ADVERTISEMENT

ಸರ್ವ ಋತುವಿಗೂ ಹೊಂದುವ ಇಂಡಿಗೊ

ಸುರೇಖಾ ಹೆಗಡೆ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST
ಸರ್ವ ಋತುವಿಗೂ ಹೊಂದುವ ಇಂಡಿಗೊ
ಸರ್ವ ಋತುವಿಗೂ ಹೊಂದುವ ಇಂಡಿಗೊ   

ಮನುಷ್ಯನ ಮನಸು ಬಣ್ಣದ ಜಗತ್ತಿಗೆ ಹೆಚ್ಚು ಅಂಟಿಕೊಂಡಿದೆ. ಏನೇ ಕೊಳ್ಳುವ ಮನಸಾಗಲಿ ಅಲ್ಲಿ ಬಣ್ಣಕ್ಕೆ ಮೊದಲ ಆದ್ಯತೆ. ದಿರಿಸಿನ ವಿಷಯದಲ್ಲೂ ಇದೇ ನಿಯಮ.

ಹಾಗೆಯೇ ಉಡುಪಿನ ವಿಷಯದಲ್ಲಿ ಇಂಥ ಕಾಲಮಾನದಲ್ಲಿ ಇಂಥದ್ದೇ ಬಣ್ಣದ ದಿರಿಸು ಸೂಕ್ತ ಎನ್ನುವ ಪರಿಕಲ್ಪನೆ ಇದೆ. ಆದರೆ ಕಾಲ ಯಾವುದೇ ಇರಲಿ, ಹವಾಮಾನ ಹೇಗೇ ಇರಲಿ, ಎಲ್ಲಾ ದಿನಮಾನಕ್ಕೆ ಹೊಂದುವ ಬಣ್ಣವೊಂದು ವಸ್ತ್ರವಿನ್ಯಾಸಕರ ಪಟ್ಟಿಯಲ್ಲಿ ಆದ್ಯತೆ ಪಡೆದುಕೊಂಡಿದೆ. ಅದೇ ಇಂಡಿಗೊ ಕಲರ್‌.

ನೀಲಿ ಬಣ್ಣದ ಬಗೆಬಗೆಯ ಶೇಡ್‌ಗಳನ್ನು ಒಳಗೊಂಡಿದೆ ಇಂಡಿಗೊ. ಗಾಢ ನೀಲಿಯಿಂದ ಹಿಡಿದು ತೆಳು ನೀಲಿ ಬಣ್ಣದವರೆಗಿನ ಎಲ್ಲಾ ಶೇಡ್‌ಗಳನ್ನು ಒಳಗೊಂಡಿರುವ ಇಂಡಿಗೊ ಬಣ್ಣ ಎಲ್ಲರ ಹಾಟ್‌ ಫೇವರಿಟ್‌. ಹೀಗಾಗಿಯೇ ನೀಲಿ ಬಣ್ಣದ ಜೀನ್ಸ್‌ ಹೆಚ್ಚು ಜನಪ್ರಿಯ.

ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುವ ಅವು ಬೇಸಿಗೆ ಕಾಲದಲ್ಲಿಯೂ ಆರಾಮದಾಯಕ ಉಡುಗೆಯಾಗಿಯೇ ಹೆಸರು ಗಳಿಸಿದೆ. ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಎರಡೂ ಬಗೆಯ ದಿರಿಸಿಗೂ ಒಪ್ಪುವ ಗುಣ ಇಂಡಿಗೊ ಬಣ್ಣದ್ದು.

