ADVERTISEMENT

ಸಾವಧಾನ ತಂದ ಫಲ

ವಿಶಾಖ ಎನ್.
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಸಾವಧಾನ ತಂದ ಫಲ
ಸಾವಧಾನ ತಂದ ಫಲ   

2009. ಕನ್ನಡದ ನಟ ಗಣೇಶ್ ಗೋಲ್ಡನ್ ಸ್ಟಾರ್ ಆಗಿ ಒಂದಿಷ್ಟು ಹೆಸರು ಮಾಡಿದ್ದ ಕಾಲಘಟ್ಟ. ತೆಲುಗಿನಲ್ಲಿ ಯಶಸ್ವಿಯಾಗಿದ್ದ ‘ಉಲ್ಲಾಸಂಗಾ ಉತ್ಸಾಹಂಗಾ’ ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಿದ್ದರು. ಆ ಚಿತ್ರದ ನಾಯಕಿ ತೆಳ್ಳಗೆ, ಬೆಳ್ಳಗಿದ್ದ ಪಂಜಾಬಿ ಹುಡುಗಿ. ಹೆಸರು ಯಾಮಿ ಗೌತಮ್. ಕಳೆದ ವಾರ ತೆರೆಕಂಡ ಹಿಂದಿಯ ‘ಸರ್ಕಾರ್ 3’ ಚಿತ್ರದಲ್ಲಿ ಅಭಿನಯಿಸಿದ್ದು ಇದೇ ಹುಡುಗಿ. ಎಂಟು ವರ್ಷಗಳ ಹಿಂದಿನ ಯಾಮಿಗೂ, ಈಗಿನ ರಾಮ್‌ಗೋಪಾಲ್ ವರ್ಮ ನಿರ್ದೇಶನಕ್ಕೆ ಒಡ್ಡಿಕೊಂಡ ನಟಿಗೂ ವ್ಯತ್ಯಾಸವಿದೆ.

ಯಾಮಿ ತವರೂರು ಹಿಮಾಚಲ ಪ್ರದೇಶದ ಬಿಲಾಸ್‌ಪುರ್. ಬೆಳೆದದ್ದು ಚಂಡೀಗಡದಲ್ಲಿ. ಪಂಜಾಬಿ ಕುಟುಂಬ. ಅಪ್ಪ ಮುಕೇಶ್ ಗೌತಮ್ ಪಂಜಾಬಿ ಚಿತ್ರಗಳ ನಿರ್ದೇಶಕ. ಅಕ್ಕ ಸುರಿಲ್ ಗೌತಮ್‌ ಅದೇ ಭಾಷೆಯ ಚಿತ್ರಗಳಲ್ಲಿ ನಟಿಯಾಗಿ ಸ್ವಲ್ಪ ಕಾಲ ಸುದ್ದಿಯಾದವರು. ಸಿನಿಮಾ ಹಿನ್ನೆಲೆಯಿದ್ದೂ ಪ್ರೌಢಾವಸ್ಥೆಯಲ್ಲಿ ಆ ರಂಗದತ್ತ ಮುಖಮಾಡಲು ಯಾಮಿ ಸಿದ್ಧರಿರಲಿಲ್ಲ. ಐಎಎಸ್ ಪಾಸು ಮಾಡಬೇಕೆಂಬ ಹೆಬ್ಬಯಕೆ ಇಟ್ಟುಕೊಂಡು ಕಾನೂನು ಪದವಿ ಓದಿದರು. ಇಪ್ಪತ್ತರ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ನಟಿಯಾಗುವ ಬಯಕೆ ಮೂಡಿತು. ಆಗ ಅವರ ಅಪ್ಪ, ಅಕ್ಕ ಕೂಡ ಚಕಿತರಾದರು.

ಪಂಜಾಬಿ ಚಿತ್ರಗಳ ತಂಟೆಗೆ ಹೋಗದ ಸುಂದರ ಯುವತಿ ಮುಂಬೈಗೆ ಕಾಲಿಟ್ಟರು. ಬಾಡಿಗೆಗೆ ಅಪಾರ್ಟ್‌ಮೆಂಟ್ ಹಿಡಿದರು. ಜಾಹೀರಾತು ಅವಕಾಶಗಳನ್ನು ಕೊಡುವ ಸ್ಕ್ರೀನ್‌ ಟೆಸ್ಟ್‌ಗಳಿಗೆ ಹೋದರು. ಸಣ್ಣದು, ದೊಡ್ಡದು ಎಂಬ ಭೇದವನ್ನೇ ಮಾಡದೆ ಹೊಟ್ಟೆಪಾಡಿಗಾಗಿ ಜಾಹೀರಾತು ಚಿತ್ರೀಕರಣಕ್ಕೆ ಮುಖಮಾಡಿದ ಅವರು, ‘ಚಾಂದ್‌ ಕೆ ಪಾರ್‌ ಚಲೊ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದು 2008ರಲ್ಲಿ. ಹೊಸಬರಿಗಾಗಿ ಯಾವುದಾದರೂ ನಿರ್ಮಾಪಕ ಹುಡುಕುತ್ತಿದ್ದಾರೆಂಬ ಸುದ್ದಿ ಕಿವಿಮೇಲೆ ಬಿತ್ತೆಂದರೆ ಅಲ್ಲಿಗೆ ಹಾಜರಾಗುತ್ತಿದ್ದ ಯಾಮಿ, ಗೋಲ್ಡನ್ ಸ್ಟಾರ್‌ ಗಣೇಶ್‌ಗೆ ನಾಯಕಿಯಾಗಿದ್ದೂ ಹಾಗೆಯೇ. ಅದು ಅವರ ಮೊದಲ ಸಿನಿಮಾ. ಕನ್ನಡದಲ್ಲಿ ಮೊದಲು ಅಭಿನಯಿಸಿ, ಆಮೇಲೆ ಅನಿಲ್ ಕಪೂರ್‌ ದೊಡ್ಡ ತಾರೆಯಾಗಲಿಲ್ಲವೇ ಎಂದು ಎಂಟು ವರ್ಷಗಳ ಹಿಂದೆ ಈ ನಟಿ ಉತ್ಸಾಹದಿಂದ ಹೇಳಿದ್ದರು.

