ADVERTISEMENT

ಅತ್ಯುನ್ನತ ಆದರ್ಶಗಳಿರಲಿ

ಪೃಥ್ವಿರಾಜ್ ಎಂ ಎಚ್
Published 24 ಆಗಸ್ಟ್ 2016, 19:30 IST
Last Updated 24 ಆಗಸ್ಟ್ 2016, 19:30 IST
ಅತ್ಯುನ್ನತ ಆದರ್ಶಗಳಿರಲಿ
ಅತ್ಯುನ್ನತ ಆದರ್ಶಗಳಿರಲಿ   

ರೀನಾ ದೇವ್
ಶಾಲಾ ದಿನಗಳಲ್ಲಿ ರೀನಾ ದೇವ್‌ಗೆ ಒಂದು ವಿಚಿತ್ರ ಹವ್ಯಾಸವಿತ್ತು! ರಸ್ತೆಗಳಲ್ಲಿ ಗಾಯಗೊಂಡು ನರಳುತ್ತಿದ್ದ ಸಾಕು ಪ್ರಾಣಿಗಳನ್ನು ಕಂಡರೆ ರೀನಾ, ಮನೆಗೆ ಬಂದು ಕಣ್ಣೀರು ಹಾಕುತ್ತಿದ್ದರು. ಮುದ್ದಿನ ಮಗಳ ಸಂಕಟ ಮತ್ತು ಕಣ್ಣೀರನ್ನು ನೋಡಲಾಗದೇ ತಂದೆ ದೇವ್, ಮಗಳು ರೀನಾಳನ್ನು ಜತೆಗೆ ಕರೆದುಕೊಂಡು ಹೋಗಿ ಗಾಯಗೊಂಡ ಪ್ರಾಣಿಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಬಂದಾಗಲೇ ರೀನಾ ಊಟ ಮಾಡುತ್ತಿದ್ದರಂತೆ! ಹಾಗಾಗಿ ದೇವ್ ಅವರಿಗೆ ತಿಂಗಳಲ್ಲಿ ಹತ್ತಾರು ಸಾಕು ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸುವುದು ಸಾಮಾನ್ಯವಾಗಿತ್ತಂತೆ! ‘ಮನೆಯಲ್ಲಿ ಮನುಷ್ಯರ ಔಷಧಿಗಳಿಗಿಂತ ಪ್ರಾಣಿಗಳ ಔಷಧಿಯೇ ಹೆಚ್ಚು ಇರುತ್ತಿತ್ತು’ ಎಂದು ಮಗಳ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ರೀನಾ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾರೆ ದೇವ್‌.

ರೀನಾ ಮೂಲತಃ ರಾಜಸ್ತಾನದವರು. ಬಾಲ್ಯದಲ್ಲಿ ಸಾಕು ಪ್ರಾಣಿಗಳ ಬಗ್ಗೆ ಇದ್ದ ಮಮಕಾರವೇ ಅವರನ್ನು ಪಶುವೈದ್ಯೆಯಾಗಿ ರೂಪಿಸಿತು. ವನ್ಯಮೃಗಗಳ ಚಿಕಿತ್ಸಾ ಪದ್ಧತಿಯಲ್ಲಿ ವಿಶೇಷ ಅಧ್ಯಯನ ಮಾಡಿರುವ ರೀನಾ, ತಮ್ಮ ಸ್ವಯಂ ಸೇವಾ ಸಂಸ್ಥೆಯ ಮೂಲಕ ಸಾವಿರಾರು ಪ್ರಾಣಿ, ಪಕ್ಷಿಗಳ ಜೀವ ರಕ್ಷಿಸಿದ್ದಾರೆ. ಪ್ರಸ್ತುತ ರೀನಾ ಮುಂಬೈನಲ್ಲಿ ನೆಲೆಸಿದ್ದಾರೆ. ಹಣಕಾಸಿನ ದೃಷ್ಟಿಯಿಂದ ತಮ್ಮ ವೃತ್ತಿಯನ್ನು ನೋಡದೇ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವುದು ವಿಶೇಷ.

