ADVERTISEMENT

‘ಹೀಗೊಂದು ದಿನ’ ಏನಾಯ್ತು ಅಂದ್ರೆ...

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 19:30 IST
Last Updated 10 ಸೆಪ್ಟೆಂಬರ್ 2017, 19:30 IST
‘ಹೀಗೊಂದು ದಿನ’ ಚಿತ್ರದ ದೃಶ್ಯ
‘ಹೀಗೊಂದು ದಿನ’ ಚಿತ್ರದ ದೃಶ್ಯ   

ಇತ್ತೀಚೆಗೆ ಗುಟ್ಟಾಗಿ ಮದುವೆ ಮಾಡಿಕೊಂಡು ಸುದ್ದಿಯಾದ ನಟಿ ಸಿಂಧು ಲೋಕನಾಥ್‌ ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ‘ಹೀಗೊಂದು ದಿನ’ ಚಿತ್ರದ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಯುಟ್ಯೂಬ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಿಟ್ಸ್‌ ಸಿಕ್ಕಿವೆ.

ಅಮ್ಮನ ಮಾತನ್ನು ಕೇಳದ ಮಗಳೊಬ್ಬಳು ನಗರ ಸುತ್ತಲು ಹೊರಡುತ್ತಾಳೆ. ಅಲ್ಲಿ ಬೇರೆ ಬೇರೆ ಜನರನ್ನು ಭೇಟಿ ಮಾಡುತ್ತಾಳೆ. ಕೆಲ ಅನಿರೀಕ್ಷಿತ ಘಟನೆಗಳೂ ನಡೆಯುತ್ತವೆ. ಕೊನೆಗೆ ಈ ಜಗತ್ತೇ ನನಗೆ ವಿರುದ್ಧವಾಗಿದೆ ಎಂದು ಆಕೆಗೆ ಅನಿಸತೊಡಗುತ್ತದೆ. ಆಗ ಪರಿಚಯವಾದ ವ್ಯಕ್ತಿ "ನೀನು ಬೆನ್ನು ತಿರುಗಿಸು ನಿಲ್ಲು, ಆಗ ಜಗತ್ತೇ ನಿನ್ನ ಹಿಂದೆ ಇರುತ್ತದೆ’ ಎಂದು ಹೇಳುವುದು ಗಂಭೀರ ಪರಿಸ್ಥಿತಿಯಲ್ಲೂ ನಗು ಉಕ್ಕಿಸುವಂತಿದೆ.

ಸುಮಾರು ಮೂರು ನಿಮಿಷದ ಟ್ರೇಲರ್‌ ಪೂರ್ತಿ ಸಿಂಧು ಆವರಿಸಿಕೊಂಡಿದ್ದಾರೆ. ಅವರ ನಿರೂಪಣೆಯಲ್ಲಿಯೇ ಟ್ರೇಲರ್ ಸಾಗುತ್ತದೆ. ಮಗಳು ಮನೆ ಬಿಟ್ಟು ಹೋಗಿದ್ದು ಯಾಕೆ ಎಂಬುದು ಮಾತ್ರ ಗುಟ್ಟುಗುಟ್ಟು. ಬಹುಶಃ ಪ್ರೇಕ್ಷಕರು ಸಿನಿಮಾ ನೋಡಿಯೇ ಅರ್ಥ ಮಾಡಿಕೊಳ್ಳಬೇಕು. ‘ಇದೊಂದು ಪ್ರಯೋಗಾತ್ಮಕ ಚಿತ್ರ. ಅನ್‌ಕಟ್‌ ಫಿಲ್ಮ್’ ಎಂಬುದು ಚಿತ್ರತಂಡದ ಹೆಮ್ಮೆ.

ADVERTISEMENT

ಪ್ರವೀಣ್‌ ತೇಜ್‌, ಗುರುಪ್ರಸಾದ್‌, ಪದ್ಮಜಾರಾವ್‌, ನಾಗೇಂದ್ರ ಶಾ, ಶೋಭರಾಜ್‌, ಮಿತ್ರ, ಗಿರಿ, ಬಾಜಾಜಿ ಮನೋಹರ್‌, ಗಿರಿಜಾಲೋಕೇಶ್‌ ಇತರರ ದರ್ಶನವೂ ಟ್ರೇಲರ್‌ನಲ್ಲಿ ಆಗುತ್ತದೆ. ವಿಕ್ರಮ್‌ ಯೋಗಾನಂದ್‌ ನಿರ್ದೇಶನದ ಚಿತ್ರಕ್ಕೆ ಅಭಿಲಾಷ್‌ ಗುಪ್ತಾ ಅವರ ಸಂಗೀತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.