ADVERTISEMENT

ಮೇಕಪ್ ಟೆಸ್ಟ್‌, ಸಂಭಾಷಣೆ ಹೇಳುವ ಪರೀಕ್ಷೆ ಎಲ್ಲಕ್ಕೂ ಪದೇ ಪದೇ ಒಡ್ಡಿಕೊಂಡ ಪಂಜಾಬಿ ಹುಡುಗಿ ಆತ್ಮಾಭಿಮಾನಿ. ಸೋತು ಮನೆಗೆ ಮರಳಲೇಕೂಡದು ಎಂದು ಸಂಕಲ್ಪ ಮಾಡಿದ್ದರು. ಆಡಿಷನ್‌ಗೆಂದು ಹೋದಾಗ ನಿರಾಕರಿಸಿದವರಿಗೂ ಧನ್ಯವಾದ ಹೇಳಿ ಬರುತ್ತಿದ್ದರು. ಅಪಾರ್ಟ್‌ಮೆಂಟ್‌ನಲ್ಲಿ ಅಡುಗೆ ಮಾಡಿಕೊಳ್ಳಲು ಮನಸ್ಸಿಲ್ಲದಿದ್ದಾಗ ಬ್ರೆಡ್‌ ತಿಂದು ನೀರು ಕುಡಿದು ಮಲಗುತ್ತಿದ್ದರು.

2011ರಲ್ಲಿ ‘ವಿಕ್ಕಿ ಡೋನರ್‌’ ಹಿಂದಿ ಸಿನಿಮಾದ ನಾಯಕಿಯಾಗುವ ಅವಕಾಶ ಲಭಿಸಿತು. ಆಯುಷ್ಮಾನ್ ಖುರಾನಾ ಚಿತ್ರದ ನಾಯಕ. ವಿಡಿಯೊ ಜಾಕಿಯಾಗಿ ಹೆಸರು ಮಾಡಿದ್ದ ಆಯುಷ್ಮಾನ್ ಎದುರು ಈ ಹುಡುಗಿ ಪೀಚು. ಆದರೂ ಸಿಕ್ಕ ಅವಕಾಶದಲ್ಲಿಯೇ ಛಾಪು ಮೂಡಿಸಿದರು. ತೆಲುಗಿನ ‘ನುವ್ವಿಲ’, ಮಲಯಾಳಂನ ‘ಹೀರೊ’, ತಮಿಳಿನ ‘ಗೌರವಂ’, ‘ಯುದ್ಧಂ’ ಚಿತ್ರಗಳಲ್ಲಿ ಅಭಿನಯದ ತಾಲೀಮಿಗೆ ಒಡ್ಡಿಕೊಂಡ ಯಾಮಿ, ದೊಡ್ಡ ಅವಕಾಶಕ್ಕಾಗಿ ವರ್ಷಗಟ್ಟಲೆ ಕಾಯ್ದದ್ದು ಫಲ ಕೊಟ್ಟಿತು.

ಬದ್ಲಾಪುರ್’ ಚಿತ್ರದ ನಂತರ ನಿರ್ಮಾಪಕರಿಗೆ ಈ ಮುಖ ಚಿರಪರಿಚಿತವಾಯಿತು. ‘ಕಾಬಿಲ್’ನಲ್ಲಿ ಹೃತಿಕ್‌ಗೆ ಜೋಡಿಯಾದದ್ದು ಶುಕ್ರದೆಸೆ. ಅಮಿತಾಭ್ ಬಚ್ಚನ್ ಈ ಹುಡುಗಿಯ ಅಭಿನಯ ಮೆಚ್ಚಿ ಮಾತನಾಡಿದರು. ‘ಸರ್ಕಾರ್‌ 3’ ಯಲ್ಲಿ ಅದೇ ದಿಗ್ಗಜ ನಟನ ಜೊತೆ ನಟಿಸಿದ ಅನುಭವ ವೃತ್ತಿಬದುಕಿನ ಪುಟ ಸೇರಿದೆ.

‘ಮುಂಬೈನಲ್ಲಿ ನನ್ನದೇ ಸ್ವಂತ ಮನೆ ಮಾಡಬೇಕು. ಅಪಾರ್ಟ್‌ಮೆಂಟ್‌ ಬಾಡಿಗೆ ಹೆಚ್ಚು’ ಎಂದು ಮೂರು ವರ್ಷಗಳ ಹಿಂದೆ ಹೇಳಿದ್ದ ಈ ನಟಿ ತಮ್ಮೆಲ್ಲ ಕನಸುಗಳನ್ನು ಹಂತ ಹಂತವಾಗಿ ಈಡೇರಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.