ADVERTISEMENT

ಮಕ್ಕಳಿಗೊಪ್ಪುವ ಧೋತಿ

ಸುಶೀಲಾ ಡೋಣೂರ
Published 14 ನವೆಂಬರ್ 2017, 19:30 IST
Last Updated 14 ನವೆಂಬರ್ 2017, 19:30 IST
ಮಕ್ಕಳಿಗೊಪ್ಪುವ ಧೋತಿ
ಮಕ್ಕಳಿಗೊಪ್ಪುವ ಧೋತಿ   

‘ಮಮ್ಮ ಈ ಫ್ರಾಕ್‌ ನನಗೆ ಬೇಡ, ಡಂಗ್ರೀಸ್ ಕೂಡ ಈಗ ಹಳೇದಾಯ್ತು, ಇಡೀ ದಿನ ಲೆಹೆಂಗಾ ತೊಡುವುದು ತುಸು ಕಷ್ಟ... ಚಳಿಗೆ ಬೆಚ್ಚಗೆನಿಸುವ, ಆದರೆ ಆರಾಮವೂ ಆಗಿರುವ ಸಾದಾಸೀದಾ ಧೋತಿ ಹಾಕು, ಸಾಕು...’ ಐದೂವರೆ ವರ್ಷದ ಮಗಳು ಹೀಗೆ ಹೇಳಿದಾಗ ಅಚ್ಚರಿಪಡುವ ಸರದಿ ಅಮ್ಮಂದು.

ಮಕ್ಕಳ ಫ್ಯಾಷನ್‌ ಎಂದು ಹಗುರವಾಗಿ ಕಾಣುವ ಕಾಲ ಇದಲ್ಲ. ಅಡಿಯಿಂದ ಮುಡಿಯವರೆಗೂ ಅಮ್ಮನನ್ನು ಅನುಕರಣೆ ಮಾಡುತ್ತಾ, ಟೀವಿಯಲ್ಲಿ ಜಾಹೀರಾತುಗಳನ್ನೂ ನೋಡುತ್ತಾ, ಸೆಲಬ್ರಿಟಿಗಳ ಉಡುಗೆ ತೊಡುಗೆ ಮತ್ತು ನಡಿಗೆಯನ್ನು ಗಮನಿಸುತ್ತಾ ತಮ್ಮದೇ ಆದ ಅಭಿರುಚಿ ಬೆಳೆಸಿಕೊಳ್ಳುವ ಇಂದಿನ ಮಕ್ಕಳು ಅಮ್ಮನಿಗಿಂತ ತುಸು ಮೊದಲೇ ಅಪ್‌ಡೇಟ್‌ ಆಗಿರುತ್ತಾರೆ.

ಬೆಳಗಿನ ಜಾಗಿಂಗ್‌, ಸಂಜೆಯ ವಾಕಿಂಗ್‌, ರಾತ್ರಿಯ ಪಾರ್ಟಿ, ರಜೆಯ ಔಟಿಂಗ್‌, ಪಿಕ್‌ನಿಕ್‌, ವಿಶೇಷ ಹಬ್ಬಗಳಿಗೆ ಏನೇನು ತೊಡಬೇಕು ಎಂಬುದೂ ಅವರಿಗೆ ಗೊತ್ತು. ಆದರೆ ಒಂದೊಂದು ಸಂದರ್ಭಕ್ಕೂ ಒಂದೊಂದು ಬಗೆಯ ತೊಡುಗೆಯನ್ನು ಹೊಂದಿಸುವುದು ಪಾಲಕರಿಗೆ ತುಸು ಕಷ್ಟವೆನಿಸಬಹುದು.

ADVERTISEMENT

ಹಾಗಿದ್ದರೆ ಧೋತಿ–ಟಾಪ್‌ ಆಯ್ಕೆ ಮಾಡಿನೋಡಿ. ಪ್ರತಿ ಬಾರಿಯೂ ಒಂದೊಂದು ಬಗೆಯ ಟಾಪ್‌ ಹೊಂದಿಸಿದರೆ ಈ ದಿರಿಸು ಹೊಸದೇ ಎನಿಸುತ್ತದೆ. ಆಯಾ ಸಂದರ್ಭಕ್ಕೆ ತಕ್ಕಂತೆ ಧೋತಿ ಜೊತೆಗೆ ಟಾಪ್‌ ಹೊಂದಿಸಿಕೊಂಡರಾಯಿತು.

ಯಾವುದೇ ಸಂದರ್ಭಗಳಿಗೂ ಹೊಂದಿಕೊಳ್ಳುವ ಗುಣ ಈ ಧೋತಿಗಿದೆ. ಸಮಾರಂಭ, ಹಬ್ಬಗಳಿಗೆ ರೇಷ್ಮೆ ಜರಿ ಅಥವಾ ಅಂಚುಳ್ಳ ಗಾಢ ಬಣ್ಣದ ಧೋತಿಗೆ ಎಂಬ್ರಾಯ್ಡರಿ ಅಥವಾ ಸ್ಟೋನ್‌ ವರ್ಕ್‌ ಇರುವ ಟಾಪ್‌ ಒಪ್ಪುತ್ತದೆ. ರಾತ್ರಿಯೂಟಕ್ಕೆ ಮನೆಯಿಂದಾಚೆ ಹೊರಟಿದ್ದರೆ ಪ್ರಿಂಟೆಡ್‌ ಕಾಟನ್‌ ಧೋತಿ ಜೊತೆಗೆ ಅದಕ್ಕೊಪ್ಪುವ ಟೀಶರ್ಟ್‌ ಹಾಕಿದರೂ ಸಾಕು. ಪ್ರಿಂಟೆಡ್‌ ಧೋತಿ ಮೇಲೆ ಯಾವಾಗಲೂ ತಿಳಿ ಬಣ್ಣದ ಟಾಪ್‌ ಅಥವಾ ಟೀ ಶರ್ಟ್‌ ಆಯ್ಕೆ ಮಾಡಿ. ಮೇಲೊಂದು ಶ್ರಗ್‌, ಶಾಲು ಅಥವಾ ಸ್ಕಾರ್ಫ್‌ ಹಾಕಿಕೊಂಂಡರೆ ಚಳಿಯಿಂದಲೂ ರಕ್ಷಣೆ ಸಿಗುತ್ತದೆ, ಸ್ಟೈಲಿಶ್‌ ನೋಟವೂ ಸಿಗುತ್ತದೆ.

