ADVERTISEMENT

ಚೆಲುವೆಯ ಸೌಂದರ್ಯ ಗುಟ್ಟು

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST
ಕೀರ್ತಿ ಸುರೇಶ್‌
ಕೀರ್ತಿ ಸುರೇಶ್‌   

ಸಿಡುಕಿದರೂ ಚೆಂದ, ಕಿರುನಗೆ ಬೀರಿದರಂತೂ ಮುದ್ದುಮುದ್ದು, ಮಾತಿನ ಧಾಟಿಯೂ ಇಂಪು, ಕಣ್ಣ ನೋಟ ಎದೆಯ ತಾಕುವಷ್ಟು ಮೊನಚು. ಚೆಲುವಿನ ಖಣಿಯೇ ಆದ ಈಕೆ ಪರದೆಯ ಮೇಲೆ ಕಾಣಿಸಿಕೊಂಡರೆ ಸಿಳ್ಳೆಗಳ ಸುರಿಮಳೆ.

ಯಾರದು ಗೊತ್ತಾಯ್ತಾ? ಇನ್ಯಾರು, ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚುತ್ತಿರುವ ಚೆಲುವೆ ಕೀರ್ತಿ ಸುರೇಶ್‌.

ಬಾಲ ಕಲಾವಿದೆಯಾಗಿ ಸಿನಿರಂಗಕ್ಕೆ ಕಾಲಿಟ್ಟ ಕೀರ್ತಿ ಮಲಯಾಳಂ ಚಿತ್ರ ನಿರ್ಮಾಪಕ ಸುರೇಶ್‌ ಕುಮಾರ್‌ ಹಾಗೂ ನಟಿ ಮೇನಕಾ ಅವರ ‍ಪುತ್ರಿ. ಫ್ಯಾಷನ್‌ ಡಿಸೈನಿಂಗ್‌ ಪದವೀಧರೆ.

ADVERTISEMENT

ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಇವರು ಮಲಯಾಳಂನ ‘ಗೀತಾಂಜಲಿ’ ಚಿತ್ರದ ಮೂಲಕ ನಾಯಕ ನಟಿಯಾಗಿ ಬಡ್ತಿ ಪಡೆದರು. ಅದರಲ್ಲಿ ಅವರದ್ದು ದ್ವಿಪಾತ್ರ. ಮುಂದಿನ ಚಿತ್ರ ರಿಂಗ್‌ ಮಾಸ್ಟರ್‌ನಲ್ಲಿ ಅಂಧೆಯ ಪಾತ್ರಕ್ಕೆ ಬಣ್ಣಹಚ್ಚಿದರು. ಕೀರ್ತಿ ಅವರ ಚೆಲುವು, ನಟನಾ ಕೌಶಲ ಕಂಡು ತಮಿಳು, ತೆಲುಗು ಚಿತ್ರರಂಗದಿಂದ ಆಹ್ವಾನ ಬಂತು. ಇದೀಗ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ‘ತಾನಾ ಸೇರಂದ ಕೂಟಂ’ನಲ್ಲಿ ಸೂರ್ಯ ಎದುರು ಕೀರ್ತಿ ನಾಯಕಿ.

ಆಕರ್ಷಕ ಮೈಮಾಟವೇ ಈ ಚೆಲುವೆಯ ಯಶಸ್ಸಿನ ರಹಸ್ಯ. ಇಂಥ ಮೈಮಾಟ ಪಡೆಯಲು ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಸಿನಿರಂಗಕ್ಕೆ ಬರುವ ಮೊದಲು ಕೀರ್ತಿ ಗುಂಡುಗುಂಡಾಗಿದ್ದರಂತೆ. ಬೆಳ್ಳಿತೆರೆಯ ವ್ಯಾಮೋಹದಿಂದ ಬಾಗು ಬಳುಕಿನ ದೇಹ ಬೇಕೇಬೇಕು ಎಂದು ಫಿಟ್‌ನೆಸ್‌ ಮಂತ್ರವನ್ನು ಜಪಿಸಲಾರಂಭಿಸಿದರು. ಪ್ರಾರಂಭದಲ್ಲಿ ವಾರದ ಒಂದು ದಿನವಷ್ಟೇ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದರು. ಕಾರ್ಡಿಯೊ ವ್ಯಾಯಾಮ, ರನ್ನಿಂಗ್‌, ಸೈಕ್ಲಿಂಗ್‌ ಮಾಡುತ್ತಿದ್ದರು. ತೂಕ ಇಳಿಸುವ ಈ ಕಸರತ್ತುಗಳು ಅವರಿಗೆ ಸುಸ್ತು ಹೊಡೆಸಿಬಿಡುತ್ತಿದ್ದವು. ನಿರಂತರ ವ್ಯಾಯಾಮ, ಯೋಗಾಭ್ಯಾಸ ಮಾಡಿ ಕೊನೆಗೂ ತೆಳ್ಳಗಾದರು ಕೀರ್ತಿ.

ನಿತ್ಯ ವ್ಯಾಯಾಮದ ಜೊತೆಗೆ ಆಹಾರ ಪದ್ಧತಿಯಲ್ಲಿ ಇತಿಮತಿ ಅನುಸರಿಸುತ್ತಿದ್ದಾರೆ. ಬೆಳಿಗ್ಗೆ ಹಾಲಿನೊಂದಿಗೆ ಕಾಳುಗಳನ್ನು ಸೇವಿಸುತ್ತಾರೆ. ಅಥವಾ ಟೋಸ್ಟ್‌, ಕೆಲವು ಸಲ ಜೋಳ. ಊಟಕ್ಕೆ ರೋಟಿ ಜೊತೆಗೆ ಸಬ್ಜಿ ಸೇವಿಸುತ್ತಾರೆ. ತರಕಾರಿಯಿಂದ ಮಾಡಿದ ಸಲಾಡ್‌ ತಪ್ಪಿಸುವುದಿಲ್ಲ. ರಾತ್ರಿ ಮಲಗುವುದಕ್ಕೂ 2–3 ಗಂಟೆ ಮೊದಲು ಆಹಾರ ಸೇವಿಸುವುದು ಅವರ ರೂಢಿ. ಅನ್ನ, ದಾಲ್‌ ಜೊತೆಗೆ ತರಕಾರಿ ಸಲಾಡ್‌ ರಾತ್ರಿಯೂ ಇರುತ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.