ADVERTISEMENT

ಹೀಗೆ ಮಾಡಿದರೆ ಪ್ರೇಯಸಿ ಕೈಕೊಟ್ಟಾಳು!

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಹೀಗೆ ಮಾಡಿದರೆ ಪ್ರೇಯಸಿ ಕೈಕೊಟ್ಟಾಳು!
ಹೀಗೆ ಮಾಡಿದರೆ ಪ್ರೇಯಸಿ ಕೈಕೊಟ್ಟಾಳು!   
ಎಷ್ಟೋ ವರ್ಷಗಳಿಂದ ಕಾಪಾಡಿಕೊಂಡು ಬಂದ ಸಂಬಂಧಗಳು ಮುರಿದುಬೀಳಲು  ವರ್ತನೆಗಳೂ ಕಾರಣವಾಗುತ್ತವೆ. ಪ್ರಿಯಕರನ ಕೆಲ ವರ್ತನೆಗಳಿಂದ  ಪ್ರೇಯಸಿಗೆ ತಿರಸ್ಕಾರ ಮನೋಭಾವ ಬರಬಹುದು. 

ನೀವು ನಿಮ್ಮ ಸಂಬಂಧ, ಪ್ರೀತಿಯನ್ನು ಉಳಿಸಿಕೊಳ್ಳಬೇಕಾದರೆ ನಿಮ್ಮ ವರ್ತನೆಗಳ ಮೇಲೆ ನಿಮ್ಮದೇ ಹದ್ದಿನಕಣ್ಣು ಇಡುವುದು ಒಳಿತು. ಇಷ್ಟಕ್ಕೂ ಆಕೆ ಇಷ್ಟಪಡದ ಸಂಗತಿಗಳೇನು ಗೊತ್ತೇ...
 
ಮಾತನಾಡಿಸುವುದೇ ಕಷ್ಟ: ಚೆನ್ನಾಗಿ ಮಾತನಾಡುತ್ತಿದ್ದ ನಿಮ್ಮ ಪ್ರೇಯಸಿ, ಇದ್ದಕ್ಕಿದ್ದಂತೆ ನಿಮ್ಮಿಂದ ದೂರ ಇರಲು ಪ್ರಯತ್ನಿಸುತ್ತಾಳೆ. ಇಷ್ಟು ದಿನ ನಿಮ್ಮ ಜತೆ ಖುಷಿ ಖುಷಿಯಾಗಿದ್ದವಳು, ಇದ್ದಕ್ಕಿದ್ದಂತೆ ಅಪರಿಚಿತರಂತೆ ನೋಡುತ್ತಾಳೆ. ನಿಮ್ಮ ಮಾತು ಸಹಿಸಲಾಗುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ವ್ಯಕ್ತಪಡಿಸುತ್ತಾಳೆ.  
 
ನೀವು ಎಷ್ಟೇ ಮಾತಾಡಿದರೂ ಆಕೆ  ಸ್ಪಂದಿಸುವುದಿಲ್ಲ. ನೀವು ಮಾತನಾಡಿಸದಿದ್ದರೆ ತನಗೇನೂ ನಷ್ಟವಿಲ್ಲ ಎಂಬಂತೆ ವರ್ತಿಸುತ್ತಾಳೆ. ಆಕೆಯ ಮುಖಭಾವ, ಕಣ್ಣಿನ ನೋಟದಲ್ಲಿ ನಿಮ್ಮ ಬಗೆಗಿನ ತಿರಸ್ಕಾರ ಎದ್ದುಕಾಣುತ್ತದೆ. ನೀವು ಮಾತನಾಡಿಸಲು ಪ್ರಯತ್ನಿಸಿದ ಪ್ರತಿ ಸಂದರ್ಭದಲ್ಲೂ ಬೇಜಾರಾಗಿರುವಂತೆ ಮತ್ತು ಯಾವುದರಲ್ಲೂ ಆಸಕ್ತಿ ಇಲ್ಲ ಎಂಬಂತೆ  ವರ್ತಿಸುತ್ತಾಳೆ.
 