ಮುಂಬೈನ ಯಾವುದೇ ಭಾಗದಿಂದಲಾದರೂ ಪ್ರಾಣಿಗಳು ಗಾಯಗೊಂಡು ನರಳುತ್ತಿವೆ ಎಂದು ಯಾರೇ ಫೋನ್ ಮಾಡಿದರೂ ಕೂಡಲೇ ಅಲ್ಲಿಗೆ ಹೋಗಿ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ರೀನಾ ಅವರ ಚಿಕಿತ್ಸೆ ಮತ್ತು ಆರೈಕೆಯಲ್ಲಿ ನೂರಾರು ಪ್ರಾಣಿ ಪಕ್ಷಿಗಳು (ನವಿಲು, ಹದ್ದುಗಳು, ಪಾರಿವಾಳಗಳು, ಹಾವುಗಳು, ಹಸುಗಳು, ಬೀದಿ ನಾಯಿಗಳು, ಗಿಳಿಗಳು ಮತ್ತು ಗುಬ್ಬಚ್ಚಿಗಳು) ಮರು ಹುಟ್ಟು ಪಡೆದಿವೆ.

ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ತಮ್ಮ ಪ್ರಾಣಿ ಚಿಕಿತ್ಸೆ ಸಂಸ್ಥೆಯ ಶಾಖಾ ಕೇಂದ್ರಗಳನ್ನು ತೆರೆದು ಗಾಯಗೊಂಡ ಪ್ರಾಣಿಗಳಿಗೆ ಚಿಕಿತ್ಸೆ ಕಲ್ಪಿಸುವುದು ರೀನಾ ಅವರ ಬಹು ದೊಡ್ಡ ಕನಸಾಗಿದೆ.

ಅನುಷ್ಕಾ ಜೈನ್

ನಮ್ಮ ಮನೆಯಲ್ಲಿ ಕೆಲವು ವಸ್ತುಗಳು ಹಳತಾದವು ಎಂದು ಬಿಸಾಡುತ್ತೇವೆ. ಅವು ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಅಟ್ಟ ಅಥವಾ ಶೆಲ್ಫ್‌ಗೆ ಎಸೆದು ಕೈತೊಳೆದುಕೊಳ್ಳುತ್ತೇವೆ. ಅವು ಬೇರೆಯವರ ಉಪಯೋಗಕ್ಕೂ ಬರುತ್ತವೆ ಎಂಬ ಅರಿವಿಲ್ಲದೆಯೇ ಎಸೆದು ಬಿಡುತ್ತೇವೆ. ಇಂತಹ ವಸ್ತುಗಳನ್ನು ಸಂಗ್ರಹಿಸಿ ಬಡವರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ ಬೆಂಗಳೂರಿನ ಅನುಷ್ಕಾ ಜೈನ್.

ADVERTISEMENT

ಅನುಷ್ಕಾ ಜೈನ್ ಅವರದ್ದು ಮಧ್ಯಮ ವರ್ಗದ ಕುಟುಂಬ. ಅನುಷ್ಕಾ ಅವರ ಹುಟ್ಟು ಹಬ್ಬದ ದಿನದಂದು ಅವರ ತಾಯಿ ತಮ್ಮ ಮನೆಯ ಸುತ್ತಮುತ್ತಲಿರುವ  ಬಡ ಮಕ್ಕಳಿಗೆ ಪಠ್ಯ ಪುಸ್ತಕ, ಪೆನ್ನು, ಬಟ್ಟೆಗಳನ್ನು ಹಂಚುತ್ತಿದ್ದರು. ಈ ಸಮಾಜ ಸೇವೆಯೇ ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು ಎನ್ನುತ್ತಾರೆ ಅನುಷ್ಕಾ.  ವಿದ್ಯಾರ್ಥಿ ದೆಸೆಯಿಂದಲೇ  ಬಡವರಿಗೆ ಬಟ್ಟೆ ಕೊಡಿಸುವುದು, ಕಾಲೇಜು ಶುಲ್ಕ ಕಟ್ಟುವುದನ್ನು ಅನುಷ್ಕಾ ಮುಂದುವರೆಸಿದ್ದರು. ಪದವಿ ಶಿಕ್ಷಣ ಮುಗಿದ ಬಳಿಕ ಮನೆಯವರು  ಇವರಿಗೆ ಮದುವೆ ಮಾಡಲು ಮುಂದಾದರು. ಅವರು  ಮದುವೆಯನ್ನು ನಿರಾಕರಿಸಿ  ‘SADS’ (Share At Door Step ) ಎಂಬ ಲಾಭ ರಹಿತ ಸೇವಾ ಸಂಸ್ಥೆಯನ್ನು ಆಂಭಿಸಿದರು.

