ADVERTISEMENT

ವಿದೇಶಿ ತಜ್ಞರು ಕಡೆದ ಕಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಜೂ.ಎನ್‌ಟಿಆರ್‌..
ಜೂ.ಎನ್‌ಟಿಆರ್‌..   

ಫ್ಲೋರಿಡಾದ ಆ್ಯಂಬರ್‌ ಮತ್ತು ಜಾನ್‌ ಶುಮಾಟೆ ಆಗಷ್ಟೇ ಹೈದರಾಬಾದ್‌ನಲ್ಲಿ ಮಸಾಜ್‌ ಥೆರಪಿ ಬೂಟಿಕ್‌ ತೆರೆದಿದ್ದರು. ಆದರೆ ಹೈದರಾಬಾದಿಗರು ಬಾಡಿ ಮಸಾಜ್‌ಗಿಂತ ದೇಹದಾರ್ಢ್ಯಕ್ಕೆ ಆದ್ಯತೆ ಕೊಡುತ್ತಾರೆ ಎಂಬುದು ಮನದಟ್ಟಾಗುತ್ತಲೇ ತಮ್ಮ ಬೂಟಿಕ್‌ಅನ್ನೇ ಜಿಮ್‌ ಆಗಿ ಪರಿವರ್ತಿಸಿದರು. ಅದೇ ಹೊತ್ತಿಗೆ, ತೆಲುಗು ನಟನೊಬ್ಬನಿಗೆ ತಜ್ಞ ತರಬೇತುದಾರರು ಬೇಕಾಗಿದ್ದಾರೆ ಎಂಬ ಸಂದೇಶ ಅವರಿಗೆ ಸಿಕ್ಕಿತು.

ತೆಲುಗು ಚಿತ್ರರಂಗದ ‘ಜೂನಿಯರ್‌ ಎನ್‌ಟಿಆರ್‌’ ತಾರಕ್‌ ಅವರಿಗೆ ವರ್ಕೌಟ್‌ ತರಬೇತುದಾರರಾಗಿ 2013ರ ಫೆಬ್ರುವರಿಯಲ್ಲಿ ಕೆಲಸ ಶುರು ಮಾಡಿದ ಆ್ಯಂಬರ್‌ ಮತ್ತು ಜಾನ್‌, ತಾರಕ್ ಅವರ ಫಿಟ್‌ನೆಸ್‌ ಪ್ರಜ್ಞೆಗೆ ಆರಂಭದಲ್ಲೇ ಬೆರಗಾಗಿದ್ದರಂತೆ.

5.7 ಅಡಿ ಎತ್ತರದ ತಾರಕ್‌, ತಮ್ಮ ದೇಹದ ತೂಕ 78 ಕೆ.ಜಿ. ದಾಟದಂತೆ ಸದಾ ಎಚ್ಚರ ವಹಿಸುತ್ತಾರೆ. ದಿನಕ್ಕೆ ಆರು ಗಂಟೆ ಜಿಮ್‌ನಲ್ಲಿ ದೇಹ ದಂಡಿಸುತ್ತಾರೆ. ಪಥ್ಯದಲ್ಲಿ ಎಂದೂ ರಾಜಿಯಾಗದ ಶಿಸ್ತು. ಎತ್ತರವಾಗಿ ಕಾಣಿಸಬೇಕಾದರೆ ಸ್ವಲ್ಪವೂ ಬೊಜ್ಜು ಇರಬಾರದು ಎಂಬ ಸೌಂದರ್ಯಪ್ರಜ್ಞೆ ಅವರಿಗಿದೆ.

ADVERTISEMENT

ಈ ಆಜಾನುಬಾಹು ಕೋಳಿಮಾಂಸ ಪ್ರಿಯ. ಚಿಕನ್‌ ಬಿರಿಯಾನಿ ಮತ್ತು ಚಿಕನ್‌ 65 ನೆಚ್ಚಿನ ಖಾದ್ಯ. ಪ್ರೊಟೀನ್‌ಯುಕ್ತ ಆಹಾರದ ಸೇವನೆ ಬೊಜ್ಜುರಹಿತ ಮೈಕಟ್ಟು ಕಾಪಾಡಲು ಪೂರಕ ಎಂಬ ಸತ್ಯ ಅವರಿಗೂ ಗೊತ್ತು. ಹಾಗಾಗಿ ಕೋಳಿಮಾಂಸದ ಖಾದ್ಯಗಳೊಂದಿಗೆ ಆಗಾಗ ರಾಜಿಸೂತ್ರ ಮಾಡಿಕೊಳ್ಳುವುದೂ ಇದೆಯಂತೆ. ಆಗಾಗ ಅಷ್ಟು ಇಷ್ಟು ಏನಾದರೂ ತಿನ್ನುತ್ತಾ ಹಸಿವನ್ನು ನಿಗ್ರಹ ಮಾಡಿಕೊಳ್ಳುತ್ತಾರೆ.

‘ಜೂ. ಎನ್‌ಟಿಆರ್‌ ನಾವು ಹೇಳಿದ ಪಥ್ಯಾಹಾರಗಳನ್ನು ವೇಳಾಪಟ್ಟಿಗೆ ಅನುಗುಣವಾಗಿ ಸೇವಿಸುತ್ತಾರೆ. ತರಕಾರಿ ಮತ್ತು ಹಣ್ಣುಗಳ ಸೇವನೆಗೆ ಆದ್ಯತೆ ನೀಡುತ್ತಾರೆ. ಕೆಲವೊಮ್ಮೆ ಅವರು ಭಾರ ಎತ್ತುವುದನ್ನು ನೋಡಿದರೆ ಅವರ ದೇಹದ ಕಸುವು ಎಂತಹುದು ಎಂದು ನಮಗೇ ಅಚ್ಚರಿಯಾಗಿದ್ದಿದೆ. ಅವರಂತಹ ಫಿಟ್‌ನೆಸ್‌ ಮಹತ್ವಾಕಾಂಕ್ಷಿಗಳನ್ನು ನಾವೆಂದೂ ನೋಡಿಲ್ಲ’ ಎಂದು ಆ್ಯಂಬರ್‌ ಮತ್ತು ಜಾನ್‌ ಶುಮಾಟೆ ಹೇಳುತ್ತಾರೆ.

ಪ್ರತಿ ಸಿನಿಮಾಕ್ಕೆ ಬರೋಬ್ಬರಿ ₹14ರಿಂದ 15 ಕೋಟಿ ಸಂಭಾವನೆ ಪಡೆಯುವ ಜೂ. ಎನ್‌ಟಿಆರ್‌ಗೆ ಪ್ಯಾರಿಸ್‌ನಲ್ಲಿ ರಜೆಯ ಮೋಜು ಸವಿಯುವುದು ಇಷ್ಟವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.