ADVERTISEMENT

ಮಾತು ಅಡುಗೆ ಕೆಡಿಸಬಾರದು

ಕಿರುಮಾತು

ಪ್ರಜಾವಾಣಿ ವಿಶೇಷ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ಮಾತು ಅಡುಗೆ ಕೆಡಿಸಬಾರದು
ಮಾತು ಅಡುಗೆ ಕೆಡಿಸಬಾರದು   

ಹೋಟೆಲ್ ಒಂದರಲ್ಲಿ  ಪಾತ್ರೆ ತೊಳೆದ ಆದರ್ಶ ತಟಪತಿ ಅವರು ಇಂದು ಬಹು ಬೇಡಿಕೆಯ ಶೆಫ್‌. ಕನ್ನಡ ವಾಹಿನಿಗಳಲ್ಲಿ ತಮ್ಮ ವಿಶಿಷ್ಟ ಅಡುಗೆಗಳಿಂದ ಪರಿಚಿತರು. 12 ವರ್ಷ ವಿದೇಶಗಳಲ್ಲಿ ಓದಿರುವ ಇವರು ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಸೆಲೆಬ್ರಿಟಿ ಶೆಫ್‌ ಹಾಗೂ ನಿರೂಪಕರಾಗಿ 10 ವರ್ಷದ ಅನುಭವ.

ಕಸ್ತೂರಿ ವಾಹಿನಿಯಲ್ಲಿ ಇವರು ನಡೆಸಿಕೊಡುತ್ತಿರುವ ‘ಭಾನುವಾರದ ಬಾಡೂಟ’ ಹೆಸರು ತಂದು ಕೊಟ್ಟಿದೆ. ‘ರಂಗೇ ಗೌಡ್ರು’ ಪಾತ್ರದ ಮೂಲಕ ಇವರು ಮಾಡುವ ಹೊಸರುಚಿ ವೀಕ್ಷಕರಿಗೆ ಅಚ್ಚುಮೆಚ್ಚು. ಗೌಡರು ಇಲ್ಲಿ ತಮ್ಮ ಜೀವನದ ಏಳುಬೀಳು, ಸಾಧನೆ ಕುರಿತು ಇಲ್ಲಿ ಮಾತನಾಡಿದ್ದಾರೆ.  

* ಪಾತ್ರೆ ತೊಳೆಯುತ್ತಿದ್ದ ಹುಡುಗನಾಗಿದ್ದ ನೀವು ವಿದೇಶಗಳಲ್ಲಿ ಓದಿ ಕೆಲಸ ಮಾಡಿದ ಬಗ್ಗೆ ಹೇಳಿ?
1992ರಲ್ಲಿ ನಾನು ಈ ವೃತ್ತಿ ಆರಂಭಿಸಿದೆ. ಪಿಯುಸಿ ನಂತರ  ನನ್ನ ಸ್ನೇಹಿತನ ಸಂಬಂಧಿಯೊಬ್ಬರ ರಾಜಸ್ತಾನದ ಜೋಧ್‌ಪುರದಲ್ಲಿ ಐಟಿಸಿ ವೆಲ್‌ಕಮ್‌ ಗ್ರೂಪ್‌ನ ಹೋಟೆಲ್‌ನಲ್ಲಿ ಶೆಫ್‌ ಆಗಿದ್ದರು.  ಅವರು ನನ್ನನ್ನು ತರಬೇತಿಗಾಗಿ ಆರು ತಿಂಗಳು ಸೇರಿಸಿಕೊಂಡರು.  ಆಗ ₹350 ಸಂಬಳ. ಆಗ  ಮದುವೆ ಮತ್ತು ಇತರ ಸಮಾರಂಭಗಳಿಗೆ ಮಾಡುತ್ತಿದ್ದ ಅಡುಗೆಯ ಪಾತ್ರೆ ತೊಳೆಯುತ್ತಿದ್ದೆ.  ಆ ಮೇಲೆ ಪಾತ್ರೆ ತೊಳೆಯುವ ಜಾಗದಲ್ಲಿ ತಂದೂರಿ ಮಾಡುತ್ತಿದ್ದರು.

