ADVERTISEMENT

ಮೆಲ್ಲ ಮೆಲ್ಲ ಕರಗುವ ಐಸ್‌ಕ್ರೀಂ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST
ಮೆಲ್ಲ ಮೆಲ್ಲ ಕರಗುವ ಐಸ್‌ಕ್ರೀಂ
ಮೆಲ್ಲ ಮೆಲ್ಲ ಕರಗುವ ಐಸ್‌ಕ್ರೀಂ   

ಬಿರುಬೇಸಿಗೆಯ ಮಟಮಟ ಮಧ್ಯಾಹ್ನದ ಹೊತ್ತು ಐಸ್‌ಕ್ರೀಂ ತಿನ್ನುವುದೆಂದರೆ ಅದೇನೋ ಖುಷಿ. ಒಣಗಿದ ಗಂಟಲಿಗೆ ತಣ್ಣನೆ ಐಸ್‌ಕ್ರೀಂ ಮೆಲ್ಲಗೆ ಇಳಿಯುತ್ತಿದ್ದಂತೆ ಮೈ ತುಂಬಾ ಹಿತ ಆವರಿಸುತ್ತದೆ. ಆದರೆ ಈ ಹಿತ ಹೆಚ್ಚು ಹೊತ್ತು ಇರುವುದಿಲ್ಲ.

ಏಕೆಂದರೆ ಬೇಗ ಕರಗಿ ಹೋಗುವ ಐಸ್‌ಕ್ರೀಂ ಅನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ತಿಂದು ಮುಗಿಸಲು ಹೋಗಿ, ಗಲ್ಲದ ಮೇಲೆ ಇಳಿದು, ಕೈ ಮೇಲೆ ಸೋರಿ ಧಾವಂತದಲ್ಲಿ ಐಸ್‌ಕ್ರೀಂ ಮೆಲ್ಲುವ ಸಂತೋಷವೂ ಕಳೆದುಹೋಗುತ್ತದೆ. ಐಸ್‌ಕ್ರೀಂ ಸೋರುತ್ತಿರುವುದನ್ನು ನೋಡಿದ ನಂತರವಂತೂ ತಿನ್ನುವ ವೇಗ ಇನ್ನೂ ಹೆಚ್ಚುತ್ತದೆ.

ಆದರೆ ಐಸ್‌ಕ್ರೀಂ ಗುಣವೇ ಕರಗುವುದಲ್ಲವೇ? ಹೀಗಿದ್ದ ಮೇಲೆ ಅದಕ್ಕೆ ತಕ್ಕಂತೆ ತಿನ್ನುವುದೂ ಅನಿವಾರ್ಯ ಎನ್ನುವವರಿಗೆ ಇಲ್ಲಿದೆ ಐಸ್‌ಕ್ರೀಂ ಅನ್ನು ಮೆಲ್ಲಗೆ ತಿನ್ನಲು ಅನುಕೂಲ ಮಾಡಿಕೊಡುವ ಒಂದು ಹೊಸ ಪ್ರಯೋಗ.

ಇಂಥ ಪ್ರಯೋಗವನ್ನು ಕೈಗೊಂಡಿದ್ದು ಡಾಂಡಿ ಹಾಗೂ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಸಂಶೋಧಕರು. ಈ  ಸಂಶೋಧಕರು, ಐಸ್‌ಕ್ರೀಂ ಕುರಿತು ಅಧ್ಯಯನ ಕೈಗೊಂಡಿದ್ದು, ಐಸ್‌ಕ್ರೀಂನಲ್ಲಿನ ಉಷ್ಣತೆಯನ್ನು ತಡೆಯಬಲ್ಲ ನೈಸರ್ಗಿಕ ಪ್ರೊಟೀನ್ ಅನ್ನು ಕಂಡುಕೊಂಡಿದ್ದಾರೆ.

ಅದೇ ಬಿಎಸ್‌ಐಎ (BsIA) ಪ್ರೊಟೀನ್. ಈ ಪ್ರೊಟೀನ್ ಅನ್ನು ಐಸ್‌ಕ್ರೀಂನಲ್ಲಿ ಬಳಸುವ ಮೂಲಕ ಉಷ್ಣತೆ ನಿಯಂತ್ರಣದಲ್ಲಿಟ್ಟು,  ಅದು ಕರಗುವ ಅವಧಿಯನ್ನು ವಿಸ್ತರಿಸಬಹುದು. ಇದು, ಕರಗುವ ಗುಣದ ನಿರೋಧಕ ಶಕ್ತಿಯನ್ನು ಐಸ್‌ಕ್ರೀಂಗೆ ನೀಡಿ, ಸಾಮಾನ್ಯವಾಗಿ ಕರಗುವ ವೇಗಕ್ಕಿಂತ ನಿಧಾನಗತಿಯಲ್ಲಿ ಕರಗುವಂತೆ ಮಾಡುತ್ತದೆ.

ಹೇಗೆ ಈ ಪ್ರೊಟೀನ್ ಕೆಲಸ ನಿರ್ವಹಿಸುತ್ತದೆ ಎಂಬುದನ್ನೂ ವಿವರಿಸಿದ್ದಾರೆ ಸಂಶೋಧಕರು. ಈ ಪ್ರೊಟೀನ್ ಅನ್ನು ಐಸ್‌ಕ್ರೀಂಗೆ ಸೇರಿಸಿದರೆ, ಅದರಲ್ಲಿನ ಗಾಳಿ, ಕೊಬ್ಬು ಮತ್ತು ನೀರಿನಲ್ಲಿ ಅದು ಬೆರೆತು ಮೆಲ್ಲಗೆ ಕರಗುವಂತೆ ಮಾಡುತ್ತದೆ. ಕರಗುವಿಕೆಯನ್ನು ನಿಧಾನಗೊಳಿಸುವುದು ಮಾತ್ರವಲ್ಲ, ಐಸ್‌ಕ್ರೀಂ ಅನ್ನು ಇನ್ನಷ್ಟು ಮೃದುವಾಗಿಸುತ್ತದೆ.

ಪ್ರೊಟೀನ್‌ ಮೂಲಕ ಕೊಬ್ಬು ಮತ್ತು ಸಕ್ಕರೆ ಅಂಶ ನಿಯಂತ್ರಿಸುವ ಪ್ರಯೋಗವೂ ನಡೆಯುತ್ತಿದೆ. ಐಸ್‌ಕ್ರೀಂ ಶೇಖರಣೆಗೆ ಬಳಸುವ ವಿದ್ಯುತ್‌ ಪ್ರಮಾಣದಲ್ಲೂ ಕಡಿಮೆಯಾಗುತ್ತದೆ. ಜೊತೆಗೆ ಐಸ್‌ಕ್ರೀಂನಲ್ಲಿ ಗಡ್ಡೆಗಳು ಉಂಟಾಗುವುದೂ ತಪ್ಪುತ್ತದೆ ಎಂದಿದ್ದಾರೆ. ಸಂಶೋಧಕರು ಹೇಳುವ ಪ್ರಕಾರ, ಈ ಹೊಸ ಪ್ರೊಟೀನು ಮಾರುಕಟ್ಟೆಗೆ ಬಂದು ಐಸ್‌ಕ್ರೀಂ ಅನ್ನು ಮೆಲ್ಲಗೆ ಮೆಲ್ಲುವ ಸಮಯ ಬರಲು ಇನ್ನೂ ಮೂರರಿಂದ ಐದು ವರ್ಷಗಳಾಗಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.