ADVERTISEMENT

ಮತ್ತೆ ಬಂದಳು ಶಕೀರಾ

​ಪ್ರಜಾವಾಣಿ ವಾರ್ತೆ
Published 20 ಜೂನ್ 2017, 19:30 IST
Last Updated 20 ಜೂನ್ 2017, 19:30 IST
ಮತ್ತೆ ಬಂದಳು ಶಕೀರಾ
ಮತ್ತೆ ಬಂದಳು ಶಕೀರಾ   

ಭಾರತೀಯರಿಗೆ ಶಕೀರಾ ಎಂದಾಕ್ಷಣ ನೆನಪಾಗುವುದು ‘ವಕಾ ವಕಾ ಹಾಡು...’ 2010ರ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗಾಗಿ ಶಕೀರಾ ಹಾಡಿದ್ದ ಈ ಹಾಡು, ಕೈಮುಗಿಯುತ್ತಾ ಕುಣಿದಿದ್ದ ಪರಿಗೆ ವಿಶ್ವವೇ ಫಿದಾ ಆಗಿತ್ತು. ನಮ್ಮ ದೇಶದ ಗಲ್ಲಿಗಳಲ್ಲೂ ಮಕ್ಕಳು– ದೊಡ್ಡವರೆನ್ನದೇ ಎಲ್ಲರೂ ‘ವಕಾ ವಕಾ...’ ಎಂದು ಮೈನುಲಿಯುತ್ತಾ, ಕೈ ಆಡಿಸುತ್ತಿದ್ದರು.

ಶಕೀರಾ ಹೆಸರು ಕಿವಿಗೆ ಬೀಳುತ್ತಿದ್ದಂತೆ ತುಂಡುಡುಗೆ ತೊಟ್ಟ, ಹೊಂಬಣ್ಣದ ಕೂದಲಿನ, ಬಳುಕುವ ಸೊಂಟದ ಚೆಲುವೆಯೊಬ್ಬಳ ಚಿತ್ರ ಕಣ್ಣ ಮುಂದೆ ತೇಲಿ ಹೋಗುತ್ತದೆ. ಆದರೆ, ಕೇವಲ ಶರೀರ ಸೌಂದರ್ಯವಷ್ಟೇ ಶಕೀರಾ ಅಲ್ಲವಲ್ಲ. ಅವರು ಅದಕ್ಕೂ ಮಿಗಿಲು.

ಪಾಪ್ ಸಂಗೀತ ಲೋಕದಲ್ಲಿ ಹೊಸ ಪ್ರಯೋಗಗಳನ್ನು ನಡೆಸಿ, ಸಂಗೀತದ ಮೂಲಕ  ಜಗತ್ಪ್ರಸಿದ್ಧಿ ಪಡೆದ ಶಕೀರಾ. ಈಚೆಗಷ್ಟೇ ತನ್ನ ಹೊಸ ಮ್ಯೂಸಿಕ್ ಆಲ್ಬಂ ‘ಎಲ್ ಡೊರಡೊ’ ಬಿಡುಗಡೆ ಮಾಡಿ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದ್ದಾರೆ.

ADVERTISEMENT

ಈ ಆಲ್ಬಂ ಬಿಡುಗಡೆಗೂ ಮುನ್ನ ಅವರು ಮಾನಸಿಕವಾಗಿ ತಳಮಳಕ್ಕೆ ಒಳಗಾಗಿದ್ದರಂತೆ. ಸದ್ಯದ ಮಟ್ಟಿಗೆ ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಇದೇ ಹಾಟ್‌ ನ್ಯೂಸ್.

‘ಎರಡು ವರ್ಷ ಮಕ್ಕಳ ಬಗ್ಗೆ ಗಮನ ಕೊಟ್ಟಿದ್ದೆ. ನನ್ನ ತಾಕತ್ತಿನ ಬಗ್ಗೆ ನನಗೇ ನಂಬಿಕೆ ಕಡಿಮೆಯಾಗುತ್ತಿತ್ತು. ಮತ್ತೆ ನಾನು ಒಳ್ಳೆಯ ಸಂಗೀತ ನೀಡಲು ಸಾಧ್ಯವೇ ಇಲ್ಲ ಅನ್ನಿಸುವಂಥ ಮನಸ್ಥಿತಿ ನಿರ್ಮಾಣವಾಗಿತ್ತು’ ಎಂದು ಸ್ವತಃ ಶಕೀರಾ  ಹೇಳಿಕೊಂಡಿದ್ದರು.

ಕೊಲಂಬಿಯಾದ ಶಕೀರಾ 90ರ ದಶಕದಲ್ಲಿ ಲ್ಯಾಟಿನ್ ಅಮೆರಿಕದಲ್ಲಿ ಪಾಪ್ ಗಾಯಕಿಯಾಗಿ ಪ್ರವರ್ಧಮಾನಕ್ಕೆ ಬಂದ ಪ್ರತಿಭಾವಂತೆ. 2001ರಲ್ಲಿ ‘ಲಾಂಡ್ರಿ ಸರ್ವೀಸ್’ ಆಲ್ಬಂ ಮೂಲಕ ಜಗತ್ತಿನ ಮೂಲೆಮೂಲೆಯಲ್ಲಿದ್ದ ಸಂಗೀತಪ್ರಿಯರನ್ನು ತಲುಪಿದ್ದರು.