ನನಗೆ ಇದನ್ನು ಹೇಗೆ ಮಾಡುತ್ತಾರೆ? ಏನು ಮಾಡುತ್ತಾರೆ ಎಂಬ ಕುತೂಹಲ. ಅಡುಗೆ ಕಲಿಯಲು ನನಗೆ ಭಾರಿ ಉತ್ಸಾಹ ಇತ್ತು. ಒಂದೂವರೆ ವರ್ಷ ಈ ಕೆಲಸ ಮಾಡಿದೆ. ಅನಂತರ ಒಂದು ಸಂದರ್ಶನ ಬಂತು. ಅಡುಗೆಯವರಿಗೆ ಸಹಾಯಕನಾಗಿ ಬೆಹರಿನ್‌ನ ಶೆರಟಾನ್‌ ಪ್ರಾಪರ್ಟಿಯಲ್ಲಿ  ಸೇರಿಕೊಂಡೆ.  ಅಲ್ಲಿ ಕೆಲಸ ಕಲಿಯಲು ಅವಕಾಶ ಇತ್ತು.  ಒಂದು  ದಿನ ಅಲ್ಲಿನ ಬ್ಯಾಂಕ್ವೆಟ್‌ ಹಾಲ್‌ನಲ್ಲಿ  ಇದ್ದಾಗ  ಒಬ್ಬ ವ್ಯಕ್ತಿ ಬಂದು ನನ್ನ ಬಗ್ಗೆ ಕೇಳಿದರು.  ಅವರು ‘ಎಂಬೆಸಿ ಕಚೇರಿಗೆ ಮೂರು ಭಾವಚಿತ್ರಗಳ ಜೊತೆ ಬಾ’ ಎಂದು ಸೂಚಿಸಿದರು. 

ಅದು ಜರ್ಮನಿ ಎಂಬೆಸಿ. ಆಗ ಅವರು ‘ನೀವು ಜರ್ಮಿನಿ ಚಾನ್ಸಲರ್‌ ಅವರ ರಾಯಲ್‌ ಕಿಚನ್‌ಗೆ ಆಯ್ಕೆ ಆಗಿದ್ದೀರಿ ಎಂದರು’. ಆಗ ಕಾಮನ್ವೆಲ್ತ್‌ ದೇಶಗಳಿಂದ ಐವರು ಶೆಫ್‌ಗಳು ಆಯ್ಕೆಯಾಗಿದ್ದರು. ಅದರಲ್ಲಿ ನಾನೂ ಕೂಡ ಒಬ್ಬ. ಅದು ನನ್ನ ಜೀವನದ ತಿರುವಿನ ಪಾಯಿಂಟ್‌. ಆನಂತರ  ನಾಲ್ಕೂವರೆ ವರ್ಷ ಜರ್ಮನಿಗೆ ಹೋಗಿ ‘ರಾಯಲ್‌ಕಿಚನ್‌’ನಲ್ಲಿ ಕೆಲಸ ಮಾಡಿದೆ.  ಅಲ್ಲಿ ಕಾಂಟಿನೆಂಟನ್‌, ಇಟಾಲಿಯನ್ ಫುಡ್‌, ಅಮೆರಿಕನ್‌ ಫುಡ್‌ ಮಾಡೋದು ಕಲಿತೆ.

