ADVERTISEMENT

ಹಾಡು ಹುಡುಗಿಯ ಸ್ವರ ಪಯಣ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST
ಹಾಡು ಹುಡುಗಿಯ ಸ್ವರ ಪಯಣ
ಹಾಡು ಹುಡುಗಿಯ ಸ್ವರ ಪಯಣ   
ವಿಶಾಖ ಎನ್‌. 
ಬ್ರಿಟನ್‌ನ ಸಂಗೀತ ಸಂಯೋಜಕಿ ಹಾಗೂ ಗಾಯಕಿಯ ಜತೆ ಕಳೆದ ವರ್ಷ ಮೇ ತಿಂಗಳಲ್ಲಿ ಸೋನಿ ಕಂಪೆನಿ ಒಂದು ಒಡಂಬಡಿಕೆ ಮಾಡಿಕೊಂಡಿತು. ಒಂದಿಷ್ಟು ಟ್ಯೂನ್‌ಗಳನ್ನು ಮಾಡಿಕೊಡಲು ಆ ಗಾಯಕಿಗೆ ಕಂಪೆನಿ ಕೊಡಲು ಒಪ್ಪಿದ ಮೊತ್ತ 607.5 ಕೋಟಿ ರೂಪಾಯಿಗೂ ಹೆಚ್ಚು. ತಮ್ಮ ವಯಸ್ಸನ್ನೇ ಸಂಗೀತದ ಆಲ್ಬಂಗಳಿಗೆ ಶೀರ್ಷಿಕೆಯಾಗಿ ಕೊಡುತ್ತಾ ಬಂದಿರುವ ಅಡೆಲ್ ಆ ಪ್ರತಿಭಾವಂತ ಸ್ವರ ಸಂಯೋಜಕಿ.
 
ಪೂರ್ಣ ನಾಮಧೇಯ ಅಡೆಲ್ ಲಾರಿ ಬ್ಲೂ ಅಡ್‌ಕಿನ್ಸ್‌. ಅಮ್ಮ ಪೆನ್ನಿ ಅಡ್‌ಕಿನ್ಸ್. ಅಪ್ಪನ ನೆರಳೇ ಇಲ್ಲದೆ ಮಗಳನ್ನು ಸಲಹಿದ್ದು ಅಮ್ಮ. 
 
ಬ್ರಿಟನ್ ಮೂಲದ ಪೆನ್ನಿ ಇಷ್ಟಪಟ್ಟಿದ್ದು ವೆಲ್ಷ್ ದೇಶದ ಮಾರ್ಕ್ ಇವಾನ್ಸ್‌ ಅವರನ್ನು. ಆದರೆ, ದಾಂಪತ್ಯ ಬದುಕಿನಿಂದ ಕಳಚಿಕೊಂಡ ಅವರು, ಮಡಿಲಲ್ಲಿ ಮಗಳಿಗೆ ಬೆಚ್ಚನೆ ಅನುಭವ ಕೊಟ್ಟರು. ಕಲಾಪ್ರೇಮಿಯಾದ ಆ ತಾಯಿ ಮಗಳ ಸಂಗೀತ ಪ್ರೇಮಕ್ಕೆ ನೀರೆರೆದರು.
 
ಲಂಡನ್‌ನ ಟಾಟನ್‌ಹಮ್‌ನಲ್ಲಿ ಹುಟ್ಟಿದ ಅಡೆಲ್ ಕಲಿತದ್ದು ‘ಬ್ರಿಟ್ ಸ್ಕೂಲ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ ಅಂಡ್ ಟೆಕ್ನಾಲಜಿ’ಯಲ್ಲಿ. ರಿಯಾಜ್‌ಗೆಂದೇ ಮೀಸಲಿದ್ದ ದೊಡ್ಡ ದೊಡ್ಡ ಕೋಣೆಗಳಲ್ಲಿ ತನ್ನ ಕಂಠದ ಪ್ರತಿಧ್ವನಿಯನ್ನು ತಾನೇ ಪದೇ ಪದೇ ಕೇಳುತ್ತಿದ್ದ ಅಡೆಲ್‌ಗೆ ಮಿತಿ–ಸಾಮರ್ಥ್ಯದ ಅರಿವು ಬಲು ಬೇಗ ಆಯಿತು. ಹದಿನೆಂಟನೇ ವಯಸ್ಸಿಗೆ ಅಲ್ಲಿ ಪದವಿ ಪಡೆದು ಹೊರಬಂದಾಗ ತನ್ನ ಕಂಠದಲ್ಲಿನ ಹಿತವಾದ ಗಡಸುತನಕ್ಕೆ ದೊಡ್ಡ ಮಾರುಕಟ್ಟೆ ಇದೆ ಎನ್ನುವುದು ಅವರಿಗೆ ಅರಿವಾಯಿತು. ಸ್ವರ ಸಂಯೋಜಕಿಯ ಪ್ರತಿಭಾ ಪೋಷಣೆಗೆ ಟಾನಿಕ್ ಆಗಿ ಒದಗಿಬಂದದ್ದು ಸಂಗೀತ ಆಲ್ಬಂಗಳ ನಿರ್ಮಾಣ ಕಂಪೆನಿ ‘ಎಕ್ಸ್‌ಎಲ್’.
 