ಸೀರೆಗಳಲ್ಲಿ ಮಿಂಚುತ್ತಿದ್ದ ನೀಲಿ ಬಣ್ಣ ದಿನಕಳೆದಂತೆ ಕುರ್ತಾ, ಸಲ್ವಾರ್‌ ಕಮೀಜ್‌, ಜಾಕೆಟ್‌, ಲೆಹೆಂಗಾಗಳಲ್ಲಿಯೂ ಕಾಣಿಸಿಕೊಂಡಿದೆ. ಹುಡುಗರ ಫ್ಯಾಷನ್‌ ಜಗತ್ತಿನಲ್ಲಿಯೂ ಪ್ರಾಮುಖ್ಯತೆ ಪಡೆದುಕೊಂಡಿರುವ ಈ ಬಣ್ಣ ಕುರ್ತಾ, ಶೇರ್ವಾನಿಗಳಲ್ಲಿ ನಳನಳಿಸುತ್ತಿದೆ.

ದೇಶದ ಕುಶಲಕರ್ಮಿಗಳಿಗೂ ಅಚ್ಚುಮೆಚ್ಚಿನ ಬಣ್ಣ ಇದಾಗಿದ್ದು ಸಾಂಪ್ರದಾಯಿಕ ಪ್ರಿಂಟ್‌ಗಳಾದ ಬಗ್ರು, ಡಾಬು, ಮುಲ್‌, ಬಂದೇಜ್‌, ಮಧುಬನಿ, ಇಕ್ಕತ್‌ಗಳಲ್ಲಿ ಇಂಡಿಗೊ ಬಣ್ಣವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ.

ವಸ್ತ್ರ ವಿನ್ಯಾಸಕರ ದೃಷ್ಟಿಯಲ್ಲಿ ಈ ಬಣ್ಣ ಬೇಡಿಕೆಯನ್ನೇ ಕಳೆದುಕೊಳ್ಳದ ಸುಂದರ ಶ್ರೀಮಂತ ಬಣ್ಣ. ಸಾಂಪ್ರದಾಯಿಕ ದಿರಿಸಿರಲಿ, ಪಾಶ್ಚಿಮಾತ್ಯ ದಿರಿಸಿರಲಿ, ಯಾವುದೇ ಶೈಲಿ ವಿನ್ಯಾಸವಾಗಲಿ ದಿರಿಸಿಗೆ ಶ್ರೀಮಂತ ಲುಕ್‌ ನೀಡುತ್ತದೆ ಇಂಡಿಗೊ. ಬೇಸಿಗೆ ಕಾಲದಲ್ಲಿ ತಿಳಿ ಬಣ್ಣದ ನೀಲಿ ಸೂಕ್ತ. ಚಳಿಗಾಲದಲ್ಲಿ ಗಾಢ ನೀಲಿ ಬಣ್ಣಗಳು ಟ್ರೆಂಡ್‌ ಆಗುತ್ತವೆ.

