ADVERTISEMENT

ಅಭಿಮಾನಿಗೊಬ್ಬ ಅಭಿಮಾನಿ...

ಪ್ರಮೋದ ಜಿ.ಕೆ
Published 30 ಜುಲೈ 2014, 19:30 IST
Last Updated 30 ಜುಲೈ 2014, 19:30 IST

ಕ್ರೀಡಾ ತಾರೆಯರು, ಸಿನಿಮಾ ನಟ-ನಟಿಯರು ಹಾಗೂ ರಾಜಕಾರಣಿಗಳಿಗೆ ಸಾಕಷ್ಟು ಅಭಿಮಾನಿಗಳು ಇದ್ದೇ ಇರುತ್ತಾರೆ. ಆದರೆ, ತಮ್ಮ ನೆಚ್ಚಿನ ತಾರೆಯರನ್ನು ಪ್ರೀತಿಸುವ ಹಾಗೂ ಆರಾಧಿಸುವ ಅಭಿಮಾನಿಗಳಿಗೂ ಅಭಿಮಾನಿಗಳಿದ್ದಾರೆನ್ನುವುದು ನಿಮಗೆ ಗೊತ್ತೇ?

ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್ ದೋನಿ, ರಾಹುಲ್‌ ದ್ರಾವಿಡ್‌ ಹೀಗೆ ಹಲವು ಕ್ರೀಡಾ ತಾರೆಯರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅಮೀರ್‌ ಖಾನ್, ಸಲ್ಮಾನ್‌ ಖಾನ್‌, ಐಶ್ವರ್ಯ ರೈ, ಶಿಲ್ಪಾ ಶಿಟ್ಟಿ, ರಾಜಕುಮಾರ್‌ ಹೀಗೆ ಖ್ಯಾತ ನಟ-ನಟಿಯರೂ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ಕ್ರಿಕೆಟಿಗರ ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಚಮತ್ಕಾರ, ಅವರ ವ್ಯಕ್ತಿತ್ವ ಹೀಗೆ ಯಾವ ಅಂಶ ಅಭಿಮಾನಿಯ ಮನಸ್ಸಿನ ಮೇಲೆ ಪ್ರಭಾವ ಬೀರಿರುತ್ತದೆಯೋ?
ಸೆಲೆಬ್ರೆಟಿಗಳಿಗೆ ಅಭಿಮಾನಿಗಳು ಇರುವುದು ಸಹಜ ಬಿಡಿ.

ಆದರೆ, ಅಭಿಮಾನಿಗಳಿಗೇ ಅಭಿಮಾನಿಗಳು ಇರುವುದು ಗೊತ್ತೇ? ಬ್ಯಾಟಿಂಗ್ ಚಾಂಪಿಯನ್‌ ಸಚಿನ್‌ ತೆಂಡೂಲ್ಕರ್‌ ಆಡುತ್ತಿದ್ದ ಪಂದ್ಯಗಳನ್ನು ಕ್ರೀಡಾಂಗಣಕ್ಕೆ ತೆರಳಿ ವೀಕ್ಷಿಸುತ್ತಿದ್ದ ಸುಧೀರ್ ಕುಮಾರ್‌ ಚೌಧರಿ ಎನ್ನುವ ಅಪ್ಪಟ ಸಚಿನ್ ಅಭಿಮಾನಿಯ ಬಗ್ಗೆ ಇಲ್ಲಿ ಹೇಳಲೇಬೇಕು. ಮೂರು ವರ್ಷಗಳ ಹಿಂದೆ ಐಸಿಸಿ ಏಕದಿನ ವಿಶ್ವಕಪ್‌ ನಡೆದಾಗ ಸುಧೀರ್ ಸೈಕಲ್‌ ಏರಿ ಬಾಂಗ್ಲಾದೇಶಕ್ಕೆ ಹೋಗಿ ಸಚಿನ್‌ ಆಟವನ್ನು ನೋಡಿದ್ದರು. ಸಚಿನ್‌ ಎಲ್ಲಿರುತ್ತಾರೋ ಅಲ್ಲಿ ಸುಧೀರ್ ಇದ್ದೇ ಇರುತ್ತಾರೆ. ಇದು ಇಂದು ನಿನ್ನೆಯದಲ್ಲ. ಹನ್ನೆರಡು ವರ್ಷಗಳಿಂದ ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂಬಾಲಿಸುತ್ತಲೇ ಅವರ ಆರಾಧಕರಾಗಿ ಬಿಟ್ಟಿದ್ದಾರೆ.

