ADVERTISEMENT

ಆ ಮೂರು ನೋಟುಗಳು...

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2017, 19:30 IST
Last Updated 1 ಫೆಬ್ರುವರಿ 2017, 19:30 IST
ಆ ಮೂರು ನೋಟುಗಳು...
ಆ ಮೂರು ನೋಟುಗಳು...   

ಕೆಲ ತಿಂಗಳ ಹಿಂದಷ್ಟೇ ನನ್ನ ಪತಿ ₹1000 ಮುಖಬೆಲೆಯ ಒಂದು, ₹500 ಮುಖಬೆಲೆಯ ಎರಡು ನೋಟನ್ನು ಕೈಗಿತ್ತು ‘ಇರಲಿ ಇಟ್ಟುಕೋ’ ಎಂದು ಕಿರುನಗೆ ಬೀರಿದರು. ಆಗ ಹಬ್ಬ– ಹರಿದಿನವಾಗಿರಲಿಲ್ಲ, ಎಲ್ಲೂ ಪ್ರವಾಸ ಹೊರಟಿರಲಿಲ್ಲ. ಆದರೂ ಏಕೆ ಕೊಟ್ಟರು ಎಂಬ ಅನುಮಾನ. ಅದು ಖೋಟಾ ನೋಟು ಇರಬಹುದು ಎಂದೆಲ್ಲಾ ಯೋಚನೆ.

ಕೊನೆಗೆ ಅವುಗಳ ಸಂಖ್ಯೆ ಮೇಲೆ ಕಣ್ಣಾಡಿಸಿದಾಗ, ಅವು ಅಪರೂಪದ ಸಂಖ್ಯೆ ಹೊಂದಿರುವ ನೋಟುಗಳೆಂದು ತಿಳಿದು ಖುಷಿಯಾಯಿತು. ನನ್ನ ಪತಿರಾಯರಿಗೂ ಅನುಮಾನ ಬಂದು, ಪರಿಚಯದ ಬ್ಯಾಂಕಿನವರ ಬಳಿ ತೋರಿಸಿ, ಅದರ ಸಾಚಾತನ ಪರಿಶೀಲಿಸಿಯೇ ತಂದಿದ್ದರು. ಬ್ಯಾಂಕಿನವರಂತೂ, ‘ನಮಗೆ ಕೊಡಿ, ಅಪರೂಪದ ನೋಟು ಸಂಗ್ರಹಕಾರರು ಈ ತರಹ್ ನೋಟುಗಳನ್ನು ಮುಖಬೆಲೆಗಿಂತ ಹೆಚ್ಚು ಬೆಲೆಕೊಟ್ಟು ಪಡೆಯುತ್ತಾರೆ’ ಎಂದಿದ್ದರೂ ಕೊಟ್ಟಿರಲಿಲ್ಲ.

ಎಲ್ಲಾ ನೋಟು ಆರು ಸಂಖ್ಯೆಯಿದ್ದಲ್ಲಿ, ನಮಗೆ ಏಳು ಸಂಖ್ಯೆಯದ್ದು ಸಿಕ್ಕಿತ್ತು. ಎಡಭಾಗದ ಅಂಚಿನಲ್ಲಿ ಮುದ್ರಣವಾಗಬೇಕಿದ್ದ ಸಂಖ್ಯೆ, ಮುದ್ರಣ ದೋಷದಿಂದ ಎಡಭಾಗದ ಮೇಲೆ ಮುದ್ರಣವಾಗಿದ್ದ ನೋಟೂ ನಮ್ಮ ಕೈಗೆ ಸಿಕ್ಕಿತ್ತು. ನಾನೂ ಬ್ಯಾಂಕಿನಲ್ಲಿ ನೋಟುಗಳನ್ನು ಪರಿಶೀಲಿಸಿ ತಂದಿದ್ದೆ. ಅಲ್ಲಿರುವ ಪರಿಚಯದವರೆಲ್ಲಾ ‘ನಮಗೇ ಕೊಡಿ, ನಮಗೇ ಕೊಡಿ’ ಎಂದಿದ್ದರು. ನನ್ನ ಗೆಳತಿಯರು, ಪರಿಚಯದವರು, ನೆಂಟರಿಷ್ಟರು, ವಠಾರದವರಿಗೆಲ್ಲಾ ಆ ಮೂರು ನೋಟಿನ ದರ್ಶನ ಮಾಡಿಸಿದ್ದೆ!

