ADVERTISEMENT

‘ಮೂತ್ರ ಮಾಡಿದ್ದೇ ಗೊತ್ತಾಗ್ಲಿಲ್ಲಮ್ಮ...’

ರೋಹಿಣಿ ಮುಂಡಾಜೆ
Published 13 ನವೆಂಬರ್ 2017, 19:30 IST
Last Updated 13 ನವೆಂಬರ್ 2017, 19:30 IST
‘ಮೂತ್ರ ಮಾಡಿದ್ದೇ ಗೊತ್ತಾಗ್ಲಿಲ್ಲಮ್ಮ...’
‘ಮೂತ್ರ ಮಾಡಿದ್ದೇ ಗೊತ್ತಾಗ್ಲಿಲ್ಲಮ್ಮ...’   

‘ಅಮ್ಮಾ ತುಂಬಾ ಸುಸ್ತಾಗ್ತಿದೆ. ಆಟವಾಡೋಕೆ ಹೋಗಲ್ಲ ಮಲ್ಕೋತೀನಿ ಪ್ಲೀಸ್‌’
‘ಅಮ್ಮ ಎತ್ತಿಕೋ, ನಡೆಯಕ್ಕಾಗ್ತಿಲ್ಲ’
‘ಹಾಸಿಗೆಯಲ್ಲಿ ಮೂತ್ರ ಮಾಡಿದ್ದೇ ಗೊತ್ತಾಗ್ಲಿಲ್ಲ, ಒಮ್ಮೆ ಬಾತ್‌ರೂಮ್‌ಗೆ ಹೋಗಿ ಬಂದು ಮಲ್ಕೊಂಡಿದ್ದೆ. ಮತ್ತೆ ಹೇಗೆ ಬಂತೋ ಗೊತ್ತಿಲ್ಲ’
‘ಎಷ್ಟು ನೀರು ಕುಡಿದರೂ ಸಾಕಾಗ್ತಿಲ್ಲ. ತುಂಬಾ ದಾಹ ಆಗ್ತಿದೆ. ನಾಳೆಯಿಂದ ಶಾಲೆಗೆ ನೀರು ತಗೊಂಡು ಹೋಗ್ತೀನಿ’ – ಮಕ್ಕಳು ಹೀಗೆ ದೂರಿಕೊಂಡರೆ ಹೆತ್ತವರಿಗೆ ಯಾಕೆ ಏನು ಎಂದು ಗೊತ್ತಾಗದೇ ಇರಬಹುದು. ಸುಸ್ತು ಎಂದಾಗ, ಶಾಲೆಯಲ್ಲಿ ತುಂಬಾ ಆಟವಾಡಿರಬೇಕು ಎಂದು ಭಾವಿಸುವುದು ಸಹಜ. ‘ಇಷ್ಟು ದೊಡ್ಡ ಮಕ್ಕಳನ್ನು ಎತ್ತಿಕೊಂಡು ನಡೀತಾರಾ ಉದಾಸೀನ ನೋಡು’ ಎಂದು ಕೋಪಗೊಳ್ಳುವುದೂ ಸಾಮಾನ್ಯ. ಪದೇಪದೇ ಹಾಸಿಗೆ ಒದ್ದೆ ಮಾಡುತ್ತಿದ್ದರೆ ಗದರಿ ನಾಲ್ಕೇಟು ಕೊಡುವುದೇ ಹೆಚ್ಚು.

‘ಮಕ್ಕಳು ಹೀಗೆ ವರ್ತಿಸತೊಡಗಿದಾಗ ತಕ್ಷಣವೇ ಮೂತ್ರದಲ್ಲಿನ ಸಕ್ಕರೆ (ಯೂರಿನ್‌ ಸುಗರ್‌) ಅಂಶವನ್ನು ಪರೀಕ್ಷಿಸಬೇಕು. ಯಾಕೆಂದರೆ, ಮಕ್ಕಳಲ್ಲಿನ ಮಧುಮೇಹದ ಆರಂಭಿಕ ಹಂತದ ಸ್ಪಷ್ಟ ಲಕ್ಷಣಗಳಿವು’ ಎಂದು ಎಚ್ಚರಿಕೆ ನೀಡುತ್ತಾರೆ, ಮಕ್ಕಳ ಮಧುಮೇಹ ತಜ್ಞೆ ಬೆಂಗಳೂರಿನ ಡಾ.ಎನ್‌. ಕವಿತಾ ಭಟ್‌.

‘ಇದ್ದಕ್ಕಿದ್ದಂತೆ ತೂಕ ಕಳೆದುಕೊಳ್ಳುವುದು, ಮಾಂಸಖಂಡಗಳು ಜೋತು ಬೀಳುವುದು, ದೃಷ್ಟಿಯ ಸಾಮರ್ಥ್ಯ ಕ್ಷೀಣಿಸುವುದು, ಕನ್ನಡಕ ಬಳಸುವ ಮಕ್ಕಳ ‘ಪವರ್‌’ನಲ್ಲಿ ಪದೇ ಪದೇ ಏರುಪೇರಾಗುವುದು, ಸಣ್ಣ ಗಾಯವೇ ಆದರೂ ದಾಯ ಒಣಗಲು ಬಹಳ ದಿನ ತೆಗೆದುಕೊಳ್ಳುವುದು ಕೂಡಾ ಮಕ್ಕಳಲ್ಲಿನ ಮಧುಮೇಹ ಅಪಾಯಕಾರಿ ಮಟ್ಟ ತಲುಪಿರುವ ಲಕ್ಷಣಗಳು. ತಕ್ಷಣ ವೈದ್ಯಕೀಯ ಚಿಕಿತ್ಸೆ ಕೊಡಿಸದೇ ಇದ್ದರೆ ಅಪಾಯ ತಪ್ಪಿದ್ದಲ್ಲ’ ಎಂಬುದು ಅವರ ಕಿವಿಮಾತು.