ಮದುವೆಯಾದರೆ ಸಚಿನ್‌ ಆಡುವ ಪಂದ್ಯಗಳನ್ನು ನೋಡಲು ಅಡ್ಡಿಯಾಗುತ್ತದೆ ಎನ್ನುವ ಆತಂಕದಿಂದ ಸುಧೀರ್‌ ಮದುವೆಯನ್ನೇ ಆಗಿಲ್ಲ. ಊರೂರು ಸುತ್ತುವ ಕಾಯಕಕ್ಕಷ್ಟೇ ಅವರ ಬದುಕು ಮೀಸಲಾಗಿ ಬಿಟ್ಟಿದೆ. ಇದರಿಂದ ಸುಧೀರ್‌ಗೂ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಧೀರ್‌ ಅಭಿಮಾನಿಗಳ ಬಳಗವೇ ಇದೆ. ದೇಶ-ವಿದೇಶ ಎಲ್ಲಿಯೇ ಹೋದರೂ ಮಾಧ್ಯಮದವರು ಸುಧೀರ್ ಸಂದರ್ಶನ ಬರೆಯದೇ ಇರುವುದಿಲ್ಲ. ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳು ಆರಾಧಿಸುವ ಸಚಿನ್‌ಗೂ ಸುಧೀರ್‌ ಎಂದರೆ ಅಚ್ಚುಮೆಚ್ಚು. ಆದ್ದರಿಂದ ಅವರು ಎಲ್ಲಿಯೇ ಪಂದ್ಯ ನೋಡಲು ಹೋಗಲಿ ತೆಂಡೂಲ್ಕರ್‌ ಟಿಕೆಟ್‌ ವ್ಯವಸ್ಥೆ ಮಾಡುತ್ತಾರೆ. ಹೋದ ವರ್ಷ ಮುಂಬೈಯಲ್ಲಿ ನಡೆದ ಸಚಿನ್‌ ಅವರ 200ನೇ ಹಾಗೂ ಕೊನೆಯ ಟೆಸ್ಟ್‌ ನಿಮಗೆ ನೆನಪಿರಬಹುದು.  

ಆಗ, ಸುಧೀರ್‌ ಸಾಕಷ್ಟು ಭಾವುಕರಾಗಿ ಕ್ರೀಡಾಂಗಣದಲ್ಲಿ ಕಣ್ಣೀರು ಹಾಕಿದ್ದರು. ರಾಷ್ಟ್ರಧ್ವಜದ ಬಣ್ಣಗಳನ್ನು ಮೈಮೇಲೆ ಬರೆದುಕೊಂಡು ಕ್ರೀಡಾಂಗಣದಲ್ಲಿ ಬಾವುಟ ಹಾರಿಸುತ್ತಾರೆ. ಅವರ ಎದೆಯ ಮೇಲೆ ತೆಂಡೂಲ್ಕರ್‌ ಎನ್ನುವ ಹೆಸರು ಯಾವಾಗಲೂ ರಾರಾಜಿಸುತ್ತಿರುತ್ತದೆ. ಜೊತೆಗೆ ಸಚಿನ್‌ ಜೆರ್ಸಿ ಸಂಖ್ಯೆ 10 ಎನ್ನುವುದೂ ಮಿಂಚುತ್ತಿರುತ್ತದೆ. ವಿಪರೀತ ಅಲೆದಾಟ ಹಾಗೂ ಗಂಟೆಗಟ್ಟಲೇ ಧ್ವಜ ಹಾರಿಸುವುದರಿಂದ ಸುಧೀರ್‌ ಈಗ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆದರೆ, ಸಚಿನ್ ಮೇಲಿನ ಪ್ರೀತಿ ಕೊಂಚವೂ ಕಡಿಮೆಯಾಗಿಲ್ಲ. ಹೋದ ವರ್ಷ ಕೊಚ್ಚಿಯಲ್ಲಿ ನಡೆದ ವೆಸ್ಟ್‌್ ಇಂಡೀಸ್‌ ಎದುರಿನ ಏಕದಿನ ಪಂದ್ಯದ ವೇಳೆ ಸುಧೀರ್‌ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದರು.