ಕಾರಣವಿಲ್ಲದೆ ದೂಷಣೆ: ತನ್ನ ನೋವಿಗೆ ಮತ್ತು ಸಮಸ್ಯೆಗೆ ಬೇರೆ ಯಾವುದೋ ಕಾರಣವಿದೆ ಎಂದು ಹೇಳುತ್ತಿದ್ದವಳು, ನಿಮ್ಮಿಂದ ದೂರವಾಗಲು ಬಯಸಿದಾಗ ತನ್ನ ಎಲ್ಲಾ ದುಃಖಕ್ಕೆ ನೀವೇ ಕಾರಣ ಎಂಬಂತೆ ವರ್ತಿಸುತ್ತಾಳೆ.
 
ಮಾತನಾಡಿಸುವಾಗ ಆಕಸ್ಮಿಕವಾಗಿ ನೀವು ಒಂದು ತಪ್ಪು ಮಾಡಿದರೂ ಅದನ್ನು ಮಹಾಪರಾಧ ಎಂದೇ ಭಾವಿಸುತ್ತಾಳೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ವಾಗ್ವಾದಕ್ಕೆ ಇಳಿಯುತ್ತಾಳೆ. ಇದರಿಂದ ನಿಮ್ಮಿಬ್ಬರ ನಡುವಿನ ಸಂಬಂಧ ಹಳಸಲು ಶುರುವಾಗುತ್ತದೆ.
 
ಇಷ್ಟಪಡದ ಸ್ನೇಹಿತರ ಭೇಟಿ: ನಿಮ್ಮ ಸ್ನೇಹಿತರನ್ನು ಭೇಟಿ ಮಾಡುವುದಾಗಲೀ, ಅವರೊಂದಿಗೆ ಹರಟೆ ಹೊಡೆಯಲು ಕೆಲ ಯುವತಿಯರು ಇಷ್ಟಪಡುವುದಿಲ್ಲ. ಸ್ನೇಹಿತರ ಕಮೆಂಟ್‌ಗಳು ಸಂಬಂಧ ಮುರಿದುಬೀಳಲು ದಾರಿ ಮಾಡಿಕೊಡಬಹುದು.
 
ಮಾತು ಸಂಬಂಧ ಕೆಡಿಸಬಾರದು: ಪ್ರೇಯಸಿಯೊಂದಿಗೆ ಸಲುಗೆಯಿಂದ  ಮಾತನಾಡುವಾಗಲೂ ಎಚ್ಚರ ವಹಿಸಬೇಕು. ಜೋಕ್ಸ್‌ ಹೇಳುವಾಗ, ಎಂಥ ಪದಗಳ ಬಳಕೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಗಮನವಿರಬೇಕು. ಮಾತಿನ ಮೇಲೆ ಹಿಡಿತವಿದ್ದರೆ ಸಾಕು.
 
ಭವಿಷ್ಯದ ಬಗ್ಗೆ ಮಾತಿಲ್ಲ!
ಆಕೆ ನಿಮ್ಮೊಂದಿಗೆ ಭವಿಷ್ಯದ  ಬಗ್ಗೆ  ಎಷ್ಟೆಲ್ಲಾ ಕನಸುಗಳನ್ನು ಹಂಚಿಕೊಳ್ಳುತ್ತಿದ್ದಳು ನೆನಪಿಸಿಕೊಳ್ಳಿ. ಇತ್ತೀಚೆಗೆ ಅಂತಹ ಯಾವುದೇ ಮಾತುಗಳು ನಿಮ್ಮ ಮಧ್ಯೆ ಬಂದಿಲ್ಲವೇ? ಹಾಗಿದ್ದರೆ ಭವಿಷ್ಯದ ಬಗ್ಗೆ ಬೇರೆಯದೇ ಲೆಕ್ಕಾಚಾರ ಅವಳ ಮನಸ್ಸಿನಲ್ಲಿ ನಡೆದಿರುವ ಸಾಧ್ಯತೆ ಹೆಚ್ಚು. ಅದು  ನಿಮ್ಮ ಮತ್ತು ಆಕೆಯ ಸಂಬಂಧ ಮುರಿದುಬೀಳುವ ಮುನ್ಸೂಚನೆಯೂ ಆಗಿರಬಹುದು.
 