ಮೊನ್ನೆ ಮೊನ್ನೆ ಪರಿಚಯಸ್ಥರೊಬ್ಬರು (ಅಪರೂಪದ ನೋಟು ಸಂಗ್ರಹಕಾರರು) ಫೋನ್‌ ಮಾಡಿ, ‘ಆ ನೋಟುಗಳನ್ನು ಏನು ಮಾಡುವಿರಿ? ನೀವು ನನಗೆ ಕೊಟ್ಟಲ್ಲಿ, ನಿಮ್ಮ ಹೆಸರಲ್ಲಿ ನನ್ನ ಸಂಗ್ರಹದಲ್ಲಿರುತ್ತೆ’ ಅಂದಿದ್ದರು. 15 ದಿನ ಸಾಧ್ಯವಾದಷ್ಟು ಜನರಿಗೆ ಆ ನೋಟಿನ ದರ್ಶನ ಮಾಡಿಸಿದೆ. ಕೊನೆಗೂ ನನ್ನ ಖಾತೆಗೆ ಜಮಾ ಮಾಡಿದೆ. ಹೀಗೆ ನನ್ನ ಅಪರೂಪದ ನೋಟುಗಳಿಗೆ ವಿದಾಯ ಹೇಳಬೇಕಾಯಿತು.
–ಪೂರ್ಣಿಮಾ ಗುರುದೇವ ಭಂಡಾರ್ಕಾರ್‌ ಹೊಸನಗರ

*
ಹಳೆ ನೋಟಿನ ವಿದಾಯದ ವಿನೋದ
₹1000–500 ನೋಟಿಗೆ ಬೆಲೆ ಇಲ್ಲದಂತೆ ಮಾಡಿದ್ದು ಕಾಳಸಂತೆ ಖದೀಮರಿಗೆ ಆಘಾತವಾಯಿತೋ ಇಲ್ಲವೋ ನಾ ಕಾಣೆ, ನನಗಂತೂ ಬಹಳ ಆಘಾತವಾಯ್ತು. ಕಾರಣ, ನಾನು ಯಾರಿಗೂ ಕಾಣದಂತೆ 20–30 ಸಾವಿರ ಹಣವನ್ನು ನನ್ನ ಅಡುಗೆ ಮನೆ ಬ್ಯಾಂಕ್‌, ಅಂದರೆ ಅಕ್ಕಿ, ಸಾಸುವೆ ಡಬ್ಬಿಯಲ್ಲಿ ಶೇಖರಿಸಿ ಇಟ್ಟಿದ್ದೆ. ನನ್ನ ಕಪ್ಪು ಹಣವಾದ ಹಳೆ ನೋಟಿಗೆ ವಿದಾಯ ಹೇಳಬೇಕಾದರೆ ನನ್ನ ಪತಿ ಸಹಕಾರ ಬೇಕೇ ಬೇಕು.

ನಾನು ಬಹಳ ಮೆತ್ತಗೆ ‘ರೀ ಯಾರಿಗೂ ಸ್ವಲ್ಪವೂ ಮುನ್ಸೂಚನೆ ಕೊಡದೆ ಹೀಗೆ ಸಾವಿರ, ಐದುನೂರು ರೂಪಾಯಿ ಬೆಲೆ ಇಲ್ಲದಂತೆ ಮಾಡಿದ್ದು ಕಷ್ಟ ಅಲ್ಲವಾ?’ ಎಂದು ರಾಗ ಎಳೆದೆ. ಅದಕ್ಕೆ ಅವರು ‘ಒಳ್ಳೆಯ ಕೆಲಸ ಮಾಡಿದ್ದಾರೆ. ಸಂತೋಷಪಡು. ಮೊದಲೇ ಹೇಳಿದ್ದರೆ ಖದೀಮರು ಅವರ ಬಳಿಯಿರುವ ಕಪ್ಪುಹಣವನ್ನು ಬಿಳಿ ಹಣವಾಗಿ ಮಾಡಿಕೊಳ್ಳುತ್ತಿದ್ದರು. 

