ADVERTISEMENT

ರಂಗ ಎಸ್‌ಎಸ್‌ಎಲ್‌ಸಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 19:30 IST
Last Updated 29 ನವೆಂಬರ್ 2017, 19:30 IST
ರಂಗ ಎಸ್‌ಎಸ್‌ಎಲ್‌ಸಿ
ರಂಗ ಎಸ್‌ಎಸ್‌ಎಲ್‌ಸಿ   

ಸೂರಿ ಮತ್ತು ಯೋಗರಾಜ ಭಟ್‌ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಹೊಸ ಉಬ್ಬರವೊಂದಕ್ಕೆ ಕಾರಣರಾದ ಪ್ರತಿಭಾವಂತ ನಿರ್ದೇಶಕರು. ಸೂರಿ ಅವರ ನಿರ್ದೇಶನದ ‘ದುನಿಯಾ’ ಮತ್ತು ಯೋಗರಾಜ ಭಟ್‌ ಅವರ ‘ಮುಂಗಾರು ಮಳೆ’ ಚಿತ್ರಗಳು ಚಂದನವನದಲ್ಲಿ ಎಬ್ಬಿಸಿದ ಅಲೆ ದೊಡ್ಡದು. ಅದರ ನಂತರವೂ ಅವರು ಹಲವು ವಿಭಿನ್ನ ಸಿನಿಮಾಗಳನ್ನು ಕೊಟ್ಟಿದ್ದಾರೆ.

2004ರಲ್ಲಿ ತೆರೆಕಂಡ ‘ರಂಗ ಎಸ್‌ಎಸ್‌ಎಲ್‌ಸಿ’ ಚಿತ್ರ ಈ ಇಬ್ಬರೂ ಒಟ್ಟಿಗೇ ಕೆಲಸ ಮಾಡಿದ ಸಿನಿಮಾ.  ಇವರ ಪೂರ್ವಾಶ್ರಮದ ಕುರುಹಾಗಿಯೂ ಈ ಚಿತ್ರವನ್ನು ನೋಡಬಹುದು.

ಇದು ತುಂಬ ಒಳ್ಳೆಯ ಸಿನಿಮಾ ಏನಲ್ಲ. ಆದರೆ ಹಲವು ಕುತೂಹಲಕಾರಿ ಅಂಶಗಳ ಕಾರಣಕ್ಕೆ ಈ ಸಿನಿಮಾವನ್ನು ನೋಡಬೇಕು. ಈ ಚಿತ್ರದ ನಿರ್ದೇಶನ ಮಾಡಿರುವುದು ಯೋಗರಾಜ ಭಟ್‌. ಕಥೆ, ಚಿತ್ರಕಥೆ, ನಿರ್ದೇಶನ ಸೂರಿ ಅವರದು. ಪುಡಿರೌಡಿ ಪಾತ್ರದಲ್ಲಿ ದುನಿಯಾ ವಿಜಯ್‌, ಖಳನಾಗಿ ರಂಗಾಯಣ ರಘು ನಟಿಸಿದ್ದಾರೆ. ಈ ಎಲ್ಲರೂ ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದವರು. ಈ ಬೆಳವಣಿಗೆ ಬೀಜಗಳನ್ನು ಈ ಚಿತ್ರದಲ್ಲಿಯೇ ನೋಡಬಹುದು. ಜತೆಗೆ ಆಗಲೇ ಪ್ರಚಲಿತದಲ್ಲಿದ್ದ ಸುದೀಪ್‌ ಮತ್ತು ರಮ್ಯಾ, ಚಿತ್ರದ ನಾಯಕ– ನಾಯಕಿ.