‘ಸಚಿನ್‌ ಕ್ರಿಕೆಟ್‌ನಿಂದ ನಿವೃತ್ತಿಯಾದರೇನಂತೆ. ನಾನು ಅವರ ಪ್ರತಿನಿಧಿಯಾಗಿ ಇರುತ್ತೇನೆ. ಕ್ರೀಡಾಂಗಣದಲ್ಲಿ ಅವರು ಇಲ್ಲವೆನ್ನುವ ಕೊರಗು ಕಾಡದಿರಲಿ. ಆದರೆ, ಅವರ ಸ್ಥಾನ ತುಂಬಲು ಯಾರಿಗೂ ಸಾಧ್ಯವಿಲ್ಲ’ ಎಂದು ಭಾವುಕರಾಗಿ ಹೇಳಿದ್ದರು. ಭಾರತದಲ್ಲಿ ಎಲ್ಲಿಯೇ ಕ್ರಿಕೆಟ್‌ ಪಂದ್ಯ ನಡೆಯಲಿ, ಈಗಲೂ ಅಲ್ಲಿ ಸುಧೀರ್‌ ಕಾಣಿಸಿಕೊಳ್ಳುತ್ತಾರೆ. ಕ್ರೀಡಾಂಗಣದಲ್ಲಿ ಇದ್ದರೆ ಸಾಕು ಸುಧೀರ್‌ ಅವರನ್ನು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಆಟೋಗ್ರಾಫ್ ಪಡೆಯುತ್ತಾರೆ. ಫೋಟೊ ತೆಗೆಸಿಕೊಳ್ಳಲು ಪೈಪೋಟಿಗೆ ಇಳಿಯುತ್ತಾರೆ.

ಕೆಲ ಅಭಿಮಾನಿಗಳಿಗೆ ಆಟಗಾರರು ತಮ್ಮ ಆರಾಧ್ಯ ದೈವ ಎನಿಸಿದರೆ, ಇನ್ನೂ ಕೆಲವರಿಗೆ ತಂಡದ ಬಗ್ಗೆ ವಿಪರೀತ ಎನ್ನುವಷ್ಟು ಅಭಿಮಾನ. ಅದರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಹಿಂಬಾಲಿಸುವ ಸುಗುಮಾರ್‌ ಕುಮಾರ್ ಕೂಡಾ ಒಬ್ಬರು. ಕ್ರಿಕೆಟಿಗರು ಅಥವಾ ಸಿನಿ ತಾರೆಯರು ಯಾರೇ ಸಿಗಲಿ ಅವರ ಜೊತೆ ಫೋಟೊ ತೆಗೆಸಿಕೊಳ್ಳುವುದು.,‘ತವರಿನ’ ತಂಡ ಗೆಲುವು ಪಡೆಯಲಿ ಎಂದು ಪಂದ್ಯದುದ್ದಕ್ಕೂ ಬಾವುಟ ಬೀಸುತ್ತಾ ಬೆಂಬಲ ನೀಡುವುದು ಸುಗುಮಾರ್‌ ಬದುಕಿನ ಭಾಗವಾಗಿಬಿಟ್ಟಿದೆ.

