ADVERTISEMENT

ಸೆಲ್ಫಿ ಬಿಡಿ, ಹೀಗೆ ಪೋಸು ಕೊಡಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 19:30 IST
Last Updated 6 ಸೆಪ್ಟೆಂಬರ್ 2017, 19:30 IST
ಸೆಲ್ಫಿ ಬಿಡಿ, ಹೀಗೆ ಪೋಸು ಕೊಡಿ
ಸೆಲ್ಫಿ ಬಿಡಿ, ಹೀಗೆ ಪೋಸು ಕೊಡಿ   

ಒಂಬತ್ತು ಗಜದ ಸೀರೆಯುಟ್ಟು, ಮಲ್ಲಿಗೆ ಮುಡಿದು ನಾಚಿ ಸಣ್ಣಗೆ ತುಟಿಯಂಚಲ್ಲಿ ನಗುವ ಮನೆಯೊಡತಿ. ಧೋತಿ ಉಟ್ಟು ಗಂಭೀರವಾಗಿ ಮೀಸೆ ತುದಿಯಲ್ಲೇ ನಗು ಅರಳಿಸುವ ಒಡೆಯ. ಅಂಜುತ್ತಲೇ ಕ್ಯಾಮೆರಾ ನೋಡುತ್ತಾ ಕಣ್ಣು ಬಿಡುವ ಮಕ್ಕಳು... ಒಂದಾನೊಂದು ಕಾಲದಲ್ಲಿ ಫ್ಯಾಮಿಲಿ ಫೋಟೊಗಳು ಇರುತ್ತಿದ್ದುದು ಹೀಗೆ. ಈಗ ಮೊಬೈಲ್ ಇದೆ. ಜೊತೆಗೆ ಸೆಲ್ಫಿ ಸ್ಟಿಕ್ ಕೂಡ ಇದೆ. ಆದರೆ ಫೋಟೊ ತೆಗೆಸಿಕೊಳ್ಳುವ ಸುಖ ಮರೆಯಾಗಿದೆ. ಆ ಕುತೂಹಲವೂ ಇಲ್ಲವಾಗಿದೆ.

ಆದರೆ ಇದೇ ತಿರುಳನ್ನೇ ಇಟ್ಟುಕೊಂಡು ರೆಟ್ರೊ ಫ್ಯಾಮಿಲಿ ಫೋಟೊಗಳನ್ನು ತೆಗೆದುಕೊಡುವ ಮೂಲಕ ಹಳೆ ಕಾಲದ ಸುಂದರ ನಗುವನ್ನೂ ಗೋಡೆಗೆ ತೂಗು ಹಾಕಿ ಎನ್ನುತ್ತಿದ್ದಾರೆ ಮುಂಬೈನ ದಂಪತಿ. ಅದಕ್ಕೆಂದೇ ‘ದಿ ಓಲ್ಡ್ ವರ್ಲ್ಡ್‌ ಫೋಟೊ ಸ್ಟುಡಿಯೊ’ ಎಂಬ ವಿಶೇಷ ಸ್ಟುಡಿಯೊ ವಿನ್ಯಾಸಗೊಳಿಸಿದ್ದಾರೆ. ಹಳೆ ಕಾಲದ ಲುಕ್ ಕೊಡಲು ಗ್ರಾಮಾಫೋನ್, ಹಳೆಯ ಪೇಂಟಿಂಗ್, ಆ್ಯಂಟಿಕ್ ಚೇರ್‌, ಹಳೆ ಕಾರ್ಪೆಟ್‌ ಇಟ್ಟಿದ್ದಾರೆ.

ಮುಂಬೈನ ಶಿರಿಷ್‌ ಕರಾಲೆ ಹಾಗೂ ಪತ್ನಿ ವರ್ಷಾ, ಸಾಂಪ್ರದಾಯಿಕ ಲುಕ್‌ನಲ್ಲಿ ಕೌಟುಂಬಿಕ ಚಿತ್ರ ತೆಗೆದು ಟ್ರೆಂಡ್ ಸೃಷ್ಟಿಸುತ್ತಿರುವವರು. ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕರಾಲೆ, ಹಲವು ಸೆಲೆಬ್ರಿಟಿ, ಮಾಡೆಲ್‌ಗಳ ಫೋಟೊಶೂಟ್ ಮಾಡಿದ್ದವರು. ‘ಸಾಮಾನ್ಯ ಜನರನ್ನು ಸುಂದರವಾಗಿ ಕಾಣಿಸಲು ನಿನ್ನಿಂದ ಸಾಧ್ಯವೇ’ ಎಂದು ಒಮ್ಮೆ ವರ್ಷಾ ಸವಾಲು ಹಾಕಿದ್ದೇ ಇಂಥ ಒಂದು ಫೋಟೊಶೂಟ್‌ಗೆ ಕಾರಣವಾಯಿತು.

ADVERTISEMENT

ಹೀಗೆ ಶೂಟ್ ಮಾಡುವ ಮುನ್ನ ನೂರಾರು ಹಳೆ ಫೋಟೊಗಳನ್ನು ಪರಿಶೀಲಿಸಿದರು. ಈ ಪ್ರಯೋಗ ಹೃದಯಕ್ಕೆ ಹತ್ತಿರವೂ ಎನ್ನಿಸಿ ಪ್ರಯೋಗಕ್ಕೆ ಇಳಿದದ್ದು ಭಾರೀ ಯಶಸ್ಸೂ ಲಭಿಸಿದೆ. ಮುಂಬೈ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್‌ ಆರ್ಟ್ಸ್‌ನ ಪಿರಮಾಳ್ ಗ್ಯಾಲರಿಯಲ್ಲಿ ಹೀಗೆ ಫೋಟೊಗೆ ಪೋಸು ನೀಡಲೆಂದೇ ಸಾವಿರಕ್ಕೂ ಹೆಚ್ಚು ಕುಟುಂಬಗಳು ಬರುತ್ತಿವೆಯಂತೆ.

ಕೆಲವರು ತಮ್ಮ ಮುತ್ತಜ್ಜಿ ಕಾಲದ ಒಡವೆ ವಸ್ತ್ರಗಳನ್ನು ತೊಟ್ಟು ಬರುವರು. ಅವೆಲ್ಲ ಇಲ್ಲದವರಿಗೆ ಇಲ್ಲಿನ ಒಡವೆ ವಸ್ತ್ರಗಳೇ ಜೊತೆಗಿರುತ್ತವೆ. ಸೀರೆ ಉಡಲು ಬರದವರೂ ಈ ಒಂಬತ್ತು ಗಜದ ಸೀರೆಯುಟ್ಟು ನಗು ಚೆಲ್ಲಿದ್ದಾರೆ. ಗುಜರಾತಿ, ಸಿಂಧಿಗಳು, ಬಂಗಾಳಿಗಳಂತೆ ಬಟ್ಟೆ ತೊಡುವ ವಿನ್ಯಾಸಕರೂ ಇಲ್ಲಿದ್ದಾರೆ. ಹೀಗೆ ಫೋಟೊ ತೆಗೆಸಿ ಹಾಗೆ ಮನೆ ಮುಟ್ಟುವಷ್ಟರಲ್ಲಿ ನಿಮ್ಮ ಸುಂದರ ಫ್ಯಾಮಿಲಿ ಫೋಟೊ ನಿಮ್ಮ ಇಮೇಲ್ ತಲುಪಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.