ADVERTISEMENT

ಸಿನಿಮಾ ಶ್ರದ್ಧೆ, ಗಿಡಗಳ ಪ್ರೀತಿ

ವಿಶಾಖ ಎನ್.
Published 20 ಆಗಸ್ಟ್ 2017, 19:30 IST
Last Updated 20 ಆಗಸ್ಟ್ 2017, 19:30 IST
ಶ್ರದ್ಧಾ ಕಪೂರ್‌
ಶ್ರದ್ಧಾ ಕಪೂರ್‌   

ಮನೋವಿಜ್ಞಾನ ಕಲಿಯಲು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯಕ್ಕೆ ಹಾರಿದ ಹುಡುಗಿ ತನ್ನೊಳಗೆ ಕನಸೊಂದನ್ನು ಭದ್ರಪಡಿಸಿದ್ದಳು. ಅಪ್ಪನಿಗಾಗಲೀ, ಅಮ್ಮನಿಗಾಗಲೀ ಹೇಳಲು ಹೆಣಗಾಡಿದ್ದ ಕನಸು ಅದು. ‘ನಟಿಯಾಗುವೆ’ ಎಂದರೆ ಅಪ್ಪ ಶಕ್ತಿ ಕಪೂರ್ ಒಪ್ಪುತ್ತಿರಲಿಲ್ಲ.

ಸಿನಿಮಾ ಜಗತ್ತಿನ ಚಂಚಲಚಿತ್ತವನ್ನು ಹತ್ತಿರದಿಂದ ಕಂಡಿದ್ದ ಅವರಿಗೆ ಮಗಳು ಅಲ್ಲಿ ಒದ್ದಾಡುವುದು ಬೇಡ ಎಂಬ ಕಾಳಜಿ. ಅಪ್ಪ-ಅಮ್ಮನ ಬಟ್ಟೆ ಧರಿಸಿ, ಸಿನಿಮಾ ಡೈಲಾಗುಗಳನ್ನು ಹೇಳಿ ಬಾಲ್ಯದಲ್ಲೇ ಮಗಳು ಚಪ್ಪಾಳೆ ಗಿಟ್ಟಿಸಿದಾಗಲೂ ಶಕ್ತಿ ಕಪೂರ್ ಖುಷಿಪಟ್ಟವರಲ್ಲ.

ಶ್ರದ್ಧಾ ಕಪೂರ್‌, ಇಂತಹ ವಾತಾವರಣದಲ್ಲಿ ಮನಸ್ಸಿನಲ್ಲೇ ಬೆಚ್ಚಗೆ ಕಾವು ಕೊಡುತ್ತಿದ್ದ ಬಣ್ಣದ ಲೋಕದ ಕನಸನ್ನು ನನಸು ಮಾಡಿಕೊಂಡ ಬಗೆ ರೋಚಕ.

ADVERTISEMENT

ಓದಿನಲ್ಲಿಯೂ ಮುಂದಿದ್ದ ಶ್ರದ್ಧಾ ಅಪ್ಪನನ್ನು ಪೂರ್ತಿ ಧಿಕ್ಕರಿಸಲಿಲ್ಲ. ಆದರೆ ನಟಿಯಾಗುವ ಪ್ರಯತ್ನವನ್ನು ಮಾತ್ರ ಬಿಡಲೇ ಇಲ್ಲ. ‘ಮೈ ಫ್ರೆಂಡ್ ಪಿಂಟೊ’ ಚಿತ್ರಕ್ಕಾಗಿ ನಿರ್ದೇಶಕ- ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಹೊಸಮುಖಗಳ ಹುಡುಕಾಟದಲ್ಲಿದ್ದರು. ಆಡಿಷನ್ ಕೊಡಲು ಹೊರಟ ಹುಡುಗಿಯರಲ್ಲಿ ಶ್ರದ್ಧಾ ಕೂಡ ಇದ್ದರು.

ಅವರನ್ನು ಪರಿಚಯ ಮಾಡಿಕೊಟ್ಟವರಿಗೆ ಈ ಹುಡುಗಿ ಹಿಂದಿ ಚಿತ್ರರಂಗದಲ್ಲಿ ಖಳನಾಗಿ ಹೆಸರು ಮಾಡಿದ ಶಕ್ತಿ ಕಪೂರ್ ಮಗಳು ಎನ್ನುವುದು ಗೊತ್ತಿತ್ತು. ಆದರೆ ಅದು ಶಿಫಾರಸು ಆಗಲಿಲ್ಲ. ಹಾಗಾಗಿ ಆ ಚಿತ್ರದ ಅವಕಾಶ ಕಲ್ಕಿ ಪಾಲಾಯಿತು. ಅದೊಂದು ಉದಾಹರಣೆಯಷ್ಟೆ. ಆಡಿಷನ್ ಗೀಳಿಗೆ ಬಿದ್ದು ಮಗಳೆಲ್ಲಿ ಖಿನ್ನಳಾಗುವಳೋ ಎಂದು ಶಕ್ತಿ ಕಪೂರ್ ಎಚ್ಚರಿಕೆಯ ಮಾತುಗಳನ್ನೂ ಹೇಳಿದ್ದರು. ಒಳಗಿದ್ದ ಕನಸು ಅದನ್ನು ಕೇಳಲು ಬಿಡಬೇಕಲ್ಲ?

