ADVERTISEMENT

ಮೆದುಳಿಗೆ ವಯಸ್ಸಾಗದಿರಲು ವ್ಯಾಯಾಮ

ಬಸೀರ ಅಹ್ಮದ್ ನಗಾರಿ
Published 29 ನವೆಂಬರ್ 2015, 19:47 IST
Last Updated 29 ನವೆಂಬರ್ 2015, 19:47 IST

ಪ್ರತಿಯೊಬ್ಬರ ಜೀವನದಲ್ಲಿ ವರುಷಗಳು ಉರುಳಿದಂತೆಲ್ಲ ವಯಸ್ಸಾಗುತ್ತಿದೆ ಎನ್ನುವ ಪ್ರಜ್ಞೆ ಹೆಚ್ಚಾಗುತ್ತಲೇ ಹೋಗುತ್ತದೆ. ವಯಸ್ಸನ್ನು ಒಂದೆಡೆ ನಿಲ್ಲಿಸಲೇಬೇಕು ಎನ್ನುವ ಪ್ರಯತ್ನ ಯಯಾತಿಯಿಂದಲೇ ಆರಂಭವಾಯಿತೇನೋ.. ಆದರೂ ಚರ್ಮದ ಮೇಲಿನ ನೆರಿಗೆ, ವಯೋ ಸಹಜ ದೃಷ್ಟಿ ದೋಷ, ನೆನಪಿನ ಶಕ್ತಿ ಕುಂದುವುದು... ಏನೂ ಇಲ್ಲದಿದ್ದರೂ ನನ್ನಿಂದಾಗದು ಎಂದು ನಮಗೇ ಅನಿಸುವುದು... 

ಇದು ಹೇಗೆ ಎಂದು ಸಂಶೋಧಕರ ತಂಡವೊಂದು ಇಲಿಗಳ ಮೇಲೆ ಅಧ್ಯಯನ ಮಾಡಿತು. ಮೆದುಳಿನ ಜೀವಕೋಶಗಳು ನಶಿಸಿದಂತೆಲ್ಲ ಇಂಥ ಸಮಸ್ಯೆಗಳು ಉದ್ಭವಿಸುತ್ತವೆ. ಆದರೆ ಮೆದುಳಿನ ಜೀವಕೋಶಗಳು ಮತ್ತೆ ಹುಟ್ಟಲು ವ್ಯಾಯಾಮ ಸಹಾಯಕವಾಗಿದೆ ಎಂಬುದನ್ನೂ ಈ ಸಂಶೋಧನೆ ಸ್ಪಷ್ಟ ಪಡಿಸಿದೆ.

ಹೌದು. ಆಲಸಿತನ/ಜಡತ್ವ ನಿವಾರಿಸಿ ಚುರುಕುತನ ಕಾಯ್ದು ಕೊಳ್ಳಲು ವ್ಯಾಯಾಮ ಸಹಕಾರಿ ಎಂಬುದು ಬಹುತೇಕ ಎಲ್ಲರೂ ಒಪ್ಪಿತ ಸತ್ಯ. ಇದೀಗ ಹೊಸ ಸಂಶೋಧನೆ ಅದಕ್ಕೆ ಮತ್ತೊಂದು ಆಯಾಮ ನೀಡಿದೆ. ನಿತ್ಯ ವ್ಯಾಯಾಮವು ಮೆದುಳಿಗೆ ವಯಸ್ಸಾಗುವುದನ್ನು ರಕ್ಷಿಸುತ್ತದೆ ಎನ್ನುತ್ತದೆ ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಸಂಶೋಧನಾ ವರದಿ.

ಇಲಿಗಳ ಮೇಲೆ ನಡೆಸಲಾದ ಪ್ರಯೋಗದ ಮೂಲಕ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆನ್‌ ಏಜಿಂಗ್‌ ಅಂಡ್ ಜಾನ್ಸ್‌ ಹಾಪ್‌ಕಿನ್ಸ್‌  ಸ್ಕೂಲ್‌ ಆಫ್‌ ಮೆಡಿಸನ್‌ನ ಮಾರ್ಕ್ ಮ್ಯಾಟ್ಸ್‌ನ್ ಅವರ ನೇತೃತ್ವದ ತಂಡ ಇದನ್ನು ಪತ್ತೆ ಹಚ್ಚಿದೆ. ದಿನಾಲೂ ವ್ಯಾಯಾಮ ಮಾಡುವುದರಿಂದ  ಎಸ್‌ಐಆರ್‌ಟಿ3 ಕಿಣ್ವಗಳ ಮಟ್ಟ ವೃದ್ಧಿಸುತ್ತದೆ.