ನನಗೂ ನಿನಗೂ ಏನು ತೊಂದ್ರೆ ಇದ್ರಿಂದ, ಕೋಟ್ಯಂತರ ರೂಪಾಯಿ ಕಳ್ಳ ಹಣ ಇರುವವರು ಯೋಚಿಸಬೇಕು ಬಿಡು’ ಎಂದರು. ಆಗ ನಾನು ಮೃದುವಾಗಿ ‘ನಮಗೆ ಮುಂದೆ ಕಷ್ಟ, ಸುಖ ಏನಾದರೂ ಆರೋಗ್ಯ ಸಮಸ್ಯೆ ಬಂದರೆ ಇರಲಿ ಎಂದು ಒಂದಷ್ಟು ಹಣ ಇಟ್ಟುಕೊಂಡಿದ್ದೇನೆ. ಅದನ್ನ ನೀವು ಬದಲಾಯಿಸಿ ಕೊಡ್ರಿ’ ಎಂದೆ. ಆಗ ಅವರು ಆಶ್ಚರ್ಯದಿಂದ ‘ಮೊನ್ನೆ ನಾನು ಯಾವುದಕ್ಕೋ ನಿನ್ನ ಬಳಿ ಹಣ ಕೇಳಿದಾಗ ಯಾವುದೂ ಇಲ್ಲ ಎಂದಿದ್ದೆ. ಈಗ ಇಷ್ಟೊಂದು ಹಣ ಹೇಗೆ ಬಂತು’ ಎಂದು ತನಿಖೆಗೆ ಶುರು ಮಾಡಿದರು.

ನಾನು ಆ ಹಣ ಶೇಖರಿಸಿಟ್ಟ ರಹಸ್ಯವನ್ನು ಅವರ ಬಳಿ ಹೇಳಲೇಬೇಕಾಯ್ತು. ‘ಅಂಗಡಿ ಸಾಮಾನು, ಹಾಲು, ತರಕಾರಿ ಎಲ್ಲದಕ್ಕೂ ಸ್ವಲ್ಪ ಹೆಚ್ಚೇ ನಿಮಗೆ ಲೆಕ್ಕ ಹೇಳಿ ತಿಂಗಳಿಗೆ ಒಂದು ಸಾವಿರ –ಸಾವಿರದ ಐದುನೂರು ಉಳಿತಾಯ ಮಾಡಿ ಹನಿಹನಿಗೂಡಿದರೆ ಹಳ್ಳ ಎಂಬಂತೆ ಅದು ಈಗ 30 ಸಾವಿರವಾಗಿದೆ ಅದನ್ನು ಅಡುಗೆ ಮನೆಯ ಡಬ್ಬದಲ್ಲಿ ಶೇಖರಿಸುತ್ತಿದ್ದೆ. ಅಲ್ಲಿ ಬಂದು ನೀವು ನೋಡುತ್ತಿರಲಿಲ್ಲ’ ಎಂದೆ. ‘ಅಂತೂ ಇಂತೂ ನಿನ್ನ ಕಪ್ಪುಹಣ ಈಗ ಬೆಳಕಿಗೆ ಬಂತಲ್ಲ ಬಿಡು. ನಾನು ಮೋದಿಯವರಿಗೆ ಥ್ಯಾಂಕ್ಸ್‌ ಹೇಳಲೇಬೇಕು’ ಎಂದರು.

ಮರುದಿನ ತಿಂಡಿ–ಕಾಫಿ ಮುಗಿಸಿ ಬ್ಯಾಂಕಿಗೆ ಹೋಗಿ ನೋಟುಗಳನ್ನು ಕೊಟ್ಟು ಬಂದರು. ಮೂವತ್ತು ಸಾವಿರಕ್ಕೆ ಇಷ್ಟು ಬವಣೆಯಾದರೆ, ಕೋಟ್ಯಂತರ ಕಪ್ಪುಹಣ ಉಳ್ಳವರ ಕಥೆ ಏನು ಎಂಬ ಯೋಚನೆಯೂ ಹುಟ್ಟಿಕೊಂಡಿತು.
–ಮೋಹನಾ ವೆಂಕಟರಾಮಯ್ಯ ಮೈಸೂರು

ADVERTISEMENT

*
ನೋಟಿನ ಆಟ ಆ ಪರದಾಟ
‘ಶ್ರೀ ವಿನಾಯಕ ಸ್ತ್ರೀ ಶಕ್ತಿ’ ಎಂಬ ನಮ್ಮ ಸ್ವಸಹಾಯ ಸಂಘವೊಂದು ಆರಂಭವಾಗಿ 15 ವರ್ಷಗಳೇ ಸಂದಿವೆ. ಪ್ರತಿ ತಿಂಗಳು 10ರಂದು ನಡೆಯುವ ಸಭೆಯಲ್ಲಿ ಕಂತಿನ ಹಣ, ಅಸಲು, ಬಡ್ಡಿ ಕಟ್ಟುವುದು ರೂಢಿ. ಯಾವಾಗಲೂ ನಿಗದಿತ ಸಮಯಕ್ಕೆ ಹಣಪಾವತಿಸಿ ಎಂದು ಎಷ್ಟೇ ಹೇಳಿದರೂ ಏನೇನೋ ಸಬೂಬು ಹೇಳುತ್ತಿದ್ದವರು ಈ ಬಾರಿ ಸರಿಯಾಗಿ ಕಟ್ಟಿಬಿಟ್ಟಿದ್ದರು.

