮುನ್ನ ಎಚ್ಚರಿಕೆ ಗಂಟೆಯಾಗಿಯೂ ಈ ಟ್ಯಾಟೂ ಇರಲಿದೆಯಂತೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.