ಕಿರಿಕಿರಿ ಎನಿಸುವ ನಡವಳಿಕೆಗಳು
ಕೆಲವೊಮ್ಮೆ ನಮ್ಮ ನಡವಳಿಕೆಗಳು ಆಕೆಯ ಮನಸಿನ ಮೇಲೆ ಗಾಸಿ ಮಾಡಬಹುದು. ಸಲುಗೆ ನೀಡಿದ್ದಾಳೆ ಎಂದು ಬಿಗಿಯಾಗಿ ತಬ್ಬಿಕೊಳ್ಳುವುದು, ಮುತ್ತು ಕೊಡುವುದು , ಮುದ್ದಾಡುವುದು ಕೆಲವರಿಗೆ ಕಿರಿಕಿರಿ ಎನಿಸಬಹುದು. 
 
ನಿರುತ್ಸಾಹ: ನೀವಿಬ್ಬರು ಸಣ್ಣ ಸಣ್ಣ ಖುಷಿಯನ್ನೂ ಎಷ್ಟು ಸಡಗರದಿಂದ ಹಂಚಿಕೊಳ್ಳುತ್ತಿದ್ದಿರಿ ಅಲ್ವೇ? ಹಬ್ಬ ಹರಿದಿನ, ಜನ್ಮದಿನ, ಹೊಸ ನೌಕರಿ, ಪ್ರಮೋಷನ್‌, ಹೊಸ ಬಟ್ಟೆ ಹೀಗೆ ಪ್ರತಿ ಸಂದರ್ಭವನ್ನೂ ಎಂಜಾಯ್‌ ಮಾಡುತ್ತಿದ್ದಿರಿ.
 
ಆಕೆ ಪ್ರತಿ ಸಲವೂ ಮೊದಲ ಭೇಟಿಯಷ್ಟೇ ಉಲ್ಲಾಸದಿಂದ ಸಿಂಗರಿಸಿಕೊಂಡು ಬರುತ್ತಿದ್ದರಲ್ವೇ? ಈಗ ಅದರಲ್ಲಿ ಬರೀ ನಿರುತ್ಸಾಹವನ್ನೇ ತೋರಿಸುತ್ತಿದ್ದಾಳೆ! ಯಾವುದೇ ಕಾರ್ಯಕ್ರಮಕ್ಕೂ ನಿಮ್ಮೊಂದಿಗೆ ಬರಲು ಹಿಂಜರಿಯುತ್ತಿದ್ದಾಳೆ! ಸಂಶಯವೇ ಬೇಡ. ನಿಮ್ಮ ಮತ್ತು ನಿಮ್ಮೊಂದಿನ ಸಂಬಂಧದಲ್ಲಿ ಬಿರುಕು ಮೂಡುವ ಲಕ್ಷಣವೇ ಅದು. 
 
ಹಾಗಂತ ಎಲ್ಲವೂ ಮುಗಿದೇ ಹೋಯಿತು ಅಂದುಕೊಳ್ಳಬೇಕಾಗಿಲ್ಲ. ನಿಮ್ಮಲ್ಲಿ ಹೊಸ ಚೈತನ್ಯ, ಹೊಸ ಹುರುಪು ತುಂಬಿಕೊಂಡು ತಪ್ಪುಗಳನ್ನು ತಿದ್ದಿಕೊಂಡು ಹೊಸ ವ್ಯಕ್ತಿಯಾಗಿ ನಿಮ್ಮ ಪ್ರೇಮಿಯ ಮುಂದೆ ನಿಲ್ಲಿ. ಭವಿಷ್ಯದ ಹಾದಿ ಮತ್ತೆ ತೆರೆಯುತ್ತದೆ...
(ಸಂಗ್ರಹ: ರಮೇಶ ಕೆ.)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.