ADVERTISEMENT

ಭಿನ್ನ ಪಾತ್ರದ ಹಂಬಲದಲ್ಲಿ...

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST
ಭಿನ್ನ ಪಾತ್ರದ ಹಂಬಲದಲ್ಲಿ...
ಭಿನ್ನ ಪಾತ್ರದ ಹಂಬಲದಲ್ಲಿ...   

ಮಲೆನಾಡಿನ ಮಡಿಲು ಶೃಂಗೇರಿಯವರಾದ ನಭಾ ನಟೇಶ್, ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಮತ್ತು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು. ‘ವಜ್ರಕಾಯ’ ಚಿತ್ರದ ಮೂಲಕ ಚಂದನವನದಲ್ಲಿ ತಮ್ಮ ಸಿನಿಯಾನ ಆರಂಭಿಸಿದ ಈ ಚೆಲುವೆಯ ಎರಡನೇ ಚಿತ್ರ ‘ಲೀ’ ಇದೀಗ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ಬೇಡಿಕೆ ನಟಿಯರ ಪೈಕಿ ಒಬ್ಬರಾಗಿರುವ ನಭಾ, ತಮ್ಮ ಸಿನಿಬದುಕಿನ ಕುರಿತು ಸಂದರ್ಶನ ನೀಡಿದ್ದಾರೆ.

* ನಟನೆಯ ನಂಟು ಆರಂಭವಾಗಿದ್ದು ಹೇಗೆ?

ಕಾಲೇಜಿನಲ್ಲಿದ್ದಾಗಲೇ ನಾನು ಮಾಡೆಲಿಂಗ್ ಮಾಡುತ್ತಿದ್ದೆ. ‘ಫೆಮಿನಾ ಮಿಸ್ ಇಂಟೆಲೆಕ್ಚುವಲ್’ ಎಂಬ ಟೈಟಲ್ ಕೂಡ ಗೆದ್ದಿದ್ದೇನೆ. ಬಳಿಕ, ರಂಗಭೂಮಿಯಲ್ಲಿ ತೊಡಗಿಸಿಕೊಂಡೆ. ‘ಅಭಿನಯ ತರಂಗ’ದ ಗೌರಿ ದತ್ತು ಹಾಗೂ ನಟ ಮತ್ತು ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ಜತೆ ಕೆಲಸ ಮಾಡಿದ್ದೇನೆ. ರಂಗಭೂಮಿ ಜತೆಗೆ, ಬೀದಿನಾಟಕಗಳನ್ನು ಮಾಡಿದ್ದೇನೆ. ಇದಾದ ಬಳಿಕ ‘ವಜ್ರಕಾಯ’ದ ಮೂಲಕ ಸಿನಿಮಾ ನಟನೆ ಆರಂಭವಾಯಿತು.

ADVERTISEMENT

*‘ಪಟಾಕ ನಭಾ’ ಅಂತಲೇ ಎಲ್ಲ ನಿಮ್ಮನ್ನು ಕರೆಯುತ್ತಾರೆ?
‘ವಜ್ರಕಾಯ’ ಚಿತ್ರದ ಆ ಪಾತ್ರವನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ಎರಡನೇ ಭಾಗದಲ್ಲಿ ನನ್ನ ಬರುವ ಪಾತ್ರ ಜನರ ಮನಸ್ಸಿನಲ್ಲಿ ಇಷ್ಟೊಂದು ಅಚ್ಚೊತ್ತುತ್ತದೆ ಎಂದು ಅಂದುಕೊಂಡಿರಲಿಲ್ಲ. ಮೊದಲ ಚಿತ್ರದ ಪಾತ್ರದಿಂದ ನನ್ನನ್ನೂ ಈಗಲೂ ಜನ ಗುರುತಿಸುವಾಗ ನಿಜಕ್ಕೂ ಹೆಮ್ಮೆಯಾಗುತ್ತದೆ.

*ಮುಂದೆಯೂ ಇಂತಹ ಪಾತ್ರಗಳನ್ನೇ ಬಯಸುತ್ತೀರಾ?

ಅಯ್ಯೋ! ಹಾಗೇನಿಲ್ಲ. ಕಲಾವಿದೆಯಾಗಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಆಸೆ ಇಟ್ಟುಕೊಂಡಿರುವವಳು ನಾನು. ‘ವಜ್ರಕಾಯ’ದ ಬಳಿಕ ಅದೇ ರೀತಿಯ ಪಾತ್ರಗಳು ಹುಡುಕಿಕೊಂಡು ಬರಲಾರಂಭಿಸಿದವು. ಒಂದು ವೇಳೆ ನಾನೇನಾದರು ಎಲ್ಲವನ್ನೂ ಒಪ್ಪಿಕೊಂಡಿದ್ದರೆ,  ಅಷ್ಟಕ್ಕೇ ಸೀಮಿತವಾಗುತ್ತಿದ್ದೆ. ಹಾಗಾಗಿ, ಆ ಪಾತ್ರಗಳನ್ನು ತಿರಸ್ಕರಿಸಿ, ವಿಭಿನ್ನವಾಗಿದ್ದ ‘ಲೀ’ ಚಿತ್ರದ ಪಾತ್ರವನ್ನು ಒಪ್ಪಿಕೊಂಡೆ. ಐತಿಹಾಸಿಕ ಪಾತ್ರಗಳಲ್ಲಿ, ಅದರಲ್ಲೂ ಆ್ಯಕ್ಷನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆ.

