ADVERTISEMENT

‘ಮಿಸ್‌ ಯೂನಿವರ್ಸ್‌’ ತವಕದಲಿ ಊರ್ವಶಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2015, 19:30 IST
Last Updated 27 ಅಕ್ಟೋಬರ್ 2015, 19:30 IST

ತಮ್ಮ ದೇಹದ ಸ್ವರೂಪ ಇರುವುದೇ ಬಿಕನಿ ಡ್ರೆಸ್‌ ಧರಿಸಲು ಅನುಕೂಲ ಆಗುವಂತೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ರೂಪದರ್ಶಿ ಕಮ್ ಬಾಲಿವುಡ್ ನಟಿ ಊರ್ವಶಿ ರೌತೇಲಾ ಈಗ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

21 ವರ್ಷದ ಸುಂದರಿ ಊರ್ವಶಿ ಈ ಸ್ಪರ್ಧೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರೆ. ಸ್ಪರ್ಧೆ ಇದೇ ಡಿಸೆಂಬರ್ 19 ರಂದು ಅಮೆರಿಕದ ಲಾಸ್ ವೇಗಸ್‌ನಲ್ಲಿ ನಡೆಯಲಿದೆ. 2011 ರಲ್ಲಿ ಸೌತ್ ಕೊರಿಯಾದಲ್ಲಿ ನಡೆದ ‘ಮಿಸ್ ಏಷಿಯನ್ ಸೂಪರ್ ಮಾಡೆಲ್’ ಕಿರೀಟವನ್ನು ತಮ್ಮದಾಗಿಸಿಕೊಂಡಿರುವ ಇವರು ‘ಮಿಸ್ ದಿವ 2015’ ಎಂಬ ಬಿರುದನ್ನೂ ಗಳಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ‘ಮಿಸ್‌ ಯೂನಿವರ್ಸ್‌ ಇಂಡಿಯಾ 2012’, ‘ಮಿಸ್ ಟೂರಿಸಂ ಕ್ವೀನ್‌ ಆಫ್‌ ದಿ ಇಯರ್‌ ಇಂಟರ್‌ನ್ಯಾಷನಲ್‌ 2011’, ‘ಏಷ್ಯನ್‌ ಸೂಪರ್ ಮಾಡೆಲ್‌ 2011’, ‘ಮಿಸ್‌ ಟೀನ್‌ ಇಂಡಿಯಾ 2009’ ಹೀಗೆ ಹಲವು ಮುಕುಟಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಿನಿಮಾ ನಿರ್ಮಾಪಕರ ಅನುಮತಿ ಪಡೆದುಕೊಂಡು ತಾವು ಒಪ್ಪಿರುವ ಸಿನಿಮಾ ಪ್ರಾಜೆಕ್ಟ್‌ಗಳನ್ನೆಲ್ಲಾ ಬದಿಗೊತ್ತಿರುವ ಊರ್ವಶಿ, ‘ಮಿಸ್‌ ಯೂನಿವರ್ಸ್‌ ಸ್ಪರ್ಧೆಗೆ ಭರದ ಸಿದ್ಧತೆ ನಡೆಸಿದ್ದಾರೆ. ಊರ್ವಶಿ ರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರ್ತಿ ಅಷ್ಟೇ ಅಲ್ಲದೇ ನೃತ್ಯಪ್ರವೀಣೆ ಕೂಡ. ನೃತ್ಯ ಕಲಾವಿದೆಯಾಗಿರುವ ಅಮ್ಮನ ಬಳಿಯೇ ಮೂರನೇ ವಯಸ್ಸಿನಲ್ಲಿರುವಾಗಿನಿಂದಲೇ ನೃತ್ಯ ಅಭ್ಯಾಸ ಶುರುಮಾಡಿಕೊಂಡಿರುವ ಈಕೆ, ಭರತನಾಟ್ಯ, ಕೂಚಿಪುಡಿ, ಸಾಲ್ಸಾ ಮುಂತಾದ ಶೈಲಿಗಳಲ್ಲಿ ಪರಿಣತಿ ಸಾಧಿಸಿದ್ದಾರೆ.

ಬಾಲಿವುಡ್ ಸಿನಿಮಾ ‘ಸಿಂಗ್ ಸಾಬ್ ದಿ ಗ್ರೇಟ್’ ಮೂಲಕ ಸಿನಿ ಜರ್ನಿಯನ್ನು ಆರಂಭಿಸಿದವರು ಇವರು. ‘ಸನಮ್ ರೇ’ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದೆ. ಈ ಚಿತ್ರದಲ್ಲಿ ಇವರದ್ದು ಬಿಕನಿ ಧರಿಸುವ ಪಾತ್ರವಿದೆ. ಅದನ್ನು ಖುಷಿಯಿಂದ ಒಪ್ಪಿಕೊಂಡಿರುವ ಊರ್ವಶಿ, ‘ನನ್ನದು ನ್ಯಾಚುರಲ್ ಟೋನ್ಡ್ ಬಾಡಿ. ಇದರಿಂದ ಬಿಕಿನಿ ಹಾಕಲು ತುಂಬಾ ಸುಲಭ. 

ನಾನು ಯಾವಾಗಲೂ ಬಿಕಿನಿ ಧರಿಸಲು ತಯಾರಾಗಿದ್ದೇನೆ. ಬಿಕಿನಿ ಸೀನ್‌ನ ಶಾಟ್‌ಗಳನ್ನು ಒಂದೇ ಕ್ಷಣದಲ್ಲಿ ಓಕೆ ಮಾಡಿದ್ದನ್ನು ಕಂಡು ‘ಸನಮ್‌ ರೇ’  ಚಿತ್ರತಂಡ ತುಂಬಾ ಖುಷಿಪಟ್ಟಿದೆ’ ಎಂದು ಸಂತೋಷದಿಂದ ಹೇಳುತ್ತಾರೆ. ಅಂದಹಾಗೆ ಊರ್ವಶಿ, ‘ಮಿ. ಐರಾವತ’ ಕನ್ನಡ ಚಿತ್ರದಲ್ಲಿ  ದರ್ಶನ್‌ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಮಿ. ಐರಾವತ ಚಿತ್ರ ಅಮೆರಿಕದ 45 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸುದ್ದಿ ಮಾಡಿರುವುದು ಇಲ್ಲಿ ಉಲ್ಲೇಖಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.