ADVERTISEMENT

ಆಟೊ ಸಂತೆಯಲ್ಲಿ...

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 19:30 IST
Last Updated 28 ಜೂನ್ 2017, 19:30 IST
ಆಟೊ ಸಂತೆಯಲ್ಲಿ...
ಆಟೊ ಸಂತೆಯಲ್ಲಿ...   

ಫೋರ್ಡ್‌ 1.0ಲೀ ಎಕೊ ಬೂಸ್ಟ್‌ಗೆ 'ಇಂಟರ್‌ನ್ಯಾಷನಲ್ ಎಂಜಿನ್ ಆಫ್‌ ದಿ ಇಯರ್' ಪ್ರಶಸ್ತಿ ಫೋರ್ಡ್‌ ತನ್ನ 1.0 ಲೀಟರ್ ಎಕೊ ಬೂಸ್ಟ್ ಪೆಟ್ರೋಲ್ ಎಂಜಿನ್‌ಗೆ 2017ರ ಅಂತರರಾಷ್ಟ್ರೀಯ ಎಂಜಿನ್ ಎಂದು ಪ್ರಶಸ್ತಿ ಪಡೆದಿದೆ.

‘ಬೆಸ್ಟ್ ಎಂಜಿನ್ ಅಂಡರ್ 1.0 ಲೀಟರ್’ ಎಂಬ ವರ್ಗದಲ್ಲಿ ಇದು ಆರನೇ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕಾಂಪಾಕ್ಟ್ ಹಾಗೂ ಶಕ್ತಿಶಾಲಿ ಮೂರು ಸಿಲಿಂಡರ್‌ನ ಪೆಟ್ರೋಲ್ ಎಂಜಿನ್, 2012ರಲ್ಲಿ ಬಿಡುಗಡೆಗೊಂಡ ನಂತರದಿಂದ ಗೆಲುವನ್ನೇ ಸಾಧಿಸಿಕೊಂಡು ಬಂದಿದೆ. ಇದರೊಂದಿಗೆ 2012ರಲ್ಲಿ ‘ಬೆಸ್ಟ್ ನ್ಯೂ ಕಮರ್’ ಎಂಬ ಪ್ರಶಸ್ತಿಯನ್ನೂ ಪಡೆದಿತ್ತು.

31 ದೇಶಗಳ 58 ಆಟೊಮೊಟಿವ್ ಜರ್ನಲಿಸ್ಟ್‌ಗಳು ಸೇರಿ ಎಕೊ ಬೂಸ್ಟ್ ಮೋಟಾರ್ ಅನ್ನು ಈ ಪ್ರಶಸ್ತಿಗೆ ಆರಿಸಿದ್ದಾರೆ. ಈ ಎಂಜಿನ್ ವಿಭಾಗದಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದು, ಈ ವರ್ಷ ಇದೇ ವಿಭಾಗದಲ್ಲಿ 35 ಎಂಜಿನ್‌ಗಳು ಇದ್ದವು. ಅವೆಲ್ಲವುಗಳನ್ನು ಹಿಂದಿಕ್ಕಿ ಫೋರ್ಡ್‌ 1.0ಲೀ ಎಕೊ ಬೂಸ್ಟ್‌ಗೆ ‘ಇಂಟರ್‌ನ್ಯಾಷನಲ್ ಎಂಜಿನ್ ಆಫ್‌ ದಿ ಇಯರ್’ ಪ್ರಶಸ್ತಿ ಲಭಿಸಿದೆ.

ADVERTISEMENT

ಡಿಎಸ್‌ಕೆ ಬೆನೆಲ್ಲಿ 302ಆರ್ ಬುಕ್ಕಿಂಗ್ ಆರಂಭ 
ಇಟಾಲಿಯನ್ ಸೂಪರ್‌ಬೈಕ್‌ಗಳ ತಯಾರಕ ಡಿಎಸ್‌ಕೆ ಮೋಟೊವೀಲ್ಸ್, ಬೆನೆಲ್ಲಿ 302ಆರ್‌ಗೆ ಬುಕಿಂಗ್ ಘೋಷಿಸಿದೆ.

ಭಾರತದಲ್ಲಿ ಮುಂದಿನ ತಿಂಗಳು ಈ ಬೈಕ್ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಈ ಸ್ಪೋರ್ಟ್ಸ್ ಬೈಕ್ ಅನ್ನು ಸಬ್‌ 500ಸಿಸಿ ಮೋಟಾರು ಸೈಕಲ್ ವಿಭಾಗಕ್ಕೆ ಸೇರಿಸಲಾಗಿದ್ದು, ಇದರಿಂದ ಅಸಾಧಾರಣ ಪರ್ಫಾರ್ಮೆನ್ಸ್ ಹಾಗೂ ಸಾಕಷ್ಟು ಆಯ್ಕೆಗಳನ್ನು ನಿರೀಕ್ಷಿಸಬಹುದು ಎಂದು ಕಂಪೆನಿ ತಿಳಿಸಿದೆ.

