ADVERTISEMENT

ಹಿತವಾಗಿರಲಿ ಬೇಸಿಗೆ ಉಡುಪು

ಮಾನಸ ಬಿ.ಆರ್‌
Published 16 ಮೇ 2017, 19:30 IST
Last Updated 16 ಮೇ 2017, 19:30 IST
ಹಿತವಾಗಿರಲಿ ಬೇಸಿಗೆ ಉಡುಪು
ಹಿತವಾಗಿರಲಿ ಬೇಸಿಗೆ ಉಡುಪು   
ಬೆಳೆಯುವ ಕಂದಮ್ಮಗಳಿಗೆ ಬೇಸಿಗೆಯ ತಾಪ ತಾಗದಂತೆ ಕಾಳಜಿ ವಹಿಸುವುದು ಎಲ್ಲ ತಾಯಂದಿರಿಗೆ ಸವಾಲು. ಬಿರು ಬೇಸಿಗೆಯಲ್ಲೂ ಕೆಮ್ಮು, ಕಫ, ನೆಗಡಿ, ಜ್ವರದಂಥ ರೋಗಗಳು ಮಾಮೂಲು. ಇದೆಲ್ಲದರಿಂದ ಮಕ್ಕಳನ್ನು ಆದಷ್ಟು ದೂರ ಇಡುವ ಸೂತ್ರ ಅಮ್ಮನ ಬಳಿಯೇ ಇದೆ.
 
ಬೇಸಿಗೆಯಲ್ಲಿ ಶುಚಿ, ರುಚಿಯಾದ ಆಹಾರ ಕೊಡುವ ಜತೆಗೆ ಹಾಕುವ ಬಟ್ಟೆ ಕೂಡ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ‘ಈಗಿನ ಮಕ್ಕಳು ಯಾವ ಬಟ್ಟೆ ಹಾಕಿದರೂ ಅಳುತ್ತವೆ. ಚುಚ್ಚುತ್ತೆ ಅಂತಾವೆ’ ಎಂದು ಅಮ್ಮಂದಿರು ಪ್ರತಿನಿತ್ಯ ಗೊಣಗುತ್ತಾರೆ.
 
ಮಕ್ಕಳು ಕಾಲಕ್ಕೆ ತಕ್ಕಂತೆ ಆರಾಮದಾಯಕ ಉಡುಗೆಯನ್ನು ಬಯಸುತ್ತಾರೆ. ಫ್ರಾಕ್‌, ಚೂಡಿದಾರ, ಉದ್ದುದ್ದದ ಮಿಡಿಗಳನ್ನು ಮಕ್ಕಳು ಬೇಸಿಗೆಯಲ್ಲಿ ಇಷ್ಟಪಡುವುದಿಲ್ಲ. ಸುಮಾರು ಒಂದು ವರ್ಷದ ಮಗು ಸಹ ತಾನು ಹಾಕಿಕೊಳ್ಳುವ ಬಟ್ಟೆಯಲ್ಲಿ ಆಯ್ಕೆ ಬಯಸುತ್ತದೆ.
 
ತಾಪಮಾನ ಏರಿದಾಗ ಮಕ್ಕಳು ಬಟ್ಟೆ ಹಾಕಿಸಿಕೊಳ್ಳಲು ಅಳುತ್ತವೆ. ಇಂಥ ಸಂದರ್ಭ ಚುಚ್ಚದಿರುವ, ಮೃದುವಾದ, ಮಕ್ಕಳನ್ನು ಹಾಯಾಗಿ ಇಡಬಲ್ಲ ಹತ್ತಿ ಬಟ್ಟೆಗಳನ್ನೇ ಹಾಕಬೇಕು. ಮೆತ್ತಗಿನ ಅಂಗಿ, ಚಡ್ಡಿ, ಸ್ಲೀವ್‌ಲೆಸ್‌ ಅಂಗಿಗಳು, ಮೊಣಕಾಲಿನವರೆಗೂ ಮಾತ್ರ ಬರುವ ಕಾಟನ್ ಫ್ರಾಕ್‌ಗಳನ್ನು ಹಾಕಬಹುದು.
 
ಹೊರಗೆ ಹೋಗುವಾಗ ಡಂಗ್ರಿ, ಫೂಟಿ, ಪೈಜಾಮಗಳ ಬಳಕೆ ಒಳಿತು. ಆದರೆ ಇಂಥ ಬಟ್ಟೆಗಳು ಹೆಚ್ಚು ಹೊತ್ತು ಹಾಕಿದ್ದರೆ ಮಕ್ಕಳ ಮೃದು ಚರ್ಮದ ಮೇಲೆ ಬೆವರು ಗುಳ್ಳೆಗಳು ಕಾಣಿಸಿಕೊಳ್ಳುವ ಅಪಾಯವೂ ಇದೆ.
 
