ADVERTISEMENT

ರವಿಕೆಗೆ ಮೋದಿ ಖದರ್‌...

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2014, 19:30 IST
Last Updated 6 ನವೆಂಬರ್ 2014, 19:30 IST
ಪ್ರಧಾನಿ ನರೇಂದ್ರ ಮೋದಿ ಛಾಯಾಚಿತ್ರ ಇರುವ ರವಿಕೆ
ಪ್ರಧಾನಿ ನರೇಂದ್ರ ಮೋದಿ ಛಾಯಾಚಿತ್ರ ಇರುವ ರವಿಕೆ   

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ನಂತರ ಅವರ ಜ್ವರ ಎಲ್ಲೆಡೆ ಜೋರಾಗಿಯೇ ವ್ಯಾಪಿಸುತ್ತಿದೆ. ಪ್ರತಿಯೊಂದು ವಸ್ತುವಿನ ಜೊತೆ ಅವರ ಹೆಸರು ತಳಕು ಹಾಕಲಾಗುತ್ತಿದೆ. ಅವರ ಹೆಸರಿನಲ್ಲಿ ಇತ್ತೀಚಿಗೆ ಗಾಳಿಪಟ, ಪಟಾಕಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದವು. ದೀಪಾವಳಿ ಸಂದರ್ಭದಲ್ಲಂತೂ ಪಟಾಕಿಗಳು ಹಾಗೂ ಸಿಹಿ ತಿನಿಸುಗಳ ಪ್ಯಾಕೇಜ್‌ ಮೇಲೆ ಅವರ ಭಾವಚಿತ್ರಗಳು ರಾರಾಜಿಸಿದ್ದವು. ಈಗ ಹೆಂಗಳೆಯರ ಅಚ್ಚುಮೆಚ್ಚಿನ ದಿರಿಸು ಸೀರೆ ಹಾಗೂ ರವಿಕೆಯ (ಬ್ಲೌಸ್‌) ಸರದಿ.

   ಹಳದಿ ಬಣ್ಣದ ಅಂಚು ಹೊಂದಿರುವ ಫಳಫಳ ಹೊಳೆಯುವ ಕೇಸರಿ ವರ್ಣದ ರವಿಕೆ ಮೇಲೆ ನರೇಂದ್ರ ಮೋದಿ ಅವರ ಭಾವಚಿತ್ರ ಹಾಗೂ ಭ್ರಷ್ಟಾಚಾರದ ವಿರುದ್ಧ ಸಂದೇಶ ಸಾರುವ ಅಂಶಗಳು ಹೊಂದಿರುವ ರವಿಕೆಗಳು ಸದ್ಯ ನವದೆಹಲಿ ಮಾರುಕಟ್ಟೆ ಪ್ರವೇಶಿಸಿವೆ. ಶೀಘ್ರದಲ್ಲೇ ಬೆಂಗಳೂರಿನ ಮಾರುಕಟ್ಟೆಗೂ ಲಗ್ಗೆ ಇಡಲಿವೆ.

   ‘ಕೆಲವರ ಕೋರಿಕೆಯ ಮೇರೆಗೆ ಈ  ರವಿಕೆಗಳನ್ನು ಸಿದ್ಧಪಡಿಸಿದ್ದೇವೆ. ಬೇಕಾದರೆ ಇದನ್ನು ಒಂದು ಪ್ರಯೋಗ ಎಂದು ಹೇಳಬಹುದು. ಯಾವುದು ಹೆಚ್ಚು ಚರ್ಚೆಯಲ್ಲಿ ಇರುತ್ತದೆಯೋ ಆ ವಸ್ತು ಹೆಣ್ಣು ಮಕ್ಕಳಿಗೆ ಬಹಳ ಇಷ್ಟ. ಮುಂಬರುವ ದಿನಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಉಂಟಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಇದರ ರೂವಾರಿ, ಟೈಲರ್‌ ಮೊಹಮ್ಮದ್‌ ಇರ್ಷಾದ್‌ ಅವರು.

   ಅಂದಹಾಗೆ ಈ ಬ್ಲೌಸ್‌ಗಳ ಬೆಲೆ ಸಾಮಾನ್ಯ ರವಿಕೆಗಿಂಗ ತುಸು ಜಾಸ್ತಿ. ಒಂದು ರವಿಕೆಗೆ ₨೧,೫೦೦ ನಿಗದಿಪಡಿಸಲಾಗಿದೆ. ಕುಪ್ಪಸದ ಮುಂಭಾಗ, ಹಿಂಭಾಗ ಮತ್ತು ಭುಜದ ಭಾಗದಲ್ಲಿ ಮೋದಿ ಅವರ ಚಿತ್ರ, ‘ನರೇಂದ್ರ ಭಾಯ್‌ಗೆ ಶುಭಾಶಯಗಳು’ ಮತ್ತು ‘ಟೈಮ್‌ ಫಾರ್‌ ಚೇಂಜ್‌, ಟೈಮ್‌ ಫಾರ್‌ ಮೋದಿ’ (ಮೋದಿಯ ಸಮಯ, ಬದಲಾವಣೆಯ ಸಮಯ) ಎಂಬ ಬರಹ ಇದೆ.

  ‘ನಾವು ಸದ್ಯ ಮಾರುಕಟ್ಟೆಯಲ್ಲಿ ಯಾವುದು ಹೊಸ ಫ್ಯಾಷನ್‌ ಟ್ರೆಂಡ್‌ ಇದೆಯೋ ಅದನ್ನು ಮಾಡುತ್ತಿದ್ದೇವೆ. ಕೆಲವರು ಬಾಲಿವುಡ್‌ನಿಂದ ಪ್ರಭಾವಿತರಾಗಿ ಚೋಲಿ ಮಾಡಿದ್ದರು. ಹಾಗಿರುವಾಗ ನಾವು ರಾಜಕಾರಣಿಗಳು, ಮಂತ್ರಿಗಳಿಂದ ಪ್ರಭಾವಿತರಾಗುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸುತ್ತಾರೆ ಇರ್ಷಾದ್‌ . 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.