ಅಲ್ಲಿನ ವಿದೇಶಾಂಗ ಸಚಿವಾಲಯ ದ ಕ್ಲೇರಾ ಎಂಬುವರು ಕರೆದು ‘ನಿನಗೆ ಅಡುಗೆ ಮಾಡುವ ಎಲ್ಲ ಕಲೆ ಗೊತ್ತಿದೆ. ಆದರೆ ಯಾವುದೇ ಶಿಕ್ಷಣ ಇಲ್ಲ. ಆದ್ದರಿಂದ  ಶಿಕ್ಷಣ ಪಡೆಯಲು ಎಲ್ಲ ವ್ಯವಸ್ಥೆ ಮಾಡುವುದಾಗಿ’ ತಿಳಿಸಿದರು. ಹಣ ಕೊಟ್ಟ ಓದಿಸುತ್ತೇನೆ. ಲಂಡನ್‌ಗೆ ಹೋಗು’ ಎಂದರು. ಲಂಡನ್‌ಗೆ ಹೋಗಿ  ‘ಡಿಪ್ಲೊಮಾ ಇನ್ ಕಲನರಿ ಆರ್ಟ್ಸ್‌’ ಅನ್ನು ಮೂರು ವರ್ಷ ಮಾಡಿದೆ.  ಅಲ್ಲಿಗೆ ನನಗೆ ಅನುಭವ ಮತ್ತು ಶಿಕ್ಷಣ ಎರಡೂ ಕೈಗೆ ಬಂದಿದ್ದವು. ಆನಂತರ ಇಟಲಿಗೆ ಹೋದೆ. ಕೋಸ್ಟಾಕ್ರೂಜ್‌ ಲೈನ್ಸ್‌ ಎಂಬ ಬೃಹತ್‌ ಹಡಗಿನಲ್ಲಿ ಭಾರತದ ಮೊದಲ ಮುಖ್ಯ ಬಾಣಸಿಗನಾಗಿ  ಆಯ್ಕೆಯಾದೆ.

ಅದರಲ್ಲಿ 3500 ಪ್ರಯಾಣಿಕರು ಇರುತ್ತಿದ್ದರು. ಇದರಲ್ಲಿ ಐದು ವರ್ಷ ಕೆಲಸ ಮಾಡಿದೆ. ಅದಾದ ನಂತರ ಲಂಡನ್‌ನ ಚಾನಲ್‌ ಐಲ್ಯಾಂಡ್‌ನ  ‘ಹೋಟೆಲ್‌ ದಿ ಫ್ರಾನ್ಸ್’  ಸೇರಿಕೊಂಡೆ. ಅದು ಸೆವೆನ್‌ ಸ್ಟಾರ್ ಡಿಲಕ್ಸ್ ಹೋಟೆಲ್‌. ಅಲ್ಲಿ ಮೂರು ರೆಸ್ಟೋರೆಂಟ್‌ಗೆ  ಮುಖ್ಯಸ್ಥನಾಗಿ ಮೂರು ವರ್ಷ ಕೆಲಸ ಮಾಡಿದೆ. ನಂತರ ಶೆವರಾನ್‌ ಕಂಪೆನಿ ಸೇರಿಕೊಂಡೆ. ಅದರ ಮೂಲ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌. ಅಲ್ಲಿ ಕೆಲಸ ಮಾಡಿದ ನಂತರ ಭಾರತಕ್ಕೆ ಬಂದೆ.