ಇದು ಮೆದುಳಿನ ಕೋಶದ ಶಕ್ತಿಯ ನಷ್ಟಕ್ಕೆ ಕಾರಣವಾಗುವ ಒತ್ತಡಗಳ ನಿರೋಧಕವಾಗಿ ಕೆಲಸ ಮಾಡುತ್ತದೆ. ಹೀಗೆ ವಯಸ್ಸಾಗುವುದರಿಂದ ಮೆದುಳನ್ನು ಕಾಪಾಡುತ್ತದೆ. ‘ಪ್ರಯೋಗದ ವೇಳೆ ‘ರನ್ನಿಂಗ್‌ ವೀಲ್‌’ ವ್ಯಾಯಾಮಕ್ಕೆ ಒಳಪಡಿಸಿದ ಇಲಿಗಳಲ್ಲಿ ಎಸ್‌ಐಆರ್‌ಟಿ3 ಕಿಣ್ವಗಳ ಮಟ್ಟ ಹೆಚ್ಚಾಯಿತು’ ಎನ್ನುತ್ತಾರೆ ಮ್ಯಾಟ್ಸ್‌ನ್‌. ಅಂದಹಾಗೆ ಈ ಕಿಣ್ವಗಳು ಮೈಟೊ ಕಾಂಡ್ರಿಯಾದಲ್ಲಿ ಇರುತ್ತವೆ.

ಮತ್ತೊಂದೆಡೆ,  ಜೆನೆ ಥೆರಪಿ ತಂತ್ರಜ್ಞಾನದ ಮೂಲಕ ಎಸ್‌ಐ ಆರ್‌ಟಿ3 ಕ್ವಿಣಗಳನ್ನು ನರತಂತುಗಳಿಗೆ ಒದಗಿಸುವುದರಿಂದ ಮೆದುಳಿನ ಒತ್ತಡ ನಿರೋಧಕ ಶಕ್ತಿ ಹೆಚ್ಚಿಸಬಹುದು  ಎಂದೂ ಈ ವರದಿ ಹೇಳಿದೆ.

ಆದರೆ,1972ರಲ್ಲಿಯೇ ಜೆನೆ ಥೆರಪಿ ಎಂಬ ಪರಿಕಲ್ಪನೆ ಪರಿಚಯವಾದರೂ ಕೂಡ ಅದು ಇನ್ನೂ ಯಶಸ್ವಿ ಬಳಕೆಯ ಮಟ್ಟ ತಲುಪಿಲ್ಲ.
ಒಟ್ಟಾರೆ, ಮೈಟೊಕಾಂಡ್ರಿಯಾದ ಕಾರ್ಯವನ್ನು ಉತ್ತೇಜಿಸುವುದರಿಂದ ಹಾಗೂ ಒತ್ತಡ ನಿರೋಧಕ ಎಸ್‌ಐಆರ್‌ಟಿ3 ಮಟ್ಟವನ್ನು ಹೆಚ್ಚಿಸು ವುದರಿಂದ ವಯೋ ಸಹಜವಾಗಿ ಎದುರಾಗುವ ‘ಮರೆಗುಳಿತನ’ದಂಥ ಹಲವು ಮೆದುಳು ಸಂಬಂಧಿತ ರೋಗಗಳನ್ನು ಒಂದು ಮಟ್ಟಕ್ಕೆ ತಡೆಯುವಲ್ಲಿ ನೆರವಾಗುತ್ತದೆ ಎನ್ನುವುದು ಅಧ್ಯಯನ ವರದಿಯ ಸಾರ. ಸೆಲ್ ಮೆಟಾಬಾಲಿಸಮ್ ಜರ್ನಲ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.