ಇದರ ಮೂಲಕ ಹಳೆಯ ಗ್ಯಾಜೆಟ್‌ಗಳು,  ಪುಸ್ತಕಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಆಟಿಕೆಗಳು, ಪೀಠೋಪಕರಣಗಳನ್ನು ಸಂಗ್ರಹಿಸಿ, ಅನಾಥಾಲಯಗಳು, ವೃದ್ಧಾಶ್ರಮಗಳು, ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡುವ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಲಕ್ಷಾಂತರ ಸಾಮಾನುಗಳನ್ನು ಬಡವರಿಗೆ ತಲುಪಿಸಿರುವ ಖ್ಯಾತಿ ಅನುಷ್ಕಾ ಅವರದ್ದು.

ಹಳೆಯ ಉಪಕರಣ ಮತ್ತು ಸರಕುಗಳನ್ನು ನೀಡ ಬಯಸುವ ಗ್ರಾಹಕರು ಸಂಸ್ಥೆಯ ವೆಬ್‌ಸೈಟ್‌ಗೆ ಲಾಗಿನ್ ಆಗಿ ಸರಕುಗಳು ಮತ್ತು ವಿಳಾಸವನ್ನು ನಮೂದಿಸಿದರೆ ಸಂಸ್ಥೆಯ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದು ಸಾಮಾನುಗಳನ್ನು  ತೆಗೆದುಕೊಂಡು ಹೋಗುತ್ತಾರೆ ಎಂದು ಅನುಷ್ಕಾ ಹೇಳುತ್ತಾರೆ. ಲಕ್ಷಾಂತರ ರೂಪಾಯಿ ಸಂಬಳ ಪಡೆದರೂ ಸಿಗದಷ್ಟು ಮಾನಸಿಕ ತೃಪ್ತಿ ಈ ಕೆಲಸದಲ್ಲಿ ಸಿಗುತ್ತದೆ ಎನ್ನುತ್ತಾರೆ  ಅವರು. 

‘ಪರರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಮೊಗದಲ್ಲಿ ನಗು ಅರಳುವಂತೆ ಮಾಡುವ ಸೇವೆಯಲ್ಲಿ ಸಿಗುವ ಆತ್ಮತೃಪ್ತಿ ಯಾವ ಕೆಲಸದಲ್ಲೂ  ಸಿಗುವುದಿಲ್ಲ’ ಎನ್ನುತ್ತಾರೆ 27ರ ಹರೆಯದ ಅನುಷ್ಕಾ ಜೈನ್.      http://sadsindia.org

ಚೈತನ್ಯ ಹಾಗೂ ಅಕ್ಷತ್

ವೈದ್ಯ ವೃತ್ತಿ ಅಂದ್ರೆ ಅಂಥದ್ದು, ದಿನದ 24 ಗಂಟೆಯೂ ದಣಿವರಿಯದೇ ಕೆಲಸ ಮಾಡಬೇಕು! ರೋಗಿಗಳು ಯಾವುದೇ ಸಮಯದಲ್ಲಿ ಫೋನ್ ಮಾಡಿದರೂ ವೈದ್ಯರು ಸ್ಪಂದಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಹಾಗಾಗಿಯೇ ವೈದ್ಯರಾದವರು ಮನೆಯವರಿಗಾಗಿ ಸಮಯವನ್ನು ಮೀಸಲಿಡುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ! ಹೃದಯ ತಜ್ಞರಾಗಿರುವ ತಂದೆಯ ಕಷ್ಟವನ್ನು ಅರಿತು ಅವರ ಕೆಲಸವನ್ನು ಮತ್ತಷ್ಟು ಸರಳೀಕರಣ ಮಾಡಲು ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದ ಮಗನ ಕಥೆ ಇದು.