* ಆನಂತರದ ನಿಮ್ಮ ವೃತ್ತಿಜೀವನ ಎಲ್ಲಿ?
ಭಾರತಕ್ಕೆ ಬರುವ ಮೊದಲು ಅನುಭವ ಹಾಗೂ ಶಿಕ್ಷಣ ಎಲ್ಲ ಇತ್ತು. ನನ್ನದೇ ಏನಾದರೂ ಒಂದು ಮಾಡಿ ತೋರಿಸಬೇಕು ಎಂದು ಯೋಚನೆ ಮಾಡಿದೆ. ಮೊದಲಿಗೆ ಚಂದನ ಟಿವಿಗೆ ಹೋಗಿ ಎರಡು ಎಪಿಸೋಡ್‌ ಮಾಡಲು ಅವಕಾಶ ಕೇಳಿದೆ. ಇದು ಮಧುಮೇಹ ಮತ್ತು ಬೊಜ್ಜಿಗೆ ಸಂಬಂಧಿಸಿದ ಅಡುಗೆಯಾಗಿತ್ತು. ಅದು ತುಂಬಾ ಹಿಟ್‌ ಆಯಿತು. ಆನಂತರ ಜಿ ಕನ್ನಡ ವಾಹಿನಿಯವರು ಕರೆಸಿ ಮೊದಲಿಗೆ ಆಯುರ್ವೇದಿಕ್‌ ಅಡುಗೆ ‘ರುಚಿ ಅಭಿರುಚಿ’ ಅನ್ನೊ ಕಾರ್ಯಕ್ರಮಕ್ಕೆ ಅವಕಾಶ ನೀಡಿದರು. ಇದು 35 ಕಂತು  ಪ್ರಸಾರವಾಯ್ತು.

ಇದಾದ ನಂತರ ನನಗೆ ಕಸ್ತೂರಿ ವಾಹಿನಿ ಆಹ್ವಾನಿಸಿತು.  ಅಲ್ಲಿ ನಾನು ‘ಭಾನುವಾರದ ಬಾಡೂಟ’ ಆರಂಭಿಸಿದೆ. ಅದನ್ನು 2008 ಫೆಬ್ರುವರಿಯಲ್ಲಿ ಆರಂಭಿಸಿದೆ.  ಈಗ ಎಂಟು ವರ್ಷ ಆಯಿತು. ಈವರೆಗೆ 700 ಎಪಿಸೋಡ್‌ ಪ್ರಸಾರವಾಗಿದೆ. ಈ ಕಾರ್ಯಕ್ರಮವನ್ನು ‘ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌’ಗೆ ನೋಂದಾಯಿಸಿದ್ದೇವೆ. ಉದಯ ವಾಹಿನಿಯಲ್ಲಿ ‘ಕಿಚನ್‌ ತಾರೆ’ ಪ್ರಸಾರವಾಯಿತು. ಇದು 60 ಕಂತು ಬಂತು. ಅದಾದ ನಂತರ ‘ಬಪ್ಪರೆ ಭೋಜನ’ 130 ಕಂತು ಮಾಡಿದೆ.  ಇದಕ್ಕೂ ಮೊದಲು ಸುವರ್ಣ ವಾಹಿನಿಯಲ್ಲಿ ‘ಬೊಂಬಾಟ್‌ ಭೋಜನ’  ಎರಡನೇ ಬಾರಿ ನಡೆಸಿಕೊಟ್ಟೆ.

* ಎಲ್ಲ ಶೋಗಳಲ್ಲಿ ವಿವಿಧ ಬಗೆಯ  ಅಡುಗೆಯನ್ನೇ ಮಾಡಿದ್ದೀರಾ?
ಹೌದು, ಎಲ್ಲವೂ ಹೊಸ ಪದಾರ್ಥಗಳು. ಎಂಟು ವರ್ಷದ ಭಾನುವಾರದ ಬಾಡೂಟದಲ್ಲಿ ಯಾವುದೇ ಡಿಶ್‌ ಅನ್ನು ಪುನರಾವರ್ತನೆ ಮಾಡಿಲ್ಲ. ನಾನು ನನ್ನನ್ನೇ ಹೊಸ ಡಿಶ್‌ಗಳನ್ನು ಕಂಡುಹಿಡಿದು ಮಾಡುತ್ತೇನೆ.

* ನಿಮ್ ಡಿಶ್‌ಗಳು ಹೆಚ್ಚು ಜನಪ್ರಿಯವಾಗಲು ಕಾರಣ ಏನು?
ನನ್ನ ಅಡುಗೆ ಸರಳವಾಗಿರುತ್ತದೆ. ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ಮಾಡಬಹುದು.