*ಬ್ಲಾಕ್‌ ಪ್ರಿಂಟ್‌ ಹಾಗೂ ಶಿಬೋರಿ ವಿನ್ಯಾಸದಲ್ಲಿ ಇಂಡಿಗೊ ಚೆನ್ನಾಗಿ ಕಾಣುತ್ತದೆ.
*ಬೇಸಿಗೆ ಕಾಲದಲ್ಲಿ ಹೆಚ್ಚು ಸೂಕ್ತ. ಬೇಸಿಗೆಯಲ್ಲಿ ತಿಳು ನೀಲಿ, ಚಳಿಗಾಲದಲ್ಲಿ ಗಾಢ ನೀಲಿ ಟ್ರೆಂಡ್‌ ಆಗಿರುತ್ತದೆ.
*ಗಾಢಬಣ್ಣದ ಸೀರೆ ಆದರೆ ತಿಳು ಬಣ್ಣದ ರವಿಕೆ ತೊಟ್ಟರೆ ಚೆಂದ. ಸಲ್ವಾರ್‌ ಕಮೀಜ್‌ಗಳ ಮೇಲೆಯೂ ವಿರುದ್ಧ ಕಾಂಬಿನೇಶನ್‌ ಚೆನ್ನಾಗಿ ಒಪ್ಪುತ್ತದೆ.
* ಬಿಳಿ, ಕಪ್ಪು ಮುಂತಾದ ಗಾಢ ಬಣ್ಣದ ದಿರಿಸಿನ ಮೇಲೆ ಇಂಡಿಗೊ ಕೋಟ್‌ ಎದ್ದು ಕಾಣುತ್ತದೆ.
*ಇಂಡಿಗೊ ಬಣ್ಣಕ್ಕೆ ಶ್ರೀಮಂತ ನೋಟ ಇರುವುದರಿಂದ ಅತಿಯಾದ ಆಭರಣ ಧಾರಣೆ ಬೇಡ. ಸಿಲ್ವರ್‌ ಬಣ್ಣದ ಆಭರಣ ಹೆಚ್ಚು ಒಪ್ಪುತ್ತದೆ
*ಬಿಳಿ ಬಣ್ಣದ ಶಾರ್ಟ್‌ ಟಾಪ್‌ಗೆ ಇಂಡಿಗೊ ಬಣ್ಣದ ಜೀನ್ಸ್‌, ಪಲಾಜೊ ಧರಿಸಿ.
*ದಪ್ಪಗಿರುವವರು ಪ್ರಿಂಟ್‌ಗಳನ್ನು ಆಯ್ದುಕೊಳ್ಳುವಾಗ ಚಿಕ್ಕಚಿಕ್ಕ ವಿನ್ಯಾಸಕ್ಕೆ ಹೆಚ್ಚು ಒತ್ತುಕೊಡಬೇಕು. ಇದರಿಂದ ಅವರು ಇನ್ನಷ್ಟು ದಪ್ಪಗಾಗಿ ಕಾಣುವುದು ತಪ್ಪುತ್ತದೆ.
*ಭಾರತದ ಮಾರುಕಟ್ಟೆಗೆ ಹೊಸ ಎಂಟ್ರಿ ನೀಡಿರುವ ಶಿಬೋರಿ ವಿನ್ಯಾಸಗಳು ಇಂಡಿಗೊ ಬಣ್ಣದಲ್ಲಿ ಚೆನ್ನಾಗಿ ಕಾಣುತ್ತವೆ.

ಇತಿಹಾಸ
ಇಂಡಿಗೊ ಡೈ ಅನ್ನು ಭಾರತದಲ್ಲೇ ಮೊದಲು ಬಳಸಲಾಗಿದ್ದು. ಪ್ರಾಚೀನ ಹಾಗೂ ಮಧ್ಯಯುಗದ ಕಾಲದಲ್ಲಿ ನೈಸರ್ಗಿಕ ಬಣ್ಣವನ್ನು ಬಳಸಿ (ವೆಜಿಟೆಬಲ್‌) ಇದನ್ನು ರೂಪಿಸಲಾಯಿತು. ಅದು ಎಷ್ಟು ಜನಪ್ರಿಯಗೊಂಡಿತೆಂದರೆ ಯುರೋಪಿಯನ್‌ ದೇಶದ ಜನರು ಈ ಬಣ್ಣಕ್ಕೆ ಮಾರುಹೋದರು. ಟರ್ಕಿ, ಪರ್ಷಿಯಾ ಮುಂತಾದ ಮಧ್ಯಪ್ರಾಚ್ಯದಲ್ಲಿಯೂ ಬೇಡಿಕೆ ಹೆಚ್ಚಿತ್ತು.

ಭಾರತ ವಸಾಹತು ದೇಶವಾದ ಮೇಲೆ ಬ್ರಿಟಿಷರು ಇಂಡಿಗೊ ಡೈಯರ್ಸ್‌ಗಳ ಮೇಲೆ ಏಕಸ್ವಾಮ್ಯ ಪಡೆಯಲು ಯತ್ನಿಸಿದರು. ಅವರೇ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾರಂಭಿಸಿದರು. ಇದು ದೇಶಿ ಡೈಯರ್‌ಗಳಿಗೆ ಸಮಸ್ಯೆಯಾಯಿತು. ಹೀಗಾಗಿ 20ನೇ ಶತಮಾನದ ಪೂರ್ವದಲ್ಲಿ ದಂಗೆಯೂ ನಡೆಯಿತು. 