ADVERTISEMENT

ಅದೆಷ್ಟೋ ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಯತ್ನಿಸುತ್ತಲೇ ಇರುವ ರಂಗನಿಗೆ ಪ್ರತಿ ಸಲ ಏನಾದರೂ ಒಂದು ವಿಘ್ನ ಬರುತ್ತದೆ. ಅವನಮ್ಮ ಪಾರೂಗೆ ಮಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸಾದರೆ ಕಂಡಕ್ಟರ್‌ ಕೆಲಸ ಸಿಗಬಹುದು ಎಂಬ ಆಸೆ. ಆಟೊ ಡ್ರೈವರ್‌ ಆಗಿರುವ ರಂಗನಿಗೆ ಮಧ್ಯಮವರ್ಗದ ಹುಡುಗಿಯೊಬ್ಬಳ ಜತೆ ಪ್ರೇಮವಾಗುತ್ತದೆ. ಹೀಗೆ ಮಾಮೂಲಿ ನಾಯಕಪ್ರಧಾನ ಜನಪ್ರಿಯ ಮಾದರಿಯಲ್ಲಿಯೇ ಚಿತ್ರದ ಕಥೆ ಸಾಗುತ್ತದೆ.

ನಾಯಕನ ಎಂಟ್ರಿ, ಅದಕ್ಕೊಂದು ಹಾಡು, ಒಂದು ಖಡಕ್‌ ಡೈಲಾಗ್‌, ತಾಯಿ ಮಗನ ಸೆಂಟಿಮೆಂಟು, ರೌಡಿಸಂನ ಅತಿರೇಕಗಳು ಹೀಗೆ ಹಲವು ಸಿದ್ಧಸೂತ್ರಗಳನ್ನು ತುಂಬ ಹರಿತವಾಗಿ ಗೇಲಿ ಮಾಡುವ ಈ ಸಿನಿಮಾ ಸಾಗುವುದೂ ಅದೇ ಜಾಡಿನಲ್ಲಿ! ‘ಹೆಣ್ಮಕ್ಳನ್ನು ನೋಡಿದ್ರೆ ಗೌರವ ಹುಟ್ಟಬೇಕು. ಏನೋ ಮಾಡ್ಬಿಡ್ಬೇಕು ಅನಿಸ್ಬಾರ್ದು. ಹೊಕ್ಕುಳ ಮುಚ್ಕೋ ಹೋಗ್‌’ ಎಂದು ಹುಡುಗಿಗೆ ಬೈಯುವ ನಾಯಕ, ಮರುಕ್ಷಣದಲ್ಲಿಯೇ ಹೊಕ್ಕುಳ ಪ್ರದರ್ಶನಕ್ಕಿಟ್ಟು ಸೊಂಟ ಕುಣಿಸುವ ಹುಡುಗಿಯ ಜತೆಯಲ್ಲಿ ಡಾನ್ಸ್‌ ಮಾಡುತ್ತಿರುತ್ತಾನೆ. ರಂಗಾಯಣ ರಘು ಅವರ ಪೆಕರು ಪೆಕರಾದ ಮಾತುಗಾರಿಕೆ, ಅತಿರೇಕದ ಅಭಿನಯದ ಮೂಲ ಮಾದರಿಯೂ ಈ ಸಿನಿಮಾದಲ್ಲಿಯೇ ಕಾಣಸಿಗುತ್ತದೆ.

ಈ ಸಿನಿಮಾದಲ್ಲಿ ಚಿಗುರಿನ ರೂಪದಲ್ಲಿ ಕಂಡ ಎಷ್ಟೋ ಅಂಶಗಳು ಸೂರಿ ಮತ್ತು ಯೋಗರಾಜ ಭಟ್‌ ಇಬ್ಬರ ಸಿನಿಮಾಗಳಲ್ಲಿಯೂ ಮುಂದೆ ಹೆಮ್ಮರವಾಗಿ ಬೆಳೆದ ಬಗೆಯನ್ನು ನೋಡಲಿಕ್ಕಾದರೂ ಈ ಚಿತ್ರವನ್ನು ನೋಡಬೇಕು. ಯೂಟ್ಯೂಬ್‌ ಕೊಂಡಿ: https://goo.gl/EenjCp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.