ADVERTISEMENT

ಆಕರ್ಷಣೆಗಳ ಮೆರವಣಿಗೆಯ ಜಾತ್ರೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST

ಶಿವಗಂಗೆ ಬೆಟ್ಟಗಳ ಸಾಲಿನ ಅಂಚಿನಲ್ಲಿದೆ ನಮ್ಮೂರು ಅದರಂಗಿ. ಶಿವಗಂಗೆಯ ಗಂಗಪ್ಪನ ಜಾತ್ರೆ ಇಲ್ಲಿಯ ರೈತಾಪಿ ಸಮುದಾಯದ ದೈನಂದಿನ ಭಾಗವೇ ಆಗಿದೆ. ನಾನು ಚಿಕ್ಕಂದಿನಿಂದಲೂ ಬೆಳಿಗ್ಗೆ ಎದ್ದಾಗ ಮೊದಲು ನೋಡುತ್ತಿದ್ದದ್ದು ಶಿವಗಂಗೆ ಬೆಟ್ಟವನ್ನು. ದನ, ಎಮ್ಮೆಗಳನ್ನು ಮೇಯಿಸಲು ಅಟ್ಟಿಕೊಂಡು ಹೋಗುತ್ತಿದ್ದದ್ದು, ಬೆಟ್ಟಕ್ಕೆ ಹೊಂದಿಕೊಂಡಂತಿರುವ ಅದರಂಗಿ ಕಾಡಿಗೆ.

ಅಲ್ಲಿ ಮಕರ ಸಂಕ್ರಾಂತಿಯಂದು ಶಿವಗಂಗೆಯ ಗಂಗಪ್ಪನ ಧಾರೆ. ಅಂದು ಸುತ್ತಮುತ್ತಲಿನ ಗ್ರಾಮದ ಜನರೆಲ್ಲ ಸೇರುತ್ತಾರೆ. ಅಲ್ಲಿ ನಡೆಯುವ ರಾಸುಗಳ ಜಾತ್ರೆಗೆ ದನಗಳನ್ನು ಅಟ್ಟಿಕೊಂಡು ಜಾತ್ರೆ ನಡೆಯುವ ತೋಪಿನಲ್ಲಿ ರಾತ್ರಿಯ ಚಳಿಯಲ್ಲಿ ಗಡಗಡ ನಡುಗುತ್ತ, ಅಪ್ಪ ಹಚ್ಚಿದ ಕೆಂಡದ ಸುತ್ತ ಬೆಂಕಿ ಕಾಯಿಸುತ್ತ, ಆಕಾಶದಷ್ಟು ಎತ್ತರವಾದ ಶಿವಗಂಗೆ ಬೆಟ್ಟವನ್ನು ನೋಡುತ್ತ ಮಲಗುವುದೇ ರಸರೋಮಾಂಚನ. ದನಗಳ ಜಾತ್ರೆಗೆ ಬಂದವರೆಲ್ಲ ರಾತ್ರಿಯಾಗುತ್ತಿದ್ದಂತೆ ಅಲ್ಲಲ್ಲಿ ಸೇರಿ ಕೋಲಾಟದ ಪದಗಳನ್ನು ಹಾಡುತ್ತಲೋ ಗಂಗೆ ಗೌರಿ ನಾಟಕದ ಹಾಡುಗಳನ್ನು ಹಾಡುತ್ತಲೋ ಜನಪದ ಕಥೆಗಳನ್ನು ಹೇಳುತ್ತಲೋ ತಮ್ಮ ಕಲೆಗಳನ್ನು ಪ್ರದರ್ಶಿಸುತ್ತಿದ್ದರು.

ಜಾತ್ರೆ ಸಮಯ ಬರುತ್ತಿದ್ದ ಟೂರಿಂಗ್ ಟೆಂಟುಗಳಲ್ಲಿ ಬಬ್ರುವಾಹನ, ಕವಿರತ್ನ ಕಾಳಿದಾಸ ಮೊದಲಾದ ಫಿಲಮ್ಮುಗಳ ಆಕರ್ಷಣೆ ಮತ್ತೊಂದೆಡೆ. ದನಗಳನ್ನು ಅಟ್ಟಿಕೊಂಡು ಹೋಗುತ್ತಿದ್ದ ನಾನು ಜಾತ್ರೆಯಲ್ಲಿ ಅಪ್ಪ ಮಾಡುತ್ತಿದ್ದ ಅನ್ನ ತಿನ್ನದೆ, ಅಮ್ಮ ಕೊಟ್ಟ ಕಾಸಿನಲ್ಲಿ ಬಿಸಿಬಿಸಿ ಬೋಂಡ, ಉಪ್ಪಿಟ್ಟು, ಪೂರಿ ತಿನ್ನುವುದು ಮತ್ತೊಂದು ಖುಷಿ. ದನಗಳ ಜಾತ್ರೆ ಮುಗಿದು ಗಂಗಪ್ಪನ ಧಾರೆಯ ದಿನ ಮುಂಜಾನೆ ಬೆಟ್ಟ ಹತ್ತುವುದು ನಮಗೆಲ್ಲ ಸಾಹಸದ ಕ್ಷಣಗಳು.

ADVERTISEMENT

ಬೆಟ್ಟದ ಮೇಲಿಂದ ಗಂಗಪ್ಪನ ಧಾರೆಗೆ ನೀರನ್ನು ತೆಗೆದುಕೊಂಡು ಹೋಗುವಾಗ ನಮ್ಮ ಭಕ್ತಿಗೆ ಪಾರವೇ ಇಲ್ಲ. ಜಾತ್ರೆಯ ದಿನಗಳಲ್ಲಿ ರೈತರಿಗೆ ಬೇಕಾದ ಉಪಕರಣಗಳಾದ ಮೂಗುದಾರ, ಕಳಗುತ್ತಿ, ಕೈಕುಡಲು, ನೊಗದ ಹಗ್ಗ, ಕಡಾಣಿ, ಹಾರೆ, ಪಿಕಾಸಿ ಮೊದಲಾದ ವಸ್ತುಗಳನ್ನು ನಮ್ಮಪ್ಪ ಖರೀದಿಸುತ್ತಿದ್ದರು. ಹುಡುಗರಾದ ನಾವು ಪೀಪಿ, ಬಲೂನ್, ಪಿಳ್ಳಂಗೋವಿ, ಬಣ್ಣಬಣ್ಣದ ಕನ್ನಡಕಗಳನ್ನು ಚೌಕಾಶಿ ಮಾಡಿ ಖರೀದಿಸುತ್ತಿದ್ದೆವು. ಜಾತ್ರೆ ಎಂದರೆ ನಮ್ಮ ಬದುಕಿಗೆ ಕಳೆ ತುಂಬುತ್ತಿದ್ದ ಕ್ಷಣಗಳು. ಅದನ್ನು ಮರೆಯಲು ಎಂದಿಗಾದರೂ ಸಾಧ್ಯವಿದೆಯೇ?

–ರುದ್ರೇಶ್ ಬಿ. ಅದರಂಗಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.