ADVERTISEMENT

ರಾಗಿಯಿಂದ ಸುಂದರಿಯರಾಗಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2017, 19:30 IST
Last Updated 18 ಆಗಸ್ಟ್ 2017, 19:30 IST
ರಾಗಿಯಿಂದ ಸುಂದರಿಯರಾಗಿ
ರಾಗಿಯಿಂದ ಸುಂದರಿಯರಾಗಿ   

ರಾಗಿ ತಿಂದರೆ ನಿರೋಗಿ ಎನ್ನುವ ಮಾತಿದೆ. ರಾಗಿಯಿಂದ ಆರೋಗ್ಯದ ಜತೆ ಸೌಂದರ್ಯವೂ ವೃದ್ಧಿಸುತ್ತದೆ. ರಾಗಿ ತರಿ, ಗಂಜಿ, ಹಿಟ್ಟಿನಿಂದ ವಿವಿಧ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇಲ್ಲಿ ಒಂದಿಷ್ಟು ಮಾಹಿತಿ ಇದೆ.

ಸ್ಕ್ರಬರ್‌

ರಾಗಿ ತರಿಯನ್ನು ಸ್ಕ್ರಬರ್‌ ಆಗಿ ಬಳಸಬಹುದು. ಚಳಿಗೆ ಚರ್ಮ ಒಡೆದು, ತೇವಾಂಶ ಕಳೆದುಕೊಳ್ಳುತ್ತದೆ. ಇಂಥ ಒಣ ಚರ್ಮಕ್ಕೆ ರಾಗಿ ತರಿ ಉತ್ತಮ ಮದ್ದು ಆಗಬಲ್ಲದು. ಹಾಲಿನೊಂದಿಗೆ ರಾಗಿ ತರಿಯನ್ನು ನೆನೆಸಿ ಕೈಕಾಲುಗಳಿಗೆ ಹಚ್ಚಿ ಒಣಗಲು ಬಿಡಿ. ನಂತರ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ ಹಚ್ಚಿ ಕೈಕಾಲುಗಳನ್ನು ಉಜ್ಜಿ. ಇದರಿಂದ ನಿರ್ಜೀವ ಚರ್ಮ ಹೋಗಿ ತ್ವಚೆಗೆ ಕಳೆ ಬರುತ್ತದೆ. ಹಾಲು ಮತ್ತು ರಾಗಿ ಬನಿಯಿಂದ ಚರ್ಮಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ.

ADVERTISEMENT

ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಮುಲ್ತಾನಿ ಮಿಟ್ಟಿ ಎಲ್ಲವನ್ನೂ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ ಪ್ರತಿದಿನ ಸೋಪಿನ ಬದಲು ಈ ಹಿಟ್ಟಿನಿಂದ ಮುಖ ತೊಳದರೆ ಚರ್ಮದ ಸಮಸ್ಯೆ ಬರುವುದಿಲ್ಲ.

ಪೆಡಿಕ್ಯೂರ್ ಮಾಡಲೂ ರಾಗಿ ಹಿಟ್ಟು ಬಳಸಬಹುದು. ಬಿಸಿ ನೀರಿಗೆ ಉಪ್ಪು ಹಾಕಿ ಪಾದವನ್ನು ನೆನೆಸಿ. ನಂತರ ರಾಗಿ ಹಿಟ್ಟು ಹಚ್ಚಿ ಕಲ್ಲಿನಿಂದ ಉಜ್ಜಿ, ನಿರ್ಜೀವ ಚರ್ಮ ನಿವಾರಣೆಯಾಗಿ ಒಡೆದ ಹಿಮ್ಮಡಿ ಕೋಮಲವಾಗುತ್ತದೆ.

ಬಿಸಿಲಿನಿಂದ ಕಪ್ಪಾದ ಚರ್ಮವನ್ನು ತಿಳಿಗೊಳಿಸಲು ರಾಗಿ ಹಿಟ್ಟು ಬಳಸಬಹುದು. ಆಲೂಗಡ್ಡೆ ರಸದೊಂದಿಗೆ ರಾಗಿ ಹಿಟ್ಟು ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚಿ ಒಣಗಿದ ನಂತರ ಗುಲಾಬಿ ಜಲ ಹಚ್ಚಿಕೊಂಡು ಸ್ಕ್ರಬ್ ಮಾಡಿ. ರಾತ್ರಿ ಮಲಗುವ ಮುನ್ನ ಈ ರೀತಿ ಮಾಡುವುದರಿಂದ ಸನ್‌ ಟ್ಯಾನ್‌ ನಿವಾರಣೆಯಾಗುತ್ತದೆ.

ಪ್ಯಾಕ್

ರಾಗಿ ಗಂಜಿ ತಯಾರು ಮಾಡಿಕೊಂಡು ಅದಕ್ಕೆ ಸಮಪ್ರಮಾಣದಲ್ಲಿ ಸಕ್ಕರೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಇದು ಚರ್ಮದಲ್ಲಿನ ನರಿಗೆಯನ್ನು ಕಡಿಮೆ ಮಾಡುತ್ತದೆ.

ಒಂದು ಮೊಡವೆ ಮೂಡಿದರೆ ಸುತ್ತ ಇನ್ನೆರಡು ಮೊಡವೆಗಳು ಸೃಷ್ಟಿಯಾಗಿ ಬಿಡುತ್ತವೆ. ದಾಲ್ಚಿನ್ನಿ ಪುಡಿ ಮತ್ತು ರಾಗಿ ಹಿಟ್ಟು ಸಮಪ್ರಮಾಣದಲ್ಲಿ ತೆಗೆದುಕೊಂಡು ಇದಕ್ಕೆ ಪುದೀನ ರಸ ಹಾಕಿ ಕಲಸಿ. ಮೊಡವೆ ಮೇಲೆ ಈ ಪೇಸ್ಟ್‌ ಹಚ್ಚಿ. ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳಿಗ್ಗೆ ತೊಳೆಯಿರಿ.

ಕಣ್ಣಿನ ಸುತ್ತ ಇರುವ ನರಿಗೆ, ಕಪ್ಪು ಕಲೆ ಕಡಿಮೆ ಮಾಡಲು ರಾಗಿ ರಾಮಬಾಣ. ರಾಗಿ ಹಿಟ್ಟನ್ನು ನೀರಿನಲ್ಲಿ ನೆನೆಸಿ. ಇದರ ತಿಳಿ ನೀರನ್ನು ಬಸಿದುಕೊಂಡು ಗ್ರೀನ್‌ ಟೀ ಪುಡಿ ಸೇರಿಸಿ ಒಂದು ರಾತ್ರಿ ‌ಫ್ರಿಡ್ಜ್‌ನಲ್ಲಿ ಇಡಿ. ಈ ನೀರನ್ನು ಹತ್ತಿಯಲ್ಲಿ ಅದ್ದಿಕೊಂಡು ಕಣ್ಣಿನ ಮೇಲೆ ಹಚ್ಚಿಕೊಳ್ಳಿ. ಒಣಗಿದಂತೆ ಆಲೂಗಡ್ಡೆ ರಸವನ್ನು ಹಚ್ಚುತ್ತಾ ಬನ್ನಿ. ಒಂದು ಗಂಟೆಯ ನಂತರ ಹತ್ತಿ ತೆಗೆದುಬಿಡಿ. ತಕ್ಷಣ ಮುಖ ತೊಳೆಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.