‘ಡಿಎಸ್‌ಕೆ ಬೆನೆಲ್ಲಿ 302ಆರ್‌ ಮಾರುಕಟ್ಟೆಗೆ ಬರುವ ಮುನ್ನವೇ ಗ್ರಾಹಕರಿಂದ ಇಷ್ಟೊಂದು ಪ್ರತಿಕ್ರಿಯೆ ಬಂದಿರುವುದು ಆಶ್ಚರ್ಯಕರವಾಗಿದೆ. ಇದು ನಮ್ಮ ಬ್ರ್ಯಾಂಡ್‌ ಮೇಲಿನ ನಂಬಿಕೆ ಹಾಗೂ ವಿಶ್ವಾಸವನ್ನು ಸೂಚಿಸುತ್ತದೆ’ ಎಂದು ಹೇಳಿದ್ದಾರೆ ಬ್ರ್ಯಾಂಡ್‌ನ ಅಧ್ಯಕ್ಷ ಶಿರಿಶ್ ಕುಲಕರ್ಣಿ.

300ಸಿಸಿ, 2 ಸಿಲಿಂಡರ್ ವಾಟರ್ ಕೂಲ್ಡ್‌ ಫೋರ್ ಸ್ಟ್ರೋಕ್ ಎಂಜಿನ್, ಇದ್ದು, 37 ಬಿಎಚ್‌ಪಿ ಹಾಗೂ 27 ಎನ್‌ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. ಇದಕ್ಕೆ ಸ್ಪೀಡ್ ಗಿಯರ್ ಬಾಕ್ಸ್ ಜೊತೆಯಾಗಲಿದೆ. ಬೈಕ್, 196 ಕೆ.ಜಿ ತೂಕವಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಹಾಗೂ ಸುರಕ್ಷತಾ ಆಯ್ಕೆಗಳಿವೆ. ₹3.50 ಲಕ್ಷ (ಎಕ್ಸ್ ಶೋರೂಂ, ದೆಹಲಿ) ಬೆಲೆ ಎಂಬುದಾಗಿ ತಿಳಿದುಬಂದಿದೆ.

ಜಾಗ್ವಾರ್‌ನಿಂದ ಇ–ಪೇಸ್‌ ಅನಾವರಣ
ಸ್ಪೋರ್ಟಿ ಸೆಡಾನ್‌ಗೆ ಜಾಗ್ವಾರ್ ಹೆಸರುವಾಸಿ. ಆದರೆ ಎಸ್‌ಯುವಿಯನ್ನೇ ಹೊಂದಿಲ್ಲ ಎಂಬ ಕೊರತೆಯೂ ಬ್ರ್ಯಾಂಡ್‌ನೊಂದಿಗಿತ್ತು. ಈ ಚಿತ್ರಣ ಬದಲಾಯಿಸಲೆಂದೇ ಕಳೆದ ವರ್ಷ ಎಫ್‌ ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿತ್ತು. ಇದು ಜಾಗ್ವಾರ್‌ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿದ್ದಲ್ಲದೆ ಉತ್ತಮ ಮಾರಾಟವನ್ನೂ ಕಂಡಿತು.

ಎಫ್‌ ಪೇಸ್‌ನ ಯಶಸ್ಸಿನ ನಂತರ ಅಲ್ಲಿಗೇ ನಿಲ್ಲಲಿಲ್ಲ. ಐ ಪೇಸ್‌ ಎಂಬ ಎಲೆಕ್ಟ್ರಿಕ್ ಎಸ್‌ಯುವಿ ಕಾನ್ಸೆಪ್ಟ್ ಕಾರಿಗೂ ಸಜ್ಜಾಗಿತು. ಇದೀಗ ಹೊಸ ಕಾಂಪಾಕ್ಟ್ ಎಸ್‌ಯುವಿ ‘ಇ–ಪೇಸ್’ಗೆ ತಯಾರಿ ನಡೆಸಿದೆ. ಇ–ಪೇಸ್ ಅನ್ನು 2017ರ ಆರಂಭದ ದಿನಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇದೇ ಜುಲೈ 13ಕ್ಕೆ ಅಧೀಕೃತವಾಗಿ ಹೊಸ ಎಸ್‌ಯುವಿ ಕುರಿತು ಘೋಷಣೆಯಾಗಲಿದೆ.

ಇದರ ವಿನ್ಯಾಸ ಕೊಂಚ ಎಫ್‌ ಪೇಸ್‌ನಂತೆಯೇ ಇದೆ. 2.0 ಲೀಟರ್‌ ಪೆಟ್ರೋಲ್ ಹಾಗೂ ಡೀಸೆಲ್ 8 ಸ್ಪೀಡ್ ಆಟೊ ಬಾಕ್ಸ್ ಎಂಜಿನ್‌ ಅಳವಡಿಸಲಾಗಿದೆ. ಇ–ಪೇಸ್‌ ಭಾರತೀಯ ಮಾರುಕಟ್ಟೆಗೆ 2018ರಲ್ಲಿ ಬಿಡುಗಡೆಗೊಳ್ಳಲಿದ್ದು, ಬೆಲೆ ಬಗ್ಗೆ ಇನ್ನೂ ನಿಖರ ಮಾಹಿತಿ ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.