ಶ್ರೀಮಂತ ನೋಟ ನೀಡುವ ಟಾಪ್‌ ಧರಿಸಿದರೆ ಸಾಂಪ್ರದಾಯಿಕವಾಗಿಯೂ, ಟೀಶರ್ಟ್‌ ಹಾಕಿಕೊಂಡರೆ ಆಧುನಿಕ ನೋಟವೂ ನಿಮ್ಮ ಮಗುವಿನದಾಗುತ್ತದೆ. ಎಂಬ್ರಾಯ್ಡರಿ ಅಥವಾ ಸ್ಟೋನ್‌ ವರ್ಕ್‌ ಇರುವ ಟಾಪ್‌ಗಳ ಮೇಲೆ ಶ್ರಗ್‌, ಸ್ಟೋಲ್‌ ಅಥವಾ ಜಾಕೆಟ್‌ ಹೊಂದುವುದಿಲ್ಲ. ಗಂಡು ಮಕ್ಕಳಿಗಾದರೆ ಧೋತಿ ಮೇಲೆ ಲಾಂಗ್‌ ಶರ್ಟ್‌, ನೆಹರೂ ಜಾಕೆಟ್‌ ಹಾಗೂ ಬ್ಲೇಜರ್‌ಗಳನ್ನೂ ಜೋಡಿಸಬಹುದು.

ಆಯ್ಕೆ ಹುಷಾರು...
ಖರೀದಿಸುವಾಗ, ಧೋತಿಯ ಉದ್ದ ಎಷ್ಟಿರಬೇಕು ಎನ್ನುವ ಬಗ್ಗೆ ಗಮನ ನೀಡಿ. ಮಕ್ಕಳು ಬೆಳೆಯುತ್ತವೆ ಎನ್ನುವ ಕಾರಣಕ್ಕೆ ಒಂದಿಂಚು ದೊಡ್ಡ ಬಟ್ಟೆಗಳನ್ನು ಖರೀದಿಸುವ ಅಭ್ಯಾಸ ಹೆಚ್ಚು ಜನರಿಗಿರುತ್ತದೆ. ಆದರೆ ಧೋತಿ ತುಸುವೇ ಉದ್ದವಾದರೂ ಕಾಲಡಿಗೆ, ಪಾದರಕ್ಷೆಯ ಅಡಿಗೆ ಸಿಕ್ಕಿಹಾಕಿಕೊಂಡು ಮಕ್ಕಳಿಗೆ ಮುಜುಗರ ಉಂಟಾಗಬಹುದು. ಕೆಲವೊಮ್ಮೆ ಮಕ್ಕಳು ಬಟ್ಟೆ ಕಾಲಡಿಗೆ ಸಿಲುಕಿ ಬೀಳುವುದೂ ಇದೆ. ಹೀಗಾಗಿ ಧೋತಿ ಆ್ಯಂಕಲ್‌ ಲೆನ್ತ್‌ ಇರುವಂತೆ ಎಚ್ಚರ ವಹಿಸಿ. ಹಾಗೆಯೇ ಅದು ಮೊಣಕಾಲಿಗಿಂತ ಮೇಲಿದ್ದರೂ ಚಂದ ಕಾಣದು.

ಸಾಮಾನ್ಯವಾಗಿ ಮಕ್ಕಳಿಗೆ ಪೊಲ್ಕಾ ಡಾಟ್‌ ಇರುವ ಪ್ರಿಂಟೆಡ್‌ ಧೋತಿ ಹೆಚ್ಚು ಒಪ್ಪುತ್ತದೆ. ಚೌಕಳಿ ವಿನ್ಯಾಸದ ಧೋತಿ ಬೇಕೆಂದರೆ ಲಂಬ ಪಟ್ಟಿಗಳಿರುವುದನ್ನೇ ಆಯ್ದುಕೊಳ್ಳುವುದು ಸೂಕ್ತ.

ಅಲ್ಲದೆ, ಧೋತಿ ಜೊತೆಗೆ ದೊಗಲೆಯಾದ, ಲೇಯರ್‌ಗಳಿರುವ, ಜೋಲಾಡುವ ಟಾಪ್ ಬೇಡ. ಧೋತಿ ದೊಗಲೆಯಾಗಿರುವುದರಿಂದ ಟಾಪ್‌ ಮೈಕಟ್ಟಿಗೆ ಹೊಂದುವಂತೆ (ಅಂಟಿಕೊಂಡಂತೆ ಇದ್ದರೂ ಪರವಾಗಿಲ್ಲ) ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.