ADVERTISEMENT

ಸರಳ ಸುಂದರಿ ರಿಂಕು

ಮಂಜುನಾಥ ರಾಠೋಡ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಸರಳ ಸುಂದರಿ ರಿಂಕು
ಸರಳ ಸುಂದರಿ ರಿಂಕು   

ಹತ್ತನೇ ತರಗತಿಯ ಈ ವಿದ್ಯಾರ್ಥಿನಿ ಐವರು ಭದ್ರತಾ ಸಿಬ್ಬಂದಿ ಜತೆ ಶಾಲೆಗೆ ಬರಬೇಕಾದ ಪರಿಸ್ಥಿತಿ! ಈಕೆಯನ್ನು ನೋಡಲು ಶಾಲೆಯ ಮುಂದೆ ಜಮಾಯಿಸುತ್ತಿದ್ದ ಜನರನ್ನು ನಿಯಂತ್ರಿಸಲು ಆಡಳಿತ ಮಂಡಳಿ ಪೊಲೀಸರ ನೆರವು ಕೇಳುವಂತಾಯಿತು.

ಇದರಿಂದಲೂ ಉಪಯೋಗವಾಗದಿದ್ದಾಗ ಆ ಹುಡುಗಿ ಶಾಲೆ ಬಿಟ್ಟು ಮನೆಯಲ್ಲೇ ಓದಬೇಕಾಗಿ ಬಂತು.

ಹೀಗೆ ಏಕಾಏಕಿ ಸ್ಟಾರ್ ಆದ ಈ ಯುವತಿ ಮರಾಠಿ ಸಿನಿಮಾ ನಟಿ ರಿಂಕು ರಾಜಗುರು. ಕಳೆದ ವರ್ಷ ಏಪ್ರಿಲ್ 29ಕ್ಕೆ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡು ಮರಾಠಿ ಚಿತ್ರ ‘ಸೈರಾಟ್‌’ನ ನಾಯಕಿ.

ADVERTISEMENT

ಎಂಟನೇ ತರಗತಿ ಬೇಸಿಗೆ ರಜೆಯಲ್ಲಿ ತಾಯಿಯೊಂದಿಗೆ ಶೂಟಿಂಗ್ ನೋಡಲು ಹೋಗಿದ್ದ ಹುಡುಗಿಗೆ ನಿರ್ದೇಶಕ ನಾಗರಾಜ್ ಮಂಜುಳೆ ಆಡಿಶನ್ ನೀಡುವಂತೆ ಕೇಳಿದರು. ಆಡಿಶನ್ ನೆಪದಲ್ಲಾದರೂ ಹಳ್ಳಿಯಿಂದ ಪಟ್ಟಣಕ್ಕೆ ಬರಬಹುದೆನ್ನುವ ಆಸೆಯಿಂದ ನಾಗರಾಜ್ ಆಹ್ವಾನವನ್ನು ಒಪ್ಪಿ ಆಡಿಶನ್ ಸಹ ನೀಡಿ ಬಂದರು.

ಆಡಿಶನ್ ನೀಡಿ ವರ್ಷ ಕಳೆದರೂ ಅತ್ತಕಡೆಯಿಂದ ಯಾವುದೇ ಸುದ್ದಿ ಬರಲಿಲ್ಲ. ರಿಂಕು ಕೂಡ ಅದರ ಬಗ್ಗೆ ಮರೆತು ತನ್ನ ಪಾಡಿಗೆ ತಾನಿದ್ದರು. 9ನೇ ತರಗತಿ ಪರೀಕ್ಷೆ ಹೊಸ್ತಿಲಲ್ಲಿದ್ದಾಗ ಕರೆ ಮಾಡಿದ ನಿರ್ದೇಶಕ ನಾಗರಾಜ್ ‘ಇನ್ನು ಒಂದು ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ, ಸ್ವಲ್ಪ ತೂಕ ಕಡಿಮೆ ಮಾಡಿಕೊಂಡು ಮಾತಿನ ಶೈಲಿಯನ್ನೂ ಬದಲಿಸಿಕೊಳ್ಳಬೇಕು’ ಎಂದು ಹೇಳಿ ಫೋನು ಇಟ್ಟುಬಿಟ್ಟರು.

ಪಾನಿಪೂರಿ ತಿನ್ನದೆ ಬದುಕಲಾರೆ ಎಂದುಕೊಂಡಿದ್ದ ಹುಡುಗಿಗೆ ಸಣ್ಣಗಾಗು ಎಂಬ ಮಾತು ಅರಗಿಸಿಕೊಳ್ಳಲಾಗಲಿಲ್ಲ. ಸಿನಿಮಾವೇ ಬೇಡವೆಂದು ಕುಳಿತಿದ್ದ ಹುಡುಗಿಯನ್ನು ಅಮ್ಮ, ನಿರ್ದೇಶಕ ನಾಗರಾಜ್ ಮನೆಗೆ ಕಳಿಸಿದರು. ಒಂದು ತಿಂಗಳು ಸತತ ಡಯಟ್ ಮಾಡಿದ ನಂತರ ಸೈರಾಟ್‌ ನಾಯಕಿ ‘ಆರ್ಚಿ’ಯ ಆಕಾರಕ್ಕೆ ಬಂದರು ರಿಂಕು.