ಜೀನ್ಸ್‌ ಚಡ್ಡಿ, ದಪ್ಪ ಕಾಟನ್‌ ಪ್ಯಾಂಟ್‌ ಮತ್ತು ಸಿಂಥಟಿಕ್ ಚಡ್ಡಿಗಳು ಬೇಸಿಗೆಗೆ ಬೇಡ. ಸಡಿಲವಾದ ಮೃದು ಬಟ್ಟೆಗಳು ಮಕ್ಕಳಿಗೆ ಹಿತ ನೀಡುತ್ತವೆ. ಖುಷಿಯಾಗಿರುವ ಮಕ್ಕಳು ಇಡೀ ವಾತಾವರಣಕ್ಕೆ ಲವಲವಿಕೆ ತುಂಬುತ್ತವೆ.
 
ಚಿತ್ರ: ನಾಗೇಂದ್ರ ಮಯ್ಯ ಫೋಟೊಗ್ರಫಿ
 
ಆನ್‌ಲೈನ್ ತಾಣಗಳು: ಬೇಸಿಗೆಯ ಬಟ್ಟೆಗಳ ಆಯ್ಕೆಗಾಗಿಯೇ ಸಾಕಷ್ಟು ಆನ್‌ಲೈನ್ ತಾಣಗಳೂ ಇವೆ. ದೊಡ್ಡ ಊರುಗಳಲ್ಲಿ ಅಂಗಡಿಗಳ ಹೊರಗೆ ಕಾಟನ್‌ ಬಟ್ಟೆಗಳನ್ನು ನೇತುಹಾಕಿ ಅಮ್ಮಂದಿರನ್ನು ಆಕರ್ಷಿಸುತ್ತಾರೆ. ‘ಸಮ್ಮರ್‌ ಆಫರ್‌’ ಎಂಬ ಆಮಿಷವೂ ಇರುತ್ತದೆ.
 
ಈಗಿನ್ ಆನ್‌ಲೈನ್ ಯುಗದಲ್ಲಿ ಮಕ್ಕಳ ಬಟ್ಟೆ ಖರೀದಿಯ ಆಯ್ಕೆಯೂ ಹೆಚ್ಚು. ಆನ್‌ಲೈನ್ ತಾಣಗಳಾದ ಫಸ್ಟ್‌ಕ್ರೈ ಹಾಗೂ ಹಾಪ್‌ಸ್ಕಾಚ್‌ಗಳಲ್ಲಿ ಉತ್ತಮ ಗುಣಮಟ್ಟದ ಮಕ್ಕಳ ಬಟ್ಟೆಗಳು ಲಭ್ಯ. ಬೆಲೆಯೂ ಅಂಥ ದುಬಾರಿ ಎನಿಸದು. ಆದರೆ ಅಮ್ಮಂದಿರಿಗೆ ಚೌಕಾಸಿ ಮಾಡಿದ ನೆಮ್ಮದಿ ಮಾತ್ರ ಸಿಗದು. ಜಾಲತಾಣಗಳಲ್ಲಿ ಬಟ್ಟೆ ಖರೀದಿಸುವಾಗ ಡೆಲಿವರಿ ಚಾರ್ಜಸ್‌ ಸಹ ಗಮನದಲ್ಲಿರಿಸಿಕೊಳ್ಳಬೇಕು. ಇದು ಸಾಮಾನ್ಯವಾಗಿ ₹100ರ ಆಸುಪಾಸು. 
 
ಈ ಜಾಲತಾಣಗಳ ಒಂದು ಬಹುಮುಖ್ಯ ಉಪಯೋಗ ಎಂದರೆ ಯಾವ ದಿನಾಂಕದಂದು ಬಟ್ಟೆ ನಮಗೆ ತಲುಪಲಿದೆ ಎಂಬ ಮಾಹಿತಿ ಕೂಡ ಬಟ್ಟೆಯ ಬೆಲೆಯ ಜತೆಗೇ ಲಗತ್ತಿಸಿರುತ್ತಾರೆ. ಇದನ್ನು ಆಧರಿಸಿ ನಮಗೆ ಬೇಕಾದ ವೇಳೆಗೆ ಬಟ್ಟೆಗಳನ್ನು ಕೊಂಡುಕೊಳ್ಳಬಹುದು.
 
ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಧಾರವಾಡಗಳಲ್ಲಿ ಇರುವ ದೇಸಿ ಅಂಗಡಿಗಳಲ್ಲೂ ಮಕ್ಕಳಿಗೆ ಹಿತ ಕೊಡುವ ಬಟ್ಟೆಗಳು ಸಿಗುತ್ತವೆ. ಕಾಟನ್ ಕೋಟ್‌, ಕಾಟನ್ ಕುರ್ತಾ ಇಲ್ಲಿನ ವಿಶೇಷ.
 