‘ಸ್ಪೈಸ್ ಗರ್ಲ್ಸ್’ ಗೀತೆಗಳು ಜನಪ್ರಿಯವಾಗಿದ್ದ ಕಾಲ. ಅವನ್ನು ಕೇಳುತ್ತಾ ಬಾಲಕಿ ಅಡೆಲ್ ಕೂಡ ಅನುಕರಿಸಿ ಹಾಡುತ್ತಿದ್ದಳು. 11ನೇ ವಯಸ್ಸಿನ ಮಗಳ ಕಛೇರಿಗಳನ್ನು ಅಮ್ಮ ಮನೆಯ ಕೋಣೆಯಲ್ಲೇ ಆಯೋಜಿಸುತ್ತಿದ್ದರು. ಆಪ್ತೇಷ್ಟರೆಲ್ಲ ಸೇರಿ ಅಲ್ಲಿ ಹೊಡೆದ ಚಪ್ಪಾಳೆ ಅಡೆಲ್‌ಗೆ ಆತ್ಮವಿಶ್ವಾಸದ ಸಾರವಾದದ್ದು ಫ್ಲ್ಯಾಷ್‌ಬ್ಯಾಕ್. ನಾಲ್ಕನೇ ವಯಸ್ಸಿನಲ್ಲೇ ಪಾಶ್ಚಿಮಾತ್ಯ ಗಾಯನದ ವರಸೆಗಳ ಸಹಿತ ಹಾಡಿದ ಬಾಲಕಿ ಅವಳು.
 
ತನ್ನ ವಯಸ್ಸನ್ನೇ ಆಲ್ಬಂಗಳಿಗೆ ಶೀರ್ಷಿಕೆಯಾಗಿಸುವ ವಿಭಿನ್ನ ಯೋಚನೆ ಫಲ ಕೊಟ್ಟಿತು. ‘19’, ‘21’, ‘25’ ಇವು ಅಡೆಲ್ ಹೊರತಂದ ಆಲ್ಬಂಗಳ ಶೀರ್ಷಿಕೆಗಳು.
 