ನಂತರದ್ದೆಲ್ಲಾ ನಿಮಗೂ ಗೊತ್ತೇ ಇದೆ. ‘ಸೈರಾಟ್‌’, ಮರಾಠಿ ಚಿತ್ರರಂಗವಷ್ಟೇ ಅಲ್ಲ ಭಾರತೀಯ ಚಿತ್ರ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿಬಿಟ್ಟಿತು. ಚಿತ್ರ ವಿಮರ್ಶಕರು ‘ಸೈರಾಟ್‌’ ಹೊಸ ತಲೆಮಾರಿನ ರೊಮಿಯೊ–ಜೂಲಿಯೆಟ್,  ಖಯಾಮತ್‌–ಸೆ–ಖಯಾಮತ್‌ ತಕ್‌, ಏಕ್‌ ದೂಜೆ ಕೇ ಲಿಯೆ ಎಂದು ಬಿಟ್ಟರು. ರಿಂಕು ಬಗೆಗಂತೂ ಮಾಧ್ಯಮಗಳೂ ಹೊಗಳಿಕೆಗಳ ಸುರಿಮಳೆಯನ್ನೇ ಸುರಿಸಿದ್ದವು.  ಚಿತ್ರದ ನಾಯಕಿ ರಿಂಕು ಎಷ್ಟು ಜನಪ್ರಿಯಳಾದಳೆಂದರೆ ಪುಣೆಯಲ್ಲಿ ಅಜ್ಞಾತ ಸ್ಥಳದಲ್ಲಿ ದಿನ ಕಳೆಯುವಂತಾಗಿ ಬಿಟ್ಟತು. ಹೊರಗೆ ಬಂದರೆ ಜನ ಆರ್ಚಿ.. ಆರ್ಚಿ.. ಎಂದು ಮುಗಿಬೀಳಲು ಪ್ರಾರಂಭಿಸುತ್ತಿದ್ದರು.

ರೇಷ್ಮೆ ಕೂದಲು, ಸಪೂರ ದೇಹ, ಬಿಳಿ ತೊಗಲು ಯಾವುದೂ ಇಲ್ಲದ ಈ ಕೃಷ್ಣ ಸುಂದರಿಗೆ ಬೆಳಗಾಗುವುದರೊಳಗೆ ತಾರಾಪಟ್ಟ ಸಿಕ್ಕಿಬಿಟ್ಟಿತು.

ಮೊದಲ ಚಿತ್ರಕ್ಕೇ ರಾಷ್ಟ್ರೀಯ ಪ್ರಶಸ್ತಿ (ತೀರ್ಪುಗಾರರ ವಿಶೇಷ ಪ್ರಶಸ್ತಿ) ಬಂದಾಗ ಬಾಲಿವುಡ್‌ ಸ್ಟಾರ್‌ ನಟ–ನಟಿಯರು ಕರೆ ಮಾಡಿ ಅಭಿನಂದಿಸಿದಾಗಲಂತೂ ಹುಡುಗಿಗೆ ಆಕಾಶಕ್ಕೆ ಮೂರೇ ಗೇಣು.

ಕನ್ನಡದ ‘ಮನಸು ಮಲ್ಲಿಗೆ’ ಚಿತ್ರದಲ್ಲಿಯೂ ನಟಿಸಿರುವ ರಿಂಕು ರಾಜಗುರು ಇತ್ತೀಚೆಗಷ್ಟೆ 10ನೇ ತರಗತಿ ಪಾಸು ಮಾಡಿದ್ದಾರೆ. ಇನ್ನು ಮುಂದೆ ಸಿನಿಮಾದಲ್ಲಿ ಹೆಚ್ಚಿಗೆ ತೊಡಗಿಕೊಳ್ಳುತ್ತೇನೆಂದು ಹೇಳಿರುವುದು ಅವರ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ.

**

ಮರಾಠಿ ಚಿತ್ರನಟಿ ರಿಂಕು ರಾಜಗುರು ಅವರು ಕಳೆದ ವರ್ಷ  ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡ ‘ಸೈರಾಟ್‌’ನ ನಾಯಕಿ. ಮೊದಲ ಚಿತ್ರದಲ್ಲೇ ರಾಷ್ಟ್ರೀಯ ಪ್ರಶಸ್ತಿ (ತೀರ್ಪುಗಾರರ ವಿಶೇಷ ಪ್ರಶಸ್ತಿ) ತನ್ನದಾಗಿಸಿಕೊಂಡ ಬೆಡಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.