ಮೀಟಿಂಗ್‌ನಲ್ಲಿ ಲಕ್ಷಕ್ಕೂ ಅಧಿಕ ಹಣ ಹರಿದುಬಂತು. ಎಲ್ಲಾ ಬೆವರು, ಹೊಗೆ, ಸಾಸಿವೆ, ಜೀರಿಗೆ, ಏಲಕ್ಕಿ, ಕೊತ್ತಂಬರಿ ಮುಂತಾದ ಅಡುಗೆ ಮನೆ ನೆನಪಿಸುವ ಪರಿಮಳ ಸೂಸುವ ₹ 500, 1000 ಹಳೆ ನೋಟುಗಳು. ಎಲೆ ಅಡಿಕೆ ಚೀಲದಲ್ಲಿ, ಹಾಳೆ ಟೊಪ್ಪಿ ಸಂದಿಯಲ್ಲಿ ಮುಚ್ಚಿಟ್ಟು ಉಳಿಸಿದ ಹಣ. ಅವತ್ತು ಯಾರ್‌ ಯಾರ ಮನೆಯಲ್ಲಿ ಯಾವ್ಯಾವ ಡಬ್ಬಿಯಲ್ಲಿ ಗಂಡಸರ ಕಣ್ಣು ತಪ್ಪಿಸಿ ಮಹಿಳೆಯರು ಹಣ ಉಳಿಸುತ್ತಾರೆ ಎಂಬ ಸಿಬಿಐ ತನಿಖೆಯನ್ನು ನಾವೇ ಮಾಡಿ ಮಜ ಅನುಭವಿಸಿದೆವು.

ಅವತ್ತು ನಮ್ಮ ಅಂಗಡಿಗೆ ಬಂದ ಶೇಷಿ, ‘ರಾಘಯ್ಯ ಇಲ್ಲನ್ರೀ?’ಎಂದು ಕೇಳಿದಳು. ಸಾಲದಲ್ಲಿ ಬಟ್ಟೆ ಪಡೆದು ಆಗಾಗ ಹಣಕಟ್ಟಿ ಸಾಲ ತೀರಿಸುವುದು ಆಕೆಯ ಪದ್ಧತಿ. ಮಾಮೂಲಿನಂತೆ ಎಲೆ ಸಂಚಿಯಿಂದ ನೂರು ರೂಪಾಯಿ ತೆಗೆಯಬಹುದೆಂದು ‘ನಂಗೇನ್ ಲೆಕ್ಕ ಬರಲ್ಲೇನೇ?ನಿಮ್ಮ ಅಯ್ಯಂಗ್ ಮಾತ್ರ ಬರೆಯಕ್ ಬರೋದಾ?’ ಎನ್ನುತ್ತಿರುವಾಗಲೇ ಒಣಗಿದ ಎಲೆಗಳ ಮಧ್ಯದಿಂದ ನಿಧಾನಕ್ಕೆ ಸಾವಿರ ರೂಪಾಯಿ ನೋಟು ತೆಗೆದಾಗ ನನಗೆ ಶಾಕ್!.

ನಮ್ಮ ಅಂಗಡಿಯಲ್ಲಿ ಸಾಲದ ಖಾತೆ ಹನುಮಂತನ ಬಾಲದಂತಿದೆ. ‘ಕೊಟ್ಟೋನು ಕೋಡಂಗಿ. ಇಸ್ಕೊಂಡೋನು ಈರಭದ್ರ’ ಎಂಬಂತೆ ಸಾಲ ಪಡೆದವರ ಹತ್ರ ಹಣ ಕೇಳಿ ನಾವು ಕೇಳಿದ್ದೇ ತಪ್ಪೆನ್ನುವಂತೆ ಬೈಸಿಕೊಳ್ಳುವುದು ಇದ್ದದ್ದೇ. ಸಾಲ ತೀರಿಸಲು ಹೆದರುತ್ತಲೇ ಹಳೆ ನೋಟು ಕೊಟ್ಟಿದ್ದರಿಂದ ವ್ಯಾಪಾರವಾಗದಿದ್ದರೂ ಹಣ ವಸೂಲಿಯಾದ ಖುಷಿಯಾಯ್ತು.
–ಹಾದಿಗಲ್ಲು ಸರಸ್ವತಿ ರಾಘವೇಂದ್ರ ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.