ADVERTISEMENT

ಮಕ್ಕಳಲ್ಲಿರುವ ಮಧುಮೇಹಕ್ಕೆ ಇನ್ಸುಲಿನ್‌ ಪ್ರಮುಖ ಪರಿಹಾರ. ವೈದ್ಯಕೀಯ ಪರಿಭಾಷೆಯಲ್ಲಿ ಅದು ‘ಇನ್ಸುಲಿನ್‌ ಡಿಪೆಂಡೆಂಟ್‌ ಡಯಾಬಿಟಿಸ್‌’. ದೊಡ್ಡವರಲ್ಲಿ ಬರುವ ಮಧುಮೇಹವನ್ನು ಮಾತ್ರೆಗಳ ಮೂಲಕ ನಿಯಂತ್ರಿಸಬಹುದು. ಆದರೆ ಮಕ್ಕಳಲ್ಲಿ, ಪ್ಯಾಂಕ್ರಿಯಾಸ್‌ನಲ್ಲಿರುವ ಇನ್ಸುಲಿನ್‌ ಉತ್ಪನ್ನ ಮಾಡುವ ಬೀಟಾ ಸೆಲ್‌ಗಳು ಕಣಗಳು ನಾಶವಾಗುತ್ತಾ ಹೋಗುತ್ತದೆ. ಶೇ 90ರಷ್ಟು ನಾಶವಾದರೆ ರಕ್ತದಲ್ಲಿ ಸಕ್ಕರೆಯ ಅಂಶ ಅಪಾಯಕಾರಿ ಮಟ್ಟ ತಲುಪುತ್ತದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಈ ಹಂತ ತಲುಪುವವರೆಗೂ ಮಧುಮೇಹ ಪತ್ತೆಯಾಗುವುದು ವಿರಳ.

ದೊಡ್ಡವರಲ್ಲಿ ತೂಕ ಕಡಿಮೆಯಾಗುತ್ತಿದ್ದರೆ ಮಧುಮೇಹ ಇರಬಹುದೇ ಎಂದು ಸಂದೇಹಪಡುತ್ತೇವೆ. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ ಅದನ್ನು ಪತ್ತೆ ಹಚ್ಚಲು ಅವಕಾಶವಿದೆ. ಆದರೆ ಮಕ್ಕಳಲ್ಲಿನ ಮಧುಮೇಹ ತಕ್ಷಣ ಗಮನಕ್ಕೆ ಬರುವುದಿಲ್ಲ. ಟೈಪ್‌–1 ಮಧುಮೇಹವೇ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ನವಜಾತ ಶಿಶುಗಳಲ್ಲಿಯೂ ಟೈಪ್‌–1 ಮಧುಮೇಹ ಇರುತ್ತದೆ.

ಈ ಹಂತದ ಮಧುಮೇಹ ಸಾಮಾನ್ಯವಾಗಿ ಕಂಡುಬರುವುದು ಮಕ್ಕಳು ಶಾಲೆಗೆ ಸೇರುವ ವಯಸ್ಸಿನಲ್ಲಿ ಮತ್ತು ಹರೆಯಕ್ಕೆ ಬರುವ ವಯಸ್ಸಿನಲ್ಲಿ ಎಂಬುದು, ಬೆಂಗಳೂರಿನ ರೇನ್‌ಬೋ ಮಕ್ಕಳ ಆಸ್ಪತ್ರೆಯ ಪೀಡಿಯಾಟ್ರಿಕ್‌ ಎಂಡೊಕ್ರೈನಾಲಜಿ ವಿಭಾಗದ ವೈದ್ಯರು ನೀಡುವ ಮಾಹಿತಿ.

‘ಸಾಮಾನ್ಯವಾಗಿ ಮಕ್ಕಳು ರಾತ್ರಿ ಮಲಗುವ ವೇಳೆ ಮೂತ್ರ ವಿಸರ್ಜನೆ ಮಾಡಿದರೆ ಬೆಳಿಗ್ಗೆಯೇ ಮಾಡುತ್ತಾರೆ. ಆರೋಗ್ಯವಂತರಾಗಿದ್ದ ಮಕ್ಕಳೂ ಕೆಲವೊಮ್ಮೆ ಏಕಾಏಕಿ ಹಾಸಿಗೆ ಒದ್ದೆ ಮಾಡತೊಡಗುತ್ತಾರೆ. ಆಗ ಹೆತ್ತವರು ಜಾಗೃತರಾಗಿ ತಮ್ಮ ಮಕ್ಕಳ ಯೂರಿನ್‌ ಸುಗರ್‌ ಪರೀಕ್ಷೆ ಮಾಡಿಸಿದರೆ ಆರಂಭಿಕ ಹಂತದಲ್ಲಿಯೇ ಮಧುಮೇಹವನ್ನು ಪತ್ತೆಹಚ್ಚಿ ಚಿಕಿತ್ಸೆ ಕೊಡಿಸಬಹುದು. ಅತಿಯಾಗಿ ನೀರು ಕುಡಿಯೋದು ಮತ್ತು ಕುಡಿದಷ್ಟೂ ದಾಹ ಅನ್ನೋದು, ಸುಸ್ತು ಅನ್ನೋದೂ ಗಮನ ಹರಿಸಲೇಬೇಕಾದ ಮಧುಮೇಹ ಸಂಬಂಧಿ ಸಮಸ್ಯೆ’ ಎಂದು ಅವರು ಸಲಹೆ ನೀಡುತ್ತಾರೆ.

*


-ಡಾ. ಎನ್‌.  ಕವಿತಾ ಭಟ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.