ADVERTISEMENT

ಲಡ್ಡು ಅಲ್ಲ ಮಂಜುಗಡ್ಡೆ!

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 19:30 IST
Last Updated 20 ಅಕ್ಟೋಬರ್ 2016, 19:30 IST
ಲಡ್ಡು ಅಲ್ಲ ಮಂಜುಗಡ್ಡೆ!
ಲಡ್ಡು ಅಲ್ಲ ಮಂಜುಗಡ್ಡೆ!   

ತಟ್ಟೆ ತುಂಬ ಆಕರ್ಷಕವಾದ ಲಡ್ಡುಗಳನ್ನು ತಯಾರಿಸಿ ಸವಿಯಲು ಸಿದ್ಧ ಮಾಡಿ ಇರಿಸಿದ ಹಾಗಿದೆ. ಹಾಲಿನ ಕೆನೆಯ ರಸಗುಲ್ಲದ ಹಾಗೆ ಭ್ರಮೆ ಮೂಡಿಸುವ ಇವು ತಿಂಡಿಗಳಲ್ಲ, ಮಂಜುಗಡ್ಡೆಯ ಚೆಂಡುಗಳು ಎಂದರೆ ಅಚ್ಚರಿಯಾಗಬಹುದು.

ಹೀಗೊಂದು ಆಶ್ಚರ್ಯದ ದೃಶ್ಯ ನೋಡಬೇಕಿದ್ದರೆ ಅಮೆರಿಕದ ಮಿಚಿಗನ್ ಪ್ರಾಂತದ ಎಸ್ರೋನಿಯಾದಲ್ಲಿರುವ ಟ್ಯಾಲಿನ್ ಎಂಬಲ್ಲಿಗೆ ಹೋಗಬೇಕು. ಇಲ್ಲಿ ಒಂದು ವಿಶಾಲವಾದ ಸರೋವರವಿದೆ. ಇದನ್ನು ಐಸ್‌ಬಾಲ್ ಸರೋವರ ಎಂದೇ ಕರೆಯುತ್ತಾರೆ. ಡಿಸೆಂಬರ್‌ ತಿಂಗಳ ಮಧ್ಯಭಾಗದ ಬಳಿಕ ಮೂರು ತಿಂಗಳ ಕಾಲ ಸರೋವರದ ಬಳಿಗೆ ಭೇಟಿ ನೀಡಿದರೆ ನೀರಿನಲ್ಲಿ ತೇಲುತ್ತ ಬಂದು ದಡಕ್ಕೆ ಅಪ್ಪಳಿಸುವ ಸಾವಿರಾರು ಸಂಖ್ಯೆಯ ಈ ಬಿಳಿಯ ದುಂಡು ಚೆಂಡುಗಳನ್ನು ಕಾಣಬಹುದು.

ಯಾಕೆ ಹೀಗೆ ಎಂದರೆ ಇದಕ್ಕೆ ಕಾರಣ ಹವಾಮಾನ. ಹಗಲಿನ ತಾಪಮಾನ ಹದಿನೈದು ಡಿಗ್ರಿಗಳಿದ್ದರೆ ರಾತ್ರಿ ಅದು ಐದರಿಂದ ಮೂರಕ್ಕಿಳಿಯುತ್ತದೆ. ಕೆಲವೊಮ್ಮೆ ಶೂನ್ಯವನ್ನೂ ತೋರಿಸಬಹುದು. ಇದರ ಪರಿಣಾಮ ಸನಿಹದ ಕಡಲಿನ ತೀರದ ನಯವಾದ ಉಸುಕು ಮತ್ತು ನೀರು ಹೆಪ್ಪುಗಟ್ಟಿ ಚೆಂಡಿನ ಆಕಾರ ತಳೆಯುತ್ತದೆ. ಇವು ಸಾವಿರ ಸಂಖ್ಯೆಯಲ್ಲಿ ಸಾಲು ಸಾಲಾಗಿ ಬರುತ್ತಲೇ ಇರುತ್ತವೆ, ಸರೋವರದ ದಂಡೆಯಲ್ಲಿ ರಾಶಿ ಬೀಳುತ್ತವೆ. ನೀರಿನಲ್ಲಿಯೂ ತೇಲುತ್ತ ಇರುತ್ತವೆ. ಇಂತಹ ಚೆಂಡುಗಳ ಬೃಹತ್ ರಾಶಿ ಆರು ಅಡಿಗಿಂತಲೂ ಎತ್ತರವಾಗಿರುತ್ತದೆ.

ಸನಿಹದ ಭೂ ರಂಧ್ರಗಳಲ್ಲಿ, ಹಡಗು ಕಟ್ಟೆಗಳಲ್ಲಿ ಎಲ್ಲಿ ನೋಡಿದರೂ ಮಂಜಿನ ಚೆಂಡುಗಳ ರಾಶಿಯನ್ನು ಕಾಣಬಹುದು. ಇವುಗಳ ತೂಕವೂ ಕಡಿಮೆಯಲ್ಲ. ಇಪ್ಪತ್ತೈದು ಕಿಲೋ ತೂಗುತ್ತವೆ. ಈ ಚಳಿಗಾಲದ ಸಮಯ ಸರೋವರದ ದಂಡೆಯಲ್ಲಿ ಕಾಲ್ನಡಿಗೆಯಲ್ಲಿ ಹೋಗುವುದೇ ಅಪಾಯ. ವೇಗವಾಗಿ ಗಾಳಿ ಬೀಸುವಾಗ ಭರದಿಂದ ಓಡೋಡಿ ಬರುವ ಇಷ್ಟು ಭಾರವಿರುವ ಚೆಂಡುಗಳು ಕಾಲಿಗೆ ಅಪ್ಪಳಿಸಿದರೆ ಪ್ರಾಣಾಂತಿಕವೂ ಆಗಬಹುದು.

ಚಳಿ ಆರಂಭವಾಗುವಾಗ ಸರೋವರದ ನೀರು ಮೇಲ್ಬಾಗದಲ್ಲಿ ಹೆಪ್ಪುಗಟ್ಟಿ ಪದರಗಳಾಗಿ ಎಬ್ಬಿಸಲು ಬರುತ್ತದೆ. ಚಳಿ ತೀವ್ರವಾಗುತ್ತಲೇ ಹೀಗೆ ಚೆಂಡಿನ ರೂಪ ತಳೆದು ಜಗತ್ತಿನ ಎಲ್ಲೆಡೆಯ ಪ್ರವಾಸಿಗರನ್ನು ವೀಕ್ಷಣೆಗೆ ಬನ್ನಿ ಎಂದು ಕರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.