ಹೈದರಾಬಾದ್‌ನ ಚೈತನ್ಯ, ವೈದ್ಯರು ಮತ್ತು ರೋಗಿಗಳ ಸಂವಹನಕ್ಕಾಗಿ ‘ಡಾಕ್‌ಟಾಕ್‌’ ಎಂಬ ಆ್ಯಪ್‌ ವಿನ್ಯಾಸ ಮಾಡಿದ್ದಾರೆ. ಚೈತನ್ಯ ಎಂಜಿನಿಯರಿಂಗ್ ಪದವೀಧರ. ಇವರ ತಂದೆ ಹೃದಯ ತಜ್ಞರಾಗಿರುವುದರಿಂದ ಆಸ್ಪತ್ರೆ ಮತ್ತು ಮನೆಯಲ್ಲೂ ಕೆಲಸ ಮಾಡುತ್ತಿದ್ದರು. ಹಾಗಾಗಿ  ಮನೆಯವರ ಜತೆ ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಚೈತನ್ಯ ತಾಯಿ, ಅವರ ತಂದೆ ಜತೆ ಜಗಳ ಮಾಡುತ್ತಿದ್ದರಂತೆ! ಇದನ್ನು ಗಮನಿಸುತ್ತಿದ್ದ  ಚೈತನ್ಯ, ತಂತ್ರಜ್ಞಾನ ಬಳಸಿಕೊಂಡು ತಂದೆಯ ಕೆಲಸವನ್ನು ಸರಳ ಮಾಡುವ ಬಗ್ಗೆ ಆಲೋಚಿಸಿದರು. ಗೆಳೆಯ ಅಕ್ಷತ್ ಜತೆ ಸೇರಿ ತಮ್ಮ ಆಲೋಚನೆಗೆ ಒಂದು ರೂಪ ಕೊಟ್ಟು ‘ಡಾಕ್‌ಟಾಕ್’ ಆ್ಯಪ್‌ ರೂಪಿಸಿದರು.

ಇದನ್ನು ವೈದ್ಯರು ಮತ್ತು ರೋಗಿಗಳ ಸಂವಹನಕ್ಕೆಂದೇ  ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ರೋಗಿಗಳ ಕಾಯಿಲೆಯ ಸಂಪೂರ್ಣ ವಿವರ, ರೋಗ ಲಕ್ಷಣಗಳು ಮತ್ತು  ಔಷಧೋಪಚಾರದ ಮಾಹಿತಿ ಇರುತ್ತದೆ. ಉದಾಹರಣೆಗೆ ರೋಗಿಯೊಬ್ಬರಿಗೆ ಮಧ್ಯ ರಾತ್ರಿಯಲ್ಲಿ ಕಾಯಿಲೆ ಉಲ್ಬಣಿಸಿದರೆ, ಕೂಡಲೇ ಆಸ್ಪತ್ರೆಗೆ ಹೋಗುವ ಪ್ರಮೇಯ ತಪ್ಪುತ್ತದೆ. ಯಾಕೆಂದರೆ ಆ್ಯಪ್‌ನಲ್ಲಿ ದಾಖಲಿಸಿರುವ ಔಷಧಿಯನ್ನು ಸ್ವಯಂ ಪ್ರೇರಿತವಾಗಿ  ತೆಗೆದುಕೊಳ್ಳಬಹುದು.   ನಂತರ  ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಬಹುದು ಎನ್ನುತ್ತಾರೆ ಚೈತನ್ಯ.

ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ‘ಈ  ಆ್ಯಪ್‌ ಬಂದಮೇಲೆ ನಮ್ಮ ತಂದೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಕಡಿಮೆಯಾಗಿದೆ. ಜತೆಗೆ ಅವರ ಕೆಲಸದ ಒತ್ತಡ ನಿವಾರಣೆಯಾಗಿದೆ’ ಎನ್ನುತ್ತಾರೆ ಚೈತನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.