* ಯೂಟ್ಯೂಬ್‌ನಲ್ಲಿ ನಿಮ್ಮದೊಂದು ಚಾನಲ್‌ ಇದೆ. ಆ ಬಗ್ಗೆ ಹೇಳಿ.
2014 ರ ಜುಲೈನಲ್ಲಿ ನಾನು ‘Rasoi Smart’ ಅನ್ನೊ ಹೆಸರಿನ ಚಾನಲ್‌ ಆರಂಭಿಸಿದೆ. ಕೇವಲ ಒಂಟು ವರ್ಷ ಎಂಟು ತಿಂಗಳಲ್ಲಿ ಇದನ್ನು 76 ಲಕ್ಷ ವೀಕ್ಷಕರು ನೋಡಿದರು.  ಇದಕ್ಕೆ ಈಗ 36 ಸಾವಿರ ಚಂದಾದಾರರಿದ್ದಾರೆ. ಇದೀಗ ಯುಟ್ಯೂಬ್‌ ನನಗೆ ₹45 ಸಾವಿರ ಹಣ  ನೀಡುತ್ತಿದೆ. ಮೊದಲಿಗೆ ಆರು ವಿಡಿಯೊ ರೆಸಿಪಿ ಹಾಕಿದ್ದೆ. ಆಗ 30 ಜನ ವೀಕ್ಷಕರಿದ್ದರು. ನನ್ನ ಅಡುಗೆ ಕಾರ್ಯಕ್ರಮಕ್ಕಿರುವಷ್ಟು ವೀಕ್ಷಕರು ಯಾವುದಕ್ಕೂ ಇಲ್ಲ.

* ವಿದೇಶದಲ್ಲಿ ಓದಿ ಅಡುಗೆ ಕಲ್ತು ಬಂದವರು. ನಮ್ಮೂರಿನ ಅಡುಗೆ ಹೇಗೆ ಬಂತು?
ನಾನು ಬೆಹರಿನ್‌ನಲ್ಲಿದ್ದಾಗ ಭಾರತದ ಅಡುಗೆ ಕಲಿತಿದ್ದೆ. ಅಲ್ಲಿ  ಭಾರತದ ಶೆಫ್‌ಗಳಿದ್ದರು. ಅಮೇಲೆ ನನ್ನ ಅಮ್ಮ ಹೇಳಿಕೊಟ್ಟರು.  ಕೆಲವನ್ನು ನಾನೇ ಆಸಕ್ತಿ ವಹಿಸಿ ಕಲಿತುಕೊಂಡೆ.

* ವಿದೇಶದಲ್ಲಿ ಉಳಿಯದೇ ಭಾರತಕ್ಕೆ ಬರಲು ಯಾಕೆ ಮನಸ್ಸು ಮಾಡಿದಿರಿ?
ನನಗೆ ಯಾವತ್ತೂ ವಿದೇಶದಲ್ಲೇ ನೆಲೆ ಕಂಡುಕೊಳ್ಳಬೇಕು ಎಂದು ಅನಿಸಲಿಲ್ಲ. ನನ್ನ  ಪ್ರತಿಭೆ ಈ ದೇಶದಲ್ಲೇ ತೋರಿಸಬೇಕು ಎಂಬ ಆಸೆ ಇತ್ತು. ಈಗ ನೋಡಿ ಭಾರತದಲ್ಲಿ ಇದ್ದೇ ಡಾಲರ್‌ಗಳಲ್ಲಿ ಪಡೆಯುತ್ತಿದ್ದೇನೆ.