‘ಲೀ’ಯಲ್ಲಿ ನಿಮ್ಮ ಪಾತ್ರವೇನು?
ಹಳ್ಳಿ ಹುಡುಗಿ ಪಾತ್ರ. ನಗರಕ್ಕೆ ಹೋಗಿ ಚೆನ್ನಾಗಿ ಓದಿಕೊಂಡು ಬಂದ ಸಂಪ್ರದಾಯಸ್ಥ ಮನೆತನದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ವಿಭಿನ್ನ ಮ್ಯಾನರಿಸಂನ ಪಾತ್ರಕ್ಕೆ, ಮನರಂಜನೆಯ ಟಚ್ ಕೂಡ ಇದೆ. ರೊಮ್ಯಾಂಟಿಕ್ ಕಾಮಿಡಿ ಜತೆಗೆ ಆ್ಯಕ್ಷನ್ ಕೂಡ ಚಿತ್ರದ ಹೈಲೈಟ್. ಸಾಧು ಕೋಕಿಲಾ, ರಂಗಾಯಣ ರಘು, ಚಿಕ್ಕಣ್ಣ ಅವರಂತಹ ಅದ್ಭುತ ನಟರು ಚಿತ್ರದಲ್ಲಿ ಹಾಸ್ಯದ ಹೊಳೆ ಹರಿಸಿದ್ದಾರೆ.

* ನೀವು ತುಂಬಾ ಘಾಟಿಯಂತೆ?
ಹಾಗೇನಿಲ್ಲ. ‘ವಜ್ರಕಾಯ’ ಚಿತ್ರದಲ್ಲಿನ ಬಜಾರಿ ಪಾತ್ರ ನೋಡಿ, ನಿಜಜೀವನದಲ್ಲೂ ನಾನು ಹಾಗೆ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ, ಆ ಪಾತ್ರದಷ್ಟು ಬಜಾರಿಯೂ ಅಲ್ಲ. ತೀರಾ ಸಾಧು ಕೂಡ ಅಲ್ಲ.  ಎಲ್ಲರ ಜತೆ ಬೆರೆಯುವ ಸ್ನೇಹಪೂರ್ವಕ ಸ್ವಭಾವ ನನ್ನದು.

* ಇಲ್ಲಿಯವರೆಗೆ ಯಾರ ಮೇಲೂ ಕ್ರಷ್ ಆಗಿಲ್ವಾ? ಹುಡುಗರು ಹಿಂದೆ ಬಿದ್ದು ಕಾಡಿದ್ದುಂಟಾ?
ಕಾಲೇಜು ಲೈಫಲ್ಲಿ ಅದೆಲ್ಲ ಇದ್ದಿದ್ದೆ. ಆದರೆ, ಸೀರಿಯಸ್ ಆಗಿ ಆಗಲಿಲ್ಲ ಅಷ್ಟೆ. ನನಗೆ ಹುಡುಗಿಯರಷ್ಟೇ ಹುಡುಗರೂ ಪರಿಚಯ. ಕಾಲೇಜಿನಲ್ಲಿ ನಾನು ಸ್ವಲ್ಪ ಜೋರಾಗಿ ಇದ್ದಿದ್ದರಿಂದ ಯಾವ ಹುಡುಗರಿಗೂ ರ್‍ಯಾಗಿಂಗ್ ಮಾಡಿ ಕಾಡುವ ಧೈರ್ಯ ಬರಲಿಲ್ಲ.

* ಸೆಟ್‌ನಲ್ಲಿ ಮರೆಯಲಾಗದ ಅನುಭವ?
‘ಲೀ’ ಚಿತ್ರದ ರೊಮ್ಯಾಂಟಿಕ್ ಟ್ರಾಕ್ ಶೂಟಿಂಗ್ ಮಾಡಲು ಮಲೇಷ್ಯಾಗೆ ಹೋಗಿದ್ದೆವು. ಈ ವೇಳೆ ನನ್ನ ಕಾಲಿಗೆ ಏಟಾಗಿತ್ತು. ನನ್ನಿಂದಾಗಿ ಶೂಟಿಂಗ್‌ಗೆ ತೊಂದರೆಯಾಗಬಾರದು ಅಂದುಕೊಂಡು, ನೋವನ್ನೂ ಲೆಕ್ಕಿಸದೆ ಶೂಟಿಂಗ್ ಮುಗಿಸಿದೆ. ಆ ಸಂದರ್ಭವನ್ನು ಮರೆಯಲು ಸಾಧ್ಯವೇ ಇಲ್ಲ.

*ಮುಂದಿನ ಪ್ರಾಜೆಕ್ಟ್‌ಗಳು?
ಸದ್ಯದಲ್ಲೇ ತೆಲುಗಿನಲ್ಲಿ ‘ಅದುಗೊ’ ಎಂಬ ಚಿತ್ರ ಬಿಡುಗಡೆಯಾಗಲಿದೆ.  ಸುರೇಶ್ ಪ್ರೊಡಕ್ಷನ್‌ನಡಿ ಈ ಚಿತ್ರ ನಿರ್ಮಾಣವಾಗಿದೆ. ಅಲ್ಲದೆ, ತಮಿಳು ಚಿತ್ರವೊಂದರಲ್ಲಿ ನಟಿಸುವ ಸಂಬಂಧ ಮಾತುಕತೆ ನಡೆಯುತ್ತಿದೆ. ಕನ್ನಡದಲ್ಲಿ ಎರಡು ಮೂರು ಕಥೆಗಳನ್ನು ಕೇಳಿದ್ದೇನೆ. ಇನ್ನೂ ಅಂತಿಮವಾಗಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.