2008ರಲ್ಲಿ ನಡೆದ ಚೊಚ್ಚಲ ಐಪಿಎಲ್‌ ಟೂರ್ನಿಯಿಂದಲೂ ಆರ್‌ಸಿಬಿ ಆಡಿರುವ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಗುಮಾರ್‌ ಮೂಲತಃ ಆಂಧ್ರದವರು. ಆದರೆ, ಅವರಿಗೆ ಬೆಂಗಳೂರು ತಂಡದ ಮೇಲೆ ಅಪಾರ ಅಭಿಮಾನ. ಈ ಸಲದ ಐಪಿಎಲ್‌ ಮೊದಲ ಲೆಗ್‌ನ ಪಂದ್ಯಗಳು ನಡೆದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ಗೂ ಹೋಗಿ ಬಂದಿದ್ದರು. ಯಾವ ರಾಜ್ಯದಲ್ಲಿ ಪಂದ್ಯ ನಡೆಯುತ್ತದೆಯೋ ಅಲ್ಲಿನ ಉಡುಪು ಧರಿಸಿ ಆರ್‌ಸಿಬಿ ತಂಡವನ್ನು ಬೆಂಬಲಿಸುವ ಸುಗುಮಾರ್ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ‘ಸಚಿನ್‌ ತೆಂಡೂಲ್ಕರ್‌ ಅಲ್ಲ’ ಎನ್ನುವ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ತಂಡದ ಮೇಲಿಟ್ಟಿರುವ ಅಭಿಮಾನವನ್ನು ಮೆಚ್ಚಿಕೊಂಡಿರುವ ಆರ್‌ಸಿಬಿ ಫ್ರಾಂಚೈಸ್‌ ಈ ಅಭಿಮಾನಿಗೆ ಉಚಿತವಾಗಿ ಟಿಕೆಟ್ ನೀಡುತ್ತದೆ.

ಇದೇ ವರ್ಷ ನಡೆದ ವಿಶ್ವಕಪ್‌ ಟ್ವೆಂಟಿ-20 ಟೂರ್ನಿಯಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಫೈನಲ್‌ ಪ್ರವೇಶಿಸಿದ್ದವು. ಈ ಪಂದ್ಯ ನೋಡಲು ಷಿಕಾಗೊ ಮೂಲದ ಪಾಕಿಸ್ತಾನದ ಮೊಹಮ್ಮದ್‌ ಬಷೀರ್‌ ಎನ್ನುವ ಅಭಿಮಾನಿ ಭಾರತ ತಂಡವನ್ನು ಬೆಂಬಲಿಸಲು ಬಂದಿದ್ದರು. ಆದರೆ, ಅವರಿಗೆ ಟಿಕೆಟ್‌ ಸಿಕ್ಕಿರಲಿಲ್ಲ. ಆಗ ದೋನಿ ಖುದ್ದು ಕಾಳಜಿ ವಹಿಸಿ ಟಿಕೆಟ್‌ ಕೊಡಿಸಿದ್ದರು. ಹೀಗೆ ನೆಚ್ಚಿನ ತಾರೆಯರನ್ನು ಆರಾಧಿಸುತ್ತಲೇ ತಮ್ಮ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ಅಭಿಮಾನಿಗಳು ಅದೆಷ್ಟೋ ಸಂಖ್ಯೆಯಲ್ಲಿದ್ದಾರೆ. ಕ್ರಿಕೆಟಿಗರು ಮುಂದೊಂದು ದಿನ ಕ್ರೀಡಾಂಗಣದಿಂದ ದೂರ ಸರಿಯಬಹುದು. ಆದರೆ, ಅಭಿಮಾನಿಗಳ ಪ್ರೀತಿ, ಗೌರವ ಮಾತ್ರ ಎಂದೆಂದಿಗೂ ಶಾಶ್ವತ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.