* ಇಷ್ಟು ಅಡುಗೆ ಕಾರ್ಯಕ್ರಮಗಳಲ್ಲಿ ಹೆಚ್ಚು ಇಷ್ಟವಾಗೋದು?
ಕಸ್ತೂರಿ ವಾಹಿನಿಯ ಭಾನುವಾರದ ಬಾಡೂಟ. ಈ ವಾಹಿನಿಯ ಬೆಂಬಲವೇ ನನ್ನ ಯಶಸ್ವಿಗೆ ಕಾರಣ. ಅದಕ್ಕೆ ಟಿಆರ್‌ಪಿ ಇನ್ನೂ ಹಾಗೆ ಇದೆ. ಅದು ಬಿಟ್ಟರೆ ಉದಯ ವಾಹಿನಿ ಸ್ವಾತಂತ್ರ್ಯ ನೀಡಿದೆ.

* ಹೆಚ್ಚು ಪ್ರಯೋಗ ಮಾಡಲು ಯಾವುದು ಸೂಕ್ತ?
ಮಾಂಸಾಹಾರಕ್ಕೆ ಹೆಚ್ಚಿನ ಪ್ರತಿಕ್ರಿಯೆ ಇದೆ. ಇದಕ್ಕೆ ವಿಶ್ವದ ವೀಕ್ಷಕರು ಇದ್ದಾರೆ. ನನ್ನ ಅಡುಗೆ ನೋಡಿ ಪ್ರಯೋಗ ಮಾಡಿ ನನ್ನೊಂದಿಗೆ ಹಂಚಿಕೊಳ್ತಾರೆ.

* ಆದರ್ಶ್‌ ತಟಪತಿ ರಂಗೇಗೌಡ ಆದದ್ದು ಹೇಗೆ?
ಮಾಂಸಾಹಾರ ಕಾರ್ಯಕ್ರಮ ಮಾಡಲು ಕಸ್ತೂರಿ ವಾಹಿನಿ ಅವಕಾಶ ನೀಡಲು ಮುಂದಾದಾಗ ನನ್ನ ಗೆಳೆಯರು  ಬಾಡೂಟ ಅಂತ ಹೆಸರಿಡಲು ಸೂಚಿಸಿದವರು. ಅದು ಭಾನುವಾರ ಮಾತ್ರ ಪ್ರಸಾರವಾಗ್ತಾ ಇದ್ದ ಕಾರಣ ‘ಭಾನುವಾರದ ಬಾಡೂಟ‘ ಎಂದು ಹೆಸರಿಟ್ಟರು. ಬಾಡೂಟ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚು ಜನಪ್ರಿಯ.  ಗೌಡರು ಹೆಚ್ಚು ಇಷ್ಟಪಡುವ ಕಾರಣ ಒಂದು ಪಾತ್ರ ಕೊಡೋಣ ಎಂದು ನಿರ್ಧರಿಸಿ ಆದರ್ಶ್‌ ತಟಪತಿ ಬದಲು ರಂಗೇಗೌಡ ಅಂತ ಹೆಸರು ಕೊಟ್ಟರು. ಕಸ್ತೂರಿ ವಾಹಿನಿಯಲ್ಲಿ ಬಾಲಾಜಿ ಅನ್ನುವರು ಇದ್ದರು. ಅವರೇ ಇದನ್ನು ಶುರು ಮಾಡಿದ್ದು.

* ಅಡುಗೆ ಕಾರ್ಯಕ್ರಮದಲ್ಲಿ ವಿವರಣೆ ನೀಡುವುದು ಎಷ್ಟು ಮುಖ್ಯ?
ವೀಕ್ಷಕರಿಗೆ ಸರಿಯಾಗಿ ತಿಳಿಯುವಂತೆ  ಹೇಳಬೇಕು. ಇದು ಸೌಂದರ್ಯ ಪ್ರದರ್ಶನಕ್ಕೆ ವೇದಿಕೆ  ಆಗಬಾರದು. ಮಾತು ಅಡುಗೆಯನ್ನು ಕೆಡಿಸಬಾರದು. ಡಿಶ್‌ಗಳ ಬಗ್ಗೆ ಸರಿಯಾದ ವಿವರಣೆ ನೀಡಿದರೆ ನೋಡುವವರೂ ತಿಳಿದುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.