ಕೈಮಗ್ಗದಲ್ಲಿ ತಯಾರಾಗುವ ಬಟ್ಟೆಗಳಲ್ಲಿ ಮಕ್ಕಳು ಮುದ್ದಾಗಿ ಕಾಣುತ್ತಾರೆ. ಸರಾಗವಾಗಿ ಗಾಳಿ ಆಡುವುದರಿಂದ ಬೆವರುಗುಳ್ಳೆಯಂಥ ಸಮಸ್ಯೆಯೂ ಇರುವುದಿಲ್ಲ. ಹೊರಗೆ ಹೋಗುವಾಗ ಉದ್ದ ತೋಳಿನ ಕುರ್ತಾಗಳನ್ನು ಹಾಕಿಕೊಂಡು ಹೋಗುವುದರಿಂದ ಮಕ್ಕಳ ಚರ್ಮದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಬಹುದು.
 
ಆನ್‌ಲೈನ್ ತಾಣಗಳಲ್ಲಿ ಬೇಸಿಗೆ ಬಟ್ಟೆಗಳ ಬೆಲೆ ₹80ರಿಂದ ಆರಂಭ. ₹3ಸಾವಿರದವರೆಗೂ ಬೆಲೆ ಇದೆ. ಬನಿಯನ್ ಮಾದರಿಯಲ್ಲಿ ತೋಳುಗಳು ಇಲ್ಲದ ಸಿಂಪಲ್ ಫ್ರಾಕ್‌ಗಳು ₹100ಕ್ಕೆ ಲಭ್ಯ. ಕಾಟನ್ ಡಂಗ್ರಿಗಳು ₹200ರಿಂದ ಆರಂಭ.
 
ಅಂಗಡಿಗಳಲ್ಲಿ ₹200ರಿಂದ ಬೇಸಿಗೆ ಉಡುಪುಗಳು ಸಿಗುತ್ತವೆ. ಇದಕ್ಕಿಂತ ಕಡಿಮೆ ಬೆಲೆಯ ಉಡುಪು ಸಿಗುತ್ತವೆಯಾದರೂ ಗುಣಮಟ್ಟ ಅಷ್ಟು ಚೆನ್ನಾಗಿ ಇರುವುದಿಲ್ಲ. ದೇಸಿ ಅಂಗಡಿಗಳಲ್ಲಿ ಮಕ್ಕಳ ಕುರ್ತಾ ಮತ್ತು ಕೋಟ್‌ಗಳಿಗೆ ₹200ರಿಂದ 400ರವರೆಗೆ ಬೆಲೆ ಇದೆ.
****
ಮಗುವಿನ ನಗುವಿಗೆ
* ಬೇಸಿಗೆಯಲ್ಲಿ ಟ್ರೆಂಡಿ, ಬ್ರಾಂಡೆಡ್‌ ಬಟ್ಟೆಗಳಿಗೆ ಮೊರೆ ಹೋಗಬೇಡಿ.
* ಸರಳ ವಿನ್ಯಾಸದ, ಮೃದು ಕಾಟನ್ ಬಟ್ಟೆಗಳಿಗೆ ಆದ್ಯತೆ ಕೊಡಿ.
* ಬೇಸಿಗೆ ದಿನಕ್ಕೆ ಕನಿಷ್ಠ ಮೂರು ಬಾರಿ ಬಟ್ಟೆ ಬದಲಿಸಿ.
* ಬೆಳಿಗ್ಗೆ ಸ್ನಾನ ಮಾಡಿಸಿದ್ದರೂ, ರಾತ್ರಿ ಮಲಗುವ ಮೊದಲು ಉಗುರು ಬೆಚ್ಚಗಿನ ನೀರಿನಿಂದ ಮತ್ತೊಮ್ಮೆ ಸ್ನಾನ ಮಾಡಿಸಿ.
* ಮೃದುವಾದ ಕಾಟನ್ ಬಟ್ಟೆಯಿಂದ ಮೈ ಒರೆಸಿ. ಒರಟಾಗಿ ತಿಕ್ಕಬೇಡಿ.
* ತೊಳೆದ ಹಾಗೂ ಒಣಗಿದ ಶುಭ್ರ ಬಟ್ಟೆಗಳನ್ನೇ ಹಾಕಬೇಕು.
* ಬೇಸಿಗೆಯಲ್ಲಿ ಡಯಾಪರ್ ಬಳಕೆ ಕಡಿಮೆ ಮಾಡಿ. ಅನಿವಾರ್ಯ ಇದ್ದರೆ ಕಾಟನ್ ಪ್ಯಾಡ್‌ಗಳನ್ನು ಬಳಸಿ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.