ಎದ್ದು ಕಾಣುವ ಸೌಂದರ್ಯದ ಜೊತೆಗೆ ಮಾದಕ ಕಂಠವೂ ಪಡ್ಡೆ ಹುಡುಗರ ನಿದ್ದೆಗೆಡಿಸಿತ್ತು. ಅವರ ಹಾಡು, ಕುಣಿತ, ಹಾವ, ಭಾವಕ್ಕೆ ಜನರು ಹುಚ್ಚೆದ್ದು ಕುಣಿಯುತ್ತಿದ್ದರು. ಅಭಿಮಾನಿಗಳ ಸಂಖ್ಯೆ ಹೆಚ್ಚಿದಂತೆ ಗಳಿಕೆಯೂ ಏರುತ್ತಿತ್ತು.

2014ರಲ್ಲಿ ‘ಶಕೀರಾ’ ಆಲ್ಬಂನ ನಂತರ ಇದ್ದಕ್ಕಿದ್ದಂತೆ ಆಕೆ ಬಣ್ಣದ ಲೋಕದಿಂದ ವಿಮುಖರಾದರು. ತಾಯ್ತನ, ಮಕ್ಕಳು, ಸಂಸಾರ ಎಂದೆಲ್ಲಾ ಬ್ಯುಸಿಯಾದರು.

‘ನನ್ನೊಳಗೆ ಗಾಯಕಿ, ತಾಯಿ, ಸಂಗೀತದ ಸೃಷ್ಟಿಕರ್ತೆ ಎಲ್ಲರೂ ಇದ್ದರು. ಅವರೆಲ್ಲರಿಗೂ ನಾನು ಆದ್ಯತೆ ನೀಡಲೇಬೇಕಿತ್ತು. ಎಷ್ಟೊಂದು ಶಕೀರಾಗಳು ನನ್ನೊಳಗೆ ಹೊಡೆದಾಡುತ್ತಿದ್ದರು. ಅದೊಂದು ರೀತಿಯ ಪ್ರಕ್ಷುಬ್ಧ ಪರಿಸ್ಥಿತಿ’ ಎಂದು ಶಕೀರಾ ಆ ಎರಡು ವರ್ಷಗಳ ತಳಮಳವನ್ನು ಭಾಷೆಯಲ್ಲಿ ಹಿಡಿದಿಡಲು ಯತ್ನಿಸುತ್ತಾರೆ.

ಆದರೆ, ಅದೊಂದು ದಿನ ಶಕೀರಾಳ ಬದುಕಿನಲ್ಲಿ ತಿರುವು ಬಂದೇ ಬಿಟ್ಟಿತು. 2016ರಲ್ಲಿ ಕೊಲಂಬಿಯಾದ ಗೀತ ರಚನೆಕಾರ ಕಾರ್ಲೊಸ್ ವೈವ್ಸ್‌  ಕೊಲಂಬಿಯಾದ ಸಾಂಪ್ರದಾಯಿಕ ಹಾಡುಗಳ ಕುರಿತು ಆಲ್ಬಂ ಹೊರತರುವ ಸಿದ್ಧತೆಯಲ್ಲಿದ್ದರು. ಡೆಮೊ ಆಲ್ಬಂ ಪ್ರತಿಗಳನ್ನು ಶಕೀರಾಗೂ ಕಳಿಸಿದ್ದರು.

ಆ ಹಾಡುಗಳನ್ನು ಕೇಳಿದ ಶಕೀರಾ ಅದರಲ್ಲಿನ ಓರೆಕೋರೆಗಳನ್ನು ತೀಡಿತಿದ್ದುತ್ತಾ, ತಮಗೇ ಗೊತ್ತಿಲ್ಲದಂತೆ ಸಂಗೀತ ಲೋಕಕ್ಕೆ ಮರಳಿ ಬಂದರು. ‘ಆಲ್ಬಂ ಮಾಡುವುದು ದೊಡ್ಡದಲ್ಲ. ಇನ್ನು ಮುಂದೆ ಒಂದು ಸಲಕ್ಕೆ ಒಂದೇ ಹಾಡು ಹಾಡುವೆ’ ಎಂಬ ನಿರ್ಧಾರ ಶಕೀರಾಗೆ ಮತ್ತೆ ಆತ್ಮವಿಶ್ವಾಸ ತುಂಬಿಕೊಟ್ಟಿತಂತೆ.

ಮಾತೃಭಾಷೆ ಸ್ಪಾನಿಷ್‌ ಮೂಲಕ ಮತ್ತೊಮ್ಮೆ ಸಂಗೀತ ಲೋಕ ಪ್ರವೇಶಿಸಿದ ಶಕೀರಾ, ತಾಯ್ನೆಲದ ಸಂಗೀತ ಮತ್ತು ಜನರ ಪ್ರೀತಿಯನ್ನು ಕಂಡುಕೊಂಡರು.

‘ಎಲ್ ಡೊರಡೊ’  ಆಲ್ಬಂ ಮೂಲಕ ಬಾಲ್ಯದಲ್ಲಿ ಕಣ್ತುಂಬಿಕೊಂಡಿದ್ದ ಕೊಲಂಬಿಯಾವನ್ನು, ಅಲ್ಲಿನ ಜನಜೀವನವನ್ನು ಮತ್ತೊಮ್ಮೆ ಅನುಭವಿಸಿದೆ’ ಎಂದು ಶಕೀರಾ ಭಾವುಕವಾಗಿ ನುಡಿಯುತ್ತಾರೆ.
ಜಾನ್‌ ಪರ್ಲೆಸ್‌ (ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.