2009ರ ಹೊತ್ತಿಗೆ ‘19’ ಆಲ್ಬಂನ 22 ಲಕ್ಷ ಸಿ.ಡಿಗಳು ವಿಶ್ವದಾದ್ಯಂತ ಬಿಕರಿಯಾಗಿದ್ದವು. ‘ಬ್ರಿಟ್ಸ್‌ ಅವಾರ್ಡ್‌’ಗೆ ಅವರ ನಾಮನಿರ್ದೇಶನವಾಗಿತ್ತು. ‘21’ ಆಲ್ಬಂನ ಸಿ.ಡಿಗಳು 26 ದೇಶಗಳಲ್ಲಿ ಮಾರಾಟವಾದದ್ದು ಕೂಡ ವಿಕ್ರಮವೇ. ಬ್ರಿಟನ್ ಹಾಗೂ ಅಮೆರಿಕದಲ್ಲಿ ಅವರ ಅಭಿಮಾನಿಗಳ ದೊಡ್ಡ ಪಡೆಗಳಿವೆ. ಅಲ್ಲಿ ಅಡೆಲ್ ಸಂಗೀತ ಕಛೇರಿ ನಿಗದಿಯಾಯಿತೆಂದರೆ, ನೆರೆಯುವವರಲ್ಲಿ ಶೇ 90ರಷ್ಟು ಜನ ಅವರ ಗೀತೆಗಳಿಗೆ ದನಿ ಸೇರಿಸುತ್ತಾರೆ. ‘ರೋಲಿಂಗ್ ಆನ್‌ ದಿ ಡೀಪ್’, ‘ಸಮ್‌ಒನ್‌ ಲೈಕ್‌ ಯೂ’ ಅವರ ಜನಪ್ರಿಯತೆಯನ್ನು ತುತ್ತತುದಿಗೇರಿಸಿದ ಗೀತೆಗಳು. 2012 ಅವರ ಬದುಕಿನ ಮರೆಯಲಾಗದ ವರ್ಷ. ಜೇಮ್ಸ್‌ ಬಾಂಡ್ ಸಿನಿಮಾ ‘ಸ್ಕೈಫಾಲ್‌’ನ ಶೀರ್ಷಿಕೆ ಗೀತೆಗೆ ಇದೇ ಅಡೆಲ್ ಸ್ವರ ಸಂಯೋಜಿಸಿದ್ದು. ಅದಕ್ಕಾಗಿ ಅವರಿಗೆ ಆಸ್ಕರ್ ಪ್ರಶಸ್ತಿ ಸಂದಿತು. ಅದೇ ವರ್ಷ ಮಗ ಏಂಜೆಲೊಗೆ ಜನ್ಮ ನೀಡಿದರು.
 
‘ಭಗ್ನ ಪ್ರೇಮ, ಸುಖೀ ದಾಂಪತ್ಯ ಎರಡೂ ನನ್ನೆದೆಯಲ್ಲಿ ಹಾಡುಗಳ ಅರಳಿಸಿವೆ’ ಎಂದು ಮೂರು ವರ್ಷಗಳ ಸುದೀರ್ಘ ವಿರಾಮದ ನಂತರ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದರು. ಅವರ ಮೂರನೇ ಆಲ್ಬಂ ಬಿಡುಗಡೆಗೂ ಮೊದಲು ಸದ್ದು ಮಾಡಿದ ‘ಹಲೊ’ ಗೀತೆ ಬ್ರಿಟನ್‌ನಲ್ಲಿ ಹಲವು ತಿಂಗಳುಗಳ ಕಾಲ ನಂಬರ್‌ ಒನ್ ಹಾಡೆನಿಸಿತ್ತು. ಒಂದೇ ಹಾಡಿನ 3 ಲಕ್ಷದ 33 ಸಾವಿರ ಪ್ರತಿಗಳು ಮಾರಾಟವಾಗಿದ್ದವು. ಡಿಜಿಟಲ್ ಡೌನ್‌ಲೋಡ್ ವ್ಯಾಪಕವಾಗಿರುವ ಈ ದಿನಮಾನದಲ್ಲಿ ಇಷ್ಟೆಲ್ಲ ಪ್ರತಿಗಳನ್ನು ಜನ ಕೊಂಡುಕೊಳ್ಳುವಂತೆ ಮಾಡಿರುವ ಮಾಯಾಕಂಠ ಅಡೆಲ್ ಅವರದ್ದು.
 
ಮಗು ಹೆತ್ತ ನಂತರ ಮೂರು ವರ್ಷದ ಬಿಡುವಿನ ನಂತರ ಮೂರನೇ ಆಲ್ಬಂ ಹೊರತಂದ ಅವರದ್ದು ಮಾಗಿದ ಬದುಕು. ಗಾನಪಯಣ ಕೂಡ ಅನನ್ಯ. ಈಗ ಗ್ರ್ಯಾಮಿ ಪ್ರಶಸ್ತಿಯ ಗರಿಯನ್ನು ಸಂಗೀತ ಪಂಡಿತರು ಅವರ ಮುಡಿಗೆ ಸಿಕ್ಕಿಸಿದ್ದಾರೆ.
 
‘ಇಪ್ಪತ್ತೆಂಟು ತುಂಬದ ಅಡೆಲ್ ತಾವೇ ಬರೆದ ಸಾಲುಗಳನ್ನು ಧ್ಯಾನಸ್ಥೆಯಾಗಿ ಹಾಡುವುದನ್ನು ನೋಡುವುದೇ ಮಹದಾನಂದ’ ಎಂಬ ಅಭಿಮಾನಿಗಳ ಮಾತಿಗೂ ಅರ್ಥವಿದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.