ಹುಡುಗಿ, ಆಡಿಷನ್‌ನಿಂದಲೇ ಅನುಭವ ಮೊಗೆದುಕೊಂಡಳು. ಸೋಲನ್ನು ಪಾಠವೆಂದು ಭಾವಿಸಿದಳು. ‘ತೀನ್ ಪಟ್ಟಿ’ ಹಿಂದಿ ಸಿನಿಮಾದ ಆಡಿಷನ್ ಮುಗಿಸಿ ಈ ಅವಕಾಶವೂ ಗಿಟ್ಟುವುದಿಲ್ಲ ಎಂದುಕೊಂಡು ಮನಃಶಾಸ್ತ್ರದ ವಿದ್ಯಾರ್ಥಿನಿಯಾಗಲು ಹೊರಟಿದ್ದಳು. ಆದರೆ ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ಮನೋವಿಜ್ಞಾನದ ಅಧ್ಯಯನದ ಬಯಕೆಗೇ ತಿಲಾಂಜಲಿ ಕೊಟ್ಟಳು.

ಅಮಿತಾಭ್ ಬಚ್ಚನ್, ಬೆನ್ ಕಿಂಗ್ಸ್ ಲೆ ತರಹದ ನಟರ ಜತೆ ಅಭಿನಯಿಸುವ ಅವಕಾಶ ಸಿಕ್ಕರೂ, ಮೊದಲ ಚಿತ್ರ ಶ್ರದ್ಧಾ ಪಾಲಿಗೆ ದೊಡ್ಡ ಚಿಮ್ಮುಹಲಗೆಯೇನೂ ಆಗಲಿಲ್ಲ. ಎರಡನೇ ಚಿತ್ರವೂ ಬೆಳಕನ್ನು ಬೀರದೇ ಇದ್ದಾಗ ಆತಂಕ ಶುರುವಾಯಿತು. ಆಗ ಶ್ರದ್ಧಾ ಹೆಚ್ಚು ಮಾತನಾಡುತ್ತಿದ್ದುದು ತನ್ನ ಮುದ್ದಿನ ನಾಯಿ ಹಾಗೂ ಇಷ್ಟಪಟ್ಟು ಬೆಳೆಸಿದ ಗಿಡಗಳ ಜತೆ.

ಗುಲಾಬಿ, ಅಲೊವೆರಾ, ತುಳಸಿ, ಮನಿ ಪ್ಲಾಂಟ್ ಎಲ್ಲಕ್ಕೂ ಮನೆಯಂಗಳದಲ್ಲಿ ತಾನೇ ನೀರುಣಿಸಿ ಬೆಳೆಸುತ್ತಿದ್ದಳು ಶ್ರದ್ಧಾ. ಆಡಿಷನ್‌ನಲ್ಲಿ ಸೋತಾಗ ಗಿಡಗಳ ಜತೆಗೆ ಸಂವಾದ. ಸಿನಿಮಾ ಸೋತರೂ ಅದಕ್ಕೆ ಕಾರಣವೇನು ಎಂದು ಆ ಗಿಡಗಳನ್ನೇ ಕೇಳುತ್ತಿದ್ದುದು! ‘ಆಶಿಕಿ 2’ ಸಿನಿಮಾ ಬಂದ ಮೇಲೆ ಶ್ರದ್ಧಾ ಕಷ್ಟಗಳೆಲ್ಲ ಕರಗಿದವು. ಅದೃಷ್ಟದ ನಟಿ ಎಂಬ ವಿಶೇಷಣ ಅಂಟಿಕೊಂಡಿತು. ಆಗಲೂ ಅವರು ತಮ್ಮ ಸಂತೋಷ ಹಂಚಿಕೊಂಡಿದ್ದು ಮುದ್ದಿನ ಗಿಡಗಳ ಜತೆಗೆ.

ಇತ್ತೀಚೆಗೆ, ಆಡಿಷನ್‌ಗೆಂದು ಸಾಲುಗಟ್ಟಿ ಹುಡುಗಿಯರು ನಿಂತಿದ್ದರು. ಅದನ್ನು ನೋಡಿದ ಶ್ರದ್ಧಾಗೆ ಎಲ್ಲರ ಮುಖಗಳಲ್ಲೂ ತನ್ನದೇ ಬಿಂಬ ಕಂಡಿತಂತೆ. ನಟಿಯ ಅದ್ಭುತವಾದ ಆತ್ಮವಿಮರ್ಶೆ ಇದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.