ವಿನ್ಯಾಸಕರಿಗೂ ಅಚ್ಚುಮೆಚ್ಚು
ಆಕರ್ಷಕವಾದ ಹಾಗೂ ಕಣ್ಣಿಗೆ ಖುಷಿ ನೀಡುವ ಬಣ್ಣವಾದ್ದರಿಂದ ಇಂಡಿಗೊ ವಿನ್ಯಾಸಕಾರರಿಗೂ ಮೆಚ್ಚು. ಜೈಪುರದ ಡಾಬು, ರಾಜಸ್ತಾನ, ಗುಜರಾತ್‌ಗಳಲ್ಲಿ ಟೈ ಅಂಡ್‌ ಡೈ ಕಾರ್ಯ ಇಂದಿಗೂ ನಡೆಯುತ್ತದೆ. ಇತ್ತೀಚೆಗೆ ಜಪಾನ್‌ ಮೂಲದ ಶಿಬೋರಿ ವಿನ್ಯಾಸ ಕೂಡ ಭಾರತದ ಫ್ಯಾಷನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಬಣ್ಣ ಬೇಸಿಗೆ ಕಾಲದ ಜನಪ್ರಿಯ ಟ್ರೆಂಡ್‌. ಯಾಕೆಂದರೆ ಈ ಬಣ್ಣ ತಂಪನೆಯ ಅನುಭವ ನೀಡುತ್ತದೆ’ ಎನ್ನುತ್ತಾರೆ ವಸ್ತ್ರವಿನ್ಯಾಸಕಿ ಶಿಲ್ಪಿ ಚೌಧರಿ.

ಕಾಲದ ಹಂಗಿಲ್ಲ
ಬೇಸಿಗೆ ಕಾಲದಲ್ಲಿ ಜನಪ್ರಿಯತೆ ಗಳಿಸುವ ಬಣ್ಣ. ಬಗೆಬಗೆಯ ಶೇಡ್‌ ಇರುವುದರಿಂದ ವಿನ್ಯಾಸಕರಿಗೆ ತಮ್ಮ ಕ್ರಿಯಾಶೀಲತೆ ಬಳಸಿ ವಸ್ತ್ರ ವಿನ್ಯಾಸ ಮಾಡಲು ಹೆಚ್ಚು ಅವಕಾಶವಿದೆ. ಇಂಡಿಗೊ ಬಣ್ಣದ ಕಾಟನ್‌ ದಿರಿಸಿಗೆ  ಬಗೆಬಗೆಯ ಪ್ರಿಂಟ್‌ ಇದ್ದರೆ ಅಂದ ಇನ್ನಷ್ಟು ಹೆಚ್ಚುತ್ತದೆ.
ನೇಹಾ, ವಿನ್ಯಾಸಕಿ

ADVERTISEMENT

*
ಸಾಂಪ್ರದಾಯಿಕ ದಿರಿಸಿಗೆ ಇಂಡಿಗೊ ಬಣ್ಣದ ಮೆರುಗಿದ್ದರೆ ತುಂಬಾ ಚೆನ್ನಾಗಿ ಕಾಣುತ್ತದೆ. ಹೀಗಾಗಿ ಸದ್ಯದಲ್ಲೇ ಈ ಬಣ್ಣದ ಬ್ರೈಡಲ್‌ ವೇರ್‌ ಮಾಡಲಿದ್ದೇನೆ. ಜರ್‌, ಎಂಬ್ರಾಯ್ಡರಿ ಬಳಸಿ ಶ್ರೀಮಂತ ನೋಟ ನೀಡುವ ತಯಾರಿಯಲ್ಲಿದ್ದೇನೆ.
-ಶಿಲ್ಪಿ,ವಿನ್ಯಾಸಕಿ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.